ಬೆತ್ತಲಾದವರು ಯಾರು?
ಕಳೆದ ವಾರ ಅಸ್ಸಾಂನ ಹಲವು ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ಮೀಸಲಾತಿ ಬೇಡಿಕೆಯನ್ನು ಮುಂದಿಟ್ಟು ಒಂದು ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ನಾಗರಿಕ ಸಮಾಜ ತಲೆತಗ್ಗಿಸುವಂಥ ಘಟನೆಯೊಂದು ಅಲ್ಲಿ ನಡೆಯಿತು. ಅದರಲ್ಲಿ ಪಾಲುಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಯುವಕರ ಗುಂಪು ಅವಹೇಳನ ಮಾಡಿದಾಗ ಅವಳನ್ನು ರಕ್ಷಿಸಲು ಮುಂದಾದ ಇನ್ನೊಬ್ಬ ವಿದ್ಯಾರ್ಥಿನಿಯನ್ನು ಕೆಲವರು ವಿವಸ್ತ್ರಗೊಳಿಸಿದ್ದಲ್ಲದೆ, ಒಂದು ಕಿಲೊಮೀಟರ್ ದೂರ ಓಣಿ- ಓಣಿಗಳಲ್ಲಿ ಅಟ್ಟಿಸಿಕೊಂಡು ಹೋಗಿ ಅವಳ ಮೇಲೆ ಹಲ್ಲೆನಡೆಸಿದರು; ಎನ್ನುವುದಾಗಿ ಕೆಲವೇ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಘಟನೆಗೆ ಸಾರ್ವಜನಿಕರಿಂದ ಬಂದ ಪ್ರತಿಕ್ರಿಯೆಗೆ ಬಾಗಿದ ಅಸ್ಸಾಂನ ಮುಖ್ಯ ಮಂತ್ರಿಗಳು ಪರಿಹಾರವಾಗಿ ಆ ಬಾಲೆಗೆ ಒಂದು ಲಕ್ಷ ರುಪಾಯಿಯ ಚೆಕ್ಕನ್ನು ನೀಡಿದರು. ಅದರಿಂದ ಯಾವ ಪ್ರಯೋಜನವೂ ಇಲ್ಲವೆಂದು ಅವಳು ಅದನ್ನು ತಿರಸ್ಕರಿಸಿದಳು; ತುಸುವೂ ಅಳುಕದೆ ತಾನು ತನ್ನ ಶಿಕ್ಷಣವನ್ನು ಮುಂದುವರಿಸುವುದಾಗಿಯೂ ತಿಳಿಸಿದಳು. ಆ ಹುಡುಗಿಯ ನಿರ್ಧಾರ ಮತ್ತು ನಡವಳಿಕೆ ಅನುಸರಣೀಯ. ಆದರೆ ಅವಳನ್ನು ಅವಮಾನಗೊಳಿಸಿದವರ ಬಗೆಗೆ ಸರಕಾರ ಯಾವುದೇ ಕ್ರಮ ಕೈಗೊಂಡ ಬಗ್ಗೆ ವರದಿಯಾಗಿಲ್ಲ.
ಇಂಥ ಹಲ್ಲೆಗೆ ಆದಿವಾಸಿ ಹುಡುಗಿಯ ಬದಲು ನಗರ ಪ್ರದೇಶದ ಪ್ರತಿಷ್ಠಿತ ಕುಟುಂಬದ /ವರ್ಗದ ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿದ್ದರೆ ಮಾಧ್ಯಮಗಳಲ್ಲಿ ಅದೊಂದು ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ ಇಲ್ಲಿ ಈ ಘಟನೆಗೆ ಹೆಚ್ಚಿನ ಪ್ರತಿಕ್ರಿಯೆಯಾಗಲಿ / ಪ್ರತಿಭಟನೆಯಾಗಲಿ ವ್ಯಕ್ತವಾಗದಿದ್ದರೂ 16ರ ಆ ಬಾಲೆ ತೋರಿಸಿದ ಧೈರ್ಯ ಮೆಚ್ಚುವಂಥದು. ತನ್ನನ್ನು ವಿವಸ್ತ್ರಗೊಳಿಸಿ ಅವಮಾನಿಸಲಾಯಿತು ಎಂದು ಅವಳು ಅಳುಕಲಿಲ್ಲ. ಇಂಥ ಸಂದರ್ಭದಲ್ಲಿ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುವುದಿದೆ; ಇಲ್ಲವೆ ನಾಲ್ಕುಗೋಡೆಗಳ ನಡುವೆ ಮುಖಮುಚ್ಚಿ ಅಳುತ್ತ ಕೂರುವುದೂ ಇದೆ. ಕೆಲವೊಮ್ಮೆ ಹೀಗೆ ಸಾರ್ವಜನಿಕವಾಗಿ ಹೆಣ್ಣನ್ನು ಅವಮಾನಗೊಳಿಸಿದಾಗ ಎರಡು ಕೋಮುಗಳ ನಡುವೆ ಗಲಭೆಗಳಾಗಿ ಪ್ರಾಣಹಾನಿ ಮತ್ತು ಮಾನಹಾನಿಗಳು ಸಂಭವಿಸಿರುವುದೂ ಇದೆ. ಇಲ್ಲಿ ಯಾವ ರೀತಿಯಿಂದಲೂ ಅಂಥದಕ್ಕೆ ಆಸ್ಪದವಾಗದಂತೆ ಸಂಯಮ ತೋರಿರುವುದು ಅನುಸರಣೀಯ. ಆ ಹುಡುಗಿಯಾಗಲಿ ಅವಳ ಮನೆಯವರಾಗಲಿ ಸಂದರ್ಭವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳದಿರುವುದು ಗಮನಾರ್ಹ. ಆದಾಗ್ಯೂ, ಇದೊಂದು `ಮಾದರಿ’ ನಡವಳಿಕೆ ಎಂದು ಯಾರಿಗೂ ಎನಿಸದಿರುವುದು ಆಶ್ಚರ್ಯಕರ ಸಂಗತಿ.
