ಸೋನೆ ಮಳೆ
ಮಲೆನಾಡಿನ ಒಂದೂರು. ಹೆಸರು… ಏಂತದೋ ಒಂದು. ಆ ಊರಲ್ಲಿರುವುದು ಎರಡೇ ಮನೆ, ಊರಿಗಿರುವುದು ಒಂದೇ ದಾರಿ. ಡಾಂಬರು ರಸ್ತೆಯಿಂದ, ಅಂದರೆ ಊರಿನ ಸಮೀಪಕ್ಕೆ ಬಸ್ಸು ಬಂದು ನಿಲ್ಲುವ ರಸ್ತೆಯಿಂದ ನಾಲ್ಕೇ ಮೈಲು ಒಳಗೆ ನಡೆದರೆ ಊರು ಸಿಕ್ಕೇಬಿಡುತ್ತದೆ.
ಆ ದಾರಿಯಲ್ಲಿ ಕಾರೇನು, ಎತ್ತಿನ ಗಾಡಿ ಹೋಗುವುದೂ ಅನುಮಾನ. ಕಾಲ್ನಡಿಗೆಯ ದಾರಿ. ಕೊಂಚ ಅನುಭವಸ್ಥರು ಜಾರದೆ, ಮುಗ್ಗರಿಸದೆ ಬೈಕು ಓಡಿಸಲೂ ಸಾಕು. ಈ ರಸ್ತೆಯಲ್ಲೊಮ್ಮೆ ಬೈಕು ಓಡಿಸಿಬಿಟ್ಟರೆ ಸುಮಾರು ಎಂಥಾ ರಸ್ತೆಯಲ್ಲಾದರೂ ಓಡಿಸಿಬಿಡಬಹುದು ಎಂಬ ಖ್ಯಾತಿಯೂ ಇದಕ್ಕಿತ್ತು. ದಿನಕ್ಕೊಂದು ಗಾಡಿಯೂ ಓಡಾಡದ ಈ ದಾರಿಯಲ್ಲಿ ಬೆಳಗಿನಿಂದ ಹತ್ತಿಪ್ಪತ್ತು ಬೈಕುಗಳು ಟೈರು ಸವೆಸಿದ್ದವು. ಎಲ್ಲರದ್ದೂ ಒಂದೇ ಗುರಿ, ತಲುಪಿದ್ದು ಒಂದೇ ಮನೆ. ಮದುವೆ ಮನೆ!
ಕಾಡಿನ ಮೂಲೆಯ ಆ ಮನೆಯ ಅಂಗಳವೇನೊ ದೊಡ್ಡದೇ ಆದರೂ ಮದುವೆ ಮನೆಗೆ ಕೊಂಚ ಸಣ್ಣದೇ ಎನಿಸುತ್ತಿತ್ತು. ತುಳಸೀಕಟ್ಟೆ ಮುಂದೆ ಸೇರಿದ್ದ ಆ ಗುಂಪು ಮಂಟಪ ಕಟ್ಟುತ್ತಿತ್ತು.
‘ಹೋ ಮಾರಾಯ! ಈ ದತ್ತಣ್ಣ ಮಳೆಗಾಲದ ಬುಡಕ್ಕೆ ಮಗಳ ಮದುವೆ ಇಡ್ಗಂಡಿದ್ದು ಸಾಕು’
‘ಹೌದು ಮಾರಾಯ! ಊರಿಗ್ ದಾರಿಯೇ ಇಲ್ಲೆ… ತೋರ್ಣ ಇಷ್ಟುದ್ದ ಸಾಕನಾ?… ಅಂಥಾದ್ರಲ್ಲಿ ಮಳೆಗಾಲದ ಮದುವೆ ಅಂದ್ರೆಂತ ಸಣ್ಣಾಟವ?’
‘ಇದ್ರಗಿಂತ ಕಂಚಿಕೊಪ್ಪದ ದೇವಸ್ಥಾನದಲ್ಲಿ ಲಾಯ್ಕಾಗ್ತಿತ್ತು… ಆ ಅಂಟಿನ ಬಾಟ್ಲಿ ಕೊಡಾ ‘
‘ಮತ್ತಲ್ದ! ಎಲ್ಲಾದ್ರೂ ರಾತ್ರಿ ಮಳೆ ಹೊಡತ್ತಲಾಂದ್ರೆ ಮಂಟಪ ಪೂರ ನೀರಲ್ಲ್ ಹೋಮ’
‘ಥೋ! ಅಡ್ಡಬಾಯಿ ಹಾಕಾಡ ಮಾಣಿ’ ಎನ್ನುತ್ತಾ ಅಂಗಳ ಇಳಿದ ಆಕೆ ಮಂಟಪ ಕಟ್ಟುವವರಿಗೆ ಅವಲಕ್ಕಿ, ಚಹಾ ಪೂರೈಸುವ ಹೊಣೆ ಹೊತ್ತಿದ್ದರು.
‘ಇಗ್ಗಣ್ಣನ ಮನೆಲ್ಲಿ ಹತ್ತು ಲೀಟರು ಹಾಲಿಗೆ ಹೇಳಿದ್ದ ದತ್ತಣ್ಣ. ಪಟ್ಟನೆ ತಂದ್ಬಿಡು’ ಎಂಬ ಆಕೆಯ ಮಾತಿಗೆ ‘ಅಯ್ಯೊ’ ಎನ್ನುತ್ತಾ ಬಣ್ಣದ ಟೇಪನ್ನು ಅಲ್ಲೇ ಬಿಟ್ಟ ಆತ ಬೈಕ್ ಚಾಲೂ ಮಾಡಿದ.
