ಬೇ ಏರಿಯಾ ಬೀಟ್…
*** *** ***
ಸೂಪರ್ ಬೌಲ್ ಎಂಬ ‘ವಿಶ್ವ’ಕಪ್!
‘ಸೂಪರ್ ಬೌಲ್ ನೋಡೋಣ ಬನ್ನಿ‘ ಎಂದು ನಮ್ಮ ಮಿತ್ರ ಮಂಡಳಿ ಕಳೆದ ವಾರ ಆಹ್ವಾನ ನೀಡಿದಾಗ ‘ಅದೇನದು?’ ಎಂಬ ಅಕ್ಷಮ್ಯ ಪ್ರಶ್ನೆಯನ್ನು ಕೇಳಿಬಿಟ್ಟೆ. ‘ಅದು ಅಮೆರಿಕದ ಫುಟ್ ಬಾಲ್. ಈ ಭಾನುವಾರ ವಿಶ್ವಕಪ್ ಫೈನಲ್ಸ್ ಇದೆ. ಅದ್ಭುತವಾಗಿರುತ್ತದೆ‘ ಎಂದೆಲ್ಲಾ ಮಾಹಿತಿ ಸಿಕ್ಕಿತು. ನೋಡೋಣ ಎಂದು ಭಾನುವಾರ ಗುಂಪುಗೂಡಿದ್ದಾಯಿತು.
ಕೆಲವರು ಉತ್ಸಾಹದಲ್ಲಿ ಬಾಜಿ ಕಟ್ಟುತ್ತಿದ್ದರು. ಆದರೆ ಆಟವೇ ಗೊತ್ತಿಲ್ಲದ ನಾನು ಯಾವ ತಂಡದ ಪರ ಬೆಟ್ ಕಟ್ಟಲಿ? ‘ಫೈನಲ್ಸ್ ಯಾವ ದೇಶಗಳ ನಡುವೆ‘ ಎಂದು ಕೇಳಿ, ಈ ಆಟದ ಬಗ್ಗೆ ನಾನು ಪರಮ ಅಜ್ಞಾನಿ ಎಂಬ ಸತ್ಯವನ್ನು ತೆರೆದಿಟ್ಟೆ. ‘ಇದರಲ್ಲಿ ಅಮೆರಿಕ ಬಿಟ್ಟು ಬೇರಾವ ದೇಶಗಳೂ ಆಡುವುದಿಲ್ಲ. ಇವತ್ತು ನ್ಯೂ ಇಂಗ್ಲೆಂಡ್ ಮತ್ತು ನ್ಯೂಯಾರ್ಕ್ ಜೈಂಟ್ಸ್ ನಡುವೆ ಫೈನಲ್ಸ್‘ ಎಂದು ಗೆಳತಿಯೊಬ್ಬಳು ಕರುಣೆಭರಿತ ನೋಟದೊಂದಿಗೆ ವಿವರಿಸಿದಳು. ‘ಬೇರೆ ದೇಶಗಳೇ ಇಲ್ವಾ? ಇದೆಂಥಾ ವಿಶ್ವಕಪ್ಪೇ? ಈ ತಂಡಗಳ ಹೆಸರೇ ಕೇಳಿಲ್ಲ!’ ಎಂಬ ನನ್ನ ಉದ್ಧಟತನಕ್ಕೆ ಆಕೆಯೊಂದು ದಿವ್ಯ ಕ್ಯಾಕರಿಕೆಯ ದೃಷ್ಟಿ ಬೀರಿದಳು.
15 ನಿಮಿಷಗಳ ನಾಲ್ಕು ಸೆಷನ್ ಗಳಿರುತ್ತವೆಂದೂ, ಪ್ರತಿಯೊಂದು ಸೆಷನ್ ಮುಗಿದ ನಂತರ ಒಂದು ಸಣ್ಣ ಬ್ರೇಕ್ ಬರುವುದೆಂದೂ, ಮೊದಲಿನೆರಡು ಸೆಷನ್ ಗಳ ನಂತರದ ದೊಡ್ಡ ಬ್ರೇಕ್ ನಲ್ಲಿ ಖ್ಯಾತ ನಾಮರ ಸಂಗೀತ ಕಾರ್ಯಕ್ರಮ ಇರುತ್ತದೆಂದೂ ಅವರಿವರ ತಲೆ ತಿಂದು ತಿಳಿದುಕೊಂಡೆ. ಆ ಲೆಕ್ಕದಲ್ಲಿ ಒಂದೂವರೆ ಗಂಟೆಗಳಲ್ಲೇ ಆಟ ಖತಂ ಎಂದು ಲೆಕ್ಕ ಹಾಕಿ, ಕುರ್ಚಿಯೊಂದರಲ್ಲಿ ಅಪ್ಪಳಿಸಿ ಕುಳಿತುಕೊಂಡೆ. ಆಟ ಶುರುವಾಗುವ ಮುನ್ನವೇ ಜಾಹೀರಾತಿನಲ್ಲಿ ಕಂಡು ಬಂದ ಮೊಟ್ಟೆಯಾಕಾರದ, ಕೊಂಚ ಸಣ್ಣದೇ ಎನ್ನಬಹುದಾದ ಚೆಂಡು ನನ್ನ ಕುತೂಹಲ ಹೆಚ್ಚಿಸಿತು. ‘ಈ ಆಟ ಬಲು ಕಷ್ಟ. ಮೊಟ್ಟೆಯಾಕೃತಿಯ ಚೋಟು ಚೆಂಡನ್ನು ಹುಡುಕಿ ಒದೆಯಬೇಡವೇ?’ ಎಂದು ಆಟಗಾರರ ಬಗ್ಗೆ ಸಹಾನುಭೂತಿಯನ್ನೂ ಸೂಚಿಸಿದೆ. ಆದರೆ ಕೆಲವು ಕಣ್ಣುಗಳು ನನ್ನತ್ತ ಸಹಾನುಭೂತಿ ಬೀರಿದ್ದೇಕೊ ತಿಳಿಯಲಿಲ್ಲ.
‘ಇರ್ಲಿ ಬೆಟ್ ಮಾಡು. ಎಲ್ಲಾ ನಾಕಾಣೆ-ಎಂಟಾಣೆ ಲೆಕ್ಕ‘ ಎಂದು, ಎರಡು ತಂಡಗಳ ಹೆಸರು ಬರೆದು ಚೌಕು ಮನೆಗಳನ್ನು ತುಂಬಿಕೊಂಡಿದ್ದ ಪೇಜೊಂದನ್ನು ನನ್ನ ಮುಂದೆ ಮಿತ್ರರು ಹಿಡಿದರು. ಅದರ ತಲೆ-ಬುಡ ಅರ್ಥವಾಗಲಿಲ್ಲ. ಆದರೆ ಈಗಾಗಲೇ ಸಾಕಷ್ಟು ಮೂರ್ಖ ಪ್ರಶ್ನೆಗಳನ್ನು ಕೇಳಿದ್ದರಿಂದ ಮತ್ತೆ ಪ್ರಶ್ನಿಸಲು ಮನಸ್ಸಾಗದೆ ಒಂದಷ್ಟು ಮನೆಗಳಲ್ಲಿ ನನ್ನ ಹೆಸರು ಬರೆದೆ. ‘ಇದ್ಯಾವ ಲೆಕ್ಕವೇ ನಿಂದು‘ ಎಂದು ಕೇಳಿದಾಗ, ಚುಕ್ಕಿಯಾಟದ ಲೆಕ್ಕದಲ್ಲೇ ಹೆಸರು ಬರೆದಿದ್ದೇನೆ ಎಂಬ ಸತ್ಯ ಹೇಳಲು ಮನಸ್ಸಾಗದೆ ಪೆದ್ದ ನಗೆ ಬೀರಿ ಸುಮ್ಮನಾದೆ.
ಆಟ ಆರಂಭವಾಯಿತು. ಎಲ್ಲರೂ ಉತ್ಸಾಹದಲ್ಲಿ ಹಾರಾಡುತ್ತಿದ್ದರೆ ನನಗೆ ಗಂಭೀರ ಸಮಸ್ಯೆ ಎದುರಾಗಿತ್ತು. ‘ಫುಟ್ಬಾಲ್‘ ಹೆಸರಿನ ಆಟದಲ್ಲಿ ಕೈಯಲ್ಲೇಕೆ ಬಾಲ್ ಕಿತ್ತಾಡುತ್ತಿದ್ದಾರೆ ಎಂಬುದು ಎಷ್ಟೇ ತಲೆ ಚಚ್ಚಿಕೊಂಡರೂ ತಿಳಿಯಲಿಲ್ಲ. ಆಟದಲ್ಲಿ ಹೆಸರೊಂದೇ ಅಲ್ಲ, ಹಲವಾರು ವಿಷಯಗಳು ನನ್ನ ತಿಳುವಳಿಕೆಗೆ ಮೀರಿದ್ದು ಎಂದು ನಿರ್ಧರಿಸಿ ತೆಪ್ಪಗೆ ಕೂತೆ. ಚೂರು-ಪಾರು ತೂಕಡಿಸುತ್ತಾ, ‘ಟಚ್ ಡೌನ್‘, ‘ಸೇಫ್ಟಿ‘ ಎಂದು ಎಲ್ಲರೂ ಸಂಭ್ರಮಿಸುವಾಗ ನಾನೂ ