ಹಾಗೆ ನೋಡಿದರೆ ದೊಡ್ಡಪ್ಪ ಕಂಜೂಸಿಯೇನಲ್ಲ. ಆದರೆ ಜಿಗುಟು ಸ್ವಭಾವದಿಂದಾಗಿ ಕೆಲವು ವಿಷಯಗಳಲ್ಲಿ ತಮ್ಮ ಪಟ್ಟು ಸಡಿಲಿಸುತ್ತಿರಲಿಲ್ಲ. ಈಗ ಶ್ರೀಕಾಂತನ ಮಾತಿಗೆ ಮೆದುವಾಗುತ್ತಿದ್ದುದನ್ನು ಕಂಡು ಅವರ ಮೊದಲ ಮಗ ಶ್ರೀನಿವಾಸ ಸೆಟೆದುಕೊಂಡಿದ್ದ. ಮನೆಯಲ್ಲಿ ಕೃಷಿ ಮಾಡಿಕೊಂಡಿರುವ ಹುಡುಗರಿಗೆ ವಧು ಸಿಗುವುದೇ ಕಷ್ಟವಾಗಿ, ಇದರ ಬಿಸಿ ಶ್ರೀನಿವಾಸನನ್ನೂ ತಟ್ಟಿತ್ತು. ಮೂವತ್ತಾದ ತಾನು ಮನೆಯಲ್ಲಿದ್ದರೂ, ಇಪ್ಪತ್ತೈದರ ಸಾಫ್ಟ್ ವೇರ್ ತಮ್ಮನಿಗೆ ಜನ ಜಾತಕ ಕೊಡಲು ಮುಂದಾದಾಗ ಕೊಂಚ ಅಧೀರನಾಗಿದ್ದ. ಮನೆಯಲ್ಲಿದ್ದರೂ ಅಡ್ಡಿಯಿಲ್ಲ ಎಂದು ಅಪರೂಪಕ್ಕೆ ಮುಂದಾಗುವ ಕನ್ಯಾಪಿತರು ನಮ್ಮನೆಯಲ್ಲಿ ಮೂಲಸೌಕರ್ಯವೇ ಇಲ್ಲದ್ದನ್ನು ಗಮನಿಸಿ ಹಿಂದೆ ಸರಿಯುತ್ತಿದ್ದರು. ಹಾಗೂ ಹೀಗೂ ಹುಡುಗಿ ಸಿಕ್ಕು ಮದುವೆಯಾದರೂ, ಆಕೆ ಶ್ರೀನಿವಾಸನ ಮನಸ್ಸಿಗೆ ಬರಲಿಲ್ಲ. ಬೆಳ್ಳಗೆ ಚಂದದ ಆಳ್ತನ ಇರುವ ತನಗೆ ಕೊಂಚ ಕಪ್ಪು ಮತ್ತು ಸ್ವಲ್ಪ ಹೆಚ್ಚೇ ದಪ್ಪವಿರುವ ಹೆಂಡತಿ ಸಿಕ್ಕಿದ ಬಗ್ಗೆ ಆತನಿಗೆ ಬೇಸರವಿತ್ತು. ಈಗ ಮಾಡಿಸಿದಂತಹ ವ್ಯವಸ್ಥೆಯನ್ನು ಎರಡು ವರ್ಷಗಳ ಮೊದಲೇ ಮಾಡಿಸಿದ್ದರೆ ತನಗೆ ಚಂದದ ಹೆಂಡತಿ ಸಿಕ್ಕುತ್ತಿದ್ದಳಲ್ಲಾ, ಮನೆ ಮೂಲ ಸೌಕರ್ಯಕ್ಕೂ ವಿದೇಶದಿಂದಲೇ ಆಜ್ಞೆ ಬರಬೇಕೆ ಎಂಬುದು ಆತನ ಸಿಟ್ಟಿನ ಮೂಲವಾಗಿತ್ತು.