*****
ಮಹಿಳೆಯ ವಿಭಾಗದಲ್ಲಿ ಆಕೆಯದ್ದೇನೂ ಗುರುತರ ಹೊಣೆಯಲ್ಲ, ಅಡಿಗೆ ಮನೆ ಸೇರಿದ್ದ ಅನುಭವಸ್ಥರು ಆಕೆಗೆ ವಹಿಸಿದ್ದು ಪಡಿಚಾಕರಿಯಷ್ಟೇ. ಆಗಷ್ಟೇ ಮದುವೆ ಮನೆಗೆ ಬಂದ ನೆಂಟರಮ್ಮನ ಕಂಡು ಕಣ್ಣರಳಿಸಿ…’ಯಮುನತ್ಗೆ…ಅರಾಮನೆ? ಈಗ್ಬಂದ್ಯಾ? ಎಲ್ಲಿ ಭಾವ್ನೋರು’ ಕೇಳಿದಳು.
‘ಅವ್ರು ನಾಳೆ ಬತ್ತ. ನಾಲ್ಕೂವರೆ ಬಸ್ಸು ತಪ್ಹೋತು ಮಾಡಿದಿ ಮಾರಾಯ್ತಿ. ಪುಣ್ಯ! ಸಿಕ್ತು’
‘ತಪ್ಪಿದ್ರೆ ನಾಳೆ ದಿಬ್ಬಣದ ಸಂತೀಗೆ ಬಪ್ಪದಾಗಿತ್ತು. ಹೆಹ್ಹೆಹ್ಹೆ. ಬಾ ಒಳಗೆ. ಆಸ್ರೀಗೆ ಎಂತದು?’
‘ಎಂತ ಬೇಡ… ಹೋಗ್ಲಿ, ಚಹಾನೇ ಕೊಡು. ಎಲ್ಲಿ ಬೀಗಿತ್ತಿ?’ ಎನ್ನುತ್ತಾ ಒಳ ನುಗ್ಗಿದ ಆಕೆಗೆ ಕಂಡಿದ್ದು ಮಗಳಿಗೆ ತಂದಿದ್ದ ಸೀರೆ, ಒಡವೆ ತೋರಿಸುತ್ತಿದ್ದ ಬೀಗಿತ್ತಿ.
‘ಬೋಳು ಚಿನ್ನದ ನೆಕ್ಲೇಸಾ ಅಕ್ಕಯ್ಯ? ಮುತ್ತೊ ಹವಳವೊ ಹಾಕ್ಸಿದ್ರೆ ಲಾಯ್ಕಿತ್ತು’
‘ಅದೆಲ್ಲಾ ಬರೇ ದಂಡನೆ. ಸರಕ್ಕೆ ಹಾಕ್ಸಕ್ಕಾದ್ರೆ ತುಟ್ಟಿ. ಕಡಿಗೆಂತ ಕಿಮ್ಮತ್ತೇ ಇರ್ತಿಲ್ಲೆ’
‘ಅಳಿಯಂಗೆಂತು? ಬರೇ ಚೈನಾ? ಉಂಗುರಿಲ್ಯ?’
‘ಈ ತುಟ್ಟಿ ಕಾಲ್ದಲ್ಲಿ ಇಷ್ಟಾದ್ರೂ ಮಾಡ್ಸಿದ್ದ ಹೇಳು. ನಿನ್ನ ಸೊಸಿಗೆ ಮಾಂಗಲ್ಯ ಬಿಟ್ಟು ಎಂತ ಚಿನ್ನನೂ ಹಾಕಿದ್ದಿಲ್ಯಡ’
‘ಅಯ್ಯ ಆ ಸುದ್ದಿ ಬಿಡು’ ಎನ್ನುತ್ತಾ ಉಳಿದ ಅತ್ತಿಗಮ್ಮಂದಿರ ಸುದ್ದಿಗೆ ಪೂರ್ಣವಿರಾಮ ಹಾಕಿ ಎದ್ದ ಬೀಗಿತ್ತಿ ‘ಬೀಗ್ರುಪ್ಚಾರದ ಬಟ್ಟಲು ತೆಗಿಯಲ್ಲೆ ಬಂದವ್ಳು ಇಲ್ಲೇ ಕುಂತಿ’ ಎಂದು ಒಡವೆಗಳನ್ನು ಕಪಾಟಿನಲ್ಲಿಟ್ಟು ಬೀಗ ಜಡಿದು ಚಾವಿ ಸೊಂಟಕ್ಕೆ ಸಿಕ್ಕಿಸಿ ನಡೆದಳು.
ಅವಳ ಬೆನ್ನಿಗೆ ‘ಅಕ್ಕಯ್ಯ… ಮೆಣಸಿನ ಪುಡಿ ಎಲ್ಲಿದ್ದು? ನಾಗಂದಿಗೆ ಮೇಲಾ?’ ಎನ್ನುತ್ತಾ ಒಬ್ಬಳು, ‘ಹಾಲು ಬಂತಾ ನೋಡ್ತಿ’ ಎನ್ನುತ್ತಾ ಮತ್ತೊಬ್ಬಳು, ‘ಮದ್ವೆ ಕೂಸೆಲ್ಲಿ? ಮೆತ್ತಿಗಿದ್ದಾ?’ ಎನ್ನುತ್ತಾ ಮಗದೊಬ್ಬಳು… ಎಲ್ಲರೂ ಎದ್ದರು.
*****
‘ರಾಟ್ರಿ ಊಟಡೊಳಗೆ ಚಪ್ರಕ್ಕೆಲ್ಲಾ ಟಾರ್ಪಾಳಿನ್ ಹಾಕ್ಮುಗಡ್ರೆ ಗೆಡ್ಹಾಂಗೆ’ ಪಿಚಕ್ಕನೆ ಕವಳದ ರಸ ಉಗುಳುತ್ತಾ ಪಂಚೆ ಅರ್ಧಕ್ಕೆ ಕಟ್ಟಿಕೊಂಡು ಲೆಕ್ಕ ಹಾಕುತ್ತಿದ್ದರು ಯಜಮಾನರು. ‘ಹೋ ಆತನ್ರೋ… ಮಳೆ ಬಂತು’ ಎಂದು ಹೆಗಲ ಮೇಲಿನ ಟವೆಲ್ಲು ಕುಡುಗಿ ಅವಸರ ಮಾಡುತ್ತಿದ್ದವರಿಗೆ ಗಡಿಬಿಡಿ ಮಾಡುವುದೊ ಬೇಡವೋ ಎಂಬುದೂ ತಿಳಿಯದಂತಾಗಿತ್ತು; ‘ಬಂದೇಬಿಟ್ಟೆ’ ಎಂದು ಮಧ್ಯಾಹ್ನದಿಂದ ಹೆದರಿಸುತ್ತಿದ್ದ ಮಳೆ ಈಗ ಇಳಿ ಬಿಸಿಲಿನೊಂದಿಗೆ ಕಣ್ಣಾಮುಚ್ಚಾಲೆ ಆಡತೊಡಗಿತ್ತು.
