ಸಂಗಾತಿಯ ಆಯ್ಕೆ ಯಾರದು?
`ಆ ಹುಡುಗಿ ಯಾರನ್ನೋ ಲವ್ ಮಾಡಿದಾಳಂತೆ. ಇನ್ನೇನು ಮಾಡದು ಅಂತ ಅವಳ ಅಪ್ಪ, ಅಮ್ಮ ಅವಳನ್ನು ಅವನಿಗೆ ಕೊಟ್ಟು ಮದುವೆ ಮಾಡಿದ್ರಂತೆ.’
`ಆ ಹುಡುಗಿ ಎಷ್ಟ್ ಚಂದ ಇದ್ಲು. ಅವಳು ಬ್ಯಾಡ ಅಂದನಂತೆ ಅವನು. ಜಾತಿ-ಗೀತಿ ಇಲ್ಲದ ಯಾವ್ದೋ ಹುಡ್ಗೀನ ಲವ್ ಮಾಡಿದಾನಂತೆ. ಅರೆ ಮನ್ಸಿಂದ ಅಪ್ಪ ಅಮ್ಮ ಮದ್ವೆಗೆ ಹೋಗಿದ್ರಂತೆ. ಏನ್ ಕಂಡು ಮದ್ವೆ ಆದ್ನೋ? ಆ ಹುಡುಗಿ ಒಂಚೂರು ಲಕ್ಷಣ ಇಲ್ಲ ಅಂತ ನಮ್ ಪಕ್ಕದ ಮನೆಯವ್ರು ಹೇಳ್ತಿದ್ರು’.
`ಲವ್ ಅಂತ ಮದ್ವೆ ಆದ/ಆದ್ಲು. ಈಗ ಒಬ್ಬರ ಮುಖ ಪೂರ್ವಕ್ಕೆ ಇನ್ನೊಬ್ಬರದು ಪಶ್ಚಿಮಕ್ಕೆ’
ಪ್ರೇಮ ವಿವಾಹದ ಬಗೆಗಿನ ಪ್ರತಿಕ್ರಿಯೆ ಈ ಬಗೆಯದು. ಒಟ್ಟಿಗೆ ಬದುಕಬೇಕಾದ ಜೀವಗಳೆರಡು ಪರಸ್ಪರ ಇಷ್ಟಪಟ್ಟು ಮದುವೆಯಾಗುವುದು ಸಮಾಜದ ದೃಷ್ಟಿಯಲ್ಲಿ ತಪ್ಪು. ಇಂಥ ಮದುವೆಗಳು ಸಫಲವಾಗುವುದಿಲ್ಲ. ಮುರಿದು ಬೀಳುತ್ತವೆ ಎನ್ನುವುದು ಸಾಮಾನ್ಯ ಅಭಿಪ್ರಾಯ. ಹಾಗಂತ ಮದುವೆ ಆದ ಮೇಲೆ ಇಬ್ಬರ ನಡುವೆ ಪ್ರೀತಿ ಇಲ್ಲದಿದ್ದರೆ ಅದೂ ತಪ್ಪೇ? ಮಗಳು/ಮಗ ವಿವಾಹ ಯೋಗ್ಯ ವಯಸ್ಸಿಗೆ ಬರುತ್ತಿದ್ದಂತೆ ವರ/ವಧುವನ್ನು ಹೆತ್ತವರು ನೋಡಿ ಆರಿಸಿ, ಮದುವೆಯನ್ನು ನಿಶ್ಚಯಿಸಬೇಕು, ಅದೇ ಸರಿಯಾದ ರೀತಿ ಎನ್ನುವ ಮನೋಭಾವ ವ್ಯಾಪಕವಾಗಿದೆ. ಕೇವಲ ಆಕರ್ಷಣೆಯಿಂದ ಮದುವೆಯಾಗುತ್ತಾರೆ. ಅದು ಕಡಿಮೆಯಾಗುತ್ತಿದ್ದಂತೆ ಭಿನ್ನಾಭಿಪ್ರಾಯ ಶುರುವಾಗುತ್ತದೆ. ಕೊನೆಗೆ ದಾಂಪತ್ಯ ಬದುಕಿಗೆ ತಿಲಾಂಜಲಿ ನೀಡಲು ಮುಂದಾಗುತ್ತಾರೆ ಎನ್ನುವುದು ಒಂದು ಪ್ರಚಲಿತ ಅಭಿಪ್ರಾಯ.
ಹಿಂದೆ ಹುಡುಗ ಹುಡುಗಿಯ ಜಾತಕ ಅಥವಾ ಹೆಸರು ಬಲ ಸರಿಹೋದರೆ ಮದುವೆ ಮಾಡುತ್ತಿದ್ದರು. ರೂಪಕ್ಕೆ ಹೆಚ್ಚಿನ ಪ್ರಾಶಸ್ತ್ಯವಿರಲಿಲ್ಲ. ಕೆಲಕಾಲ ಹುಡುಗಿಯ ರೂಪ, ಮನೆತನ ಮುಖ್ಯವಾಗಿದ್ದವು. ಈಗ ಇವುಗಳ ಜೊತೆಗೆ ಹುಡುಗಿಯ ಶಿಕ್ಷಣ ಹಾಗೂ ಉದ್ಯೋಗಗಳೂ ಸೇರಿವೆ. ಸುಶಿಕ್ಷಿತ ಕುಟುಂಬಗಳಲ್ಲಿ ಹೆಣ್ಣುಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ಇರುವುದರಿಂದ ಹುಡುಗನ ಶಿಕ್ಷಣ, ಉದ್ಯೋಗಗಳೂ ಮುಖ್ಯವಾಗಿವೆ. ಇವೆಲ್ಲವೂ ಅಪೇಕ್ಷಣೀಯವೇ. ಆದರೆ ಹೊಂದಾಣಿಕೆಯ ಬಗ್ಗೆ ಇಲ್ಲಿ ಯಾವುದೇ ಅಳತೆಗೋಲು ಸಾಧ್ಯವಿಲ್ಲ. ಹೀಗಿರುವಾಗ ಹಿರಿಯರು ನಿಶ್ಚಿಯಿಸಿರುವ ಮದುವೆಗಳು ಸಫಲ ಎನ್ನುವುದು ಒಂದು ಭ್ರಮೆ. ಹಿರಿಯರು ನಿಶ್ಚಯಿಸಿದ ಮದುವೆಯಲ್ಲಿ ದಂಪತಿಗಳ ಮುಂದಿನ ಬದುಕಿನಲ್ಲಿ ಹಿರಿಯರು ಆಸಕ್ತರಾಗಿರುತ್ತಾರೆ. ಮಧ್ಯೆ ಭಿನ್ನಾಭಿಪ್ರಾಯ ಬಂದರೆ ಇಬ್ಬರಿಗೂ ಬುದ್ಧಿ ಹೇಳುತ್ತಾರೆ; ಸಲಹೆ ನೀಡುತ್ತಾರೆ. ಗಂಡ, ಹೆಂಡತಿ ಕೂಡ ಹಿರಿಯರ ಭಯದಿಂದ, ಸಮಾಜದ ದೃಷ್ಟಿಯಲ್ಲಿ ತಾವು ಕೀಳಾಗಬಾರದೆಂದು ಹೇಗೋ ಹೊಂದಿಕೊಂಡು ಹೋಗಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಒಂದೇ ಸೂರಿನಡಿ ಬದುಕು ಸವೆಸುತ್ತಾರೆ ಅಷ್ಟೆ.
