ಪಡುವಣದ ಪಡಸಾಲೆಯಲ್ಲೊಂದು ಯಕ್ಷಲೋಕ
ತಮ್ಮ ದೇಶ, ಭಾಷೆ, ಸೊಗಸು-ಸೊಗಡು ಎಲ್ಲವನ್ನೂ ಬಿಟ್ಟು ದೂರ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಬಗ್ಗೆ ತಾಯ್ನೆಲದಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತು- `ಅವ್ರಿಗೇನ್ ಬಿಡು, ಆರಾಮಾಗಿದ್ದಾರೆ!’ ಗಳಿಕೆಯನ್ನೇ ‘ಆರಾಮ‘ ಎಂದು ಬಣ್ಣಿಸಿದರೆ… ನಿಜ, ಹೆಚ್ಚಿನವರಿಗೆ ಕಷ್ಟವೇನಿರುವುದಿಲ್ಲ. ಆದರೆ ತಮ್ಮದೇ ವಲಯದಿಂದ ನಾನಾ ಕಾರಣಗಳಿಂದಾಗಿ ದೂರ ಹೋದವರಿಗೆ ತಮ್ಮದಲ್ಲದ ಪರಿಸರದಲ್ಲಿ ಹೊಂದಿಕೊಳ್ಳುವಾಗ ಉಂಟಾಗುವ ತೊಡಕುಗಳು ವಿವಿಧ ಸ್ವರೂಪದವು.
ಕೌಟುಂಬಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯದಿಂದ ಏಕಾಏಕಿ ಹೊರಬಂದಾಗ ಉಂಟಾಗುವ ತಳಮಳ ನಿರೀಕ್ಷಿತವೇ ಆದರೂ ಅದರಿಂದ ಹೊರಬರುವುದೆಂತು? ಕೌಟುಂಬಿಕ ಮತ್ತು ಸಾಮಾಜಿಕ ಪರಿಧಿಯನ್ನು ಸ್ಥಳಾಂತರಿಸುವುದು ಅಥವಾ ಸೃಷ್ಟಿಸಿಕೊಳ್ಳುವುದು ಕಷ್ಟಸಾಧ್ಯ. ಆದರೆ ಸಾಂಸ್ಕೃತಿಕ ವಲಯವನ್ನು ರೂಪಿಸಿಕೊಳ್ಳಬಹುದಲ್ಲವೇ? ನಾವು ಕಂಡು, ಆಡಿ, ಅನುಭವಿಸಿ ಕಲೆಯನ್ನು, ಕಲಾ ವಲಯವನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಿಲ್ಲವೇ?
ಸಾಧ್ಯವಿದೆ ಎಂಬುದನ್ನು ‘ಯಕ್ಷರಂಗ‘ ಸಾಬಿತುಪಡಿಸಿದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊ ‘ಬೇ ಏರಿಯಾ‘ದಲ್ಲಿ ಈ ‘ಯಕ್ಷರಂಗ‘ ಜನ್ಮ ತಾಳಿದ್ದು ಇದೇ ಸಾಂಸ್ಕೃತಿಕ ಹಸಿವನ್ನು ನೀಗಿಸಲು. ಮೂರು ವರ್ಷಗಳ ಹಿಂದೆ ಯಕ್ಷರಂಗ ಕಣ್ಣು ತೆರೆಯುವಾಗ, ಈ ಪ್ರದೇಶದ ಕನ್ನಡಿಗರು, ಅದರಲ್ಲೂ ಪ್ರಮುಖವಾಗಿ ದಕ್ಷಿಣೋತ್ತರಕನ್ನಡ ಜಿಲ್ಲೆಗಳ ಮೂಲದವರು ಎದುರಿಸುತ್ತಿದ್ದ ಸಾಂಸ್ಕೃತಿಕ ಶೂನ್ಯತೆಯನ್ನು ತುಂಬಬೇಕಾದ ಅನಿವಾರ್ಯತೆಯಿತ್ತು. ನೃತ್ಯ, ಸಂಗೀತದಂತಹ ಹಲವಾರು ಅಪ್ಪಟ ಭಾರತೀಯ ಶಾಸ್ತ್ರಿಯ ಕಲೆಗಳಿಗೆ ಇಲ್ಲಿ ಸಾಕಷ್ಟು ಅವಕಾಶವಿದ್ದರೂ ಮಲೆನಾಡು ಮತ್ತು ಕರಾವಳಿಯ ಸೊಗಡಿನ ಕಲೆಯಾದ ಯಕ್ಷಗಾನದ ಕೊರತೆ ಇದ್ದೇಇತ್ತು.