ಯಾವಯಾವುದೋ ಸಂದರ್ಭಗಳಲ್ಲಿ ಸಂಸ್ಕೃತಿ ಹಾಳಾಯಿತೆಂದು ಬೊಬ್ಬೆ ಹೊಡೆಯುವವರು, ತಾವು ಸಂಸ್ಕೃತಿಯ ರಕ್ಷಕರು ಎಂದು ಸ್ವಯಂ ಘೋಷಿಸಿಕೊಂಡವರು ಈಗ ಎಲ್ಲಿ ಕಳೆದುಹೋಗಿದ್ದಾರೆ? ಪ್ರತಿಷ್ಠಿತ ಸಮುದಾಯಕ್ಕೆ ಅಥವಾ ಕುಟುಂಬಕ್ಕೆ ಸೇರಿದ ಹೆಣ್ಣುಮಗಳಿಗೆ ಅನ್ಯಾಯ, ಅವಮಾನವಾದರೆ ಅದು ಗಂಭೀರ ವಿಷಯ, ಸಾಮಾನ್ಯ, ಅದರಲ್ಲಿಯೂ ಆದಿವಾಸಿ ಹುಡುಗಿಯೊಬ್ಬಳನ್ನು ವಿದ್ಯಾರ್ಥಿ ಸಮುದಾಯ ಅವಮಾನಗೊಳಿಸಿದರೆ ಯಾರಿಗೆ ಏನು ತೊಂದರೆ ಎನಿಸುತ್ತದೆಯೇ? ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಗಲಿ, ಇತರ ಸರಕಾರೇತರ ಸಂಘಟನೆಗಳಾಗಲಿ ಪ್ರತಿಕ್ರಿಯಿಸದೆ ತೆಪ್ಪಗಿವೆ ಯಾಕೆ? ಪ್ರಜಾಸತ್ತೆಯಲ್ಲಿ ಎಲ್ಲರೂ ಸಮಾನರು, ಕೆಲವರು ಹೆಚ್ಚು ಸಮಾನರು ಎನ್ನುವುದು ಇದರ ಅರ್ಥವೇ? ಬಡ ಹೆಣ್ಣುಮಕ್ಕಳ ಮಾನ ಅಗ್ಗವೇ? ಪ್ರತಿಷ್ಠಿತ ಮಹಿಳೆಯೊಬ್ಬರನ್ನು ಜನಾಂಗದ ಹೆಸರಿನಿಂದ ನಿಂದಿಸಿದಾಗ ಪ್ರತಿರೋಧ ವ್ಯಕ್ತಪಡಿಸಿದ್ದ ಸರಕಾರವಾಗಲಿ, `ಜನತೆ’ ಯಾಗಲಿ ಈಗ ಯಾಕೆ ಮೌನ ತಾಳಿವೆ?