ಪ್ರೇಮ ವಿವಾಹದಲ್ಲಿ ಹುಡುಗ ಹುಡುಗಿಯರು ಮೊದಲೇ ಸಮಾಜದ ದೃಷ್ಟಿಯಲ್ಲಿ ಗೆರೆ ದಾಟಿದವರು. ಹಿರಿಯರ ಮಾತನ್ನು ಮೀರಿದವರು. ಹಾಗಾಗಿ, ಅವರು ಸಮಾಜದ ಬಗ್ಗೆ ಅಷ್ಟಾಗಿ `ತಲೆಕೆಡಿಸಿಕೊಳ್ಳು’ವುದಿಲ್ಲ. ತಮ್ಮ ಬದುಕಿನ ನಿರ್ಧಾರ ತಮ್ಮದು ಎಂದು ತಿಳಿಯುತ್ತಾರೆ. ಏನೇ ಆದರೂ ಒಟ್ಟಾಗಿಯೇ ಬದುಕುತ್ತೇವೆ ಎನ್ನುವ ಹಟ ಅವರದಲ್ಲ. ತೀರ ಹೊಂದಾಣಿಕೆ ಸಾಧ್ಯವಾಗದಿದ್ದಾಗ ಬೇರ್ಪಡುವುದು ಇಬ್ಬರಿಗೂ ಹಿತ ಎನ್ನುವ ಭಾವನೆ ಅವರಲ್ಲಿರುತ್ತದೆ. ಹಿರಿಯರ ಸಮ್ಮತಿ ಪಡೆದು ಆದ ಪ್ರೇಮ ವಿವಾಹಕ್ಕೆ ತುಸು ರಿಯಾಯಿತಿ ದೊರೆಯುತ್ತದೆ. ಹಿರಿಯರನ್ನು ಕಡೆಗಣಿಸಿ ಅವರಿಬ್ಬರೇ ಆದ ಮದುವೆ ಮುರಿದು ಬಿದ್ದಾಗ ಒಳಗೊಳಗೇ ಖುಶಿಪಡುವವರಿಗೆ ಬರವಿಲ್ಲ. `ಲವ್ ಅಂದ್ಕೊಂಡು ಮದ್ವೆ ಆದಾಗ್ಲೇ ನಂಗೆ ಗೊತ್ತಿತ್ತು. ಇದು ಹೆಚ್ಚು ದಿನ ಬಾಳೋ ಮದ್ವೆ ಅಲ್ಲ ಅಂತ’ ಎಂದು ಸುಶಿಕ್ಷಿತರೂ ತಮ್ಮ ಭವಿಷ್ಯವಾಣಿಗೆ ತಾವೇ ಶಿಫಾರಸು ಕೊಡಲು ಮರೆಯುವುದಿಲ್ಲ. ತಮ್ಮ ಮಾತನ್ನು ಮೀರಿ ಮಗಳು/ಮಗ ಮದುವೆಯಾಗುವುದು ಅಕ್ಷಮ್ಯ ಅಪರಾಧ ಎಂದು ಯೋಚಿಸುವವರ ಸಂಖ್ಯೆ ಸಾಕಷ್ಟಿದೆ. ಅವರ ನಡುವೆ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾದಾಗ ಅದನ್ನು ನಿವಾರಿಸುವ ದಿಸೆಯಲ್ಲಿ ಪ್ರಯತ್ನಿಸಿದರೆ ಅದನ್ನು ಪರಿಹರಿಸಲು ಸಾಧ್ಯ. ಅದರೆ `ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎನ್ನುವಂತೆ ಪೂರ್ವಗ್ರಹ ಪೀಡಿತರು ಇಬ್ಬರ ನಡುವಿನ ಬಿರುಕನ್ನು ಇನ್ನಷ್ಟು ಕೆದಕಲು ನೋಡುತ್ತಾರೆ. ಒಮ್ಮೆ ಗಂಡ ಹೆಂಡತಿ ಬೇರೆಯಾದರೆ ಕೆಲವು ತಂದೆತಾಯಿಗಳು ಸಂಭ್ರಮಪಡುವುದೂ ಇದೆ. ಹಿಂದೆ ಕಳೆದುಕೊಂಡಿದ್ದ ವರ/ವಧುವನ್ನು ಆರಿಸುವ ಅವಕಾಶ ತಮಗೆ ಅನಾಯಾಸವಾಗಿ ದಕ್ಕಿತೆಂದು.
ನನ್ನ ಪರಿಚಯದವರೊಬ್ಬರು ಅಂತರ್ಧರ್ಮೀಯ ವಿವಾಹವಾದವರು. ಕೆಲವು ವರ್ಷ ಅವರಿಬ್ಬರೂ ಚೆನ್ನಾಗಿಯೇ ಬದುಕಿದ್ದರು. ತಾಯಿ ಮಗನೊಂದಿಗೆ ಇರಲು ಬಂದ ಮೇಲೆ ಸಮಸ್ಯೆ ಶುರುವಾಗಿ, ಉಲ್ಬಣಗೊಂಡು ಅದು ವಿಚ್ಛೇದನದಲ್ಲಿ ಕೊನೆಯಾಯ್ತು. ಪ್ರಾಯಶಃ ಮಗನಿಗೆ ತಮ್ಮ `ಜನರಲ್ಲಿ’ ಹೆಣ್ಣು ಹುಡುಕುವ ಅವಕಾಶ ದೊರೆಯಿತೆಂದು ತಾಯಿಗೆ ಸಮಾಧಾನ ಆಗಿರಬಹುದು. ಆ ಮದುವೆಗೆ ಎರಡು ದಶಕ ಕಳೆದಿತ್ತು. ಆಕೆ ಆರ್ಥಿಕವಾಗಿ ಸಶಕ್ತರು. ಆದರೆ ಅವರ ತವರವರ ದೃಷ್ಟಿಯಲ್ಲಿ ಆಕೆ ಧರ್ಮ ಬಿಟ್ಟವಳು. ಪ್ರೀತಿಸಿ ಮದುವೆಯಾದವರು ವಿಚ್ಚೇದಿತರಾದಾಗ ಎರಡೂ ಕಡೆಯವರಲ್ಲಿ ಮಹಿಳೆಯ ಬಗೆಗೆ ಅನುಕಂಪ ಅಥವಾ ಹೀಗಾಯಿತೆನ್ನುವ ಕಳಕಳಿ ಲವಲೇಶವೂ ಇರುವುದಿಲ್ಲ. ಮಹಿಳೆ ಎಲ್ಲವನ್ನೂ ಎದುರಿಸಬೇಕಾಗುತ್ತದೆ. ಇನ್ನೊಂದು ಮದುವೆಯಾಗಲು ಬಯಸುವ ಪುರುಷ ಮಕ್ಕಳ ಬಗ್ಗೆ ಯೋಚಿಸುವುದು ಕಡಿಮೆ. ಅದು ಅವಳ `ಹಣೆಬರಹ’.