ಈ ಪ್ರದೇಶದಲ್ಲಿ ಯಕ್ಷಗಾನ ಆಸಕ್ತರಿದ್ದಾರೆ ಎಂಬುದನ್ನು ಅರಿತ ಗಿರೀಶ್ ಹೆಗಡೆ ಅವರು, 2004ರಲ್ಲಿ ಕಲಾಸಕ್ತರನ್ನು ಒಗ್ಗೂಡಿಸುವ ಪ್ರಯತ್ನ ಆರಂಭಿಸಿದರು. ಸಾಫ್ಟ್ ವೇರ್ ಕ್ಷೇತ್ರದಲ್ಲಿರುವ ಅವರು ಯಕ್ಷಗಾನ ಕಲಾವಿದರೂ ಆಗಿದ್ದು, ಕಲಾಸಕ್ತರನ್ನು ಸಂಘಟಿಸಲು ಕೆಲವು ಏಕವ್ಯಕ್ತಿ ಪ್ರದರ್ಶನಗಳನ್ನು ನಡೆಸಿದರು. ಇದರ ಮುಂದುವರಿದ ಭಾಗವಾಗಿ, 2006ರಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರನ್ನು ಕ್ಯಾಲಿಫೋರ್ನಿಯಾಗೆ ಆಹ್ವಾನಿಸಲಾಯಿತು. ಈ ಮೂಲಕ ಯಕ್ಷರಂಗ ರಜಿಸ್ಟರ್ಡ್ ಸಂಘವಾಗದೆ, ಆಸಕ್ತರ ಸಂಘಟನೆಯಾಗಿ ರೂಪುಗೊಂಡಿದೆ.
‘ಕಳೆದ ವರ್ಷ ನಾನಿಲ್ಲಿಗೆ ಬಂದಿದ್ದು ಚಿಟ್ಟಾಣಿಯವರ ಮೇಳಕ್ಕೆ ಭಾಗವತನಾಗಿ. ‘ಆಟ‘ದ ನಂತರ ಮೂರು ದಿನಗಳ ಕುಣಿತದ ಶಿಬಿರ ಏರ್ಪಾಡಾಯಿತು. ನಾನಾ ವೃತ್ತಿಗಳಲ್ಲಿ ಇರುವವರು ಬಿಡುವು ಮಾಡಿಕೊಂಡು ಶಿಬಿರಕ್ಕೆ ಬಂದರು. ಆಸಕ್ತಿಯಿಂದ ಹೆಜ್ಜೆ ಹಾಕಿದರು. ಹಾಗೆಯೇ ಒಂದು ಪ್ರಸಂಗವನ್ನೂ ಮಾಡಬೇಕೆಂಬ ಉತ್ಸಾಹ ವ್ಯಕ್ತವಾಯಿತು. ನನ್ನೊಂದಿಗೆ ಬಂದಿದ್ದ ಮೇಳದವರೆಲ್ಲಾ ಭಾರತಕ್ಕೆ ಮರಳಿದರೂ ನನ್ನ ಪ್ರವಾಸವನ್ನು ಒಂದು ತಿಂಗಳು ವಿಸ್ತರಿಸಬೇಕಾಯಿತು‘ ಎಂದು ಯಕ್ಷರಂಗದ ಬೆನ್ನೆಲುಬುಬಾಗಿರುವ ಕೆ.ಜೆ. ಗಣೇಶ್ ನೆನಪಿಸಿಕೊಳ್ಳುತ್ತಾರೆ.