ಹೆಣ್ಣನ್ನು ಅವಮಾನಗೊಳಿಸುವ ಮೂಲಕ ಅವಳ ವ್ಯಕ್ತಿತ್ವವನ್ನು ನಾಶಮಾಡಬಹುದು, ಅವಳು ಸೇರಿರುವ ಕುಟುಂಬ, ಸಮುದಾಯಗಳ ಪುರುಷರ ಅಹಂ ಹತ್ತಿಕ್ಕಬಹುದು ಎನ್ನುವ ಧೋರಣೆ ಹೊಸತಲ್ಲ, ಮಹಾಭಾರತದಷ್ಟು ಹಿಂದಿನದು. ದ್ರೌಪದಿಯನ್ನು ತುಂಬಿದ ಸಭೆಯಲ್ಲಿ ದುಶ್ಶಾಸನ ವಿವಸ್ತ್ರಗೊಳಿಸಿದಾಗ ತನ್ನನ್ನು ಕಾಪಾಡುವಂತೆ ಆಕೆ ಅಲ್ಲಿರುವ ಎಲ್ಲರನ್ನು ಬೇಡಿದಳು. ಇಲ್ಲಿ ಈ ಬಾಲೆ ಯಾರ ಸಹಾಯಕ್ಕೂ ಕಾಯದೆ ಅವರಿಂದ ತಪ್ಪಿಸಿಕೊಳ್ಳಲು ಧೈರ್ಯಗುಂದದೆ ಓಡಿದಳು. (ಒಬ್ಬ ಅಂಗಡಿಯಾತ ತಾನು ಧರಿಸಿದ್ದ ಶರಟನ್ನು ಅವಳಿಗೆ ಕೊಟ್ಟು ಮಾನವೀಯತೆ ತೋರಿಸಿದ) ಇತಿಹಾಸದುದ್ದಕ್ಕೂ ಮಹಿಳೆಯ ವ್ಯಕ್ತಿತ್ವವನ್ನು ಘಾಸಿಗೊಳಿಸುವ ಒಂದು ಹುನ್ನಾರವಾಗಿ ಹೀಗೆ ಮಹಿಳೆಗೆ ಅವಮಾನ ಮಾಡುವುದು ನಡೆದು ಬಂದಿದೆ. ಮಹಿಳೆ ಯಾವುದಕ್ಕೂ ದನಿಯೆತ್ತದಂತೆ ಮಾಡುವ ವಿನ್ಯಾಸವಾಗಿ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಮಹಿಳೆಯನ್ನು ಬೆತ್ತಲುಗೊಳಿಸುವುದು ಎಂದರೆ ಸಂಸ್ಕೃತಿಯೊಂದನ್ನು ಬೆತ್ತಲುಗೊಳಿಸಿದಂತೆ ಎನ್ನುವುದನ್ನು ವಿಕೃತ ಮನಸ್ಸುಗಳು ಮರೆಯುತ್ತವೆ.
ಅನ್ಯಾಯಕ್ಕೆ ಒಳಗಾದ ಬಾಲೆಗೆ ಹಣದ ರೂಪದಲ್ಲಿ ಪರಿಹಾರ ನೀಡಲು ಮುಂದಾದ ಸರಕಾರದ ನಡವಳಿಕೆ ಸಾಧುವಲ್ಲ. ಹಿಂದೊಮ್ಮೆ ಕೇಂದ್ರ ಸರಕಾರ ಅತ್ಯಾಚಾರಕ್ಕೆ ಬಲಿಯಾಗುವ ಮಹಿಳೆಗೆ ವಿಮಾ ಯೋಜನೆ ಜಾರಿ ಮಾಡಲು ಮುಂದಾಗಿತ್ತು. ಅದಕ್ಕೆ ದೇಶಾದ್ಯಂತ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಎಲ್ಲ ಸನ್ನಿವೇಶಗಳಲ್ಲಿಯೂ ಸಂತ್ರಸ್ತರಿಗೆ ಬೇಕಿರುವುದು ಹಣವಲ್ಲ. ನೈತಿಕ ಬೆಂಬಲ ಮತ್ತು ಸಾಂತ್ವನ. ಮಹಿಳೆ ಅವಮಾನಕ್ಕೀಡಾದಾಗ ಅವಳು ಎದೆಗುಂದದಂತೆ ಸುತ್ತಲಿನವರು ಅವಳನ್ನು ಸಾಂತ್ವನಗೊಳಿಸುವ ಮೂಲಕ ಅವಳಲ್ಲಿ ಆತ್ಮವಿಶ್ವಾಸ ತುಂಬುವ ಅಗತ್ಯವಿದೆ. ಅವಳ ತಪ್ಪಾಗಲಿ, ಪಾಲುದಾರಿಕೆಯಾಗಲಿ ಇಲ್ಲದೆ ಅವಳು ಸಂತ್ರಸ್ತಳು ಎನ್ನುವುದನ್ನು ಗಮನಿಸಿ ಅವಳಿಗೆ ನೈತಿಕ ಬೆಂಬಲ ನೀಡುವುದು ಮಾನವೀಯ ನಡವಳಿಕೆ. ಮಹಿಳೆ ಘನತೆಯಿಂದ ಬದುಕಲು ಅವಕಾಶ ನೀಡಬೇಕು ಎನ್ನುವ ಸಂವಿಧಾನಾತ್ಮಕ ಹಕ್ಕಿನ ಉಲ್ಲಂಘನೆಯಾದಾಗ ಅಲ್ಲಿ ಮಾನವ ಹಕ್ಕಿನ ಉಲ್ಲಂಘನೆಯಾಗಿದೆ ಎನ್ನುವುದಾಗಿ ಸಮಾಜ-ಸಂಘಟನೆಗಳು ಪರಿಗಣಿಸಬೇಕು. ಅನೇಕ ಸಂದರ್ಭಗಳಲ್ಲಿ ಮಹಿಳೆಯೂ ಮಾನವಳು, ಅವಳ ಮೇಲಿನ ದೌರ್ಜನ್ಯ ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ ಎನ್ನುವತ್ತ ಗಮನ ಹರಿಯುವುದೇ ಇಲ್ಲ.
ಹೆದರುವವರನ್ನು ಹೆದರಿಸುವುದು ಒಂದು ಸಹಜ ಪ್ರವೃತ್ತಿಯೇ ಆಗಿದೆ. ಮಹಿಳೆಯ ವಿಷಯದಲ್ಲಂತೂ ಈ ಮಾತು ನೂರಕ್ಕೆ ನೂರರಷ್ಟು ನಿಜ. ಮಹಿಳೆಯನ್ನು ಅವಮಾನಗೊಳಿಸುವ ಪಿತೃಪ್ರಧಾನ ಸಮಾಜದ ಹುನ್ನಾರವನ್ನು ಮಹಿಳೆಯರು ಒಗ್ಗಟ್ಟಿನಿಂದ ಎದುರಿಸುತ್ತ ಹೋದಲ್ಲಿ ಇದಕ್ಕೆ ಕೊನೆಯಾಗಬಹುದು. ಮಹಿಳೆಯ ಮೇಲಿನ ಸೈನಿಕರ ದೌರ್ಜನ್ಯದ ವಿರುದ್ಧ ಹಿಂದೆ ಮಣಿಪುರದಲ್ಲಿ ನೂರಾರು ಮಹಿಳೆಯರು ಪ್ರತಿಭಟಿಸಿದ ಉದಾಹರಣೆ ಇದೆ. ಒಬ್ಬ ಮಹಿಳೆಗೆ ಮಾಡಿದ ಅವಮಾನ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನವೆಂದೇ ಪರಿಭಾವಿಸಿ ಹೀಗೆ ಪ್ರತಿಭಟಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮಹಿಳೆಯರು ಇಂಥ ದೌರ್ಜನ್ಯಗಳನ್ನು ಸವಾಲಾಗಿ ಸ್ವೀಕರಿಸಿ, ಅದಕ್ಕೆ `ಸೊಪ್ಪು’ ಹಾಕದೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ದಿಸೆಯಲ್ಲಿ ಕ್ರಿಯಾಶೀಲತೆ ತೋರಿಸುತ್ತ ಹೋದಲ್ಲಿ ಇದಕ್ಕೆ ಪರಿಹಾರ ತಾನಾಗಿ ದೊರಕುತ್ತದೆ.
ಒಮ್ಮೆ ವಿವೇಕಾನಂದರಿಗೆ ಕೋತಿಯೊಂದು ಎದುರಾಗುತ್ತದೆ. ಅದನ್ನು ಕಂಡು ಹೆದರಿದ ಅವರು ಓಡಲು ಶುರುಮಾಡುತ್ತಾರೆ. ಆ ಕೋತಿ ಅವರನ್ನು ಬೆನ್ನಟ್ಟಿ ಓಡಿಸಿಕೊಂಡು ಹೋಗುತ್ತದೆ. ಅವರು ಹೆದರಿ ಓಡಿದಷ್ಟೂ ಅದು ಅವರನ್ನು ಅಟ್ಟಿಸಿಕೊಂಡು ಬರುತ್ತದೆ. ಒಂದಿಷ್ಟು ದೂರ ಓಡಿದ ಮೇಲೆ ಅವರು ತಿರುಗಿ ನಿಂತು ಒಂದು ಕಲ್ಲನ್ನು ಕೈಗೆ ತೆಗೆದುಕೊಳ್ಳುತ್ತಾರೆ. ಇದರಿಂದ ಹೆದರಿದ ಕೋತಿ ಓಡಿಹೋಗುತ್ತದೆ.
******************************
ಶಿಕ್ಷಣಕ್ಕಿರುವ ಅವಕಾಶ ಉದ್ಯೋಗಪರತೆಗೆ ಯಾಕಿಲ್ಲ?
ಮೇಲುನೋಟಕ್ಕೆ ಕಾಣುವುದೆಲ್ಲ ಸತ್ಯವಲ್ಲ. ಕೆಲವು ಸಂಗತಿಗಳು ನಮ್ಮಲ್ಲಿ ಅಂಥ ಭ್ರಮೆಯನ್ನು ಹುಟ್ಟಿಸಿರುತ್ತವೆ ಅಷ್ಟೆ. ಮಹಿಳೆಯ ಉದ್ಯೋಗಪರತೆಯ ವಿಷಯವೂ ಹಾಗೆಯೇ.
ಸಂಧ್ಯಾ ತಾನು ವೈದ್ಯಳಾಗಬೇಕೆಂದು ಬಯಸಿ ಬಿಡಿಎಸ್ ಮುಗಿಸಿದಳು. ಆಕೆಗೆ ಎಂ.ಡಿಗೂ ಸೀಟು ಸಿಕ್ಕಿತು. ಆರು ತಿಂಗಳಲ್ಲಿ ಅವಳ ಇಷ್ಟದಂತೆ ಇಂಜಿನಿಯರ್ ವರನ ಜೊತೆ ಮದುವೆಯಾಯಿತು. ಆಫ್ರಿಕನ್ ದೇಶವೊಂದರಲ್ಲಿ ಕೆಲಸಮಾಡುತ್ತಿರುವ ಅವಳ ಗಂಡ ಭಾರತಕ್ಕೆ ಬರಲು ನಿರಾಕರಿಸಿದ್ದರಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿ ಗಂಡನನ್ನು ಹಿಂಬಾಲಿಸಿದಳು. ಹತ್ತು ವರ್ಷಗಳಿಂದ ಅಲ್ಲಿ ಅವಳಿಗೆ ಪ್ರಾಕ್ಟೀಸ್ ಮಾಡಲು ಅವಕಾಶವೇ ಆಗದೆ ಅಮ್ಮನಾಗಿ ಎರಡು ಮಕ್ಕಳನ್ನು ಹೆತ್ತು ಬೆಳೆಸುವಷ್ಟಕ್ಕೇ ತೃಪ್ತಿಪಡಬೇಕಾಯಿತು.
ರೂಪಳದು ಇನ್ನೊಂದು ಬಗೆ. ಗಂಡನಂತೆ ಆಕೆಯೂ ಸಾಫ್ಟವೇರ್ ಇಂಜಿನಿಯರ್. ಗಂಡನನ್ನು ಆತ ಕೆಲಸ ಮಾಡುವ ಕಂಪನಿ ಕೆಲವು ವರ್ಷಗಳಿಗಾಗಿ ಅಮೆರಿಕಕ್ಕೆ ಕಳಿಸಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅವಳು ನಾಲ್ಕಾರು ಜನರ ನಡುವೆ ಬೆಳೆದ ಮಗುವನ್ನು ಈಗ ಬೇಬಿ ಸಿಟ್ಟಿಂಗಿನಲ್ಲಿ ಬಿಟ್ಟು ಕೆಲಸಕ್ಕೆ ಹೋಗುವುದು ಮಗುವಿನ ದೃಷ್ಟಿಯಿಂದ ಸರಿಯಲ್ಲ ಎಂದು ಮನೆಯಲ್ಲೇ ಇದ್ದಾಳೆ.
ಇಬ್ಬರ ಗಂಡಂದಿರೂ ಮದುವೆಗೆ ಮೊದಲು ಇಂಥ ಪದವಿ ಪಡೆದ ಹುಡುಗಿಯೇ ಬೇಕು ಎಂದು ಅಂಥವರನ್ನೇ ಆರಿಸಿ ಮದುವೆಯಾದವರು. ಆದರೆ ಆನಂತರ ಹೆಂಡತಿಯ ಉದ್ಯೋಗಪರತೆ ತಮ್ಮಷ್ಟೇ ಮುಖ್ಯವೆಂದು ಅವರಿಗೆ ಅನಿಸಿದಂತೆ ಕಾಣುವುದಿಲ್ಲ. ಹಾಗಾದರೆ ಹೆಂಡತಿಯ ಶಿಕ್ಷಣ ಗಂಡನ ಪ್ರತಿಷ್ಠೆಯ ಸಂಕೇತವೇ? ಅವಕಾಶ ಇದ್ದರೆ ಉದ್ಯೋಗ ಮಾಡಲಿ, ಇಲ್ಲದಿದ್ದರೆ ಮನೆಯಲ್ಲಿರಲಿ ಎನ್ನುವುದು ಹೆಚ್ಚಿನವರ ಧೋರಣೆ. ಹಾಗಾಗಿ, ವಿವಾಹಾನಂತರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಮಹಿಳೆಗೆ ಅನಿವಾರ್ಯ. ಇತ್ತೀಚಿನ ವರ್ಷಗಳಲ್ಲಿ ಹೀಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ವೃದ್ಧಿಸುತ್ತಿದೆ. ಹೀಗಿದ್ದೂ, ತನ್ನ ರೀತಿಯಲ್ಲಿಯೇ ಮದುವೆಯಾಗುವ ಹುಡುಗಿಯ ಶಿಕ್ಷಣವೂ ಇರಬೇಕು ಎನ್ನುವವರು ದಿನೆದಿನೇ ಹೆಚ್ಚಾಗುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಮದುವೆಯಾದ ಮೇಲೆ ಮಹಿಳೆಗೆ ಕೆಲಸ ಬಿಡುವ ಅನಿವಾರ್ಯತೆ ಎದುರಾಗುತ್ತಿದೆ. ಈ ವಿಷಯದಲ್ಲಿ ಆಕೆ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾದ ಸನ್ನಿವೇಶ ಈಗಿನದು. ಹೊಂದಾಣಿಕೆ ಇಲ್ಲದಿದ್ದರೆ ಬದುಕು ಬದುಕಾಗಿ ಉಳಿಯುವುದೇ ಇಲ್ಲ. ಒಂದಲ್ಲದೊಂದು ರೀತಿಯಲ್ಲಿ ಹೊಂದಾಣಿಕೆ ಅಗತ್ಯ/ಆವಶ್ಯಕ. ಆದರೆ ಯಾರು? ಯಾರೊಂದಿಗೆ? ಎಷ್ಟು? ಯಾಕಾಗಿ? ಎನ್ನುವುದು ಇಲ್ಲಿ ಮುಖ್ಯ.