ನಾವೀಗ ಇಪ್ಪತ್ತೊಂದನೆಯ ಶತಮಾನದಲ್ಲಿದ್ದೇವೆ. ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದಿದ್ದೇವೆ. ಎಲ್ಲವೂ ನಿಜ. ಆದರೆ ಕೆಲವು ವಿಷಯದಲ್ಲಿ ನಾವು ಅಜ್ಜನೆಟ್ಟ ಆಲಕ್ಕೇ ನೇತುಬಿದ್ದಿದ್ದೇವೆ. ಜಾತಕ/ಹೆಸರು ಬಲ ಕೂಡಿಬರಬೇಕು, ಒಳ್ಳೆಯ ಶಕುನ ಆಗಬೇಕು ಎನ್ನುವ ಮಾತು ಮದುವೆಗೆ ಸಿದ್ಧವಿರುವ ಗಂಡಿನ ಮನೆಯಲ್ಲಿ ಓಡಾಡುತ್ತಿರುತ್ತವೆ. ಇವೆಲ್ಲವನ್ನೂ ನಿರ್ಧರಿಸುವವರು ಗಂಡಿನ ಮನೆಯವರು. ಎಲ್ಲವೂ ಸರಿಹೋಗಿರುವ ಮದುವೆಗಳ ಸಾಫಲ್ಯ ಎಷ್ಟು? ಆ ಬಗ್ಗೆ ಯಾರೂ ಯೋಚಿಸುವುದೇ ಇಲ್ಲ. ತಮ್ಮ ಹಾಗೂ ಸುತ್ತಲಿನವರ ದಾಂಪತ್ಯದ ಬಗ್ಗೆ ತುಸು ಗಮನಹರಿಸಿದರೂ ಇವೆಲ್ಲ ಎಷ್ಟು ಅವೈಜ್ಞಾನಿಕವಾದುವು ಎನ್ನುವುದು ಅರಿವಿಗೆ ಬರುತ್ತದೆ. ಪ್ರೇಮ ವಿವಾಹದಲ್ಲಿ ಇವ್ಯಾವುದೂ ಇರುವುದಿಲ್ಲ. ಹಾಗಾಗಿ ಅದರ ಬಗೆಗೆ ತಿರಸ್ಕಾರ. ಇಬ್ಬರ ನಡುವೆ ಸಾಮರಸ್ಯ ಇಲ್ಲದಾಗ ಎಲ್ಲ ರೀತಿಯ ಮದುವೆಗಳೂ ಮುರಿದು ಬೀಳುತ್ತವೆ. ಹಿರಿಯರು ನಿಶ್ಚಯದಂತೆ ಮದುವೆಯಾದವರಿಗೆ ಒಂದು ಅವಕಾಶ ಕೊಟ್ಟರೆ ಅರ್ಧದಷ್ಟು ದಂಪತಿಗಳು ಬೇರ್ಪಡಬಹುದು. ಇಂದಿಗೂ ಮಹಿಳೆ ಆರ್ಥಿಕವಾಗಿ ಅವಲಂಬಿತಳು. ಗಂಡನಿಂದ ಬೇರೆಯಾಗಿ ತವರಿಗೆ ಹೋದರೆ ಅವಳನ್ನು ಗೌರವಿಸುವವರು ತೀರ ವಿರಳ. ಸಮಾಜದ ಕಣ್ಣಲ್ಲಿ ಅವಳು ಗಂಡ ಬಿಟ್ಟವಳು. ಮಕ್ಕಳು ದೊಡ್ಡವರಾಗುವವರೆಗೆ ಹೇಗೋ ಹೊಂದಿಕೊಂಡು ಹೋಗುವುದು ಅನಿವಾರ್ಯ ಎನ್ನುವ ಮಹಿಳೆಯರ ಸಂಖ್ಯೆ ಸಾಕಷ್ಟು ದೊಡ್ಡದೇ. ಆದರೆ ಮಕ್ಕಳು ದೊಡ್ಡವರಾಗುವಷ್ಟರಲ್ಲಿ ಅವರು ಆ ಬದುಕಿಗೆ ಒಗ್ಗಿ ಹೋಗಿರುತ್ತಾರೆ. ಮಕ್ಕಳಿಗೆ ರೆಕ್ಕೆ ಬಲಿತು ಗೂಡಿನಿಂದ ಹಾರಿದ ಮೇಲೆ `ಇಷ್ಟು ವರ್ಷ ಹೇಗೋ ಗುದ್ದಾಡಿಕೊಂಡು ಒಟ್ಟಿಗೆ ಇದ್ದಾಯ್ತು. ಇನ್ನು ಯಾಕೆ ಈ ಇಳಿ ವಯಸ್ಸಿನಲ್ಲಿ ಬೇರೆಯಾಗೋದು?’ ಎನಿಸುತ್ತದೆ. ಅಲ್ಲದೆ ಜೊತೆಯವರೂ ಕೆಲಮಟ್ಟಿಗೆ ಮೆತ್ತಗಾಗಿರುತ್ತಾರೆ. ವಯಸ್ಸಾದ ಮೇಲೆ ಸಂಗಾತಿಯ ಆವಶ್ಯಕತೆ ಇದೆ ಎನಿಸುತ್ತದೆ.
ದಾಂಪತ್ಯದ ಬದುಕಿನಲ್ಲಿ ಕೆಲವೊಮ್ಮೆ ಎಲ್ಲವೂ ಕ್ಷಮ್ಯ. ಕೆಲವು ಸಾರಿ ಯಾವುದೂ ಕ್ಷಮ್ಯವಲ್ಲ. ಅವರವರ ಬದುಕನ್ನು ಅವಲಂಬಿಸಿ ಇದು ನಿರ್ಧಾರವಾಗುತ್ತದೆ. ಹೊರಗಿನವರಿಗೆ ಅರ್ಥವಾಗದಿರುವ ಸಂಗತಿಗಳೇ ಹೆಚ್ಚು. ಈ ದೃಷ್ಟಿಯಿಂದ ಪ್ರೇಮ ವಿವಾಹವಿರಲಿ, ಹಿರಿಯರು ನಿಶ್ಚಯಿಸಿದ ವಿವಾಹವಿರಲಿ ಇದು ಹೀಗೇ ಎಂದು ‘ಶರಾ’ ಬರೆಯಲು ಸಾಧ್ಯವಾಗದು. ಬದಲಾಗಿರುವ ಸಾಮಾಜಿಕ ಸನ್ನಿವೇಶದಲ್ಲಿ ಸಂಗಾತಿಯ ಆಯ್ಕೆ ವ್ಯಕ್ತಿಗಳಿಗೆ ಸಂಬಂಧಿಸಿದ್ದು. ಏನಂತೀರಿ?
**********
ಮಕ್ಕಳ ಕನಸಿಗೆ ನೀರೆರೆಯುವ ‘ರುಚಿಕಾ’
`ನಾನು ವಿಶ್ವವಿದ್ಯಾಲಯದಲ್ಲಿ ಓದಬೇಕು. ಟೀಚರ್ ಆಗ್ಬೇಕು’,
`ನಾನು ಸಂಗೀತ ಶಾಲೆಯಲ್ಲಿ ಮೇಡಂ ಆಗ್ಬೇಕು’
`ತಂಗಿಯರ ಬದುಕು ನನಗಿಂತ ಚೆನ್ನಾಗಿ ಇರ್ಬೇಕು’
ಇವೆಲ್ಲ ಆ ಮಕ್ಕಳು ಕಾಣುತ್ತಿರುವ ಕನಸು. ಈ ರೀತಿ ಕನಸು ಯಾವ ಮಕ್ಕಳಿಗೆ ಇರೋದಿಲ್ಲ , ಇದರಲ್ಲಿ ಏನು ವಿಶೇಷ? ಅನಿಸಬಹುದು. ಇವರು ಉಳಿದ ಮಕ್ಕಳಂತಲ್ಲ. ಈ ಮಕ್ಕಳ ಹೆತ್ತವರು ರೈಲ್ವೆ ನಿಲ್ದಾಣದಲ್ಲಿ ಕೂಲಿ-ನಾಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವವರು. ತಮ್ಮಂತೆ ತಮ್ಮ ಮಕ್ಕಳೂ ಕೂಲಿ ಮಾಡಿ ಬದುಕಬಾರದು ಎಂದು ಆಲೋಚಿಸಲೂ ಬಿಡುವಿಲ್ಲದ ಬದುಕು ಅವರದು. ಒಮ್ಮೆ ಮಕ್ಕಳನ್ನು ಶಾಲೆಗೆ ಕಳಿಸಬೇಕೆಂದರೂ ಶಾಲೆಗಳು ಇರುವುದು ದೂರದಲ್ಲಿ. ಇಂಥವರ ಮಕ್ಕಳಿಗಾಗಿ ಕಳೆದ 27 ವರ್ಷಗಳಿಂದ ಶಾಲೆ ನಡೆಸುತ್ತ ಬಂದವರು ಇಂದರ್ ಜಿತ್ ಖುರಾನ.