ಯಕ್ಷರಂಗದ ಒಬ್ಬಿಬ್ಬರು ಸದಸ್ಯರನ್ನು ಹೊರತುಪಡಿಸಿದರೆ, ಬಣ್ಣ ಹಚ್ಚುವ ಅಥವಾ ವೇಷ ಕಟ್ಟುವ ಅನುಭವ ಉಳಿದೆಲ್ಲರಿಗೂ ಹೊಸತು. ಕೆಲವು ಸದಸ್ಯರಿಗಂತೂ ಯಕ್ಷಗಾನವೆಂದರೆ ಬಾಲ್ಯದಲ್ಲಿ ನಿದ್ದೆಗೆಟ್ಟೊ, ತೂಕಡಿಸುತ್ತಲೊ ನೋಡಿದ ಅನುಭವ ಮಾತ್ರ. ನಾನಾ ಕ್ಷೇತ್ರಗಳಲ್ಲಿ ಬಿಡುವಿರದೆ ದುಡಿಯುತ್ತಿರುವ ಅವರಿಗೆ, ತಾವೆಲ್ಲಾ ಪ್ರಸಂಗಕ್ಕೆ ಸಿದ್ಧವಾಗುವಷ್ಟು ತಾಲೀಮು ಪಡೆಯುವುದು ಯಾವಾಗ ಎಂಬ ಆತಂಕವಿತ್ತು. ಆದರೆ ಕಲಿಯುವ ಉತ್ಸಾಹ ಎಲ್ಲರಲ್ಲೂ ಸಮಾನವಾಗಿ ಇದ್ದುದರಿಂದ ಪ್ರೇಕ್ಷಕರಿಗೆ ರಸಭಂಗವಾಗಲಿಲ್ಲ ಎಂಬುದು ಗಣೇಶ್ ಅವರ ಸಮಾಧಾನ. ಅವರು ಯಕ್ಷರಂಗದ ಪಾಲಿಗೆ ಭಾಗವತರು ಮಾತ್ರವಲ್ಲ, ಹೆಜ್ಜೆ, ಚಂಡೆ, ಮದ್ದಳೆ ಎಲ್ಲವನ್ನೂ ಹೇಳಿಕೊಟ್ಟ ಗುರು.
ಮೊದಲ ಬಾರಿಗೆ ಪ್ರಸಂಗ ಮಾಡಬೇಕೆಂದು ನಿರ್ಧರಿಸಿ, ‘ಸುಧನ್ವಾರ್ಜುನ ಕಾಳಗ‘ದ ಅಭ್ಯಾಸವನ್ನು ಆರಂಭಿಸಿದ್ದಾಯಿತು. ಶ್ರೀಕಾರದಿಂದ ಆರಂಭವಾದ ಅಭ್ಯಾಸ ಅಂತಿಮ ಹಂತ ತಲುಪುತ್ತಿದ್ದಂತೆ ಸದಸ್ಯರ ತೊಡಕುಗಳ ಸರಣಿ ಆರಂಭವಾಯಿತು. ವೇಷ-ಭೂಷಣಗಳನ್ನು, ಅದಕ್ಕೆ ಸೂಕ್ತವಾದ ಬಣ್ಣಗಳನ್ನು ಹೊಂದಿಸುವುದು ಹೇಗೆ? ಯಕ್ಷಗಾನಕ್ಕೆ ಬೇಕಾದ ಒಡವೆ ವಸ್ತ್ರಗಳು ಅಮೆರಿಕದಲ್ಲಿ ದೊರೆಯುವುದಿಲ್ಲ. ಹಾಗಾಗಿ ಆ ಸಮಯದಲ್ಲಿ ಭಾರತದಿಂದ ಬರಲಿದ್ದ ತಂತಮ್ಮ ಬಂಧು-ಮಿತ್ರರನ್ನು ಕಾಡಿ-ಬೇಡಿ ಒಂದಿಷ್ಟು ವಸ್ತ್ರ-ವರ್ಣಿಕೆಗಳನ್ನು ತರಿಸಿಕೊಂಡಿದ್ದಾಯಿತು. ಮೊದಲ ಪ್ರಸಂಗದಲ್ಲಿ ಕಲಾವಿದರು ಪಟ್ಟ ಪರಿಶ್ರಮಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಈ ಪ್ರಯೋಗ ಎರಡನೇ ವರ್ಷಕ್ಕೂ ಮುಂದುವರಿದಿದ್ದು, ತಮ್ಮದು ಆರಂಭ ಶೂರತ್ವ ಅಲ್ಲ ಎಂಬುದನ್ನು ಯಕ್ಷರಂಗ ಸಾಬೀತುಪಡಿಸಿದೆ. ಕಳೆದ ಜೂನ್ 30ರಂದು ಅಮೆರಿಕದ ಹವ್ಯಕ ಸಂಘಟನೆಗಳ ಸಮ್ಮೇಳನದಲ್ಲಿ ಮ,ತ್ತು ಜುಲೈ 1ರಂದು ಒಕ್ಕಲಿಗರ ಸಂಘದಲ್ಲಿ ಪ್ರದರ್ಶಿಸಿದ ‘ಕಂಸವಧೆ‘ ಹಾಗೂ ಜುಲೈ 14ರಂದು ಸನಾತನ ಧರ್ಮ ಕೇಂದ್ರದಲ್ಲಿ ನಡೆದ ‘ಧರ್ಮಾಂಗದ ದಿಗ್ವಿಜಯ‘ ಪ್ರಸಂಗಗಳಿಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಳೆದ ವರ್ಷಕ್ಕಿಂತಲೂ ಈ ವರ್ಷ ನಡೆದ ಪ್ರಸಂಗಗಳ ಗುಣಮಟ್ಟ ವೃದ್ಧಿಸಿದ ಬಗ್ಗೆ ಸದಸ್ಯರಿಗಿರುವ ಹಿಗ್ಗು ಸಹಜವಾದದ್ದು. ಆದರೆ ತಮಗೆ ವೇಷಭೂಷಣಗಳನ್ನು ಧರಿಸಲು ಮತ್ತು ಮುಖವರ್ಣಿಕೆ ಸಿದ್ಧಮಾಡಿಕೊಳ್ಳಲು ತರಬೇತಿ ಬೇಕಿದೆ ಎನ್ನುತ್ತಾರೆ. ಹಿಮ್ಮೇಳ ಪೂರ್ಣವಾಗಿದ್ದರೆ ಆಟಕ್ಕೆ ಹೆಚ್ಚಿನ ಕಳೆ. ಹಾಗಾಗಿ ಮುಮ್ಮೇಳದೊಂದಿಗೆ ಹಿಮ್ಮೇಳದ ತಂಡವನ್ನೂ ಸಿದ್ಧಮಾಡಿಕೊಳ್ಳುವುದು ತಮ್ಮ ತಕ್ಷಣದ ಅಗತ್ಯಗಳಲ್ಲಿ ಒಂದು ಎಂಬುದು ಅವರ ಅಭಿಮತ.