ಮೊನ್ನೆ ನಡೆದ ಗಣಹೋಮಕ್ಕೆ ಶರಾವತಿ ಅತ್ತೆ ಬಂದಿದ್ದಳು. ಶಿವಮೊಗ್ಗದಲ್ಲಿ ನೆಲೆಸಿರುವ ಆಕೆ ತನ್ನ ಮಕ್ಕಳಿಗೆ ಶಾಲೆ ರಜೆಯಿದ್ದಾಗ ಮಾತ್ರವೇ ತವರಿಗೆ ಬರುತ್ತಿದ್ದಳು. ಆಕೆಯ ಯಜಮಾನರಂತೂ ಅಪರೂಪಕ್ಕಷ್ಟೇ ಬರುತ್ತಿದ್ದರು. ಆದರೆ ಮಕ್ಕಳ ಪರೀಕ್ಷೆ ಸಮೀಪಿಸುತ್ತಿರುವ ದಿನದಲ್ಲಿ ಆಕೆ ಗಣಹೋಮಕ್ಕೆ ಬಂದಿದ್ದು ಕಂಡು ಎಲ್ಲರಿಗೂ ಅಚ್ಚರಿಯಾಗಿತ್ತು. ಸದಾ ಸಾಸಿವೆಯಂತೆ ಸಿಡಿಯುತ್ತಿರುತ್ತಿದ್ದ ಆಕೆ ಬಂದಾಗಿನಿಂದಲೂ ಹೆಚ್ಚು ಮಾತು-ಕತೆಯಿಲ್ಲದೆ ಕುಳಿತ ಎಲ್ಲರಿಗೂ ಒಗಟಿನಂತಾಗಿದ್ದಳು. ಪದೇ ಒದೇ ಹಜಾರದ ಮೂಲೆಯತ್ತ ಇಣುಕು ನೋಟ ಹರಿಸಿ, ಏನೋ ತನಿಖೆ ನಡೆಸುತ್ತಿರುವಂತೆ ಕಂಡುಬಂದಳು. ಆಗೀಗೊಮ್ಮೆ ‘ಲೊಚ್‘ಗುಡುತ್ತಾ ನಿಟ್ಟುಸಿರೊಂದನ್ನು ಹೊರಹಾಕುತ್ತಿದ್ದಳು. ಕೆಲಸ-ಕಾರ್ಯಗಳೆಲ್ಲಾ ಮುಗಿಸಿದ ದೊಡ್ಡಮ್ಮ ಸಂಜೆ ಹೊತ್ತಿಗೆ ಅತ್ತೆಯೊಂದಿಗೆ ಮಾತಿಗೆ ಶುರುವಿಟ್ಟರು.
‘ಗಣಹೋಮಕ್ಕೆ ನೀ ಬತ್ತಿಲ್ಯೇನ ಮಾಡಿದಿದ್ದಿ. ಆದ್ರೆ ಬಂದಿದ್ದಕ್ಕೆ ಖುಷಿ ಆತೆ ಶರಾವತಿ. ಯಜಮಾನ್ರೂ ಬಂದಿದ್ರೆ ಚೊಲೊ ಆಗಿತ್ತು…”
ಎಂತಕ್ಕೆ ಬರವ್ವು ಹೇಳು ಅತ್ಗೆ? ಅವ್ರಿಗೆ ಇಲ್ಲೆಂತ ಕಿಮ್ಮತ್ತಿದ್ದು ಹೇಳಿ ಬರವ್ವು‘ ಎಂದು ಅತ್ತೆ ಸಿಡಿದಳು. ಎಲ್ಲರ ಚುಚ್ಚು ನುಡಿಗಳಿಂದ ಬೇಸತ್ತು ನಾದಿನಿಯಾದರೂ ಸರಿಯಾಗಿ ಮಾತನಾಡಬಹುದೆಂಬ ಸಹಜ ನಿರೀಕ್ಷೆಯಲ್ಲಿದ್ದ ಸಾಧು ಸ್ವಭಾವದ ದೊಡ್ಡಮ್ಮ ಈ ಮಾತಿನಿಂದ ಮತ್ತಷ್ಟು ನೊಂದುಕೊಂಡರು.
‘ಇನ್ನೆಂತದು? ಯನ್ನ ಮದುವೆಯಾಗಿ ಹದಿನೈದು ವರ್ಷಾತು. ಆಗ್ಲಿಂದ ಅವ್ರು ಹೇಳ್ತಿದ್ದ ಮನೆಗೊಂದು ಟಾಯ್ಲೆಟ್ ಮಾಡ್ಸಿ ಹೇಳಿ. ಕಡಿಗಂತೂ ಅವ್ರ ಉಪಕಾರಕ್ಕೆ ಹೇಳಿ ಅದ್ನ ಮಾಡ್ಸಿದ್ರೂ ಬೇಕಾಬಿಟ್ಟಿ ವ್ಯವಸ್ಥೆ ಮಾಡ್ಸಿದ್ದ ಅಣ್ಣಯ್ಯ. ಈಗ ಮಗ ಹೇಳಿದ್ದೆಲ್ಲಾ ವೇದವಾಕ್ಯ. ಅಳಿಯನ ಮಾತೂಂದ್ರೆ ಎಷ್ಟು ಕಿಮ್ಮತ್ತು ಹೇಳಿ ಗೊತ್ತಾತಲ್ಲ‘ ಎಂದು ಅತ್ತೆ ವಿಷ ಉಗುಳಿದಳು.’