ಇಂದರ್ ಜಿತ್ ಖುರಾನ ಅವರ ಪತಿ ಸೇನೆಯಲ್ಲಿ ಇಂಜಿನಿಯರ್ ಆಗಿದ್ದವರು. ಅವರು ತಮ್ಮ ವೃತ್ತಿಯಿಂದ ಅವಧಿಗೆ ಮೊದಲೇ ನಿವೃತ್ತಿ ಪಡೆದು ಭುವನೇಶ್ವರದಲ್ಲಿ ನೆಲೆಸಿದರು. ತಮ್ಮ ಮನೆಯೆದುರು ಚುರುಕಾಗಿರುವ ಕೆಲವು ಮಕ್ಕಳು ಓಡಾಡುವುದನ್ನು ಗಮನಿಸಿದ ಇಂದರ್ ಜಿತ್ ಅವರಿಗೆ ಆ ಮಕ್ಕಳಿಗಾಗಿ ಒಂದು `ಫ್ಲಾಟ್ ಫಾರಂ’ ಶಾಲೆ ತೆರೆಯುವ ಯೋಚನೆ ಬಂತು. ಆ ಮಕ್ಕಳನ್ನು ಶಾಲೆಗೆ ಕರೆತರುವುದು ಸಾಧ್ಯವಿಲ್ಲ ಎನ್ನುವುದು ಅವರಿಗೆ ತಿಳಿದಿತ್ತು. ಹಾಗಾಗಿ ಅವರು `ಮಹಮದ್ ಗುಡ್ಡದ ಹತ್ತಿರ ಬರದಿದ್ದರೆ ಗುಡ್ಡವೇ ಮಹಮದನ ಹತ್ತಿರ ಹೋದರಾಯಿತು’ ಎಂದು ಯೋಚಿಸಿ, ಆ ಮಕ್ಕಳು ಇರುವ ಸ್ಥಳದಲ್ಲಿಯೇ ಶಾಲೆಯನ್ನು ಶುರುಮಾಡಿದರು. ಇದಕ್ಕೆ ಅವರ ಪತಿಯಿಂದ ಪ್ರೋತ್ಸಾಹವೂ ದೊರೆಯಿತು. `ಪ್ಲಾಟ್ ಫಾರಂ ಶಾಲೆ’ `ರುಚಿಕಾ’ ಪ್ರಾರಂಭವಾದುದು ಹೀಗೆ. ಒರಿಸ್ಸಾದಲ್ಲಿ ರುಚಿಕಾ ಈಗ ಸಾಕಷ್ಟು ಹೆಸರು ಮಾಡಿದ್ದರೂ 1980ರ ಸುಮಾರಿಗೆ ಅವರು ಇದನ್ನು ಪ್ರಾರಂಭಿಸಿದಾಗ ಅವರ ತಂಗಿಯ ಮಗಳು ಮತ್ತು ಮಾಲಿಯ ಮಗು ಇಬ್ಬರೇ ವಿದ್ಯಾರ್ಥಿಗಳು. ಈಗ ರುಚಿಕಾದಲ್ಲಿ ಸುಮಾರು 4000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ರುಚಿಕಾ ಈಗ 12 ಪ್ಲಾಟ್ ಫಾರಂ ಶಾಲೆ, 6 ನರ್ಸರಿ, ಕೊಳಗೇರಿ ಮಕ್ಕಳಿಗಾಗಿ 75 ಶಾಲೆಗಳನ್ನು ನಡೆಸುತ್ತಿದೆ. ಪ್ರಾಥಮಿಕಪೂರ್ವ ಶಿಕ್ಷಣವನ್ನೂ ನೀಡುತ್ತಿದೆ. ಜೊತೆಗೆ ಕೊಳಗೇರಿಯ ಸ್ವಚ್ಛತೆ ಕುರಿತು, ಅಲ್ಲಿನ ಮಕ್ಕಳ ಆರೋಗ್ಯ ಹಾಗೂ ಅವರಿಗೆ ಅಗತ್ಯವಿರುವ ಪೋಷಕಾಂಶ ಒದಗಿಸುವ ದಿಸೆಯಲ್ಲಿ ಕೆಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಮಕ್ಕಳಹಕ್ಕು ಕುರಿತಂತೆ ತಿಳಿವಳಿಕೆ ಕೊಡುತ್ತದೆ. ವೃತ್ತಿ ತರಬೇತಿ ನೀಡುತ್ತದೆ. ಅಂಬುಲೆನ್ಸ್ ಒದಗಿಸುತ್ತದೆ. ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಿರುವುದು ಮೀರಾ ನಾಯರ್ ಅವರ ಸಲಾಮ್ ಬೊಂಬೈ ಟ್ರಸ್ಟ್ನ ಸಹಾಯಧನದಿಂದಾಗಿ ಎನ್ನುತ್ತಾರೆ ಇಂದರ್ ಜಿತ್ ಖುರಾನ. ಕೊಳಗೇರಿಯ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣವನ್ನು ಮಾತ್ರ ನೀಡುತ್ತಿಲ್ಲ ರುಚಿಕಾ. ತೀರ ಅಗತ್ಯವಿರುವ ಮಕ್ಕಳಿಗಾಗಿ `ಮಕ್ಕಳಮನೆ’ಯನ್ನು ಹೊಂದಿದೆ.
ಇಂದರ್ ಜಿತ್ ಅವರು ರುಚಿಕಾವನ್ನು ಪ್ರಾರಂಭಿಸಿದಾಗ ಅವರೊಂದಿಗೆ ಇದ್ದವರು ದೈಹಿಕ ಶಿಕ್ಷಕರಾದ ಆರ್. ಪಿ. ದ್ವಿವೇದಿಯೊಬ್ಬರೇ. ಇಂದಿಗೂ ಅತ್ಯಂತ ಚಟುವಟಿಕೆಯಿಂದ ಅವರು ಶಾಲೆಯ ಕೆಲಸಗಳಲ್ಲಿ ಭಾಗಿ. ಮುಂದೊಂದು ದಿನ ತಮ್ಮ ಶಾಲೆ ಈ ಮಟ್ಟ ತಲುಪಬಹುದೆಂದು ಇಂದರ್ ಜಿತ್ ಊಹಿಸಿರಲಿಕ್ಕಿಲ್ಲ. ಈ ಶಾಲೆಯದು ಪಠ್ಯ ಕೇಂದ್ರಿತ ಶಿಕ್ಷಣವಲ್ಲ. ಅಂಚೆ ಕಚೇರಿ, ಬ್ಯಾಂಕ್, ಸೇತುವೆ, ರೈಲ್ವೆ ನಿಲ್ದಾಣ ಮುಂತಾದ ಜಾಗಕ್ಕೆ ಮಕ್ಕಳನ್ನು ಕರೆದೊಯ್ದು ಅವುಗಳ ಬಗ್ಗೆ ತಿಳಿಸುತ್ತಾರೆ. ಆಟಿಕೆ, ಕಾಗದ, ಕ್ರೇಯಾನ್ ಮುಂತಾದ ವಸ್ತುಗಳನ್ನು ಮಕ್ಕಳಿಗೆ ಶಾಲೆಯಲ್ಲಿ ಕೊಟ್ಟು ಅವರ ಸೃಜನಶೀಲತೆಯನ್ನು ಹೊರಗೆ ತರಲಾಗುತ್ತದೆ. ಅವರ ಶುಚಿತ್ವದ ಕಡೆಗೂ ಗಮನಹರಿಸಲಾಗುತ್ತದೆ. ಸೋಪು, ಟವೆಲ್ ನೀಡಿ ಅವರು ಸ್ನಾನ ಮಾಡುವುದನ್ನು ನೋಡುವುದೇ ಒಂದು ಖುಶಿ ಎಂದು ಒಂದು ಸಂದರ್ಶನದಲ್ಲಿ ಇಂದರ್ ಜಿತ್ ಹೇಳಿರುವುದು ಮಕ್ಕಳ ಬಗೆಗಿನ ಅವರ ಕಾಳಜಿಯ ಪ್ರತೀಕ. ರುಚಿಕಾದ ಮಕ್ಕಳಿಗೆ ಶಾಲಾ ಅವಧಿ ಮುಗಿದ ಮೇಲೆ ಟಿ.ವಿ ನೋಡಲು ಅವಕಾಶವಿದೆ; ಅವರು ಬ್ಯಾಡ್ಮಿಂಟನ್ ಆಡಬಹುದು. ರುಚಿಕಾದ ಮಕ್ಕಳು ತಮ್ಮ ಬಾಲ್ಯದ ಕುತೂಹಲದಿಂದ ವಂಚಿತರಾಗಬಾರದೆನ್ನುವ ಧೋರಣೆ ಇದರ ಹಿಂದಿನದು. ರುಚಿಕಾ ತನಗಿರುವ ಅವಕಾಶದಲ್ಲಿ ಮಕ್ಕಳಿಗೆ ಸಾಧ್ಯವಾದಷ್ಟೂ ಸೌಲಭ್ಯ ನೀಡಲು ಪ್ರಯತ್ನಿಸುತ್ತದೆ.
