ಬರ್ಖಾ ಮುಡಿಗೆ ಪದ್ಮಶ್ರೀ
ಕೆಲವೊಮ್ಮೆ ಪ್ರಶಸ್ತಿ ಪ್ರಕಟವಾದಾಗ ಅದನ್ನು ಪಡೆದ ವ್ಯಕ್ತಿಯ ಪರಿಚಯ ಹೊರಜಗತ್ತಿಗೆ ಆಗುವುದಿದೆ. ಇನ್ನು ಕೆಲವು ಬಾರಿ `ಇಂಥ’ ವ್ಯಕ್ತಿಗೆ ಪ್ರಶಸ್ತಿ ನೀಡಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ ಎನ್ನುವ ಮಾತಿಗೆ ಎಡೆ ಮಾಡುವುದೂ ಇದೆ. ಬದುಕಿನಲ್ಲಿ ಏನಾದರೂ ಉಪಯುಕ್ತ ಕೆಲಸ ಮಾಡಬೇಕು ಎಂದು ಕಾರ್ಯೋನ್ಮುಖವಾದಾಗ ಪ್ರಶಸ್ತಿಗಳು ಅಂಥವರನ್ನು ಅರಸಿ ಬರುತ್ತವೆ. ಈ ವರ್ಷದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಬರ್ಖಾ ದತ್ ಈ ಸಾಲಿಗೆ ಸೇರಿದವರು.
1999ರ ಕಾರ್ಗಿಲ್ ಯುದ್ಧದ ದಿನಗಳನ್ನು ನೆನಪಿಸಿಕೊಂಡರೆ ಬರ್ಖಾ ಅವರ ಕೆಲಸದ ವೈಖರಿ ಯಾವ ಬಗೆಯದು ಎನ್ನುವುದು ಅರಿವಿಗೆ ಬರುತ್ತದೆ. ಯುದ್ಧಭೂಮಿಗೆ ಹೋಗಿ ವರದಿ ಮಾಡುವುದು ಸಾಧಾರಣದ್ದಲ್ಲ. ಅದಕ್ಕೆ ಎಂಟೆದೆ ಬೇಕು. ಪುರುಷ ವರದಿಗಾರರೂ ಕೆಲಮಟ್ಟಿಗೆ ಹಿಂದೇಟು ಹಾಕುವ ಸನ್ನಿವೇಶದಲ್ಲಿ ತುಸುವೂ ಅಳುಕಿಲ್ಲದೆ ವರದಿ ಮಾಡಿರುವ ಗಟ್ಟಿಗಿತ್ತಿ ಆಕೆ. ಎನ್.ಡಿ.ಟಿ.ವಿಯಲ್ಲಿ ಅವರು ನೀಡುತ್ತಿದ್ದ ವರದಿಯನ್ನು ನೋಡುವಾಗ ಎಂಥವರಿಗೂ ಎದೆ ಝಲ್ಲೆನ್ನುತ್ತಿತ್ತು. ಸಶಸ್ತ್ರ ಸೈನಿಕರ ಚಲನವಲನ ಹಾಗೂ ಗುಂಡಿನ ಸದ್ದಿನ ನಡುವೆ ಯುದ್ಧದ ವಿವರಗಳು ವರದಿಯಾಗುತ್ತಿದ್ದವು. ಬೆಟ್ಟ-ಗುಡ್ಡಗಳಿಂದ ಆವೃತವಾಗಿರುವ ಪ್ರದೇಶಕ್ಕೆ ತೆರಳಿ ಗುಂಡು ಮತ್ತು ಶೆಲ್ ಸದ್ದಿನ ನಡುವೆ ಯುದ್ಧ ವರದಿ ಮಾಡಿದ ಭಾರತದ ಮೊದಲ ವರದಿಗಾರ್ತಿ ಬರ್ಖಾ ದತ್.