ವಿವಾಹಯೋಗ್ಯ ವರನನ್ನು ಮಾತಾಡಿಸಿದರೆ ಹುಡುಗಿಯ ಓದು ಮತ್ತು ಉದ್ಯೋಗ ಕುರಿತು ಬಹಳ ಇತ್ಯಾತ್ಮಕವಾಗಿ ಮಾತನಾಡುತ್ತಾರೆ. ಅದರಲ್ಲೂ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರಂತೂ ಇಂಜಿನಿಯರಿಂಗ್ ಓದಿರುವ ಹುಡುಗಿಯೇ ಬೇಕು ಎಂದು ಅಂಥ ಹುಡುಗಿಯನ್ನೇ ಆಯ್ಕೆ ಮಾಡುತ್ತಾರೆ. ಕೆಲವೊಮ್ಮೆ ವೈದ್ಯಕೀಯ ಶಿಕ್ಷಣ ಪಡೆದರೂ ಪರವಾಯಿಲ್ಲ ಎನ್ನುವವರೂ ಇದ್ದಾರೆ. ಹುಡುಗಿಗೆ ಮತ್ತು ಹುಡುಗಿಯ ಮನೆಯವರಿಗೂ ಹುಡುಗಿ ಇಂಜಿನಿಯರ್/ವ್ಯೆದ್ಯೆ ಅಂದ ಮೇಲೆ ಹುಡುಗ ಇಂಜಿನಿಯರ್/ವ್ಯೆದ್ಯ ಆಗಿರಲಿ ಎನ್ನುವ ಆಸೆ. ಅದು ತಪ್ಪಲ್ಲ. ಆದರೆ ಮದುವೆ ಆದ ಮೇಲೆ ಎಷ್ಟು ಹುಡುಗಿಯರಿಗೆ ತಮ್ಮ ಉದ್ಯೋಗಪರತೆಗೆ ಆದ್ಯತೆ ನೀಡಲು ಅವಕಾಶವಿದೆ? ಎನ್ನುವುದು ಇಲ್ಲಿನ ಪ್ರಶ್ನೆ.
ವೈದ್ಯ, ವಕೀಲ ಮುಂತಾದ ಬೇರೆ ವೃತ್ತಿನಿರತರಿಗಿಂತ ಐಟಿ ಕ್ಷೇತ್ರದ ಉದ್ಯೋಗಿಗಳಿಗೆ ಬೇಡಿಕೆ, ಸಂಬಳ ಎರಡೂ ಹೆಚ್ಚಿರುವುದರಿಂದ ಕನ್ಯಾಪಿತೃಗಳಿಗೂ ಅವರ ಮೇಲೆ ಕಣ್ಣು. ಮಗಳ ಉದ್ಯೋಗಕ್ಕಿಂತ ಅಳಿಯನ ಗಳಿಕೆ ಎಷ್ಟು ಎನ್ನುವುದೇ ಇಲ್ಲಿ ಮುಖ್ಯ. ಇದರಿಂದ ಉದ್ಯೋಗಪರತೆಗೆ ಹೆಚ್ಚು ಪ್ರಾಧಾನ್ಯ ನೀಡಬೇಕು ಎಂದು ಬಯಸುವ ಹೆಣ್ಣುಮಕ್ಕಳೂ ಅದರಿಂತ ವಂಚಿತವಾಗುವ ಸನ್ನಿವೇಶ ನಿರ್ಮಾಣವಾಗಿದೆ. ಮದುವೆಯಾಗುವ ಹುಡುಗ ಹುಡುಗಿ ಬೇರೆ ಬೇರೆ ಊರುಗಳಲ್ಲಿದ್ದರೆ ಕೆಲಸ ಬಿಡಬೇಕಾದವಳು ಹುಡುಗಿಯೇ. ಒಮ್ಮೆ ಆಕೆ ಆತನಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದರೂ ಅವಳು ಹುಡುಗ ಇರುವ ಊರಿನಲ್ಲಿ ಬೇರೆ ಕೆಲಸ ಹುಡುಕಿಕೊಂಡರೆ ಆಯಿತು ಎನ್ನುವ ಸಲಹೆ ಎಲ್ಲ ಕಡೆಯಿಂದ ಸಿಗುತ್ತದೆ. ರಾತ್ರಿಪಾಳಿಯಲ್ಲಿ ಕೆಲಸ ಮಾಡುವುದು ಮದುವೆಗೆ ಮೊದಲು ಸರಿ. ಮದುವೆಯಾದ ಮೇಲೆ ಯಾಕೆ? ಎನ್ನುವುದು ಅನೇಕರ ಧೋರಣೆ. ಹಾಗಾಗಿ, ಕೆಲಸ ಕಳೆದುಕೊಳ್ಳುವ ಮಹಿಳೆಯರ ಸಂಖ್ಯೆ ಸಾಕಷ್ಟಿದೆ. ಗಂಡ ಉದ್ಯೋಗ ಬದಲಿಸಿದರೆ ಅವನ ಹಿಂದೆ ಅವಳು ಹೋಗದೆ ಇದ್ದಲ್ಲೇ ಉಳಿಯುವಂತಿಲ್ಲ. ಇನ್ನು ಮನೆಗೆ ಮಗು ಬಂತೆಂದರೆ ಕೆಲಸ ಬಿಡಬೇಕಾದವಳು ಅವಳೇ. ಮಗುವನ್ನು ಬೆಳೆಸುವ ಹೊಣೆಗಾರಿಕೆ ತಾಯಿಯದೇ ತಾನೆ? ಇಬ್ಬರದೂ ಎಂದು ಯೋಚಿಸುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.
ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವವರನ್ನು ಕಂಪನಿಗಳು ಹೊರದೇಶಗಳಿಗೆ ಕಳುಹಿಸುವ ಸಂದರ್ಭದಲ್ಲಿ ಪುರುಷರು ಅದನ್ನು ಒಪ್ಪಿಕೊಳ್ಳುವುದು ಸಹಜ. ಮಹಿಳೆಯ ವಿಷಯದಲ್ಲಿ ಇದು ಅಸಹಜ. ಹೀಗಾದಾಗ ಅವಳು ಕೆಲಸ ಬಿಡುವುದೋ ಅಥವಾ ಕಂಪನಿ ಬದಲಿಸುವುದೋ ಅನಿವಾರ್ಯ. ಅಲ್ಲದೆ, ಗಂಡನಿಗಿಂತ ಹೆಂಡತಿ 3-4 ವರ್ಷಗಳಾದರೂ ಚಿಕ್ಕವಳಿರುವುದರಿಂದ ಆತ ಉದ್ಯೋಗದಲ್ಲಿ ಮೇಲಿನ ಹಂತ ತಲುಪಿರುತ್ತಾನೆ. ಆರ್ಥಿಕವಾಗಿ ಅವಳಿಗಿಂತ ಮೇಲಿರುತ್ತಾನೆ. ಒಮ್ಮೆ ಅವಳೇ ಹೆಚ್ಚಿನ ಸಂಬಳ ಪಡೆಯುತ್ತಿದ್ದರೂ ಉದ್ಯೋಗದಲ್ಲಿ ಆದ್ಯತೆ ಇರುವುದು ಪುರುಷನಿಗೇ. ಅವಳದು ಪೂರಕ. ಗಂಡ ಹೊರ ಊರಿಗೆ ಅಥವಾ ಹೊರದೇಶಕ್ಕೆ ಹೊರಟಾಗ ಇರುವ ಕೆಲಸ ಬಿಟ್ಟು ಗಂಟುಮೂಟೆ ಕಟ್ಟಿಕೊಂಡು ಗಂಡನನ್ನು ಹಿಂಬಾಲಿಸುವುದು ಹೆಂಡತಿಯ ಕರ್ತವ್ಯ. ಅಲ್ಲಿ ಕೆಲಸಮಾಡಲು ಅವಳಿಗೆ ಅವಕಾಶ ದೊರೆಯುತ್ತದೆ ಎನ್ನುವಂತಿಲ್ಲ. ಸಿಗದಿದ್ದರೆ ಏನಂತೆ? ಒಂದೋ ಎರಡೋ ಮಗುವನ್ನು ಹೆತ್ತು ಬೆಳೆಸಲು ಅನಾಯಾಸವಾಗಿ ಸಮಯ ಸಿಗುತ್ತದೆ. ಸಾಕಲ್ಲವೇ? ಮಗಳ ಬಾಳಂತನ ಮಾಡಲು ಹೇಗೂ ಅಮ್ಮಂದಿರು ಸಿದ್ಧವಾಗಿರುತ್ತಾರೆ. ಅವರಿಗೂ ಈ ನೆವದಲ್ಲಿ ಹೊರದೇಶ ನೋಡಿದಂತಾಗುತ್ತದೆ.
ಕುಟುಂಬ ನಿರ್ವಹಣೆಗೆ ಹಣ ಸಾಲದು ಎನ್ನುವ ಸಂದರ್ಭದಲ್ಲಿ ಮಹಿಳೆಯ ಹೊರಗಿನ ದುಡಿಮೆ ಕುಟುಂಬಕ್ಕೆ ಅಷ್ಟೊಂದು ಅಡ್ಡಿ ಎನಿಸುವುದಿಲ್ಲ. ಆರ್ಥಿಕ ಮುಗ್ಗಟ್ಟು ಇಲ್ಲವೆಂದಾದರೆ ಅವಳು ಮನೆಯನ್ನು ನೋಡಿಕೊಂಡರೆ ಸಾಕು ಎನಿಸುತ್ತದೆ. ಅಂದರೆ ಕುಟುಂಬಕ್ಕೆ ಅಗತ್ಯವಿದ್ದರೆ ಅವಳು ಉದ್ಯೋಗದಲ್ಲಿದ್ದರೆ ಪರವಾಯಿಲ್ಲ. ಉದ್ಯೋಗಪರತೆ ತನಗೂ ಅಗತ್ಯ ಎಂದು ಅವಳು ಅದಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡುವುದನ್ನು ಕುಟುಂಬ, ಸಮಾಜಗಳು ಒಪ್ಪುವುದಿಲ್ಲ. ಆದರೆ ಬೇರೆ ವಿಷಯಗಳಲ್ಲಿ ಸಮಾಜದ ನಿರೀಕ್ಷೆ, ನಿರ್ದೇಶನಗಳನ್ನು ಮೀರುವ ಎಷ್ಟೋ ಪುರುಷರು ಈ ವಿಷಯದಲ್ಲಿ ಸಮಾಜದ ಪರವೇ. ತಾವು ಸಂಪ್ರದಾಯವಾದಿಗಳಲ್ಲ ಎನ್ನುವವರೂ ಈ ಬಗ್ಗೆ ಯೋಚಿಸುವುದಿಲ್ಲ.
ನಮ್ಮ ದೇಶದ ಐಟಿ ಕ್ಷೇತ್ರದ ಉದ್ಯೋಗಿಗಳಲ್ಲಿ ಸುಮಾರು ಶೇ. 30ರಷ್ಟು ಮಹಿಳೆಯರು. ಉನ್ನತ ಹುದ್ದೆಯಲ್ಲಿರುವ ಮಹಿಳೆಯರು ಅತ್ಯಲ್ಪ. ಇತ್ತೀಚಿನ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಶಿಕ್ಷಣ ಪಡೆದಿರುವ ಮಹಿಳೆಯರು ಮತ್ತು ಉದ್ಯೋಗಸ್ಥ ಮಹಿಳೆಯರ ಅನುಪಾತದಲ್ಲಿ ದೊಡ್ಡ ಕಂದಕವಿದೆ. ಉದ್ಯೋಗಕ್ಕೆ ಸೇರಿದ್ದರೂ ನಾನಾ ಕಾರಣಗಳಿಂದ ಕೆಲಸ ಬಿಡುವವರು ಸಾಕಷ್ಟಿದ್ದಾರೆ. ಇಂಥ ಶಿಕ್ಷಣಕ್ಕಾಗಿ ಹೆತ್ತವರು ಮತ್ತು ಸರಕಾರ ಹಣವನ್ನು ವ್ಯಯಿಸಿರುತ್ತದೆ. ಆದರೆ ಇದು ಪ್ರಯೋಜನವಾಗುತ್ತಿಲ್ಲ. ಇದೇ ರೀತಿ ಮುಂದುವರಿದರೆ ಹೆಣ್ಣುಮಕ್ಕಳ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣಕ್ಕಾಗಿ ಹಣ ಖರ್ಚುಮಾಡುವುದು ದಂಡ ಎನಿಸುವ ದಿನವೂ ಬರಬಹುದು. ಹಾಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪಿತೃಪ್ರಧಾನ ಸಮಾಜ ಸಮುದಾಯಗಳದ್ದು.