ಐದು ದಿನದ ವಾರ: ಹಲವು ಬಗೆಯ ಉಪಕಾರ
ಅವಳು ಒಂದನೆಯ ತರಗತಿಯಲ್ಲಿ ಓದುತ್ತಿರುವ ಬಾಲೆ. ಅವಳ ತಂದೆಗೆ ಹೊಸ ಕಂಪನಿಯಲ್ಲಿ ವಾರಕ್ಕೆ ಐದು ದಿನ ಕೆಲಸ. ಶನಿವಾರ ರಜ. ಈ ವಿಷಯ ತಿಳಿಯುತ್ತಿದ್ದಂತೆ ಅವಳು ಮನೆತುಂಬ ಕುಣಿದು ಕುಪ್ಪಳಿಸಿದಳು. ಒಂದು ವಾರ ಕಾಲ ಮನೆಗೆ ಯಾರೇ ಪರಿಚಿತರು ಬರಲಿ, `ಈಗ ನನ್ನಪ್ಪನಿಗೆ ಶನಿವಾರವೂ ರಜ’ ಎಂದು ಹೇಳಿ ಸಂಭ್ರಮಿಸುತ್ತಿದ್ದಳು. ಕೇಂದ್ರ ಪಠ್ಯಕ್ರಮವಿರುವ ಶಾಲೆಯ ವಿದ್ಯಾರ್ಥಿಯಾಗಿರುವ ಅವಳಿಗೆ ಶನಿವಾರ ರಜೆ. ಮೊದಲೆಲ್ಲ ಶನಿವಾರ ಬಂದಿತೆಂದರೆ ಬೇಸರಪಡುತ್ತಿದ್ದಳು. ಅವಳ ತಂದೆಗೂ ವಾರಕ್ಕೆ ಐದು ದಿನ ದುಡಿಮೆಯ ದಿನಗಳಾದ ಮೇಲೆ ತಂದೆ ಮಗಳು ಆಟವಾಡುವ, ಅಂಗಡಿಗೆ, ಪಾರ್ಕಿಗೆ ಹೋಗುವ ವೇಳಾಪಟ್ಟಿ ಶುಕ್ರವಾರ ಸಂಜೆಯೇ ಸಿದ್ಧಗೊಳ್ಳುತ್ತದೆ. ಅವಳ ತಾಯಿ ಶನಿವಾರ 3ಗಂಟೆಗೆ ಕಚೇರಿಯಿಂದ ಹೊರಟರೂ ಬೆಂಗಳೂರಿನ ಜನಜಂಗುಳಿಯಲ್ಲಿ ಅವಳು ಮನೆ ಸೇರುವುದು ಸಂಜೆ ಐದಕ್ಕೇ. ಬೆಳಗಿನಿಂದ ಅಪ್ಪನ ಜೊತೆಗೆ ಏನೇನು ಮಾಡಿದೆ ಎನ್ನುವ ವಿಷಯ ತಾಯಿಗೆ ವರದಿಯಾತ್ತದೆ. ಈಗವಳು ವಾರದ ಕೊನೆಯನ್ನು ಸ್ವಾಗತಿಸುತ್ತಾಳೆ; ಅಷ್ಟೇ ಅಲ್ಲ, ಅದಕ್ಕಾಗಿ ಕಾಯುತ್ತಾಳೆ ಕೂಡ.
ಕೇಂದ್ರ ಸರಕಾರದ ಕಚೇರಿಗಳಯ, ರೈಲ್ವೆ ಇಲಾಖೆಯೂ ಸೇರಿದಂತೆ ಐದು ದುಡಿಮೆಯ ದಿನಗಳನ್ನು ಜಾರಿಗೆ ತಂದು ದಶಕಗಳೇ ಸಂದಿವೆ. ಈಗ ಕರ್ನಾಟಕದಲ್ಲಿಯೂ ಅದನ್ನು ಜಾರಿಗೆ ತರಲು ಯೋಚಿಸಲಾಗುತ್ತಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿಂದೆ ಎರಡು ಬಾರಿ, ಧರ್ಮವೀರ ಅವರು ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಮತ್ತು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಇದನ್ನು ಜಾರಿಗೊಳಿಸಲು ಮುಂದಾದಾಗ ಏನಾಯಿತೆನ್ನುವುದನ್ನು ನೆನಪಿಸಿ ಸಾರಾಸಗಟಾದ ನಿರಾಕರಣೆ ನಡೆದಿದೆ. ಇದರಲ್ಲಿ ಮಾಧ್ಯಮಗಳೂ ಕ್ರಿಯಾಶೀಲವಾಗಿವೆ. ಕೆಲವು ರಾಜ್ಯಮಟ್ಟದ ದಿನಪತ್ರಿಕೆಗಳು ಸಂಪಾದಕೀಯ ಬರೆದು ತಮ್ಮ ಬದ್ಧತೆಯನ್ನು ಪ್ರದರ್ಶಿಸಿವೆ. ಈ ಹಿಂದೆ ವಾರದ ಐದು ದಿನಗಳ ಕೆಲಸವನ್ನು ವಿರೋಧಿಸಿದವರು ಜನಪ್ರತಿನಿಧಿಗಳು ಎನ್ನುವುದು ಬಹಳ ಮುಖ್ಯ. ಅವರಿಗೆ ತಮ್ಮ ಹಿಂದೆ ಮುಂದೆ ಓಡಾಡಲು ಸರಕಾರೀ ಅಧಿಕಾರಿಗಳು ಬೇಕು. ಅವರ ಹೊರತು ಇವರ ಬೇಳೆ ಬೇಯದು ಎನ್ನುವುದನ್ನು ಮಾಧ್ಯಮಗಳು ಮರೆಯಬಾರದು. ಖಾಸಗಿ ಸಂಸ್ಥೆಗಳಲ್ಲಿರುವ ಶಿಸ್ತು, ದಕ್ಷತೆ ಹಾಗೂ ಭ್ರಷ್ಟಾಚಾರರಹಿತ ವ್ಯವಸ್ಥೆ ಸರಕಾರೀ ಕಚೇರಿಗಳಲ್ಲಿ ಇಲ್ಲದಿರುವುದರಿಂದ ಖಾಸಗಿ ಸಂಸ್ಥೆಗಳಂತೆ ಕೆಲಸದ ದಿನಗಳನ್ನು ವಾರದ ಆರು ದಿನಗಳಿಗೆ ಬದಲು ಐದು ದಿನಕ್ಕೆ ಕಡಿತಗೊಳಿಸುವುದರ ಬಗ್ಗೆ ವಿರೋಧ ವ್ಯಕ್ತವಾಗಿದೆ. ಸರಕಾರೀ ಕೆಲಸ ಸಾಕಷ್ಟು ಪ್ರಮಾಣದಲ್ಲಿರುವುದರಿಂದ ಐದು ದಿನದ ವಾರ ವಿವೇಚನಾಯುಕ್ತವಾದುದಲ್ಲ ಎನ್ನುವ ತಾರ್ಕಿಕತೆಯನ್ನು ಮುಂದಿಡುವವರು ತುಸು ಯೋಚಿಸುವುದು ಒಳ್ಳೆಯದು. ಖಾಸಗಿ ವಲಯದಂತೆ ಪ್ರತಿಯೊಂದು ಕೆಲಸಕ್ಕೂ ಸಮಯವನ್ನು ನಿಗದಿಗೊಳಿಸಿದರೆ ಈಗಿನಂತೆ ಒಂದು ಕೆಲಸಕ್ಕೆ ಹತ್ತು ಬಾರಿ ಕಚೇರಿಗೆ ಅಲೆಯುವುದು ತಪ್ಪುತ್ತದೆ, ಸಮಯ, ಹಣ ಉಳಿಯುತ್ತದೆ.
ಸರಕಾರೀ ಉದ್ಯೋಗಿಗಳು ಮೊದಲೇ ಸೋಮಾರಿಗಳು, ಐದು ದಿನದ ವಾರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ಎನ್ನುವ ವಾದವೂ ಇದೆ. ಇದು ಹುರುಳಿಲ್ಲದ್ದು. ಖಾಲಿ ಹುದ್ದೆಗಳನ್ನು ತುಂಬದಿರುವ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಸರಕಾರೀ ಉದ್ಯೋಗಿಗಳು ನಿಗದಿತ ಅವಧಿಗಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಿರುವುದು ಹೀಗೆ ಆರೋಪ ಹೊರಿಸುವವರ ಗಮನಕ್ಕೆ ಬಂದಂತಿಲ್ಲ. ಇನ್ನು ಸಾರ್ವಜನಿಕರು, ಉಳಿದ ಐದು ದಿನಗಳಲ್ಲಿ ಮಾಡದ ಕೆಲಸವನ್ನು ಶನಿವಾರ ಮಾತ್ರ ಮಾಡುತ್ತಾರೆಯೇ? ಸರಕಾರೀ ಉದ್ಯೋಗಿಗಳನ್ನು ತಾರಾಮಾರಾ ತರಾಟೆಗೆ ತೆಗೆದುಕೊಳ್ಳುವ ನಾವು ನಮ್ಮ ನಮ್ಮ ಕೆಲಸ ಕಾರ್ಯಗಳಲ್ಲಿ ಎಷ್ಟು ಬದ್ಧರು? ಇದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾದುದು. ಸರಕಾರೀ ಕಚೇರಿಗಳು ಶಿಸ್ತು, ದಕ್ಷತೆ ಮತ್ತು ಭ್ರಷ್ಟಾಚಾರರಹಿತವಾಗಿ ಕೆಲಸ ನಿರ್ವಹಿಸುವಂತೆ ಮಾಡಲು ಅದಕ್ಕೆ ಕಾಯಕಲ್ಪ ಬೇಕಾಗಿದೆ ಎನ್ನುವುದು ನಿಜ. ಆದರೆ `ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’? ಇದರಲ್ಲಿ ನಮ್ಮ ಪಾಲೂ ಇದೆ ಎನ್ನುವುದನ್ನು ನಾವು ಮರೆಯುತ್ತೇವೆ. ನಮ್ಮ ಕೆಲಸ ( ಕಾನೂನು ಚೌಕಟ್ಟಿನೊಳಗಿರಲಿ, ಇಲ್ಲದಿರಲಿ) ಸರಕಾರೀ ಕಚೇರಿಗಳು ಅದನ್ನು ನೆರವೇರಿಸಿಕೊಡುವಂತೆ ಒತ್ತಾಯಿಸುತ್ತೇವೆ, ಆಮಿಷ ಒಡ್ಡುತ್ತೇವೆ. ನಮ್ಮ ಕೆಲಸ ಮುಗಿದ ಮೇಲೆ ಅವರನ್ನು `ಭ್ರಷ್ಟರು’ ಎಂದು ಹಿಂದಿನಿಂದ ನಾವೇ ಬೈಯ್ಯುತ್ತೇವೆ. ಉನ್ನತ ಹುದ್ದೆಯಲ್ಲಿ ಸಮರ್ಥ ಅಧಿಕಾರಿ ಇದ್ದಾಗ ಆ ಕಚೇರಿಯ ಕೆಲಸಗಳು ಆದಷ್ಟು ಶೀಘ್ರವಾಗಿ, ಸಮಯ ಮತ್ತು ಹಣ ಯಾವುದರ ವ್ಯಯವಿಲ್ಲದೆ ನಡೆಯುತ್ತಿರುವ ಉದಾಹರಣೆ ನಮ್ಮೆದುರಿಗಿದೆ.
ಈಗ ಪ್ರಸ್ತಾಪಿಸಿರುವ ಐದು ದಿನಗಳ ವಾರದಿಂದ ಹಲವು ರೀತಿಯ ಅನುಕೂಲಗಳೂ ಇವೆ ಎನ್ನುವುದನ್ನು ಮರೆಯುವಂತಿಲ್ಲ. ಕೇಂದ್ರ ಪಠ್ಯಕ್ರಮದ ಶಾಲೆಯ ಹೊರತಾಗಿ ಉಳಿದ ಶಾಲೆಗಳು ಶನಿವಾರ ಅರ್ಧದಿನ ನಡೆಯುತ್ತವೆ. ತಂದೆ-ತಾಯಿ ಇಬ್ಬರೂ ಹೊರದುಡಿಮೆಗೆ ಹೋಗುವ ಕುಟುಂಬದಲ್ಲಿ ಆ ಅರ್ಧದಿನ ಮಕ್ಕಳಿಗೆ ಎಲ್ಲಿ ಇರಲು ಅವಕಾಶ ಕಲ್ಪಸಬೇಕೆನ್ನುವ ತಲೆಬಿಸಿ ಹೆತ್ತವರದು. ಮಕ್ಕಳಿಗೂ ಇದು ಸಂತೋಷದ ವಿಷಯವಲ್ಲ. ಮನೆಯಲ್ಲಿ ದೊಡ್ಡವರು ಯಾರಾದರೂ ಇರುವ ಮನೆಯ ಮಕ್ಕಳು ಆಟದ ಖುಶಿ ಅನುಭವಿಸುವುದನ್ನು ಕಂಡು ಯಾರದೋ ಮನೆಯಲ್ಲಿ ಅಥವ ಕೆಲಸದವಳ ಜೊತೆ ಇರುವ ಮಕ್ಕಳಿಗೆ ಬೇಸರ. ಒಮ್ಮೆ ರಾಜ್ಯ ಸರಕಾರೀ ಮತ್ತು ಖಾಸಗಿ ಶಾಲೆಗಳಿಗೂ ಎರಡು ದಿನ ರಜೆಯ ಸೌಲಭ್ಯ ನೀಡಿದರೆ ಮಕ್ಕಳು ಮನೆಯವರೊಂದಿಗೆ ಇರಲು ಅಧಿಕ ಸಮಯ ದೊರೆಯುತ್ತದೆ. ಒಂದು ದಿನದ ಬದಲು ಎರಡು ದಿನ ಬಿಡುವು ದೊರೆತರೆ ಸ್ನೇಹಿತರು, ಬಂಧು-ಬಾಂಧವರನ್ನು ಕಂಡು ಬರಲು ಅನುಕೂಲ. ಹವ್ಯಾಸಗಳಿಗೆ ಸಮಯ ಸಿಗುತ್ತದೆ. ಹಿರಿಯರೊಂದಿಗೆ ಇರಲು, ಅವರನ್ನು ನೋಡಕೊಳ್ಳಲು ಇದು ಅನುಕೂಲ. ವಾರವೆಲ್ಲ ಮನೆಯ ಹೊರಗಿನ ಕೆಲಸದಲ್ಲಿ ಉದ್ಯುಕ್ತವಾಗಿರುವುದರಿಂದ ಒಂದು ದಿನದ ವಿಶ್ರಾಂತಿಯೂ ದೊರಕುತ್ತದೆ.
ಐದು ದಿನದ ವಾರ ಮಹಿಳೆಗೆ ಹೆಚ್ಚು ಅನುಕೂಲಕರ. ಮನೆಯನ್ನಷ್ಟೆ ಸರಿದೂಗಿಸುವ ಮಹಿಳೆಗೆ ಮಕ್ಕಳು ಮತ್ತು ಮನೆಯ ಇತರ ಸದಸ್ಯರೊಟ್ಟಿಗೆ ಇರಲು ಹೆಚ್ಚಿನ ಸಮಯ ಸಿಗುತ್ತದೆ. ಆಯಾಸ ಮತ್ತು ಒತ್ತಡಗಳಿಂದ ಕೂಡಿದ ಅವಸರದ ಬದುಕು ಮನುಷ್ಯ ಸಂಬಂಧದ ಬಿರುಕಿಗೆ ಕಾರಣವಾಗುತ್ತದೆ. ವಿರಾಮವಾಗಿ ಕುಳಿತು ಅಭಿಪ್ರಾಯ ಹಂಚಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಕುಟುಂಬದ ವಾತಾವರಣ ಸ್ನೇಹಮಯವಾಗಿರಲು ಇದು ಸಹಕಾರಿ. ಮನೆಯ ಹೊರಗಿನ ದುಡಿಮೆಗೆ ಹೋಗುವ ಮಹಿಳೆಗೆ ಎರಡು ದಿನದ ಬಿಡುವಿನಿಂದ ಮನೆಯ ಸ್ವಚ್ಛತೆಗೆ ಗಮನ ಕೊಡಲು (ಅದು ಈಗಲೂ ಮಹಿಳೆಯದೇ ತಾನೆ) ಮಕ್ಕಳ ಬೇಕು-ಬೇಡಗಳನ್ನು ಪೂರೈಸಲು, ಮನೆಯನ್ನು ಒಪ್ಪ-ಓರಣಗೊಳಿಸಲು ಸಮಯ ಸಿಗುತ್ತದೆ. ಜೊತೆಗೆ ತಾವು ಮಕ್ಕಳಿಗೆ ಸಾಕಷ್ಟು ಸಮಯ ನೀಡಲು ಆಗುತ್ತಿಲ್ಲ ಎಂದು ಚಿಂತಿಸುವ ತಾಯಂದಿರಿಗೆ ಇದರಿಂದ ತುಸು ನೆಮ್ಮದಿ ದೊರಕುತ್ತದೆ. ದಿನವಿಡೀ ದುಡಿಮೆಯಲ್ಲಿ ತೊಡಗಿರುವವರಿಗೆ ಖಾಸಗಿ ಕ್ಷಣಗಳು ಮರೀಚಿಕೆಯಾಗಿವೆ. ಇದರಿಂದ ಅದಕ್ಕೂ ತುಸುಮಟ್ಟಿಗೆ ಅವಕಾಶ ಸಿಗುತ್ತದೆ. ಈ ಕುರಿತು ಅವಸರದ ತೀರ್ಮಾನಕ್ಕೆ ಬರದೆ ಇದರ ಸಾಧಕ-ಬಾಧಕಗಳನ್ನು ಅವಲೋಕಿಸುವು ವಿಹಿತ.
This page has the following sub pages.
javabdariyuta baraha.
boru hodeyuva bhava jeevanada naduve intha chintanegalu agatya.
dayavittu inthaddannu hechchu hechchu bareyiri.
preetiyinda,
chetana .
dhanyavaadagau.
-Chandramathi
ನಿಮ್ಮ ಬ್ಲಾಗ್ ನೋಡಿದೆ. ತುಂಬಾ ಸೊಗಸಾಗಿ ಬರೆಯುತ್ತೀರಿ.
ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.
http://kannadahanigalu.com/
ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್ನ್ನು ಪ್ರಕಟಿಸುತ್ತೇವೆ.
ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.
ಧನ್ಯವಾದಗಳೊಂದಿಗೆ…..
ತುಂಬಾ ಸೊಗಸಾಗಿ ಬರೆಯುತ್ತೀರಿ.