`ತಾಯಿಯಂತೆ ಮಗಳು ನೂಲಿನಂತೆ ಸೀರೆ’ ಎನ್ನುವ ಮಾತಿದೆ. ಬರ್ಖಾ ವಿಷಯದಲ್ಲಿ ಇದು ನೂರಕ್ಕೆ ನೂರರಷ್ಟು ಸತ್ಯ. ಈಕೆಯ ತಾಯಿ ಪ್ರಭಾ ದತ್ 1965 ರ ಪಾಕಿಸ್ಥಾನ ಮತ್ತು ಭಾರತ ಯುದ್ಧ ಸಂದರ್ಭದಲ್ಲಿ `ಹಿಂದುಸ್ಥಾನ್ ಟೈಂಸ್’ ನಲ್ಲಿ ಕೆಲಸ ಮಾಡುತ್ತಿದ್ದರು. ತಾವು ಯುದ್ಧಭೂಮಿಗೆ ಹೋಗಿ ಅಲ್ಲಿಂದ ವರದಿ ಮಾಡುವುದಾಗಿ ಸಂಪಾದಕರನ್ನು ಕೇಳಿದಾಗ `ಮಹಿಳಾ ವರದಿಗಾರರನ್ನು ಯುದ್ಧ ನಡೆಯುವಲ್ಲಿಗೆ ನಾವು ಕಳಿಸಲ್ಲ’ ಎಂದರಂತೆ. ಇದರಿಂದ ಹಿಂಜರಿಯದ ಆಕೆ ರಜೆ ಪಡೆದು ಯುದ್ಧ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ಅಲ್ಲಿನ ಸಂಗತಿಗಳ ವರದಿ ಕಳುಹಿಸಿದಾಗ ಪತ್ರಿಕೆಗೆ ಅದನ್ನು ತಿರಸ್ಕರಿಸಲು ಸಾಧ್ಯವಾಗದೆ ಪ್ರಕಟಿಸಿತಂತೆ. ಅವರ ವರದಿಗಾಗಿ ಓದುಗ ಬಳಗ ಕಾಯುತ್ತಿತ್ತಂತೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿನ ಬರ್ಖಾ ಅವರ ವರದಿಗಾಗಿಯೂ ಜನ ಕಾಯುತ್ತಿದ್ದರು. ಜೊತೆಗೆ , ನೆನಪಿಡಲೇ ಬೇಕಾದ ಇನ್ನೊಂದು ಸಂಗತಿ: ಕ್ಯಾ. ವಿಕ್ರಂ ಬಾತ್ರಾ ಅವರ ಸಂದರ್ಶನ. ಯುದ್ಧದಲ್ಲಿ ತೊಡಗಿರುವ ಹೊತ್ತಿನಲ್ಲಿಯೇ ಅವರನ್ನು ಆಕೆ ಸಂದರ್ಶಿಸಿದ್ದರು. ಅದೇ ಯುದ್ಧದಲ್ಲಿ ಆತ ಡ್ರಾಸ್ ನಲ್ಲಿ ಮರಣಿಸಿದನಂತರ ಆ ಸಂದರ್ಶನ ಪ್ರಸಾರವಾಗಿ ದೇಶ ಬೆಚ್ಚುವಂತಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ ಮಾತ್ರವಲ್ಲ; ಆಕೆ ಕಾಶ್ಮೀರ, ಪಾಕಿಸ್ಥಾನ, ಇರಾಕ್ ಮತ್ತು ಆಪ್ಘಾನಿಸ್ಥಾನಗಳ ವರದಿಗಳೂ ಅಷ್ಟೇ ರೋಚಕವಾಗಿದ್ದವು. `ಯುದ್ಧಸ್ಯ ವಾರ್ತಾ ರಮ್ಯಾ` ಎನ್ನುವ ಮಾತಿದೆ. ಅದು ದೂರದಿಂದ ಕೇಳಲು ರೋಚಕ, ನಿಜ. ಆದರೆ ಸಮೀಪದಲ್ಲಿ ನಿಂತು ನೋಡಿ ವರದಿ ಮಾಡುವುದು ಅತ್ಯಂತ ಭಯಂಕರ.