ಹಾಂಗಲ್ಲ ಶರಾವತಿ. ಮನೆ ಬದಿಗೆ ವ್ಯವಸ್ಥೆ ಮಾಡ್ಸಿದ್ದು ಮಾವನೋರಿಗೆ. ಅವ್ರಿಗೆ ವಾತ ಹೆಚ್ಚಾಗಿ ನಡೆಯಲೇ ಆಗ್ತಿತ್ತಿಲ್ಲೆ. ಹಾಂಗಾಗಿ ಶ್ರೀಕಾಂತನೇ ಮಾಡ್ಸಿದ್ದ‘ ಎಂಬ ದೊಡ್ಡಮ್ಮನ ಅಸಹಾಯಕ ವಿವರಣೆಗೆ, ‘ಹೌದಲ್ದ! ಹೆಸರು ಅಪ್ಪಯ್ಯಂದು. ಅನುಕೂಲ ಮಗಂದು. ಯಂಗೇನು ಗೊತ್ತಾಗ್ತಿಲ್ಯ? ಅಪ್ಪಯ್ಯನಿಗೆ ವಾತವೆಂತಾ ಹೊಸದಾ? ಇಷ್ಟು ವರ್ಷ ಇಲ್ಲದ್ದು ಈಗೆಂತಕ್ಕಾಗಿತ್ತು? ಎಲ್ಲಾ ಅಮೆರಿಕದ ಮಹಾತ್ಮೆ!’ ಎಂದು ಇನ್ನಷ್ಟು ವ್ಯಂಗ್ಯವಾಡಿ ಎದ್ದು ಹೋದಳು.
************
ಮಕ್ಕಳ ಪರೀಕ್ಷೆ ಮುಗಿದು ಬೇಸಿಗೆ ರಜೆ ಆರಂಭವಾಗಿತ್ತು. ಕೋಪಾಕ್ರಾಂತಳಾಗೇ ಇದ್ದ ಶರಾವತಿ ಅತ್ತೆ ಈ ರಜೆಯಲ್ಲಿ ತವರಿಗೆ ಬರಲೇಇಲ್ಲ. ಮಕ್ಕಳನ್ನೂ ಕಳುಹಿಸಲಿಲ್ಲ. ಆದರೆ ಬೆಂಗಳೂರಿನಿಂದ ಕಿರಿಯ ಅತ್ತೆ ಮಾಲಿನಿ ಮೂರು ವರ್ಷದ ಮಗಳೊಂದಿಗೆ ಹಾಜರಾದಳು. ಪುಟ್ಟ ಶ್ರೀನಿಧಿಯ ತಪ್ಪು-ತೊದಲುಗಳಿಂದ ಮನೆಯ ವಾತಾವರಣ ಕೊಂಚ ತಿಳಿಯಾಗಿತ್ತು. ಬೇಸಿಗೆ ಆರಂಭವಾದಂತೆ ಅಜ್ಜನ ಆರೋಗ್ಯ ಸಂಪೂರ್ಣ ಸುಧಾರಿಸಿ, ಮೊದಲಿನಂತೆ ಓಡಾಡಿಕೊಂಡಿದ್ದರು. ಸಂಜೆ ಹೊತ್ತಿಗೆ ಶ್ರೀನಿಧಿಯೊಂದಿಗೆ ಕೇರಿಯ ಆಚೀಚೆಯ ಮನೆಗಳಿಗೆ ಹೋಗುತ್ತಿದ್ದರು. ಆ ದಿನ ಸಣ್ಣ ಜ್ವರ ಬಂದು ಅಜ್ಜ ಮಲಗಿದ್ದರಿಂದ ಗಲಾಟೆ ಮಾಡುತ್ತಿದ್ದ ನಿಧಿಯನ್ನು ಮಾಲಿನಿ ಅತ್ತೆ ಮತ್ತು ದೊಡ್ಡಮ್ಮ ಪಕ್ಕದ ಮನೆಗೆ ಕರೆದೊಯ್ದರು. ಅಂಗಳದಲ್ಲಿ ಒಣಗಿಸಿದ್ದ ಹಲಸಿನ ಹಪ್ಪಳ ತುಂಬುತ್ತಿದ್ದ ಆಚೆಮನೆ ಯಮುನಜ್ಜಿ, ಮಾಲಿನಿ ಅತ್ತೆಯೊಂದಿಗೆ ಮಾತಿಗೆ ಶುರುವಿಟ್ಟರು.
‘ಇದೆಂತೆ ಮಾಲಿನಿ, ಸುಮಾರು ದೊಡ್ಡ ಹೊಟ್ಟೆ ಕಾಣ್ತು. ಇನ್ನೇನಾದ್ರೂ ವಿಶೇಷ ಇದ್ದಾ?”
ಇನ್ನೆಂತ ಇರ್ತು ವಿಶೇಷ ಯಮುನಜ್ಜಿ?’
‘ಮತ್ತೆ…? ಕೂಸಿನ ಬಾಣಂತಿಯಾದಾಗ ಹೊಟ್ಟೆ ಸರಿ ಕರಗಿಸಿದ್ದಿಲ್ಯ? ನಿನ್ನಮ್ಮನೇ ಅಲ್ದ ಬಾಣಂತನ ಮಾಡಿದ್ದು?”
ಹೂಂ. ಅಮ್ಮ ಬೆಂಗಳೂರಿಗೆ ಬರೋಷ್ಟರಲ್ಲಿ ಕೂಸು ಹುಟ್ಟಿ ಹದಿನೈದು ದಿನ ಆಗಿತ್ತು. ಅದ್ಕೆ ಹೊಟ್ಟೆ ಸರಿ ಕರಗಿದ್ದಿಲ್ಲೆ‘ ‘ಪಾಪ! ಇಲ್ಲಿನ ತಾಪತ್ರಯ ಮುಗಿಸಿ ಬರಾಡ್ದಾ ನಿನ್ನಮ್ಮ? ಡಾಕ್ಟ್ರು ನಿಂಗೆ ರೆಶ್ಟು ಹೇಳಿದಿದ್ವಲ್ಲಾ… ನೀನೇ ಇಲ್ಲಿಗೆ ಬಪ್ಪದಲ್ದ?’
‘ಇಲ್ಲೆಂತ ಇತ್ತು ಆಗ? ಒಂದು ಸರಿ ಬಚ್ಚಲಿನ ವ್ಯವಸ್ಥೆಯಾದ್ರೂ ಇತ್ತಾ? ಎಷ್ಟ್ ಹೇಳಿದ್ರೂ ಅಣ್ಣಯ್ಯ ಕೇಳಿದ್ನಿಲ್ಲೆ. ಯಾವ ಬಾಣಂತೀರಿಗೂ ಆಗಗಿದ್ದ ತ್ರಾಸು ನಿಂಗ್ ಮಾತ್ರ ಆಗ್ತಾ ಹೇಳೆಲ್ಲಾ ಕೇಳಿದ್ದ‘ ಅತ್ತೆ ಅಸಮಾಧಾನ ಹೊರ ಹಾಕಿದಳು.
