‘Thanks Giving’ ಅಂದ್ರೆ ಇಲ್ಲಿ ರಜಾ ಮಾತ್ರ ಅಲ್ಲ, ನಾನಾ ರೀತಿಯ ರಿಯಾಯ್ತಿ ಮಾರಾಟಗಳ ಹಬ್ಬ. `ಸೊಕ್ಕಿದ್ದವನಿಗೆ ಯಾಣ, ರೊಕ್ಕಿದ್ದವನಿಗೆ ಗೋಕರ್ಣ’ ಎಂಬಂತೆ ಇಲ್ಲಿಗೆ ಪೂರಕವಾಗಿ ‘ಸಾಲಲ್ಲಿ ನಿಂತವನಿಗೇ ಸೇಲು’ ಎಂದೂ ಸೇರಿಸಬಹುದು! Thanks Giving ಮರುದಿನದ ಶುಕ್ರವಾರ ಇರುವುದು ಈ ಮಾರಾಟಗಳ ಭರಾಟೆ. ಗೂಗಲ್ ನಲ್ಲಿ ಒಮ್ಮೆ ಬ್ಲ್ಯಾಕ್ ಫ್ರೈಡೆ ಸೇಲ್ ಎಂದು ಕುಟ್ಟಿದರೆ ಪುಡಿ ಅಂಗಡಿಗಳಿಂದ ಹಿಡಿದು ಮಹಾ ಮಾಲ್ ಗಳವರೆಗೆ ಯಾರಾರು ಏನೇನು ಸರಕುಗಳನ್ನು ಎಷ್ಟೆಷ್ಟು ಬೆಲೆಗೆ ಬಿಕರಿ ಮಾಡುತ್ತಿದ್ದಾರೆ ಎಂದು ಹನುಮಂತನ ಬಾಲದಂತಹ ಪಟ್ಟಿ ದೊರೆಯುತ್ತದೆ.
ಒಡವೆ, ವಸ್ತ್ರಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು, ವಾಚು, ಬೂಟು, ಪೀಠೋಪಕರಣಗಳ ಮೇಲೆ (ಅಪ್ಪ, ಅಮ್ಮ ಬಿಟ್ಟು ಉಳಿದೆಲ್ಲವೂ ಎಂದರೂ ತಪ್ಪಿಲ್ಲ) ಶೇ. 50 ಅಥವಾ ಇನ್ನೂ ಹೆಚ್ಚು ರಿಯಾಯ್ತಿ ನೀಡಲಾಗುತ್ತದೆ. ಇವೆಲ್ಲಾ ತೋರಿಕೆಯ ರಿಯಾಯ್ತಿಯಲ್ಲ, ಮಾರುಕಟ್ಟೆಯ ಬೆಲೆಯ ಮೇಲೆಯೇ ನೀಡಲಾಗುವ ರಿಯಾಯ್ತಿ. ಸಮಸ್ಯೆ ಏನಪ್ಪಾ ಅಂದ್ರೆ, ಇಂಥ ವಸ್ತುಗಳ ಸಂಖ್ಯೆ ತೀರಾ ಕಡಿಮೆ. ಮೊದಲ 50, 60 ಗ್ರಾಹಕರಿಗಷ್ಟೇ ಇವು ದೊರೆಯುತ್ತವೆ. ಹಾಗಾಗಿ ಅಂಗಡಿ ತೆರೆಯುವ ಮೊದಲೇ ಜನ ಸಾಲುಗಟ್ಟುತ್ತಾರೆ.
ಥ್ಯಾಂಕ್ಸ್ ಗಿವಿಂಗ್ ಮಾರಾಟದ ಬಗ್ಗೆ, ಈ ಸೇಲ್ನಲ್ಲಿ ವಸ್ತುಗಳನ್ನು ಪಡೆಯಲು ಪಡಬೇಕಾದ ಸಾಹಸಗಳ ಬಗ್ಗೆ ಕೇಳಿಯಷ್ಟೇ ತಿಳಿದಿದ್ದ ನಮಗೆ ಈ ಬಾರಿ ನೋಡಿಯೇಬಿಡಬೇಕೆಂಬ ಉಮೇದಿ ಬಂತು. ದೊಡ್ಡ ಎಲೆಕ್ಟ್ರಾನಿಕ್ಸ್ ಮಾಲ್ ಮುಂದೆ ಗುರುವಾರ ರಾತ್ರಿಯೇ ಸಾಲು ಹಚ್ಚಿದ್ದಾಯಿತು. ಶುಕ್ರವಾರ ಮುಂಜಾನೆ ಆರಂಭವಾಗುವ ಮಾರಾಟಕ್ಕೆ ಗುರುವಾರ ರಾತ್ರಿಯೇ ಸಾಲು ಹಚ್ಚಬೇಕಾ ಎಂದು ಗೊಣಗಿಕೊಂಡೇ ಬಂದರೆ ನಮಗಿಂತ ಮುಂಚೆ ಸುಮಾರು 70 ಜನರಾದರೂ ಇದ್ದರು!