ತಾನು ಮುಂದೊಂದು ದಿನ ಶಿಕ್ಷಕಿಯಾಗಬೇಕೆಂದು ಕನಸು ಕಾಣುವ ಸಂಯುಕ್ತ 11ರ ಬಾಲೆ. ತಾಯಿ ಎಷ್ಟೇ ಒತ್ತಾಯಿಸಿದರೂ ಆಕೆಯೊಂದಿಗೆ ಕೂಲಿಗೆ ಹೋಗದೆ ರುಚಿಕಾ ನಡೆಸುವ ಶಾಲೆಗೆ ಹಾಜರಾಗುವ ಸಂಯುಕ್ತ ಬೆಳಗ್ಗೆ 4 ಗಂಟೆಗೆ ಎದ್ದು ನೀರು, ಬಟ್ಟೆ, ಅಡಿಗೆ ಕೆಲಸಗಳನ್ನು ಮುಗಿಸಿ ಶಿಕ್ಷಕರಿಗಿಂತ ಮೊದಲೇ ಶಾಲೆಗೆ ಬಂದು ಶಾಲೆಯ ಒಪ್ಪ ಓರಣದ ಕಡೆ ಗಮನ ಹರಿಸುವ ವಿದ್ಯಾರ್ಥಿನಿ. ಶಾಲೆಯ ಮಕ್ಕಳ ಸಂಸತ್ತಿನ ಅಧ್ಯಕ್ಷೆ ಆಕೆ. 12ರ ರಮಾಗೆ ತಂದೆ ಇಲ್ಲ. ತಾಯಿ ರೋಗಿಷ್ಠೆ. ಹೊಟ್ಟೆಪಾಡಿಗಾಗಿ ರಮಾ ದುಡಿಯಲೇ ಬೇಕು. ಆದರೂ ಅವಳಿಗೆ ಕಲಿಯುವ ಆಸಕ್ತಿ. ತನ್ನ ತಂಗಿಯರ ಬದುಕು ತನಗಿಂತ ಚೆನ್ನಾಗಿರಬೇಕು ಎನ್ನುವ ಆಸೆ ಅವಳದು. ಹಳೆಯ ವಿದ್ಯಾರ್ಥಿನಿ ಯಶೋದ ಕೊಳಗೇರಿ ವಾಸಿಯಾಗಿದ್ದರೂ ಸಂಗೀತ ಶಾಲೆಗೆ ಹೋಗುತ್ತಿದ್ದಾಳೆ. ಈ ಮಾಮ್ (ಇಂದರ್ ಜಿತ್) ಇಲ್ಲದಿದ್ದರೆ ತಾನು ಕೊಳಲು ವಾದನ ಕಲಿಯಲು ಸಾಧ್ಯವಾಗುತ್ತಿರಲಿಲ್ಲ ಎನ್ನುತ್ತಾಳೆ. ಸಂಗೀತ ಶಾಲೆಯ ಅಧ್ಯಾಪಕಿಯಾಗಬೇಕು ಎಂದು ಕನಸು ಕಾಣುವ ಯಶೋದ ಒಮ್ಮೆ ಅದು ಸಾಧ್ಯವಾದರೆ ಕೊಳಚೆ ಮಕ್ಕಳಿಗೆ ಸಹಾಯ ಮಾಡಬೇಕು ಎನ್ನುವ ಇರಾದೆಯನ್ನು ಹೊಂದಿದ್ದಾಳೆ. ಇಲ್ಲಿ ಕಲಿಯುತ್ತಿರುವ ಗೌರಿಯದು ಇನ್ನೊಂದು ಕತೆ. ಅವಳು 4 ವರ್ಷದವಳಿರುವಾಗಲೇ ಅವಳ ಅಪ್ಪ ಅವಳನ್ನು ಅವಳ ಇಬ್ಬರು ತಂಗಿಯರ ಸಮೇತ ರೈಲಿನಲ್ಲಿ ಬಿಟ್ಟು ಬಂದಿದ್ದ. ಯಾರೋ ಪುಣ್ಯಾತ್ಮರ ಸಹಾಯದಿಂದ ಮನೆ ಸೇರಿದರೂ ತಾಯಿ ಇನ್ನೊಂದು ಮದುವೆಯಾಗಿರುವುದರಿಂದ ಹೆತ್ತವರಿಗೆ ಅವಳು ಬೇಕಾಗಿಲ್ಲ. `ಮಕ್ಕಳಮನೆ’ಯಲ್ಲಿ ಇರುವ ಗೌರಿ `ನನಗೆ ಅಪ್ಪ ಅಮ್ಮನ ಮೇಲೆ ಪ್ರೀತಿ, ಅವರಿಗೆ ನಾನು ಬೇಡ’ ಎಂದು ನೊಂದುಕೊಳ್ಳುತ್ತಾಳೆ.
ಇದು ರುಚಿಕಾದಲ್ಲಿ ಕಲಿಯುತ್ತಿರುವ ಮಕ್ಕಳ ಕೆಲವು ಉದಾಹರಣೆ ಅಷ್ಟೆ. ನಮ್ಮ ದೇಶದಲ್ಲಿ ಇಂಥ ಕೋಟ್ಯಂತರ ಮಕ್ಕಳು ಇದ್ದಾರೆ. ಅವರಿಗೆ ಬಾಲ್ಯವಾಗಲಿ, ಕನಸಾಗಲಿ ಇಲ್ಲದ ಪರಿಸರದಲ್ಲಿ ಬದುಕು ಸಾಗುತ್ತಿದೆ. ಸಾಕಷ್ಟು ಮಾನವ ಸಂಪತ್ತನ್ನು ಹೊಂದಿರುವ ನಮ್ಮ ದೇಶ ಮಕ್ಕಳ ಮನದಲ್ಲಿ ಕನಸನ್ನು ಬಿತ್ತಲು ಅಶಕ್ತವಾಗಿದೆ; ಇರುವ ಕನಸನ್ನು ಸಾಕಾರಗೊಳಿಸಲು ಅಸಮರ್ಥವಾಗಿದೆ. ನಮ್ಮ ಯೋಜನೆಗಳೆಲ್ಲ ಉಳ್ಳವರ ಸಂಪತ್ತನ್ನು ಹೆಚ್ಚಿಸುವಲ್ಲಿ ಕ್ರಿಯಾಶೀಲವಾಗಿವೆ. ಇಲ್ಲದವರು ತುತ್ತಿನ ಚೀಲ ತುಂಬಲು ತಾವು ಮಾತ್ರವಲ್ಲದೆ ತಮ್ಮ ಮಕ್ಕಳನ್ನೂ ದುಡಿಮೆಗೆ ಹಚ್ಚುವಂಥ ಬದುಕಿನ ದುರ್ಭರತೆಗೆ ಸಿಲುಕಿ ನರಳುವಂತಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೇ 10 ಪಂಚವಾರ್ಷಿಕ ಯೋಜನೆಗಳು ಜಾರಿಗೆ ಬಂದಿವೆ. ಕೆಲಮಟ್ಟಿಗೆ ಪ್ರಯೋಜನವಾಗಿದೆ ನಿಜ. ಆದರೆ ಈಗಲೂ ಅಕ್ಷರದ ಕನಸು ಕಾಣಲೂ ಸಾಧ್ಯವಾಗದ ಸನ್ನಿವೇಶದಲ್ಲಿ ಬದುಕುವವರ ಸಂಖ್ಯೆ ಸಾಕಷ್ಟು ದೊಡ್ಡದೇ ಇದೆ. ಅದರಲ್ಲೂ ಬಡಹೆಣ್ಣುಮಕ್ಕಳಿಗೆ ಶಿಕ್ಷಣ ಎನ್ನುವುದು ನಿಲುಕದ ನಕ್ಷತ್ರವೇ.