ನಾನಾ ಬಣ್ಣಗಳ ಸೆಲ್ವಾರ್ ತೊಟ್ಟು ಅದರ ದುಪಟ್ಟಾವನ್ನು ಅಂಗಳದಲ್ಲಿ ಹೊರಳಾಡಿಸುತ್ತಿದ್ದ ಪುಟ್ಟಿಯರು
”ಬಿಸಿಲು ಮಳೆ ಮಂಗನ ಮದುವೆ
ಚಾರಟೆ ಚಕ್ಲಿ
ನಂಜುಳ್ಳೆ ಪಾಯ್ಸ ಕಟ್ಟೆರದ್ ದಿಬ್ಬಣ
ನಾನೂ ನೀನು ಹೋಗನ” ಎಂದು ಕುಣಿದಾಡುತ್ತಿದ್ದರು.
ಎಲ್ಲವನ್ನೂ ನೋಡುತ್ತಾ ಉಪ್ಪರಿಗೆ ಮೇಲೆ ಕುಳಿತಿದ್ದ ಜರಿ ಸೀರೆಯುಟ್ಟ ಯುವತಿಯ ಕನಸುಗಳು ಕಣ್ಣಲ್ಲೇ ಮಂಜಾಗುತ್ತಿದ್ದವು; ವೇದನೆಗಳು ಸಹ ನುಂಗಿದ ಎಂಜಲಿನೊಂದಿಗೆ ಮತ್ತೆ ಹೊಟ್ಟೆಗೇ ಹಿಂದಿರುಗುತ್ತಿದ್ದವು; ಅದ್ಯಾವ ಕನಸು ಮರಿಗಳಿಗೆ ಅವಳ ಕಣ್ಣಿನ ಗೂಡುಗಳು ಕಾವು ಕೊಡುತ್ತಿದ್ದವೊ! ಬಲ್ಲವರಾರು? ಆಕೆ ನಿಧಾನಕ್ಕೆ ಕೆಳಗಿಳಿದು ಬಂದಿದ್ದನ್ನು ಯಾರೂ ಗಮನಿಸಲಿಲ್ಲ. ಸುತ್ತಲಿನ ಮಲೆಗಳಲ್ಲಿ ಮದುಮಗಳು ಮಾಯವಾದಳು.
*****
‘ಮದ್ವೆ ಕೂಸೆಲ್ಲೋತು? ಕಾಣ್ತಿಲ್ಲೆ!’ ಎಂದು ಆರಂಭವಾದ ಗುಸುಗುಸು, ಗದ್ದಲಕ್ಕೆ ತಿರುಗಿತು. ‘ಮೆತ್ತು, ಮಾಳಿಗೆ, ಮುಂದೆ, ಹಿಂದೆ ಎಲ್ಲಾ ಹುಡುಕಾತು. ಎಲ್ಲೆಲ್ಲೂ ಇಲ್ಲೆ! ಎಲ್ಹೋತು?’ ಎಂಬ ಅಳುಕು ಅಳುವಿಗೇ ಬಂದು ನಿಂತಿತು.
‘ಸಂಜೆ ಇಷ್ಟೊತ್ತಿಗೆ, ಈ ಮಳೆಲ್ಲಿ ಹೇಳದೆ-ಕೇಳದೆ ಎಲ್ಲೋತು ಕೂಸು’ ಇಂದ ಶುರುವಾದ ಗದ್ದಲ, ‘ಈ ಹೆಂಗಸ್ರು ಎಂತ ಮಾಡ್ತ ಒಳಗೆ? ಚೂರಾದ್ರೂ ಜವಾಬ್ದಾರಿ ಬ್ಯಾಡದಾ?’ ಎಂಬ ಗಲಾಟೆಯಾಗಿ, ‘ಇಷ್ಟೆಲ್ಲಾ ತ್ರಾಸು ಪಟ್ಟು ಮದುವೆ ತಯಾರಿ ಮಾಡಿದ್ದೆಂತಕ್ಕೆ? ಎಲ್ಲಾ ಹೊಳೆಲ್ಲಿ ಹೋಮ. ಈ ಕತ್ಲೆಲ್ಲಿ ಎಲ್ಲಿ ಹೇಳಿ ಹುಡ್ಕದು?’ ಎನ್ನುವ ಗೋಳಾಟವಾಯಿತು. ಹತ್ತಿರದ ಬೆಟ್ಟ, ಬಾವಿ, ಹೊಂಡ, ಹಿತ್ತಲುಗಳನ್ನು ಸೋಸಲು ಜನರನ್ನೂ ಅಟ್ಟಿದ್ದಾಯ್ತು.