ತಕ್ಷಣ ವಿಷಯ ಬದಲಿಸಿದ ದೊಡ್ಡಮ್ಮ, ‘ಈ ವರ್ಷ ಯಮ್ಮನೆ ಶ್ರೀಕಾಂತಂಗೆ ಜಾತಕ ತಗತ್ತಾ ಇದ್ಯ ಯಮುನಕ್ಕ. ಎಲ್ಲಾದ್ರೂ ಚೊಲೊ ಕೂಸಿದ್ರೆ ಹೇಳೆ‘ ಎಂದಳು. ‘ಓಹೊ ಅಡ್ಡಿಲ್ಲೆ‘ ಎಂದ ಯಮುನಜ್ಜಿ ಏನನ್ನೊ ನೆನಪಿಸಿಕೊಂಡವಳಂತೆ ಸಣ್ಣ ಧ್ವನಿಯಲ್ಲಿ ಹೇಳತೊಡಗಿದಳು; ‘ಅಲ್ಲ ಮಾರಾಯ್ತಿ, ನಿನ್ನ ಮಾವನೋರಿಗೆ ಹೊಸ ಸಂಡಾಸಿನ ವ್ಯವಸ್ಥೆ ಮಾಡ್ಸಿದ್ರಲ್ಲಾ ಅಂಥದ್ದೇ ತನಗೂ ಬೇಕು. ತನ್ನ ಕೈ-ಕಾಲೂ ನೋವು. ಓಡಾಡಲೇ ಆಗ್ತಿಲ್ಲೆ ಹೇಳಿ ನಮ್ಮನೆಯವ್ರು ಶುರು ಮಾಡಿದ್ದ. ಪೇಟೆಲ್ಲಿ ಅಂಗಡಿ ಹಾಕಲ್ಲೆ ದುಡ್ಡು ಕೊಡಲ್ಲಾಗ್ತಿಲ್ಲೆ ಹೇಳಿದ್ದಕ್ಕೆ ಶಟಗಂಡಿದ್ದ ನಾಣಿ ಈಗಂತೂ ಹಿಸ್ಸೆನೆ ಕೇಳ್ತಿದ್ದ. ಈ ಮನೆಲ್ಲಿ ಯಾವ್ದಕ್ಕೆ ಬೇಕಾದ್ರೂ ದುಡ್ಡಿರ್ತು, ಆನು ಕೇಳಿದ್ರೆ ಮಾತ್ರ ಇರ್ತಿಲ್ಲೆ ಹೇಳಿ ನಿನ್ನೆಯೆಲ್ಲಾ ಕೂಗಾಟ ಅವಂದು…’
****************
ಮರುದಿನ ಬೆಳಗ್ಗೆಯೇ ಹಾಜರಾದ ಆಚಾರಿಯನ್ನು ಕಂಡು ಹುಬ್ಬೇರಿಸಿದ ದೊಡ್ಡಪ್ಪ, ‘ಏನೋ! ಅರಾಮ?’ ಎಂದು ವಿಚಾರಿಸಿದರು. ಹೆಹ್ಹೆ ಎಂದು ಪೆದ್ದ ನಗೆ ಬೀರಿದ ಆಚಾರಿ, ‘ಅಮ್ಮೋರು ಹೇಳಿ ಕಳ್ಸಿದ್ರಪ್ಪಾ‘ ಎಂದ.
ದೊಡ್ಡಪ್ಪ ಕರೆಯುವ ಮೊದಲೇ ಒಳಗಿನಿಂದ ಪ್ರತ್ಯಕ್ಷರಾದ ದೊಡ್ಡಮ್ಮ, ‘ಮಾವನೋರ ಸಂಡಾಸು ಒಡೆಯದಾ ಅಥ್ವಾ ಕೊಟ್ಟಿಗೆ ಪಕ್ಕದ ಬಚ್ಚಲು ಒಡೆಯದಾ… ಯಾವುದು ಸೋವಿಯಾಗ್ತು?’ ಎಂದು ವಿಚಾರಿಸಿದರು.
ದೊಡ್ಡಮ್ಮನ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ದೊಡ್ಡಪ್ಪ, ‘ಕೊಟ್ಟಿಗೆ ಪಕ್ಕದ್ದು ಒಡೆಸಿ…!’
‘…ಒಡೆಸಿ ಹಿತ್ತಲಕಡೆಗೆ ಎರಡು ಬಚ್ಚಲು, ಎರಡು ಸಂಡಾಸಿನ ವ್ಯವಸ್ಥೆ ಮಾಡಕ್ಕಾಗ್ತು. ಇದೆಲ್ಲಾ ಬೇಕಾಪ್ಪದು ಮಾವನೋರಿಗೆ ಮಾತ್ರ ಅಲ್ಲ…’
ತಮ್ಮಿಷ್ಟಕ್ಕೆಂದೂ ಎದುರಾಡಿರದ ಹೆಂಡತಿಯ ಈ ಮಾತಿಗೆ ದೊಡ್ಡಪ್ಪನಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.
‘ಈ ಮನೆ ಒಡಿಯದು ಬ್ಯಾಡ ಅಂದ್ರೆ ಅವೆರಡರಲ್ಲಿ ಒಂದನ್ನ ಒಡೆಯದೇ ಆಗ್ತು‘ ಎಂದ ದೊಡ್ಡಮ್ಮ, ಆಚಾರಿಯೊಂದಿಗೆ ಕೊಟ್ಟಿಗೆ ಕಡೆ ದಾಪುಗಾಲಿಕ್ಕಿದರು.
(2007ರ ಡಿಸೆಂಬರ್ ನಲ್ಲಿ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಕಥೆ.)