ಕೇಂದ್ರ ಸರಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕೆಲವು ಯೋಜನೆಗಳನ್ನು ರೂಪಿಸಿದೆ. ಹಲವು ರಾಜ್ಯಗಳು ಆ ಯೋಜನೆಗಳ ಅನುಷ್ಠಾನಗೊಳಿಸಿವೆ. ಆದರೆ ನಿರೀಕ್ಷಿತ ಫಲ ದೊರೆಯುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. `ಫ್ಲಾಟ್ ಫಾರಂ’ ಶಾಲೆಯಂತೆ `ಟೆಂಟ್’ ಶಾಲೆಯನ್ನು ಪ್ರಾರಂಭಿಸಲಾಗಿದೆ. ಕಲಿಸುವ ರೀತಿ, ಅವರಿಗೆ ಒದಗಿಸುವ ಸವಲತ್ತು, ಹೇಳಿಕೊಡುವವರ ಆಸಕ್ತಿ ಇವೆಲ್ಲವೂ ಇಲ್ಲಿ ಬಹಳ ಮುಖ್ಯವಾಗುತ್ತವೆ. ಖಾಸಗಿಯವರು ನಡೆಸುವ ಯೋಜನೆಗಳ ಸಾಫಲ್ಯತೆ ಸರಕಾರೀ ಯೋಜನೆಗಳಲ್ಲಿ ಯಾಕೆ ಸಾಧ್ಯವಾಗುವುದಿಲ್ಲ? ಎನ್ನುವ ಪ್ರಶ್ನೆ ಇದರ ಹಿಂದಿನದು. ಶಿಕ್ಷಣ ಯೋಜನೆಯಲ್ಲಿ ಇಂದರ್ ಜಿತ್ ಖುರಾನ ಅವರ ಮಾರ್ಗದರ್ಶನ ಪಡೆಯಲು ಸರಕಾರಕ್ಕೆ ಮುಜುಗರ. ರುಚಿಕಾದ ಕೆಲವು ಶಾಲೆಗಳನ್ನು ಮುಚ್ಚಿ ಒರಿಸ್ಸಾ ಸರಕಾರ ತಾನು ಬಡಮಕ್ಕಳಿಗಾಗಿ ಶಾಲೆ ನಡೆಸಲು ಮುಂದಾದುದು ಇದಕ್ಕೆ ಸಾಕ್ಷಿ. ಕೆಲಸ ಮಾಡುತ್ತಿರುವವರಿಗೆ ಅಡ್ಡಿಯುಂಟುಮಾಡುವ ಸರಕಾರೀ ಧೋರಣೆ ಬದಲಾದ ಹೊರತು ಜನರ ಕಲ್ಯಾಣ ಸಾಧಿತವಾಗದು. ಸರಕಾರಗಳು ಎಲ್ಲವೂ ತನ್ನಿಂದಲೇ ಆಗಬೇಕು ಎನ್ನುವ ಹಠವನ್ನು ಬಿಟ್ಟರೆ ಜನತೆಗೆ ಕ್ಷೇಮ.
************************
ಯಾವುದೀ ಹೊಸಸಂಚು……?
ನಾವು ಸ್ವಾತಂತ್ರ್ಯ ಪಡೆಯುವಾಗ `ಸ್ವರಾಜ್ಯ ಕಲ್ಪನೆ’ ನಮ್ಮ ಮುಂದಿತ್ತು. ನಮ್ಮನ್ನು ನಾವು ಆಳುವುದು. ಅದರಲ್ಲಿ`ಎಲ್ಲರಿಗು ಸಮಪಾಲು, ಎಲ್ಲರಿಗು ಸಮಬಾಳು’ ಎಂಬುದು ಅದರ ಧ್ಯೇಯ. ಈ ಆರು ದಶಕಗಳಲ್ಲಿ ದೇಶ ಸಾಗುತ್ತಿರುವ ರೀತಿ; ಇಲ್ಲಿ ಸಾಮಾಜಿಕ ನ್ಯಾಯ ರೋಧಿಸುತ್ತಿದೆ; ಸಹಬಾಳ್ವೆ ಕನಸಾಗಿದೆ. ದೇಶವೇನೋ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ರಾರಾಜಿಸುತ್ತಿದೆ ನಿಜ. ಆದರೆ ಅದರ ಅಳತೆಗೋಲು ಯಾವುದು? ಯಾರದು? ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಮಾಪನವೇ? ಅದು ಯಾವ ದೇಶದ ಹಿಡಿತಕ್ಕೆ ಒಳಪಟ್ಟಿದೆ? ಎಂಬುದನ್ನು ವಿವೇಚಿಸಿದಾಗ, ಈ ದೇಶದ ಮುನ್ನಡೆಯ ಸೂತ್ರ ಇರುವುದು ಬಂಡವಾಳಶಾಹಿ ರಾಷ್ಟ್ರದ ಕೈಯಲ್ಲಿ ಎನ್ನುವುದು ವೇದ್ಯವಾಗುತ್ತದೆ. ಮೇಲುನೋಟಕ್ಕೆ ನಮ್ಮ ದೇಶ ಆರ್ಥಿಕ ಸಬಲೀಕರಣದತ್ತ ದಾಪುಗಾಲಿಡುವಂತೆ ಕಾಣುತ್ತಿದೆ. ಇದರಿಂದ ಇಲ್ಲಿನ ಜನ-ಜೀವನ , ಸಾಮಾಜಿಕ ನ್ಯಾಯಕ್ಕಾಗಿ ತಹ-ತಹಿಸುತ್ತಿರುವವರಿಗೆ ನ್ಯಾಯ ದೊರಕುತ್ತಿದೆಯೇ? ಬಡವರ/ ಶೋಷಿತರ ಸ್ಥಿತಿಯಲ್ಲಿ ಸುಧಾರಣೆ ಆಗಿದೆಯೇ? ಈ ಆರ್ಥಿಕತೆ ದೇಶದ ಎಲ್ಲ ಭಾಗದ/ ಎಲ್ಲ ವರ್ಗದ ಜನರನ್ನು ತಲುಪಿದೆಯೇ ಎನ್ನುವ ಪ್ರಶ್ನೆ ಈಗ ನಮ್ಮ ಮುಂದೆ ಭೂತಾಕಾರವಾಗಿ ನಿಂತಿದೆ.
ದೇಶ ಅಭಿವೃದ್ಧಿಪಥದತ್ತ ಸಾಗಲು ವಿದೇಶೀ ಬಂಡವಾಳ ಹರಿದು ಬರಬೇಕು ಎನ್ನುವುದು ಆರ್ಥಿಕ ತಜ್ಞರ ಲೆಕ್ಕಾಚಾರ. ಇದನ್ನು ಆಧರಿಸಿದ ಆರ್ಥಿಕತೆಯನ್ನು ಒಪ್ಪಿಕೊಂಡು ಸರಕಾರಗಳು ಆ ದಿಸೆಯಲ್ಲಿ ಕಾರ್ಯಪ್ರವೃತ್ತವಾಗುತ್ತಿವೆ. ಇದನ್ನು ಕಾರ್ಯರೂಪಕ್ಕೆ ತರಲು ಹೊರಟಾಗ ನಿಜವಾದ ಸಮಸ್ಯೆ ಎದುರಾಗುತ್ತಿದೆ. ಜನಸಾಮಾನ್ಯರಿಗೆ ಅರ್ಥವಾಗದ ರೀತಿಯಲ್ಲಿ ಕಾನೂನು ಮಾಡಿ, ಅವರೆದುರಿಗೆ ಕನಸಿನ ಸರಮಾಲೆಯನ್ನೇ ತೋರಿಸಿ, ಅವರ ಬದುಕನ್ನು ಅತಂತ್ರಗೊಳಿಸಲು, ಅಭದ್ರತೆಗೆ ತಳ್ಳಲು ಸರಕಾರ ಮುಂದಾಗಿರುವುದರ ಸತ್ಯ ಈಗೀಗ ಜನಸಾಮಾನ್ಯರಿಗೆ ಅರ್ಥವಾಗುತ್ತಿದೆ. ಇದರ ಪರಿಣಾಮವೇ ಪಶ್ಚಿಮ ಬಂಗಾಳದ ನಂದಿಗ್ರಾಮದ ಘಟನೆ.