‘ಬೆಳಗಾದ್ರೆ ಮದುವೆ. ಮನೆ ಮುಂದೆ ದಿಬ್ಬಣ ಬತ್ತು’
‘ನೆಂಟರಿಷ್ಟರು, ಊರ ಜನ ಎಲ್ಲ ಬತ್ತ’
‘ಯಾರಿಗೆ ಎಂತ ಹೇಳದು’
‘ಎಷ್ಟು ಸುಮಾರು ದತ್ತಣ್ಣಂಗೆ’
‘ಮಾಣಿ ಮನೆಯವ್ಕೆ ಎಂತ ಮುಖ ತೋರ್ಸದು’
‘ಮರ್ಯಾದಿಂದಿಪ್ಪ ಜನಕ್ಕೇ ಹಿಂಗೆಲ್ಲಾ ಆಗ್ತಲ್ಲಾ’
‘ಊರ ಜನ ನೂರು ಮಾತಾಡ್ತ. ಪಾಪ! ದತ್ತಣ್ಣ’
ಹುಡುಗನ ಮನೆಯವರಿಗೆ ಏನು ಹೇಳಬಹುದು, ಏನು ಹೇಳಬಾರದು, ಬಂಧು ಬಳಗಕ್ಕೆ ಯಾವ ಸುದ್ದಿ ತಲುಪಲಿ/ತಲುಪದಿರಲಿ ಎಲ್ಲವೂ ನಿರ್ಧಾರವಾಯಿತು. ಮದುವೆ, ದಿಬ್ಬಣ, ಮಾನ, ಅವಮಾನ, ಭೂತ-ಭವಿಷ್ಯ ಎಲ್ಲಾ ವಿಷಯಗಳೂ ಚರ್ಚೆಗೆ ಬಂದವು.
ಚರ್ಚೆಗೆ ಬಾರದ್ದು ಒಂದೇ… ಕಾಣೆಯಾದ ಕಂಗಳಲ್ಲಿ ಹನಿಯುತ್ತಿದ್ದ ಸೋನೆ ಮಳೆ.
*** *** ***
ಮನ್ನ
(ಸಣ್ಣ ಕತೆ)
`ಏ… ಹಗ್ಗ,, ಕತ್ತೀನ ಮತ್ತೆ ಇಲ್ಲೇ ತಂದಿಡಾ…’ ಎಂಬ ನನ್ನ ಸೂಚನೆಗೆ ಸಣ್ಣದೊಂದು ಮುಗುಳ್ನಗೆ ಬೀರಿ, ಗೋಣಲ್ಲಾಡಿಸಿ ಮುನ್ನಡೆದ ಮನ್ನ. ಅವನ ಕಾರ್ಯಾಚರಣೆ ನಡೆಯುವುದೇ ಕತ್ತಲಾದ ಮೇಲೆ. ಅದೇನು ವೀರಪ್ಪನ್ ಹಿಡಿಯುವಂಥ ಮಹತ್ತರ ಕಾರ್ಯಾಚರಣೆಯಲ್ಲ, ಜೇನು ತೆಗೆಯುವುದಷ್ಟೇ. ನಮ್ಮೂರಲ್ಲಿ ಹಗಲು ಹೊತ್ತಿನಲ್ಲಿ ಜೇನು ತೆಗೆಯುವವರು ಯಾರೂ ಇಲ್ಲ. ಅಂದರೆ ರಾತ್ರಿ ತೆಗೆಯುವವರು ಬೇಕಷ್ಟಿದ್ದಾರೆ ಎಂದಲ್ಲ, ಎಲ್ಲೋ ಮನ್ನನಂಥ ಒಂದಿಬ್ಬರು ತೆಗೆಯುತ್ತಾರಷ್ಟೇ. ಅದರಲ್ಲೂ ಹೇಳಿದ ತಕ್ಷಣ ಮರುಮಾತಾಡದೆ ಜೇನು ತೆಗೆಯುವವನು ಮನ್ನ ಮಾತ್ರ. ಏಕೆಂದರೆ ಆತ ಮೂಕ!
ಆತನ ಹೆಸರೇನು ಎಂಬುದು ಯಾರಿಗೂ ಗೊತ್ತಿಲ್ಲ. ಊರು ತುದಿಗಿರುವ ಒಡ್ಡರ ಕೇರಿಗೆ ಆತ ಸೇರಿದ್ದ ಹೇಗೆ ಎಂಬುದು ಯಾರಿಗೂ ನೆನಪಿಲ್ಲ. ಊರಲ್ಲಿ ಯಾರು ಕರೆದರೂ ಅವರ ಮನೆ ಕೆಲಸ ಮಾಡುವ ಆತನಿಗೆ ಊರೊಟ್ಟಿನ ಹೆಸರು ‘ಮನ್ನ‘. ಮಲೆನಾಡಿನ ಬಹಳಷ್ಟು ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ ಆತ ಮರ ಹತ್ತಿ ಕರಡಿಯಂತೆ ಜೇನು ತೆಗೆಯುವುದಲ್ಲಿ ನಿಸ್ಸೀಮ. ಶಾಲೆ ಕಾಣದಿದ್ದರೂ, ಮಾತು ಬಾರದಿದ್ದರೂ ತನ್ನ ಮುಗ್ಧ ಕಣ್ಣುಗಳಲ್ಲೇ ಬಹಳಷ್ಟನ್ನು ಹೇಳಿಬಿಡುವ ಜಾಣ. ನಮ್ಮನೆಯಿಂದ ಅಜಮಾಸು ಒಂದೂವರೆ ಮೈಲು ದೂರದಲ್ಲಿರುವ ಬೃಹತ್ ತಾರೆ ಮರದಲ್ಲಿ ಹೆಜ್ಜೇನು ಗೂಡು ಕಟ್ಟಿದೆ ಎಂಬುದನ್ನು ಆತನೇ ನನಗೆ ತಿಳಿಸಿದ್ದ. ಬಸ್ ಸ್ಟಾಪಿನ ಪಕ್ಕದಲ್ಲಿ ರಸ್ತೆ ಅಂಚಿಗಿರುವ ಮರವಾದರೂ ಅದಕ್ಕೆ ಯಾರೂ ಕನ್ನ ಹಾಕಿರಲಿಲ್ಲ. ಹಾಕುವುದು ಸುಲಭವೂ ಇರಲಿಲ್ಲ ಬಿಡಿ, ಸಿಕ್ಕಾಪಟ್ಟೆ ದೊಡ್ಡ ಮರವದು. ಅದರಿಂದ ಜೇನುತುಪ್ಪ ತೆಗೆಯುವ ಕೆಲಸವನ್ನು ಆತನಿಗೇ ಗಂಟು ಹಾಕಿದ್ದರಿಂದ ಮನ್ನನ ಸವಾರಿ ನಮ್ಮನೆಗೆ ಬಂದಿತ್ತು. ಅಗತ್ಯ ಸರಂಜಾಮುಗಳನ್ನು ತೆಗೆದುಕೊಂಡು ಮನ್ನ ಮರೆಯಾಗುವ ಮುನ್ನವೇ, ಬೆಳಗ್ಗೆ ಸವಿಯಲಿರುವ ಹೆಜ್ಜೇನು ತುಪ್ಪದ ಪರಿಮಳ ನನ್ನ ಮೂಗಿಗೆ ಬರಲಾರಂಭಿಸಿತ್ತು!