ಯಕ್ಷಗಾನ ತನ್ನ ಮೂಲ ನೆಲೆಯಲ್ಲೇ ಸತ್ವ ಕಳೆದುಕೊಂಡು ನಾಟಕೀಯವಾಗುತ್ತಿದೆ ಎಂದು ವಿಷಾದಿಸುವ ಗಣೇಶ್ ಅವರಿಗೆ ದೂರ ದೇಶದಲ್ಲಿ ಅರಳಿರುವ ಕಲಾ ಪ್ರೀತಿಯ ಬಗ್ಗೆ ಮೆಚ್ಚುಗೆಯಿದೆ. ‘ಕಳೆದ ವರ್ಷಕ್ಕೆ ಹೂಲಿಸಿದರೆ, ಈ ವರ್ಷ ಕಲಾವಿದರ ಹೆಜ್ಜೆಗಳು, ಮಾತು ಎಲ್ಲದರಲ್ಲೂ ಹೆಚ್ಚಿನ ನಿಖರತೆ ಇದೆ. ಆದರೆ ಅಭಿನಯ ಇನ್ನಷ್ಟು ಸುಧಾರಿಸಬೇಕಿದೆ. ಇದೇ ಆಸಕ್ತಿ, ಶ್ರದ್ಧೆಯನ್ನು ಕಾಯ್ದುಕೊಂಡರೆ ಶ್ರೇಷ್ಠಮಟ್ಟದ ಪ್ರದರ್ಶನವನ್ನು ಖಂಡಿತ ನೀಡಬಹುದು‘ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ. ಜತೆಗೆ, ಇಲ್ಲಿನ ಮಕ್ಕಳಿಗೆ ಈಗಿನಿಂದಲೇ ತರಬೇತಿ ನೀಡಿದರೆ ಕಲೆ ಬೆಳೆಯುತ್ತದೆ ಎಂಬುದು ಅವರ ದೂರದೃಷ್ಟಿ. ಯಾವುದೇ ಕಲೆ ತನ್ನ ನೆಲೆಯಲ್ಲಿ ಮಾತ್ರವೇ ಪ್ರದರ್ಶಿತವಾದರೆ, ಅದರ ಪರಿಧಿ ಸೀಮಿತಗೊಳ್ಳುವ ಅಪಾಯ ಎದುರಾಗುತ್ತದೆ. ಹಾಗಾಗಿ ತನ್ನದಲ್ಲದ ವಲಯದಲ್ಲಿ ಹೊಸ ಪ್ರೇಕ್ಷಕರನ್ನು ಸೃಷ್ಟಿಸಿಕೊಳ್ಳುವ ಪ್ರಕ್ರಿಯೆ ಕಲಾಪ್ರಸಾರದ ದೃಷ್ಟಿಯಲ್ಲಿ ಮಹತ್ವದ್ದೆನಿಸುತ್ತದೆ. ‘ಇಲ್ಲೇ ಹುಟ್ಟಿ ಬೆಳೆಯುತ್ತಿರುವ ನಮ್ಮ ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಸಬೇಕು. ಮೊದಲು ಯಕ್ಷಗಾನ ಪರಿಚಯಿಸಿ, ಆ ಮೂಲಕ ನಮ್ಮ ಪುರಾಣ, ಮಹಾಕಾವ್ಯಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು‘ ಎಂಬುದು ಯಕ್ಷರಂಗದ ಸದಸ್ಯರ ಇಂಗಿತ.
ಸಾಂಸ್ಕೃತಿ ನೆಲೆಗಟ್ಟು ಸೃಷ್ಟಿಸಿಕೊಳ್ಳುವ ಈ ಮಾರ್ಗ ತಮ್ಮ ವೃತ್ತಿಯ ಒತ್ತಡವನ್ನು ದೂರಮಾಡಲು ಸಹ ಅತ್ಯುತ್ತಮ ಉಪಾಯ ಎಂಬುದನ್ನು ಇಲ್ಲಿನ ಸದಸ್ಯರು ಕಂಡುಕೊಂಡಿದ್ದಾರೆ. ಯಕ್ಷಗಾನದಂತಹ ಸಾಂಘಿಕ ಕಲೆಗೆ ತಾವು ಒಟ್ಟಾಗಿ ಶ್ರಮಿಸಿದರಷ್ಟೇ ನ್ಯಾಯ ಸಲ್ಲಿಸಲು ಸಾಧ್ಯ ಎಂಬ ಅರಿವು ಅವರಿಗಿದೆ. ಬಾಲ್ಯದಿಂದಲೂ ನೋಡಿದ, ಮೋಡಿ ಮಾಡಿದ ಕಲೆ ಈಗ ತಮ್ಮದೇ ಮಗ್ಗುಲಲ್ಲಿ ಅರಳುತ್ತಿದೆ ಎಂಬ ತೃಪ್ತಿ, ಇದನ್ನು ಉಳಿಸಿ ಬೆಳೆಸಬೇಕೆಂಬ ಕಾಳಜಿ ಯಕ್ಷರಂಗದ್ದು.