`ತಾಯಿಯಿಂದ ಹೀಗೆ ವರದಿ ಮಾಡುವುದು ನಿಮಗೆ ಬಂತೆ?’ ಎಂದು ಸಂದರ್ಶನವೊಂದರಲ್ಲಿ ಬರ್ಖಾ ಅವರನ್ನು ಪ್ರಶ್ನಿಸಿದಾಗ `ತನ್ನ ತಾಯಿಯಂತೆಯೇ ಆ ತಲೆಮಾರಿನ ಮಹಿಳೆಯರು ತಾವಿದ್ದ ಗಾಜಿನ ಗೋಡೆಯನ್ನು ಒಡೆದು ಹೊರಬಂದಿದ್ದರಿಂದ ಮುಂದಿನವರಿಗೆ ಅವಕಾಶ ದೊರೆಯಿತು’ ಎಂದು ಅವರು ಉತ್ತರಿಸಿದ ರೀತಿ ಅವರ ವಿನಯಶೀಲತೆಗೆ ಸಾಕ್ಷಿ. ತಾವು ಕೆಲಸ ಮಾಡುತ್ತಿರುವ ಸಂಸ್ಥೆ ಕೂಡ ಅಂಥ ಸ್ವಾತಂತ್ರ್ಯ ನೀಡಿರುವುದಾಗಿ ಅವರು ತಿಳಿಸಿದರು. ಬರ್ಖಾ ಅವರದು ವಿವಾದಾತ್ಮಕ ವರದಿ ಹಾಗೂ ಯುದ್ಧ ವರದಿಯನ್ನು ಅವರು ವೈಭವೀಕರಿಸುತ್ತಾರೆ ಎನ್ನುವ ಅಭಿಪ್ರಾಯ ಅಭಿವ್ಯಕ್ತವಾದುದಿದೆ. ಯುದ್ಧ ಮತ್ತು ವಿಕೋಪಗಳಲ್ಲಿ ಇವೆಲ್ಲ ಸಹಜ. ಅವು ಬದುಕಿಗಿಂತ ಹಿರಿದಾದವು. ಯುದ್ಧವನ್ನು ನಾನು ಹರಯದ ಆಫೀಸರ್ ದೃಷ್ಟಿಯಿಂದ ಪರಿಭಾವಿಸಿದೆ. ಜನ ನಿಮಗಾಗಿ ಸಾಯುತ್ತಿರುವಾಗ ವಸ್ತುನಿಷ್ಠವಾಗಿ ಇರಲು ಹೇಗೆ ಸಾಧ್ಯ?’ ಎಂದು ಪ್ರತಿಕ್ರಿಯಿಸಿರುವುದರಲ್ಲಿ ದೇಶದ ಬಗೆಗಿನ ಅವರ ಕಾಳಜಿ ವ್ಯಕ್ತವಾಗಿದೆ.
ಬಾಂಗ್ಲಾದೇಶವು ತನ್ನ ಬಿಡುಗಡೆಗಾಗಿ ಹೋರಾಡುತ್ತಿದ್ದು, ಭಾರತ ಅದಕ್ಕೆ ಸಹಾಯ ಮಾಡುತ್ತಿದ್ದ 1971ರ ಡಿಸೆಂಬರಿನಲ್ಲಿ ಬರ್ಖಾ ಅವರ ಜನನ. ತಂದೆ ಎಸ್.ಪಿ. ದತ್ ಏರ್ ಇಂಡಿಯಾದಲ್ಲಿ ಆಫೀಸರ್. 13ಕ್ಕೆ ತಾಯಿಯನ್ನು ಕಳೆದುಕೊಂಡ ಬರ್ಖಾ ಬದುಕನ್ನು ಸವಾಲಾಗಿ ಸ್ವೀಕರಿಸಿದವರು. ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದು `ಜಾಮಿಯಾ ಮಿಲಿಯಾ ಇಸ್ಲಾಮಿಯಾ’ ಸಂಶೋಧನಾ ಕೇಂದ್ರದಲ್ಲಿ ಸಮೂಹ ಮಾಧ್ಯಮ ಸ್ನಾತಕೋತ್ತರ ಪದವಿ ಪಡೆದ ಆಕೆ ವರದಿಗಾರ್ತಿಯಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. 1997ರಲ್ಲಿ ಇನ್ ಲ್ಯಾಕ್ ಸ್ಕಾಲರ್ ಷಿಪ್ ದೊರೆತು, ಕೊಲಂಬಿಯ ವಿಶ್ವವಿದ್ಯಾಲಯದ `ಗ್ರಾಜುಯೇಟ್ ಸ್ಕೂಲ್ ಆಫ್ ಜರ್ನಲಿಸಂ’ ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಶಿಕ್ಷಣ ಅವಕಾಶವಿರಲಿ, ವರದಿಯ ವಿಷಯವಿರಲಿ, ಅಂಕಣ ಬರವಣಿಗೆ ಇರಲಿ ಎಲ್ಲವನ್ನೂ ಸವಾಲಾಗಿ ಸ್ವೀಕರಿಸುವ ಗುಣ ಅವರದು. ಗೋದ್ರಾ ಹತ್ಯಾಕಾಂಡದಲ್ಲಿ ಅತ್ಯಾಚಾರಕ್ಕೆ ಸಿಲುಕಿದ ಬಿಲ್ಕಿಷ್ ಬಾನು ಸಂದರ್ಶನ ಇದಕ್ಕೊಂದು ಉದಾಹರಣೆ.
ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಬರ್ಖಾ ದತ್ ಒಂದು `ಐಕನ್’. ಆಕೆ ಯುವ ಜನತೆಗೆ `ಆದರ್ಶ ಮಾದರಿ’ . ಅವರು ಈ ಮಟ್ಟ ತಲುಪಲು ಸಾಕಷ್ಟು ಶ್ರಮಿಸಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಅವರ ಸಾಧನೆಗೆ ಸುಮಾರು ಇಪ್ಪತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರನ್ನು ಅರಸಿ ಬಂದಿರುವುದೇ ಸಾಕ್ಷಿ. ಅವುಗಳಲ್ಲಿ 2001ರಲ್ಲಿ ದೊರೆತ ವಿಶ್ವ ಆರ್ಥಿಕ ಫೋರಂನ `ಗ್ಲೋಬಲ್ ಲೀಡರ್ ಆಫ್ ಟುಮಾರೊ’, 2002ರ `ಕಾಮನ್ ವೆಲ್ತ್ ಬ್ರಾಡ್ ಕಾಸ್ಟಿಂಗ್ ಪ್ರಶಸ್ತಿ’ ಹಾಗೂ ಈಗ ಭಾರತ ಸರಕಾರ ನೀಡುವ `ಪದ್ಮಶ್ರೀ’ ಪ್ರಶಸ್ತಿ ದೊರೆತಿರುವುದು ಗಮನಾರ್ಹವಾದುವು. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಅವರು ಅಭಿನಂದನಾರ್ಹರು.
ಎನ್.ಡಿ.ಟಿ.ವಿಯ ವರದಿಗಾರ್ತಿಯಾಗಿ, ಪ್ರಸ್ತುತ ಎನ್.ಡಿ.ಟಿ.ವಿ 24*7 ದ ಮ್ಯಾನೇಜಿಂಗ್ ಸಂಪಾದಕಿಯಾಗಿ ಕೆಲಸ ಮಾಡುತ್ತಿರುವ ಬರ್ಖಾ ದತ್ ಆ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಅವರು ನಡೆಸಿಕೊಡುತ್ತಿರುವ `ವಿ ದಿ ಪೀಪಲ್’ ಕಾರ್ಯಕ್ರಮ ಜನತಂತ್ರ ವ್ಯವಸ್ಥೆಯ ಅವಸ್ಥೆಗೆ ಹಿಡಿಯುತ್ತಿರುವ ಕನ್ನಡಿ. ಜನಸಾಮಾನ್ಯರ ಅಗತ್ಯಗಳನ್ನು, ಭಾವನೆಗಳನ್ನು ಅನಾವರಣ ಗೊಳಿಸುವ ಇದು ಅತ್ಯಂತ ಜನಪ್ರಿಯವೂ ಹೌದು. `ದಿ ಹಿಂದೂಸ್ತಾನ್ ಟೈಂಸ್’ ಮತ್ತು `ದಿ ಖಲೀಜ್ ಟೈಂಸ್’ ನ ಅವರ ವಾರದ ಅಂಕಣ ಆಕರ್ಷಕ.
ತಾನು ಮಹಿಳೆ ಎನ್ನುವ ಯಾವುದೇ ಅಳುಕು ಇಲ್ಲದೆ ಸಾಧಿಸಬಹುದಾದ ಸಾಧ್ಯತೆಯನ್ನು ಬರ್ಖಾ ದತ್ ತೋರಿಸಿಕೊಟ್ಟರು. ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲೆನ್ನುವುದು ಸಹೃದಯ ಹಾರೈಕೆ.