************** ***************
ಜೇನು ರಟ್ಟಿನಿಂದ ತುಪ್ಪವನ್ನು ಹಿಂಡಿ ಸುರಿಯಲು ಸೂರ್ಯೋದಯದವರೆಗೆ ಕಾಯುವ ತಾಳ್ಮೆಯಿಲ್ಲದೆ ನಾನು ಚಟಪಡಿಸುತ್ತಿದ್ದೆ. ರಾತ್ರಿ ನಿದ್ದೆಯಲ್ಲೂ ಜೇನಿನ ಕನಸೇ… ಒಮ್ಮೆ ನಾನು ಜೇನುತುಪ್ಪ ನೆಕ್ಕಿದಂತೆ, ಮತ್ತೊಮ್ಮೆ ಮನ್ನನಿಗೆ ಜೇನ್ನೊಣಗಳು ಕಚ್ಚಿದಂತೆ. ಅದು ಹಾಗೇ, ತುಪ್ಪ ತಿನ್ನುವುದು ಯಾರೇ ಆದರೂ ಜೇನು ಕಚ್ಚುವುದು ಮಾತ್ರ ಮನ್ನನಿಗೆ! ಆದರೆ ಬೆಳಗ್ಗೆ ನಮ್ಮನೆ ಕದ ತಟ್ಟಿದ್ದು ಜೇನು ತೆಗೆದ ಮನ್ನ ಅಲ್ಲ, ಕೆಟ್ಟದೊಂದು ಸುದ್ದಿ… ನಮ್ಮೂರಿನ ಶ್ಯಾಮಲಾ ಕೊಲೆಯಾದಳಂತೆ! ಹಿಂದಿನ ದಿನ ಕಾಲೇಜಿನಿಂದ ಮರಳುವಾಗ ಆಕೆ ಬಸ್ ಇಳಿದಿದ್ದನ್ನು ಕೆರೆಹೊಂಡದ ರಾಮಣ್ಣ ನೋಡಿದ್ದಾನಂತೆ. ಆದರೆ ಮನೆ ತಲುಪಲೇ ಇಲ್ಲ. ಬಸ್ಸೇನು ಆಕೆಯ ಮನೆ ಬಾಗಿಲಿಗೆ ಬರುವುದಿಲ್ಲ ಬಿಡಿ, ಏಳೆಂಟು ಫರ್ಲಾಂಗು ದೂರದ ರಸ್ತೆಯಲ್ಲಿದೆ ಬಸ್ ಸ್ಟಾಪು. ಅಲ್ಲಿಂದ ಕಾಡು ದಾರಿಯಲ್ಲೇ ಅವರ ಮನೆ ತಲುಪಬೇಕು. ಅದೇನು ದೊಡ್ಡ ವಿಷಯವಲ್ಲ, ಮಲೆನಾಡಿನ ಮನೆ, ಅದರ ದಾರಿ ಎಲ್ಲವೂ ಇರುವುದು ಕಾಡಿನಲ್ಲೇ. ಆದರೆ ಇದೇನು ಪ್ರಾರಬ್ಧಕರ್ಮ?
ಸಂಜೆ ಐದು ಗಂಟೆಯ ಸಕ್ರೆಬೈಲಿನ ಬಸ್ಸಿಗೆ ಬರಬೇಕಿದ್ದ ಆಕೆ ಕತ್ತಲಾದರೂ ಬಾರದಿದ್ದಾಗ ಮನೆಯವರು ಹುಡುಕಾಟ ಆರಂಭಿಸಿದರಂತೆ, ಬಸ್ ಸ್ಟಾಪಿನಿಂದ ಕೊಂಚ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪುಸ್ತಕಗಳು ಆಕೆಯ ದೇಹದ ಸುಳಿವು ನೀಡದವಂತೆ, ಕುತ್ತಿಗೆಯನ್ನು ಬಿಗಿಯಲಾಗಿದೆಯಂತೆ, ಮೈಮೇಲೆ ಆಳವಾದ ಗಾಯಗಳಿವೆಯಂತೆ, ಹಾಗಂತೆ, ಹೀಗಂತೆ… ಊರೆಲ್ಲಾ ತಲ್ಲಣ. ‘ಯಾರಡ? ಏನಡ? ಹ್ಯಾಂಗಡ?’ ಎಂಬ ಸರಪ್ರಶ್ನೆಗಳು;
ಅವುಗಳ ಬೆನ್ನಿಗೆ ‘ಅಯ್ಯೋ, ಹಾಂಗಲ್ಲ… ಯಂಗೊತ್ತಿದ್ದು… ಹೀಂಗಡ‘ ಎಂಬ ಉತ್ತರಗಳು;
ಜೊತೆಗೆ ‘ಛೇ, ಪಾಪ! ಗನಾ ಕೂಸು. ಹೀಂಗಾಗ್ತು ಹೇಳಿ ಕನ್-ಮನ್ಸಲ್ಲೂ ಅಂದ್ಕಂಡಿದ್ನಿಲ್ಲೆ‘ ಎಂಬ ಉದ್ಗಾರಗಳು;