ಅವರ ಪೈಕಿ ಮೊದಲ 20 ಜನರಂತೂ ಎರಡು ದಿನಗಳಿಂದ ಅಲ್ಲೇ ಬೀಡು ಬಿಟ್ಟಿದ್ದರಂತೆ! ಸಣ್ಣದೊಂದು ಟೆಂಟ್ ತಂದು ನೆಟ್ಟು, ಬೇಕಾಗುವ ಹಾಸಿಗೆ-ವಸ್ತ್ರಗಳನ್ನೂ ತಂದು, ಅಲ್ಲೇ ಒಲೆಯನ್ನೂ ಇಟ್ಟುಕೊಂಡು ಅಡಿಗೆ ಮಾಡಿ ತಿಂದುಂಡು ಶಿಸ್ತಾಗಿ ಕಾಲ ಕಳೆಯುತ್ತಿದ್ದರು! ಇವರಿಗೇನು ಮನೆ-ಮಠ ಇಲ್ಲವೇ ಎಂದು ಸಂಶಯ ಬಂದು ಒಬ್ಬ ಭೂಪನನ್ನು ಮಾತನಾಡಿಸಿದ್ದಾಯಿತು. `$300 ಗೆ ಒಳ್ಳೆಯ ಲ್ಯಾಪ್ ಟಾಪ್ ಕೊಡುತ್ತಿದ್ದಾರೆ. ಅದನ್ನಿಲ್ಲಿ ಖರೀದಿಸಿ $600 ಗೆ ಮತ್ತೆಲ್ಲಾದರೂ ಮಾರಾಟ ಮಾಡುತ್ತೇನೆ. ಅಷ್ಟೊಂದು ಲಾಭ ಬರುವಾಗ ಎರಡು ದಿನ ಇಲ್ಲಿ ಕ್ಯಾಂಪಿಂಗ್ ಮಾಡಲೇನು ಕಷ್ಟ?’ ಎಂಬ ಆತನ ಪ್ರಶ್ನೆಗೆ ನನ್ನಲ್ಲಿ ಉತ್ತರ ಇರಲಿಲ್ಲ.
ಅಂತೂ ಬೇಕಾಗಿದ್ಯಾವುದೂ ಸಿಗದೆ, ಅರ್ಧ ಬೆಲೆಗೆ ಬಿಕರಿಯಾದ ಬೇರೆ ವಸ್ತುಗಳನ್ನು ತಂದಿದ್ದೇನೆ. ಈಗ ಅವೆಲ್ಲಾ ಅನಗತ್ಯ ಎನಿಸುತ್ತಿವೆ!
*** *** ***
‘ಯಕ್ಷರಂಗ’ ಬೇ ಏರಿಯಾದಲ್ಲಿ ನಿಜಕ್ಕೂ ಬೇರು ಬಿಡುತ್ತಿದೆ!
ಹೀಗೊಂದು ಹೆದರಿಕೆಯಲ್ಲ, ಸಂತಸ! ಈ ಬಾರಿಯ ದೀಪಾವಳಿ ಯಕ್ಷರಂಗದ ಸದಸ್ಯರ ಮಟ್ಟಿಗೆ ಅವಿಸ್ಮರಣೀಯವೇ ಎಂದರೂ ತಪ್ಪಿಲ್ಲ. ಈಗಾಗಲೇ ‘ಕಂಸವಧೆ’ ಯಕ್ಷಗಾನ ಪ್ರಸಂಗದ ಎರಡು ಯಶಸ್ವಿ ಪ್ರದರ್ಶನಗಳನ್ನು ನೀಡಿರುವ ಈ ತಂಡ ದೀಪಾವಳಿಯಂದು ಮೂರನೇ ಪ್ರದರ್ಶನ ನೀಡಿ ಪ್ರೇಕ್ಷಕ ಪ್ರಭುಗಳಿಂದ ಬೆನ್ನು ತಟ್ಟಿಸಿಕೊಂಡಿದೆ.
ಎರಡು ಪ್ರದರ್ಶನ ನೀಡಿದ ಮೇಲೆ ಮೂರನೆಯದಿನ್ನೇನು ಮಹಾ ಎಂದು ಭಾವಿಸಿದ್ದರೆ ಸ್ವಲ್ಪ ತಾಳಿ… ಈ ಪ್ರದರ್ಶನಕ್ಕೆ ಹಿಮ್ಮೇಳವೇ ಇರಲಿಲ್ಲ! ಯಕ್ಷಗಾನ ಪ್ರಿಯರ ಒತ್ತಾಸೆಯ ಮೇರೆಗೆ ಉಡುಪಿಯಿಂದ ಕ್ಯಾಲಿಫೋರ್ನಿಯಾಗೆ ಬಂದು ಯಕ್ಷಗಾನದ ಪ್ರಾಥಮಿಕ ಪಾಠ ಹೇಳಿಕೊಟ್ಟಿದ್ದ ಕೆ.ಜೆ. ಗಣೇಶ್ ಈಗ ತಮ್ಮೂರಿಗೆ ಮರಳಿದ್ದಾರೆ. ಆದರೆ ಈ ಪ್ರದೇಶದ ಕನ್ನಡಿಗರ ಯಕ್ಷಗಾನ ಪ್ರೀತಿಯನ್ನು ಅರಿತಿರುವ ಅವರು, ತಮ್ಮ ಅನುಪಸ್ಥಿತಿಯಲ್ಲೂ ಸಮರ್ಥವಾಗಿ ಪ್ರದರ್ಶನ ನೀಡಲು ಯಕ್ಷರಂಗಕ್ಕೆ ಸಾಧ್ಯವಾಗುವಂತೆ ಸಹಕಾರ ನೀಡಿದ್ದಾರೆ.
ಅಂದರೆ, ಈ ಬಾರಿಯ ಪ್ರದರ್ಶನದಲ್ಲಿ ಹಿಮ್ಮೇಳಕ್ಕೆ ಕುಳಿತಿದ್ದು ಉಡುಪಿಯಿಂದ ಬಂದ ಡಿವಿಡಿ ಮತ್ತು ಯಕ್ಷರಂಗದ ಡಿಸ್ಕ್ ಜ್ಯಾಕಿ! ಪ್ರತಿಯೊಂದು ಪ್ರವೇಶ/ನಿರ್ಗಮನಕ್ಕೂ ಸೂಕ್ತವಾಗಿ ಹೊಂದುವಂತಿದ್ದ ಚಂಡೆ, ತಾವೇ ಆಸ್ಥೆಯಿಂದ ಕಲಿಸಿದ್ದ ಕಲೆ ತಮ್ಮ ಶಿಷ್ಯರಲ್ಲಿ ಅರಳಲು ಸೂಕ್ತವಾದಂತಹ ಪದ್ಯಗಳು, ಅದೇ ಹಿಂದಿನ ಸ್ಪಷ್ಟ, ಮಧುರ ಭಾಗವತಿಕೆ… ಇವಿಷ್ಟು ಗುರು ಕೆ.ಜೆ. ಗಣೇಶ್ ಕಳುಹಿಸಿದ ಡಿವಿಡಿಯ ವೈಶಿಷ್ಟ್ಯಗಳು. `ಭಾಗವತರಿಲ್ಲದೆ ನಡೆದ ಆಟ ಎಂದು ಅನ್ನಿಸಲೇ ಇಲ್ಲ. ಹೊಂದಾಣಿಕೆ ಚೆನ್ನಾಗಿತ್ತು’ ಎಂಬ ಪ್ರೇಕ್ಷಕರ ಮೆಚ್ಚುಗೆ ಯಕ್ಷರಂಗಕ್ಕೆ ಗರಿ ಮೂಡಿಸಿದೆ.