************************
`ಅಣ್ಣಾ ನಾವು ಕಾಮದ ಗೊಂಬೆಗಳಲ್ಲ’
`ದೇಶ ಸುತ್ತು ಕೋಶ ಓದು’ ಎನ್ನುವ ಮಾತಿದೆ. ಇದು ಎಲ್ಲರಿಗೂ ಅನ್ವಯವಾಗಬೇಕು. ಆದರೆ ಪುರುಷರ ದೃಷ್ಟಿಯಿಂದ ಈ ಗಾದೆ ಹುಟ್ಟಿದೆಯೇ ಎನ್ನುವ ಪ್ರಶ್ನೆ ಈಗ ಎದುರಾಗಿದೆ. ದೇಶಸುತ್ತಿ ಅನುಭವವನ್ನು ಹಿಗ್ಗಿಸಿಕೊಳ್ಳುವ, ಸೌಂದರ್ಯವನ್ನು ಆಸ್ವಾದಿಸುವ ಅವಕಾಶ ಪ್ರತಿಯೊಬ್ಬರಿಗೂ ಇರಬೇಕು ಎನ್ನುವುದು ತಾತ್ವಿಕವಾಗಿ ಮಾತ್ರ ಒಪ್ಪಿತವಾದುದೇ? ಇದನ್ನು ಆಗುಮಾಡುವ ಪರಿಸರ ಇದೆಯೇ? ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳುವ ಸಂದರ್ಭ ನಮ್ಮ ಮುಂದಿದೆ.
ನಮ್ಮ ದೇಶದ ಎಲ್ಲೆಡೆ ಪ್ರೇಕ್ಷಣೀಯ ಸ್ಥಳಗಳು ಹೇರಳವಾಗಿದ್ದು ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಹಾಗಾಗಿ, ಅನೇಕ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ಪ್ರವಾಸೋದ್ಯಮ ವನ್ನು ಒಂದು ಶಿಕ್ಷಣ ವಿಷಯವಾಗಿ ಕಲಿಸಲು ಪ್ರಾರಂಭಿಸಿವೆ. ಈ ಹೊತ್ತಿನಲ್ಲಿ ಇದಕ್ಕೆ ಭಂಗತರುವಂಥ ಘಟನೆಗಳು ನಡೆಯುತ್ತಿವೆ. 2008ನೆಯ ಹೊಸ ವರ್ಷದಲ್ಲಿ ಭಾರತಕ್ಕೆ ಪ್ರವಾಸಿಗರಾಗಿ ಬಂದ ವಿದೇಶೀ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳು ನಾವು ತಲೆತಗ್ಗಿಸುವಂತೆ ಮಾಡುತ್ತಿವೆ. ಈ ಹಿಂದೆ ಇಂಥವು ನಡೆದಿಲ್ಲ ಎಂದಲ್ಲ; ಈಗೀಗ ಇಂಥ ಪ್ರಕರಣಗಳು ಹೆಚ್ಚುತ್ತಿವೆ.
ಹೊಸ ವರ್ಷದ ಮೊದಲನೆಯ ದಿನವೇ ಮುಂಬೈನ ಜುಹು ಬೀಚಿನಲ್ಲಿ ಇಬ್ಬರು ಅನಿವಾಸಿ ಮಹಿಳೆಯರ ಮಾನಭಂಗ ಮಾಡಲಾಯಿತು. ಅದೇ ದಿನ ಕೊಚ್ಚಿಯಲ್ಲಿ ಸ್ವೀಡಿಶ್ ಯುವತಿಯ ಮೇಲೆ ಅವಳ ತಂದೆಯ ಎದುರೇ ಲೈಂಗಿಕ ದೌರ್ಜನ್ಯವೆಸಗಲಾಯಿತು. ಕೇರಳದಲ್ಲಿ ಇಬ್ಬರು ಯುವತಿಯರ ಮೇಲೆ ಅವರು ತಂಗಿದ್ದ ಹೊಟೆಲ್ನ ಕಾವಲುಗಾರರು ಲೈಂಗಿಕ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ.