ನಡುವೆ ‘ಬಪ್ಪದು ಲೇಟಾಗ್ತು ಹೇಳಿ ಕೂಸು ಫೋನ್ ಮಾಡಿತ್ತಡ… ಇಲ್ಯಡ, ಅವರ್ಮನೆ ಫೋನು ಹಾಳಾಗಿತ್ತಡ‘ ಎಂಬ ಕಿಂವದಂತಿಗಳು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ರೆಕ್ಕೆ-ಪುಕ್ಕ ಕಟ್ಟಿ ಊರು ತುಂಬಾ ಹಾರಾಡಲಾರಂಭಿಸಿದ್ದವು. ‘ನಮ್ಮೂರಿನ್ ಪಕ್ಕ ಆ ಹೆದ್ದಾರಿ ಮಾಡಿದಾಗ್ಲೇ ಹೇಳಿದ್ವಿಲ್ಯ… ನಮ್ಮ್ ಉಪಕಾರಕ್ಕಿಂತ ಕಳ್ರು, ಸುಳ್ರಿಗೇ ಲಾಯ್ಕಾಗ್ತು ಹೇಳಿ. ಯಂತಾ ಅಭಿವೃದ್ಧಿಯೊ ಮಣ್ಣೋ ಈ ಸರಕಾರದ್ದು… ಈಗ್ನೋಡಿ! ಏನೇನೆಲ್ಲಾ ಆಗ್ತಿದ್ದು‘ ಎಂದು ಇತ್ತೀಚೆಗಷ್ಟೇ ಸೊಸೈಟಿ ನೌಕರಿಯಿಂದ ನಿವೃತ್ತರಾದ ಸುಬ್ಬಣ್ಣ ಸಿಡುಕಿದರು.
‘ಮೊದ್ಲಿನ್ಹಾಂಗೆ ಹತ್ತನೆಇಯತ್ತೆ ಆದ ಕೂಡ್ಲೆ ಹೆಣ್ಣು ಹುಡುಗ್ರ ಮದುವೆ ಮಾಡಿದ್ರೆ ಸರಿಯಾಗ್ತು. ಇವಕ್ಕೆಲ್ಲಾ ಕಾಲೇಜು ಕಲ್ತು ಎಲ್ಲಿ ಅಮಲ್ದಾರಿಕೆ ಮಾಡವ್ವು? ಕಲಿಗಾಲ…’ ಎಂದು ಎಂಬತ್ತು ತುಂಬಿದ ಯಮುನಜ್ಜಿ ಅಲವತ್ತುಕೊಂಡರು.
‘ಪೇಟೆಲ್ಲಿದ್ದ ಮನೆ, ಅಂಗ್ಡಿ ಎಲ್ಲಾ ಬಿಟ್ಟು ಇಲ್ಲಿ ಹಿಸ್ಸೆ ತಗಂಡ್ ಕುಂತಿದ್ದು ಯಾವ್ ಸೌಭಾಗ್ಯಕ್ಕೆ? ಇದ್ದೊಂದು ಬಂಗಾರ್ದಂತ ಮಗಳೂ ಅವ್ರ ಕೈತಪ್ಪಿ ಹೋತಲ್ಲಾ‘ ಎಂದು ಶ್ಯಾಮಲಾಳ ಹೆತ್ತವರಿಗಾಗಿ ಹಲವರು ಹಲುಬಿದರು.
ಏನು ಹೇಳಿದರೇನು? ಶ್ಯಾಮಲಾ ಹೋಗಿಯಾಗಿತ್ತು. ಆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು.
*************************************
ಎಷ್ಟೇ ತನಿಖೆ ನಡೆಸಿದರೂ ಕೊಲೆಯಾಗಿ ವಾರ ಕಳೆದರು ಯಾರ ಬಂಧನವೂ ಆಗಲಿಲ್ಲ. ಊರಲ್ಲಿ ಇದ್ದಬಿದ್ದವರ ವಿಚಾರಣೆ ನಡೆಸಲಾಗಿತ್ತು. ಸಂಶಯ ಬಂದವರನ್ನೆಲ್ಲಾ ಪೊಲೀಸ್ ಠಾಣೆಗೆ ಕರೆಸಿ ‘ವಿಚಾರಿಸಿಕೊಳ್ಳಲಾಗಿತ್ತು‘. ಕೊಲೆಗಾರನನ್ನು ಬಂಧಿಸಲೇಬೇಕೆಂದು ಜನರ ಮತ್ತು ಮಾಧ್ಯಮಗಳ ಒತ್ತಡದಿಂದ ತನಿಖೆ ತೀವ್ರವಾಗೇ ನಡೆಯುತ್ತಿತ್ತು. ಊರಿನವರು ಮಾತ್ರವಲ್ಲ, ಅವರ ನೆಂಟರಿಷ್ಟರ ವಿಚಾರಣೆಯೂ ಆರಂಭವಾಗಿತ್ತು. ಈಗಂತೂ ನಮ್ಮೂರಿಗೆ ಬರಲು ಪೇಟೆಯಲ್ಲಿದ್ದ ಆಟೋದವರು ಕಬೂಲಾಗುತ್ತಿರಲಿಲ್ಲ. ಬಸ್ಸಿನಲ್ಲಿ ನಮ್ಮೂರಿನ ಸ್ಟಾಪಿಗೆ ಟಿಕೆಟ್ ತೆಗೆದುಕೊಂಡವರನ್ನು ಯಾರೂ ಮಾತನಾಡಿಸುತ್ತಿರಲಿಲ್ಲ. ವಿಚಾರಣೆ ಭಯದಿಂದ ಯಾವ ಸಂಬಂಧಿಕರೂ ಬಾರದೆ ನಮ್ಮೂರು ಒಂಥರಾ ದ್ವೀಪದಂತಾಗಿಬಿಟ್ಟಿತ್ತು. ಮಲೆನಾಡಿನ ಮೂಲೆಯಲ್ಲಿ ಮುದುಡಿ ಕುಳಿತಿದ್ದ ಸಕ್ರೆಬೈಲು ಈಗ ಸುದ್ದಿಯ ಕೇಂದ್ರವಾಗಿತ್ತು.
ಇತ್ತ, ಶ್ಯಾಮಲಾಳ ವಾರಿಗೆಯ ಒಂದಿಬ್ಬರು ಹೆಣ್ಣುಮಕ್ಕಳು ಭಯದಿಂದ ಕಾಲೇಜು ಬಿಟ್ಟಿದ್ದರು. ‘ಯಮ್ಮನೆ ಕೂಸು ಓದಿದ್ದು ಸಾಕು. ಮುಂದಿನ ವರ್ಷನೇ ಜಾತ್ಕ ಹೊರಗೆ ಹಾಕ್ತ್ಯ‘ ಎಂದು ಅವರ ಮನೆಯವರು ಘೋಷಿಸಿಯೂಬಿಟ್ಟರು. ನಮ್ಮೂರಲ್ಲಿ ಎಲ್ಲರ ಮನೆಗೂ ಇರುವುದು ಕಾಡು ದಾರಿಯೇ. ಬಸ್ಸಿಳಿದ ಮೇಲೆ ಅಷ್ಟಿಷ್ಟು ದೂರ ಒಂಟಿಯಾಗಿಯೇ ನಡೆಯಬೇಕು. ಆದರೂ ನಾಲ್ಕಾರು ದಿಟ್ಟೆಯರು ಓದು ಮುಂದುವರಿಸಿದರು. ಆದರೆ ಅವರಿಗಿದ್ದ ಧೈರ್ಯ ಅವರ ಪಾಲಕರಿಗೆ ಇಲ್ಲದಿದ್ದರಿಂದ, ದಿನಾ ಬಸ್ಸು ಬರುವ ಹೊತ್ತಿಗೆ ಆ ಹುಡುಗಿಯರ ಅಪ್ಪನೊ, ಅಣ್ಣನೊ, ತಮ್ಮನೊ ಬಸ್ ಸ್ಟಾಪಿಗೆ ಹಾಜರಾಗತೊಡಗಿದರು. ದಿನಾ ಬೆಳಗ್ಗೆ ಮತ್ತು ಸಂಜೆ ಅಲ್ಲೊಂದು ಸಣ್ಣ ಹರಟೆಕಟ್ಟೆಯೇ ಸೃಷ್ಟಿಯಾಯಿತು. ಕೊಲೆಗಾರ ಸಿಗದಿದ್ದರೂ, ಒಂದು ಪತ್ತೆದಾರಿ ಕಾದಂಬರಿಗೆ ಸಾಕಾಗುವಷ್ಟು ಕಾಲ್ಪನಿಕ ಸರಕು ಈ ಹರಟೆಕಟ್ಟೆಯಲ್ಲಿ ಸೃಷ್ಟಿಯಾಗುತ್ತಿತ್ತು.
‘ಆ ದಿನ ಸಂಜೆ ಇಲ್ಯಾವ್ದೊ ಬಿಳಿ ಕಾರು ಬಂದಿತ್ತಡ. ಈಗ ನೀ ನಿಂತಿದ್ದ ಜಾಗ ಇದ್ದಲ್ಲಾ… ಸುಮಾರು ಹೊತ್ತು ಅಲ್ಲೇ ನಿಂತಿತ್ತಡ‘
‘ಅಲ್ಲಲ್ಲ… ಬಿಳಿ ಕಾರಲ್ಲ… ಕೆಂಪು ಇಂಡಿಕಾ ಕಾರಡ. ಪಕ್ಕದ ಹೆದ್ದಾರಿಯಲ್ಲಿ ಹೋಪ ಮೋಟರ್ ಸೈಕಲ್ಲಿನ ಜನ ಕಾರು ನೋಡಿದ್ವಡ. ನಾಲ್ಕೊ, ಎಂಟೊ ಜನ ಇದ್ದಿದ್ವಡ‘
‘ಕೊಲೆಯಾದ ವಾರದೊಳಗೇ ಯಾರನ್ನೋ ಬಂಧಿಸಿದ್ವಡ. ಆದರೆ ದಿಲ್ಲಿಯಿಂದ ಫೋನ್ ಬಂದ ಮೇಲೆ ಬಿಟ್ಟಿದ್ವಡ. ಅಂವ ಯಾರೋ ಭಾರಿ ದೊಡ್ಡ ಕುಳನಡ‘…
ಈ ಮಧ್ಯೆ ಕೊಲೆಗಾರನನ್ನು ಬಂಧಿಸಲಾಗಿದೆ ಎಂಬ ಸುದ್ದಿಯೂ ಬಂತು.
********************************************
ಶ್ಯಾಮಲಾ ಕೊಲೆ ಆಗಿದ್ದಕ್ಕಿಂತ ದೊಡ್ಡ ಸಂಚಲನವನ್ನು ಈ ಸುದ್ದಿ ಸೃಷ್ಟಿಸಿತ್ತು. ತಂಪಾಗಿದ್ದ ಜಾಗದಲ್ಲಿ ಈ ಪರಿ ಕಿಚ್ಚು ಹಚ್ಚಿದ್ದು ಯಾರು ಎಂಬ ಕುತೂಹಲ ಮೇರೆ ಮೀರಿತ್ತು. ಹೆಸರು, ಜಾತಿ, ಕುಲ-ಗೋತ್ರ, ಬಣ್ಣ, ಉದ್ದ, ಅಗಲದಿಂದ ಹಿಡಿದು ಅವನ ಯೋಗ್ಯತೆ ಬಗ್ಗೆ ಸರ್ವರೂ ಮತ್ತ ಶಕ್ತ್ಯಾನುಸಾರ ವದಂತಿಗಳನ್ನು ಹಬ್ಬಿಸಿದರು. ‘ಅವನ ಹೆಸ್ರು ಕೇಶವನಡ… ಅಲ್ಲ, ಕಾಶಿಮನಡ…’
‘ಅವ್ನ ಕೆಲ್ಸ ಪ್ಯಾಟೆಲ್ಲಿ ಬಿಸಿನೆಸ್ಸಡ… ಅಯ್ಯೋ ಅಲ್ಲ, ಸೋಪ್ಮಾರೋನಡ‘
‘ಥೋ ಥೋ… ಅಂವ ಹಸೀ ಮೂರು ಕಾಸಿನವನಡ. ದಗಾಬಾಜಿ ಮಾಡ್ತಾನೆ ಇದ್ದವ ಹೇಳಾತು‘
‘ತಾನು ಅಲ್ಲವೇ ಅಲ್ಲ ಹೇಳಿದ್ನಡ, ಪೊಲೀಸರಿಂದ ಸರಿ ಖರ್ಚಿಗೆ ಸಿಕ್ಕಿದ್ಮೇಲೆ ಹೌದು ಹೇಳಿದ್ನಡ‘
‘ಎಲ್ಲಾ ಬಾಯಿ ಬಿಟ್ಟಿದ್ನಡ… ಶ್ಯಾಮಲಾನ ಹಿಂದೆ ಬಿದ್ದು ಸುಮಾರು ದಿನ ಆಗಿತ್ತಡ. ಅದ್ನ ಕೊಂದ ಹಗ್ಗ, ಕತ್ತಿ ಎಲ್ಲಾ ಸಿಕ್ಕಿದ್ದಡ‘
ಮರುದಿನದ ಪತ್ರಿಕೆ ಬರುವುದರೊಳಗೆ ಸುದ್ದಿಯ ಚಂಡಮಾರುತವೇ ನಮ್ಮೂರನ್ನು ಹಾದುಹೋಗಿತ್ತು. ಯಾವುದು ಹೌದು, ಯಾವುದು ಅಲ್ಲ ಎಂಬುದೇ ತಿಳಿಯದಷ್ಟು ವದಂತಿಗಳು ತಿರುಗುತ್ತಿದ್ದವು. ಪತ್ರಿಕೆಯನ್ನು ಅವನ ಫೋಟೊ ಸಹ ಬಂದಿದೆ ಎಂಬುದನ್ನು ತಿಳಿದು ಲಗುಬಗೆಯಿಂದ ಪುಟ ಬಿಡಿಸಿದೆ.
ಪೊಲೀಸರ ನಡುವೆ ನಿಂತಿದ್ದ ಮನ್ನ! ಹಾಗಾದರೆ ಆತ ವಿಚಾರಣೆಯಲ್ಲಿ ಏನು ಹೇಳಿದ, ಹೇಗೆ ಹೇಳಿದ…? ಕಂಗಾಲಾಗಿ ಮತ್ತೆ ಮತ್ತೆ ಫೋಟೊ ನೋಡಿದೆ… ಹೌದು, ಅವನೇ! ಅಸಹಾಯಕ ಮುಖ, ಅದೇನನ್ನೋ ಹೇಳಬೇಕೆಂದು ಚಡಪಡಿಸುತ್ತಿದ್ದ ಕಣ್ಣುಗಳು…
(2007ರ ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಕತೆ)
This page has the following sub pages.
ಚೆನ್ನಾಗಿದೇ ರೀ, ನಿಮ್ಮ ಪುಟ!
ನಿಮ್ಮ ಬೇ-ಹುಗಾರಿಕೆಯಲ್ಲಿ ಬರುವ ಬರಹಗಳಿಗೆ ನಾನೂ ಕಾಯುವೆ..
-ನೀಲಾಂಜನ
ಹೊರ ದೇಶದಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಆದರೆ ಈಗ ಯಕ್ಷಗಾನದ ತವರು ನಾಡಿನಲ್ಲಿ ಜನರಲ್ಲಿ ಇಂಥದ್ದೊಂದು ಆಸಕ್ತಿ ಮರೆಯಾಗುತ್ತಿದೆಯೋ ಅಂತನಿಸುತ್ತದೆ.
ಇದಕ್ಕೆ ಕಾರಣ, ಸಾಮಾಜಿಕ ಕಥಾನಕಗಳೊಂದಿಗೆ ಸಿನಿಮಾ, ಜಾನಪದ, ಕೋಲಾಟ, ಗೀಗೀ ಪದ ಮುಂತಾದವು ಯಕ್ಷಗಾನದ ಅಂತಃಸತ್ವವನ್ನು ನಾಶ ಮಾಡುತ್ತಿದೆ. ಪೌರಾಣಿಕ ಪ್ರಸಂಗಗಳು ಯಕ್ಷಗಾನ ನೋಡಿದವರಿಗೆ ಒಂದಷ್ಟು ನೀತಿಯನ್ನು ಬಿಟ್ಟು ಹೋಗುತ್ತವೆ… ಆದರೆ ಈಗಿನ ಸಿನಿಮಾ ಮಾದರಿಯ ಪ್ರಸಂಗಗಳು???
ಯೋಚಿಸಿದ್ರೆ ಖೇದವಾಗುತ್ತದೆ.
ಈ ನಿಟ್ಟಿನಲ್ಲಿ ವಿದೇಶದಲ್ಲಿ ನೆಲಸಿಯೂ ಯಕ್ಷಗಾನ ಪ್ರಿಯತೆಯನ್ನು ಕಾಯ್ದು ಕೊಂಡ ನಿಮ್ಮ ಶ್ರಮ ಅಭಿಮಾನ ಮೂಡಿಸುತ್ತದೆ. ಹೀಗೇ ಅಲ್ಲಿನ ಚಟುವಟಿಕೆಗಳನ್ನು ತಿಳಿಸ್ತಾ ಇರಿ.
-ಧನ್ಯವಾದ