ಪ್ರತಿ ಬಾರಿಯಂತೆ ಈ ಸಲವೂ ಯಕ್ಷಗಾನಕ್ಕೆ ಒಂದಿಷ್ಟು ಹೊಸ ಪ್ರೇಕ್ಷಕರು ಹುಟ್ಟಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ‘Gen-Next’ ಈ ಕಲೆಯೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಮಕ್ಕಳ ಮೆಚ್ಚಿನ ’Beauty and the Beast’ ಕಥೆಗೆ ಯಕ್ಷಗಾನದ ರೂಪ ನೀಡಿ, ಇಲ್ಲೇ ಹುಟ್ಟಿ ಬೆಳೆದ ಕನ್ನಡ ಕಂದಮ್ಮಗಳಿಗೆ ಈ ಕಲೆಯನ್ನು ಇನ್ನಷ್ಟು ಹತ್ತಿರವಾಗಿಸುವ ಪ್ರಯತ್ನ ನಡೆಯುತ್ತಿದೆ.
ಯಕ್ಷರಂಗಕ್ಕೆ All the best.
****** ********* **********
ಚೆನ್ನಾಗಿತ್ತು ದೀಪಾವಳಿ!
ಹಾರಾಡುತ್ತಿದ್ದ ಬಣ್ಣಬಣ್ಣದ ಪುಗ್ಗಿಗಳು, ಮೂರು ಸಾಲಿನಲ್ಲಿ ಹರಡಿಕೊಂಡಿದ್ದ ಅಂಗಡಿ ಪೇಟೆ, ಮಕ್ಕಳಿಗಾಗಿ fun zone, ನಡುವೆ ಒಂದಿಷ್ಟು `ಪೇಟ್ ಪೂಜಾ‘ ಅಂಗಡಿಗಳು, ಬೆಳಗಿನಿಂದ ಸಂಜೆಯವರೆಗೆ ತಡೆಯಿಲ್ಲದ ಸಾಂಸ್ಕೃತಿಕ ಕಾರ್ಯಕ್ರಮಗಳು, ಈ ಎಲ್ಲದರಲ್ಲೂ ಭಾರತೀಯರಂತೆಯೇ ಸಕ್ರಿಯವಾಗಿದ್ದ ಸ್ಥಳೀಯರು…
ಸರ-ಬಳೆ ಸರಿದುಕೊಂಡ ಅಂಗಡಿಗಳು ದೂರದಿಂದಲೇ ಕಣ್ಣು ಕುಕ್ಕುತ್ತಿದ್ದರೆ ಡ್ರೆಸ್ ತೂಗುಹಾಕಿದ್ದ ಮಳಿಗೆಗಳು ಗಿಜಿಗುಡುತ್ತಿದ್ದವು. ಮಕ್ಕಳ ಮನತಣಿಸಲು ಒಂದಿಷ್ಟು ಮೋಜು-ಮಸ್ತಿ, ಪಾನಿ ಪುರಿ, ಸಮೋಸಾದಿಂದ ಹಿಡಿದು ದೋಸೆ, ಪೀಟ್ಜಾವರೆಗೆ ತಿಂಡಿಯಂಗಡಿಗಳು, ಸೀರೆಯುಟ್ಟು ಸಂಭ್ರಮಿಸುತ್ತಿರುವ ಅಮೆರಿಕನ್ ಮಹಿಳೆಯರು, ಗಾಗ್ರಾ ತೊಟ್ಟು ನಲಿಯುತ್ತಿರುವ ಅವರ ಮಕ್ಕಳು… ಕಣ್ಣಿಗಂತೂ ಹಬ್ಬ!
********** *********** ***********
ಸ್ವಲ್ಪ ಗಡಿಬಿಡಿಲ್ಲಿ ಇದ್ದೀನಿ ಕಣ್ರೀ… ನಾಳೆ ದೀಪಾವಳಿ ಇದೆಯಲ್ಲ!
ಈ ಪ್ರಾಣಿಗೇನಾಯ್ತು…? ನಾಳೆ ಯಾವೂರಲ್ಲಿ ದೀಪಾವಳಿ…? ನವರಾತ್ರಿ ಕಳೆಯದೆ ದೀಪಾವಳಿ ಇರೋದು ಅದ್ಯಾವ ಪಂಚಾಂಗದಲ್ಲಿ…? ಅಂತೆಲ್ಲಾ ಯೋಚನೆ ಮಾಡುವಷ್ಟು ಪುರುಸೊತ್ತು ನಿಮಗೂ ಇಲ್ಲಾಂತ ಗೊತ್ತು! ನಾನೇ ಹೇಳಿಬಿಡ್ತೀನಿ- ನಾಳೆ ದೀಪಾವಳಿ ಇರೋದು ನಮ್ಮೂರು ಕ್ಯುಪರ್ಟಿನೊದಲ್ಲಿ. ಇಲ್ಲಿನ ಛೇಂಬರ್ ಆಫ್ ಕಾಮರ್ಸ್ ಈ ದೀಪಾವಳಿ ಹಬ್ಬವನ್ನ ಆಯೋಜಿಸಿದೆ.