ಗೋವಾದಲ್ಲಿ ಬ್ರಿಟನ್ ಮತ್ತು ರಷ್ಯಾದ ಮಹಿಳೆಯರ ಮೇಲೆ ಅತ್ಯಚಾರ ನಡೆದಿದೆ. ರಾಜಸ್ಥಾನದ ಪುಷ್ಕರದ ದೇವಾಲಯವೊಂದರಲ್ಲಿ ಅಮೆರಿಕಾದ ಪ್ರವಾಸಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ಉದಯಪುರದ ಅತಿಥಿಗೃಹದ ಮಾಲೀಕನೇ ಅಲ್ಲಿ ತಂಗಿದ್ದ ಬ್ರಿಟಿಷ್ ಮಹಿಳೆಯ ಮೇಲೆ ಅತ್ಯಾಚಾರ ಮಾಡಿರುವುದಾಗಿ ವರದಿಯಾಗಿದೆ.
ದೇಶದಲ್ಲಿ ಪ್ರಕೃತಿಯ ಸೌಂದರ್ಯ ಸವಿಯುವ ಹಲವು ತಾಣಗಳಿವೆ; ಇಲ್ಲಿರುವಷ್ಟು ಪ್ರಮಾಣದಲ್ಲಿ ಶಿಲ್ಪ ಮತ್ತು ವಾಸ್ತುಶಿಲ್ಪಗಳು ಮತ್ತೆಲ್ಲಿಯೂ ನೋಡಲು ಸಿಗಲಾರವು. ಹಾಗಾಗಿ, ದೇಶವಿದೇಶಗಳ ಪ್ರೇಕ್ಷಕರನ್ನು ಆಕರ್ಷಿಸಲು ಇವೆಲ್ಲ ಸಮರ್ಥವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದೆ. ಇದು ಸಾಕಷ್ಟು ಉದ್ಯೋಗವನ್ನು ಸೃಷ್ಟಿಸುತ್ತಿದೆ; ಹೇರಳ ವಿದೇಶೀ ವಿನಿಮಯವನ್ನು ತರುತ್ತಿದೆ. ಆದರೆ ಕಳೆದೊಂದು ತಿಂಗಳಿನಲ್ಲಿ ಪ್ರವಾಸಕ್ಕಾಗಿ ಬಂದ ವಿದೇಶೀ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳು ಬೆಚ್ಚಿಬೀಳುವಂತೆ ಮಾಡಿವೆ. ಇವು ವಿದೇಶೀ ಪ್ರವಾಸಿಗರಲ್ಲಿ ಭೀತಿ ಹುಟ್ಟಿಸಬಹುದು. ಈ ಪ್ರಕರಣಗಳಿಂದ ದೇಶದ ಗೌರವಕ್ಕೆ ಕಳಂಕ ತಗುಲಲಿದೆ; ಇದರಿಂದ ದೇಶದ ಪ್ರವಾಸೋದ್ಯಮಕ್ಕೆ ಧಕ್ಕೆಯೊದಗಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಪರಿಣಾಮ ಬೀರಬಹುದು. ಭಾರತದಲ್ಲಿ ವಿದೇಶೀಯರು ಸುರಕ್ಷಿತರಲ್ಲ ಎನ್ನುವ ಭಾವನೆ ಬೆಳೆದು ಪ್ರವಾಸಿಗಳ ಸಂಖ್ಯೆ ಇಳಿಮುಖವಾಗುವ ಸಾಧ್ಯತೆಯಿದೆ.
ಪ್ರವಾಸೀತಾಣವನ್ನು ಅಭಿವೃದ್ಧಿಗೊಳಿಸಿದರೆ ಸಾಲದು, ಅದರ ಸುರಕ್ಷಿತತೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವುದು ಈಗ ನಡೆದ ಪ್ರಕರಣಗಳಿಂದ ಸಾಬೀತಾಗಿದೆ. ಈ ದಿಸೆಯಲ್ಲಿ ಸರಕಾರದತ್ತ ಕೈತೋರಿಸಿ ಸುಮ್ಮನಿರುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಈ ವರ್ಷದ ಶುರುವಿನಲ್ಲಿ ನಡೆದ ಪ್ರಕರಣಗಳನ್ನು ಗಮನಿಸಿದರೆ ಯಾವುದೇ ಒಂದು ವರ್ಗಕ್ಕೆ ಸೇರಿದ ಪುರುಷರಿಂದ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿಲ್ಲ. ಹೊಟೆಲ್ ಮಾಲೀಕ, ಕಾವಲುಗಾರ, ದೇವಾಲಯಕ್ಕೆ ಬಂದವರು ಹೀಗೆ ಎಲ್ಲ ರೀತಿಯ ಜನರೂ ಇದರಲ್ಲಿ ಭಾಗಿಗಳು. ಮಹಿಳೆ ಇರುವುದೇ ಪುರುಷನ ಕಾಮಪಿಪಾಸೆಯನ್ನು ತಣಿಸಲು ಎನ್ನುವ ಮನೋಭಾವ ಇದರ ಹಿಂದಿದೆ ಎನ್ನುವುದು ವಿದಿತ.
ವಿದೇಶೀ ಮಹಿಳೆಯರು ಲೈಂಗಿಕ ಸ್ವಚ್ಛಂದದವರು, ಅವರಿಗೆ ನಮ್ಮ ದೇಶದ ಮಹಿಳೆಯರಂತೆ ಶೀಲದ ಪರಿಕಲ್ಪನೆ ಇಲ್ಲದವರು, ಅವರೆಲ್ಲ ನೀತಿಬಾಹಿರರು, ಎಲ್ಲೆಲ್ಲೋ ಸುತ್ತುವ ಅವರನ್ನು ಲೈಂಗಿಕವಾಗಿ ಶೋಷಿಸಬಹುದು ಎನ್ನುವ ಲಘುಧೋರಣೆ ವ್ಯಾಪಕವಾಗಿರುವುದೂ ಇದಕ್ಕೆ ಕಾರಣ. ತಾವು ಇಚ್ಛಿಸಿದವರೊಂದಿಗೆ ಸಂಬಂಧ ಹೊಂದುವುದಕ್ಕೂ ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಎರಡನೆಯದು ದೌರ್ಜನ್ಯ. ಮಹಿಳೆ ಎಂದ ಕೂಡಲೇ ಅವಳು ಕಾಮದ ಗೊಂಬೆ ಎನ್ನುವ ಪುರುಷದೃಷ್ಟಿ ಬದಲಾಗುವ ಅಗತ್ಯವಿದೆ. ಪ್ರವಾಸೋದ್ಯಮವನ್ನು ಒಂದು ಅಧ್ಯಯನ ಶಿಸ್ತಾಗಿ ಕಲಿಸುವ ಸಂಸ್ಥೆಗಳು ಇಂಥ ಪ್ರಕರಣಗಳು ಮರುಕಳಿಸದಂತೆ ತಡೆಯಬೇಕಾದ ಪಠ್ಯಕ್ರಮವನ್ನು ರೂಪಿಸುವ ಅನಿವಾರ್ಯತೆ ಇದೆ. ಪ್ರವಾಸೋದ್ಯಮವನ್ನು ಒಂದು ಉದ್ಯಮವೆಂದು ಅಥವಾ ವಿದೇಶೀ ವಿನಿಮಯ ಗಳಿಸುವ ಸಾಧನವೆಂದು ಪರಿಭಾವಿಸಿದರೆ ಸಾಲದು. ಅದರ ಪರಿಣಾಮಗಳನ್ನೂ ಮುಂದಾಲೋಚನೆಯಿಂದ ಚಿಂತಿಸಿ ಕಾರ್ಯಪ್ರವೃತ್ತವಾಗುವುದು ಆವಶ್ಯಕ. ಪ್ರವಾಸಕ್ಕಾಗಿ ಬರುವ ಮಹಿಳೆಯರಿಗೆ ಸೂಕ್ತ ಮಾರ್ಗದರ್ಶನ ನೀಡುವ ತುರ್ತಿದೆ. ಅವರಿಗೆ ಭದ್ರತೆ ನೀಡುವ ದೃಷ್ಟಿಯಿಂದ ಕೆಲವು ದೇಶಗಳಲ್ಲಿರುವಂತೆ ಪ್ರವಾಸಿಗರಿಗೆ ಮಾರ್ಗದರ್ಶನದೊಂದಿಗೆ ರಕ್ಷಣೆಯನ್ನೂ ಒದಗಿಸಬಲ್ಲ ಮಾರ್ಗದರ್ಶಕ ಪ್ರವಾಸೀ ಪೊಲೀಸ್ ಪಡೆಯನ್ನು ಎಲ್ಲ ಪ್ರವಾಸೀ ತಾಣಗಳಿಗೂ ನಿಯೋಜಿಸುವುದು ಸೂಕ್ತ.
ಈಗ ನಡೆದಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡರೆ ಜವಾಬ್ದಾರಿ ಮುಗಿಯಿತು ಎನ್ನುವಂತಿಲ್ಲ. ಪ್ರವಾಸೋದ್ಯಮ ಇಲ್ಲಿನ ಮಹಿಳೆಯರ ಮೇಲೆ ಬೀರುವ ಪರಿಣಾಮದ ಬಗೆಗೂ ಚಿಂತಿಸುವ ಅಗತ್ಯವಿದೆ. ಪ್ರವಾಸೋದ್ಯಮದಲ್ಲಿ ಮುಂದುವರಿದ ದೇಶಗಳಲ್ಲಿ ಮಹಿಳೆಯನ್ನು ಸಾಧನವಾಗಿ ಬಳಸಿಕೊಳ್ಳುತ್ತಿರುವ ಸಂಗತಿ ಈಗ ರಹಸ್ಯವೇನಲ್ಲ. ಪ್ರವಾಸಿಗರನ್ನು ಆಕರ್ಷಿಸುವ ಉಪಕರಣವಾಗಿ ಮಹಿಳೆ ಬಳಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ್ದು ಮತ್ತು ಸ್ಥಳೀಯ ಸಂಸ್ಥೆಗಳು ಹಾಗು ಸಮಾಜದ್ದು. ದಳ್ಳಾಳಿಗಳು, ಹೊಟೆಲ್ ಮಾಲೀಕರು, ಮಾರ್ಗದರ್ಶಿಗಳು ಪ್ರವಾಸಿಗರನ್ನು ಆಕರ್ಷಿಸಲು ಮಹಿಳೆಯನ್ನು ಒದಗಿಸುವ ಆಮಿಷ ಒಡ್ಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದನ್ನು ತಡೆಗಟ್ಟಲು ಇವರನ್ನೆಲ್ಲ ಲಿಂಗವ್ಯವಸ್ಥೆಯ ಸಂವೇದನೆಗೆ ಒಳಪಡಿಸುವ ಅಗತ್ಯವಿದೆ.
ಭಾರತದಂಥ ದೇಶದಲ್ಲಿ ಬಡತನ, ಹಸಿವು ಮುಖ್ಯವಾಗಿರುವಾಗ ಹಣದ ಆಮಿಷದಿಂದ ಎಲ್ಲವನ್ನೂ ಪಡೆಯಬಹುದು ಎನ್ನುವುದು ಕೆಲಮಟ್ಟಿಗೆ ನಿಜ. ಆದರೆ ಹಾಗೆಂದು ಸುಮ್ಮನೆ ಕೈಕಟ್ಟಿ ಕುಳಿತರೆ ಈಗಷ್ಟೆ ಸಾರ್ವಜನಿಕ ಬದುಕಿಗೆ ಕಾಲಿಡುತ್ತಿರುವ ಮಹಿಳೆಯರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಜಿಗಿದಂತಾಗುತ್ತದೆ. ಮಹಿಳೆಯರಲ್ಲಿಯೂ ಜಾಗೃತಿ ಉಂಟುಮಾಡಬೇಕಿದೆ. ಇಂಥ ಮುನ್ನೆಚ್ಚರಿಕೆಯ ಕ್ರಮಗಳು ಕೇವಲ ಸರಕಾರ ಅಥವಾ ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿಯೆಂದು ತಿಳಿಯುವುದು ಸರಿಯಲ್ಲ. ಜನಸಾಮಾನ್ಯರೂ ತಮ್ಮ ಹೊಣೆಯನ್ನು ನಿಭಾಯಿಸಲು ಮುಂದಾಗಬೇಕಿದೆ. ಮಹಿಳೆಯ ಸುರಕ್ಷತೆ ನಾಗರಿಕ ಸಮಾಜವೊಂದರ ಜವಾಬ್ದಾರಿ ಎನ್ನುವುದು ಇಲ್ಲಿ ಮುಖ್ಯವಾಗಬೇಕು.