2007ರ ಜನವರಿ 2ರಂದು ಕ್ಷೇತ್ರಾಭಿವೃದ್ಧಿ ಅಧಿಕಾರಿಯು ವಿಶೇಷ ಆರ್ಥಿಕ ವಲಯ ನಿರ್ಮಿಸಲು ಭೂಮಿಯನ್ನು ವಶಪಡಿಸಿಕೊಳ್ಳುವುದಾಗಿ ಪ್ರಕಟಿಸಿದ. ಮರುದಿನ ಹಳ್ಳಿಯ ಜನ ಇದನ್ನು ಪ್ರತಿಭಟಿಸಲು ಮುಂದಾದರು. ಈ ಹೋರಾಟವನ್ನು ಹತ್ತಿಕ್ಕಲು ಸರಕಾರ ತನ್ನ ಎಲ್ಲ ಸಾಮರ್ಥ್ಯವನ್ನೂ ಬಳಸಿತು. 2007ರ ಮಾರ್ಚ್ 14 ಇತಿಹಾಸ ಮರೆಯಲಾಗದ ದಿನ. ಜನಸಾಮಾನ್ಯರಿಂದ ಆರಿಸಿಬಂದ ಸರಕಾರ ಪೊಲೀಸ್ ಬಲದ ಮೂಲಕ ಭೂಮಿ ಕಳೆದುಕೊಳ್ಳಲು ನಿರಾಕರಿಸಿದವರ ಮೇಲೆ ನಡೆಸಿದ ದೌರ್ಜನ್ಯ ದೇಶವೇ ತಲೆತಗ್ಗಿಸುವಂಥದು. ಈ ಹೋರಾಟದಲ್ಲಿ ಪುರುಷ- ಮಹಿಳೆಯರಿಬ್ಬರೂ ಭಾಗವಹಿಸಿದ್ದರು. 11 ಸಾವು ಸಂಭವಿಸಿತು. ಬುಲೆಟ್, ರಬ್ಬರ್ ಬುಲೆಟ್, ರಾಡು, ರೈಫಲ್ ಬಟ್ಸ್, ಟಿಯರ್ ಗ್ಯಾಸ್ ಮತ್ತು ಬಾಂಬುಗಳಿಂದ 244 ಜನ ಗಾಯಗೊಂಡರು ಅವರಲ್ಲಿ 57 ಮಹಿಳೆಯರು. ಈ ದೌರ್ಜನ್ಯದಲ್ಲಿ 348 ಮಹಿಳೆಯರು ನಾನಾ ರೀತಿಯ ಹಿಂಸೆಗೆ ಒಳಗಾದರು. 46 ಮಹಿಳೆಯರನ್ನು ಅವಮಾನಿಸಲಾಯಿತು. 17 ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೂ, 11 ಮಹಿಳೆಯರು ಅತ್ಯಾಚಾರಕ್ಕೂ ಬಲಿಯಾದರು. ಇವರಲ್ಲಿ ಯಾರೂ ಸಮಾಜ ವಿರೋಧೀ ಚಟುವಟಿಕೆಯಲ್ಲಿ ತೊಡಗಿದವರಲ್ಲ, ತಮ್ಮ ಭೂಮಿ ತಮಗೆ ಬೇಕು ಎಂದು ಹೋರಾಟಕ್ಕಿಳಿದವರು. ತಾನು ಬಡವರಪರ ಮತ್ತು ಕಾರ್ಮಿಕಪರ ಎನ್ನುತ್ತ ಸುಮಾರು ಮೂರು ದಶಕಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರದ ಢೋಂಗಿತನವನ್ನು ಈ ಘಟನೆ ಬಯಲಿಗೆಳೆದಿದೆ. ಅಧಿಕಾರರೂಢ ಪಕ್ಷ ಎಡಪಂಥೀಯ ಸಿದ್ಧಾಂತಕ್ಕೆ ಎಳ್ಳುನೀರು ಬಿಟ್ಟಿರುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.
ನಂದಿಗ್ರಾಮದ ಘಟನೆಯಲ್ಲಿ ಪೊಲೀಸರಿಂದ ಮಾತ್ರ ದೌರ್ಜನ್ಯ ನಡೆದಿಲ್ಲ. ರಾಜಕೀಯ ಪಕ್ಷದ ಕೈವಾಡವೂ ಇದೆ ಎನ್ನಲಾಗುತ್ತಿದೆ. ನಂದಿಗ್ರಾಮದಲ್ಲಿ ನಡೆದ ದೌರ್ಜನ್ಯದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಮೈಸೂರಿನಲ್ಲಿ ದಿನಾಂಕ 25-10-2007ರಂದು ಎಸ್ ಯುಸಿಐ ಏರ್ಪಡಿಸಿತ್ತು. ನಂದಿಗ್ರಾಮದಲ್ಲಿ ಪೊಲೀಸ್ ಸಮವಸ್ತ್ರ ಇಲ್ಲದ ವ್ಯಕ್ತಿಗಳು ಪ್ರತಿಭಟನಕಾರರ ಮೇಲೆ ಗುಂಡುಹಾರಿಸಿರುವ ದೃಶ್ಯವನ್ನು ನೋಡಿ ಬೆಚ್ಚಿಬೀಳುವಂತಾಯಿತು. ಕೆಲವು ಜನಪರ ಸಂಘಟನೆಗಳು ಸ್ಥಳೀಯರನ್ನು ಭೇಟಿ ಮಾಡಿದಾಗ ಕಾಕಿ ಧರಿಸಿದ್ದ ಕೆಲವರ ಕಾಲಿನಲ್ಲಿ ಚಪ್ಪಲಿಗಳಿದ್ದವು, ಕೈಯಲ್ಲಿ ಕೆಂಪು ಪಟ್ಟಿಗಳಿದ್ದವು ಎನ್ನುವ ಮಾಹಿತಿ ದೊರೆತಿದೆ. ಎಲ್ಲ ಗುಂಡುಗಳೂ ಪೊಲೀಸ್ ಬುಲೆಟ್ ಅಲ್ಲ ಎಂದು ಆಸ್ಪತ್ರೆಯ ವರದಿ ತಿಳಿಸುತ್ತದೆ. ಇವೆಲ್ಲ ಏನನ್ನು ಸೂಚಿಸುತ್ತವೆ?
ಈ ಪ್ರತಿಭಟನೆಯ ಮೂಲಕ ಮಹಿಳೆಯರು ಸಾಮಾಜಿಕ ಬದ್ಧತೆಯಲ್ಲಿನ ತಮ್ಮ ಸಹಭಾಗಿತ್ವವನ್ನು ಸಾಬೀತುಪಡಿಸಿದ್ದಾರೆ. ಫಲವತ್ತಾದ ಭೂಮಿಯನ್ನು ವಿಶೇಷ ಆರ್ಥಿಕ ವಲಯ ಸ್ಥಾಪನೆಗಾಗಿ ವಶಪಡಿಸಿಕೊಳ್ಳುವುದರ ವಿರುದ್ಧ ಹೋರಾಟ ಮಾಡುವವರು ನಂದಿಗ್ರಾಮದ ಮಾದರಿಯಲ್ಲಿ ಒಗ್ಗಟ್ಟಾಗಿ ಹೋರಾಡುವ ಅಗತ್ಯವಿದೆ. ಎಷ್ಟೇ ದೌರ್ಜನ್ಯಕ್ಕೆ ಬಲಿಯಾದರೂ ಅಲ್ಲಿನ ಜನರು ಅಧಿಕಾರಿಗಳು ಮತ್ತು ರಾಜಕಾರಣಿಗಳು ಆ ಊರಿನ ಸನಿಹ ಸುಳಿಯದಂತೆ ನೋಡಿಕೊಂಡಿದ್ದಾರೆ. ಭೂಮಿ ಕೇವಲ ಮಣ್ಣಲ್ಲ, ಅದು ರೈತನ ಉಸಿರು, ಸಂಸ್ಕೃತಿ ಮತ್ತು ಬದುಕು ಎನ್ನುವುದು ಆಡಳಿತವರ್ಗಕ್ಕೆ ಅರಿವಾಗುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. `ಪೊಲೀಸರೆ ಹಿಂದಿರುಗಿ, ಬುದ್ಧದೇವ ಭಟ್ಟಾಚಾರ್ಯರನ್ನು ಜೈಲಿಗೆ ಹಾಕಿ’ ಎನ್ನುವುದು ಅವರ ಘೋಷಣೆ.
ದೇಶದ ಪ್ರಗತಿಯ ಹೆಸರಿನಲ್ಲಿ `ವಿಶೇಷ ಆರ್ಥಿಕ ವಲಯ’ ರೂಪಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಸಾಹತುಶಾಹಿಗೆ ಆಹ್ವಾನ ನೀಡುತ್ತಿವೆ. ಜನಸಾಮಾನ್ಯರ ಬಗೆಗಿನ ಕಾಳಜಿಯಿಂದ ಅಭಿವೃದ್ಧಿಯನ್ನು ಕೈಗೊಳ್ಳುವುದಾಗಲಿ, ಉದ್ಯೋಗ ನಿರ್ಮಿಸುವುದಾಗಲಿ ಬಂಡವಾಳಶಾಹಿಯ ಉದ್ದೇಶವಲ್ಲ. ಲಾಭದ ಮೇಲೆ ಅವರ ಕಣ್ಣು. ಹೀಗಿರುವಾಗ ವಿಶೇಷ ಆರ್ಥಿಕ ವಲಯಕ್ಕೆ ವಿದೇಶೀ ಬಂಡವಾಳ ಹರಿದು ಬಂದು ದೇಶ ಅಭಿವೃದ್ಧಿ ಹೊಂದುತ್ತದೆ ಎನ್ನುವ ಹುಸಿ ಭರವಸೆಯನ್ನು ಸರಕಾರಗಳು ಯಾಕೆ ನಂಬುತ್ತವೆ? ಸರಕಾರದಲ್ಲಿರುವವರು ಅಮಾಯಕರೇನಲ್ಲ. ಈಗಾಗಲೇ ಚೈನಾದಲ್ಲಿ ಏನಾಯಿತು ಎನ್ನುವ ಉದಾಹರಣೆ ಅವರ ಕಣ್ಣೆದುರಿಗಿದೆ.
ಕೃಷಿ ಭೂಮಿಯನ್ನು ಕಳೆದುಕೊಳ್ಳುವುದೆಂದರೆ ಮಹಿಳೆಯರ ಪಾಲಿಗಂತೂ ಬದುಕನ್ನು ಕಳೆದುಕೊಂಡಂತೆ. ನಮ್ಮ ದೇಶದಲ್ಲಿ ಕೃಷಿ ಕ್ಷೇತ್ರದ ಬಹುಪಾಲು ಕೆಲಸಗಳನ್ನು ಮಾಡುವವರು ಮಹಿಳೆಯರೇ. ಆ ಭೂಮಿಯನ್ನು ಕಿತ್ತುಕೊಂಡರೆ ಅವರ ಬದುಕು ಮೂರಾಬಟ್ಟೆಯಾಗುತ್ತದೆ. ಹೊಟ್ಟೆಪಾಡಿಗಾಗಿ ಹತ್ತಿರದ ನಗರ/ಪಟ್ಟಣಗಳಿಗೆ ವಲಸೆ ಹೋಗುವುದು ಅನಿವಾರ್ಯವಾಗುತ್ತದೆ. ತಲೆತಲಾಂತರದಿಂದ ಭುಮಿಯನ್ನು ನಂಬಿ ಬದುಕುತ್ತಿರುವ ರೈತರಿಗೆ ಮತ್ತು ರೈತ ಮಹಿಳೆಯರಿಗೆ ಕೃಷಿಗೆ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸದ ಹೊರತು ಬೇರೆ ಕೌಶಲ್ಯ ತಿಳಿದಿರುವುದಿಲ್ಲ. ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಿ, ಅವರಿಗೆ ಪರಿಹಾರ ರೂಪದಲ್ಲಿ ಎಷ್ಟೇ ಹಣ ನೀಡಿದರೂ ಅದು ಅವರ ಬದುಕನ್ನು ರೂಪಿಸದು. ಬಡ್ಡಿಯ ಆಸೆಯಿಂದ, ವ್ಯಾಪಾರಕ್ಕೆ ತೊಡಗುವುದರಿಂದ, ಮಧ್ಯವರ್ತಿಗಳ ಕೈಗೆ ಸಿಕ್ಕಿ ಅವರ ಹಣ ಕರಗಿಹೋಗುತ್ತದೆ. ವಿಶೇಷ ಆರ್ಥಿಕ ವಲಯದಲ್ಲಿ ಭೂಮಿ ಕಳೆದುಕೊಂಡವರಿಗೆ ಯಾವ ಕೆಲಸವೂ ಸಿಗುವುದಿಲ್ಲ. ಒಮ್ಮೆ ಸಿಕ್ಕರೂ ಅಲ್ಲಿಗೆ ಯಾವ ಕಾರ್ಮಿಕ ಕಾನೂನೂ ಅನ್ವಯಿಸದ ಕಾರಣ ಶೋಷಣೆ ಅವ್ಯಾಹತವಾಗಿ ನಡೆಯುತ್ತದೆ. ದುಡಿಮೆಯ ಅವಧಿ, ಸಂಬಳ, ಅವಘಡಗಳು ಸಂಭವಿಸಿದರೆ ಪರಿಹಾರ ಯಾವುದನ್ನೂ ಕೇಳುವಂತಿಲ್ಲ. ಇದರಿಂದ ಸಮಾಜದಲ್ಲಿ ಘನತೆಯಿಂದ ಬದುಕಲು ಸಾಧ್ಯವಾಗದೆ ಮಹಿಳೆಯರು ಬೀದಿಪಾಲಾಗಬೇಕಾಗುತ್ತದೆ. ತಾವು ಬದುಕಲು ಬೇಕಾದ ಸಾಮಾಜಿಕ ಪರಿಸರವನ್ನು ನಿರ್ಮಿಸಬೇಕೆಂದು ಮಹಿಳೆಯರು ಹಕ್ಕೊತ್ತಾಯ ಮಾಡುತ್ತಿರುವ ಹೊತ್ತಿನಲ್ಲಿ ವಿಶೇಷ ಆರ್ಥಿಕ ವಲಯದ ಹೆಸರಿನಲ್ಲಿ ಫಲವತ್ತಾದ ಭೂಮಿಯನ್ನು ಕಬಳಿಸಲು ಮಂದಾಗಿರುವ ಸರಕಾರಗಳ ಪ್ರಾಮಾಣಿಕತೆಯನ್ನು ಸಂಶಯಿಸುವ ಸನ್ನಿವೇಶ ಎದುರಾಗಿದೆ.
ಮಹಿಳೆಯರು ಆರ್ಥಿಕ ಪ್ರಗತಿಯ ವಿರೋಧಿಗಳಲ್ಲ. ಫಲವತ್ತಾದ ಭೂಮಿಯನ್ನು ಬಳಸದೆ, ಜನಸಾಮಾನ್ಯರಿಗೆ ಉದ್ಯೋಗವನ್ನು ಕಲ್ಪಿಸುವ ಸಮಾಜೊ-ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಬೇಕು ಎನ್ನುವುದು ಹೋರಾಟದ ಹಿಂದಿನ ಮನೋಭಾವ. ನಂದಿಗ್ರಾಮದ ಘಟನೆಯನ್ನು ರಾಜಕೀಯಗೊಳಿಸದೆ ಜನಪರ ಕಾಳಜಿಯಿಂದ ಆರ್ಥಿಕ ಪ್ರಗತಿಯತ್ತ ಹೆಜ್ಜೆ ಇರಿಸಬೇಕಿದೆ. ನಂದಿಗ್ರಾಮದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಿಡಿ ದೇಶದ ಇತರೆಡೆ ಹೊತ್ತದಂತೆ ಆರ್ಥಿಕ ಅಭಿವೃದ್ಧಿಯ ಯೋಜನೆಯನ್ನು ರೂಪಿಸುವ ಹೊಣೆಗಾರಿಕೆ ಸರಕಾರದ ಮೇಲಿದೆ.