ಇವರ ಆಹ್ವಾನಪತ್ರಿಕೆ ಪ್ರಕಾರ, ಕಳೆದ ನಾಲ್ಕು ವರ್ಷಗಳಿಂದ ಇವರು ದೀಪಾವಳಿ ನಡೆಸುತ್ತಿದ್ದಾರಂತೆ. ಇಲ್ಲಿನ ಮೆಮೊರಿಯಲ್ ಪಾರ್ಕ್ನಲ್ಲಿ ನಡೆಯಲಿರುವ ದೀಪಾವಳಿಗೆ ಸುಮಾರು 15 ಸಾವಿರ ಜನ ಸೇರಲಿದ್ದಾರೆಂಬ ಅಂದಾಜು. ಭಾರತೀಯರಂತೂ ಸರಿ, ಜತೆಗೆ ಅಮೆರಿಕ, ಚೀನಾ, ದಕ್ಷಿಣ ಕೊರಿಯಾ ಮೂಲದ ಜನರೂ ಇದರಲ್ಲಿ ಪಾಲ್ಗೊಂಡ ಇತಿಹಾಸವಿದೆ.
ಭಾರತದ ಹಬ್ಬಗಳಷ್ಟೇ ಅಲ್ಲ, ಚೀನಾ, ದಕ್ಷಿಣ ಕೊರಿಯಾ ದೇಶಗಳ ಸ್ವಾತಂತ್ರ್ಯ ದಿನ, ಹೊಸವರ್ಷ (ನಮಗೆ ಯುಗಾದಿ ಇದ್ದಂತೆ)ಗಳನ್ನು ಆಚರಿಸಲಾಗುತ್ತದೆ. ಅಮೆರಿಕನ್ನರಿಗಿಂತ ವಲಸಿಗರೇ ಹೆಚ್ಚಿರುವ ಈ ಪ್ರದೇಶದಲ್ಲಿ ಸಾಂಸ್ಕೃತಿಕ ಹೊಂದಾಣಿಕೆ ಉಂಟಾಗಲು ಇವೆಲ್ಲಾ ಬೇಕಲ್ಲವೆ?
ಆಯಾ ಹಬ್ಬಗಳಲ್ಲಿ ಅಲ್ಲಿನ ಕಲೆ, ಸಂಸ್ಕೃತಿ, ಆಹಾರ ಎಲ್ಲವೂ ಹಾಜರಿರುತ್ತದೆ. ದೀಪಾವಳಿ ಆಚರಣೆಯಲ್ಲೂ ಇವೆಲ್ಲಾ ಇರಬಹುದೆಂಬ ನಿರೀಕ್ಷೆಯಲ್ಲಿ ನಾಳೆ ಹೋಗುತ್ತಿದ್ದೇನೆ. ಖಂಡಿತವಾಗಿ ಇಲ್ಲದಿರುವುದು ಪಟಾಕಿ! ಆದರೂ ಪರವಾಗಿಲ್ಲ… ದೀಪ ಹಚ್ಚೋಣ, ಬನ್ನಿ.
*** *** ***
`The coldest winter I ever saw was the summer I spent in San Francisco’ ಅಂತ ಮಾರಾಯ ಮಾರ್ಕ್ ಟ್ವೈನ್ ಅದ್ಯಾವ ಘಳಿಗೆಯಲ್ಲಿ ಹೇಳಿದನೊ… ತಣ್ಣಗೇ ಇರುವ ಸ್ಯಾನ್ ಫ್ರಾನ್ಸಿಸ್ಕೊ ‘ಫಾಲ್’ ಆರಂಭವಾಗುತ್ತಿದ್ದಂತೆ ಮತ್ತಷ್ಟು ತಣ್ಣಗಾಗಿದೆ. ಪೆಸಿಫಿಕ್ ಸಾಗರದಿಂದ ಬಡಿಯುವ ಚಳಿಗಾಳಿಗೆ ಕಿಂಚಿತ್ತಾದರೂ ದಣಿವಾಗಬಾರದಾ ಎಂದು ಕೆಲವೊಮ್ಮೆ ಯೋಚಿಸುವಂತಾಗುತ್ತದೆ.
ರಾಮನಗರದಲ್ಲಿ ಮೈಸೂರು-ಬೆಂಗಳೂರು ರಸ್ತೆಯ ಪಕ್ಕದಲ್ಲಿರುವ ಗುಡ್ಡಕ್ಕೆ ಯಾವುದೇ ತಿರುಗು-ಮುರುಗು ಇಲ್ಲದೆ ಧುತ್ತೆಂದು ನೇರವಾದ ರಸ್ತೆಯೊಂದನ್ನು ಮಾಡಿದ್ದರೆ…? ಸ್ಯಾನ್ ಫ್ರಾನ್ಸಿಸ್ಕೊದ ಹೆಚ್ಚಿನ ಭಾಗ ಇರುವುದು ಹಾಗೆಯೇ! ಎಂಥಾ ಎತ್ತರದ ಪ್ರದೇಶಕ್ಕೂ `ಅಂಕು-ಡೊಂಕು ದಾರಿ ಬ್ಯಾಡ…’ ಎಂಬಂತೆ ನೇರವಾಗಿ ಕೊರೆದ ಈ ರಸ್ತೆಗಳು ಕಾರಿನ ಬ್ರೇಕ್ ಇನ್ಸ್ ಪೆಕ್ಟರ್ ಗಳ ಕಾರ್ಯವನ್ನು ಚ್ಯುತಿ ಬಾರದಂತೆ ನಿರ್ವಹಿಸುತ್ತಿದೆ. ತೀರಾ ಇಳಿಜಾರಾದ ಒಂದು ರಸ್ತೆಯನ್ನು ತಿರುಗು-ಮುರುಗು ಮಾಡಿ ಅದಕ್ಕೆ `ಕ್ರೂಕ್ಡ್ ಸ್ಟ್ರೀಟ್‘ ಎಂದು ನಾಮಕರಣ ಮಾಡಿದ್ದಾರೆ.
ಅತಿಯಾದ ಏರು ತಗ್ಗಿನ ಇಕ್ಕಟ್ಟಾದ ರಸ್ತೆಗಳು, ತಳ್ಳಿಕೊಂಡೇ ಓಡಾಡುವಷ್ಟು ಜನಸಂದಣಿ, ಸಮೃದ್ಧವಾದ ಟ್ರಾಫಿಕ್ ಜಾಮ್, ಎಲ್ಲೆಡೆ ಓಡಾಡುವ ಒಂದಾನೊಂದು ಕಾಲದ ಕೇಬಲ್ ಕಾರುಗಳು, ಗಿಜಿಗುಡುವ ಪ್ರವಾಸಿಗರು, ಪಾರ್ಕಿಂಗ್ ದೊರೆಯದೆ ಪರದಾಡುವ ಜನ … ಆದರೂ ಅಲ್ಲಿಗೆ ಹೋಗದೆ ಇರಲಾರದ ಸೆಳೆತ!
ವರ್ಷವಿಡೀ ಬೇಸರವಿಲ್ಲದೆ ಬೀಸುವ ಚಳಿಗಾಳಿ, ಬೇಸಿಗೆಯ ಮಧ್ಯಾಹ್ನವೂ ಬಿಡದೆ ಕಾಡುವ ಮಂಜು, ಮೋಡದ ನಡುವೆ ಅಲ್ಲಲ್ಲಿ ಇಣುಕುವ ಗೋಲ್ಡನ್ ಗೇಟ್ ಸೇತುವೆ, ಪೆಸಿಫಿಕ್ ಸಾಗರದ ಅಬ್ಬರದ ಅಲೆಗಳು, ಕಾಲಿಡಲೇ ಆಗದಷ್ಟು ತಣ್ಣನೆಯ ನೀರು, ಕೈ ಬೀಸಿ ಕರೆಯುವ ಅಲ್ಕಟ್ರಾಸ್ ದ್ವೀಪ… ಹೇಳಿ, ಹೋಗದಿರುವುದಾದರೂ ಹೇಗೆ?
*** *** ***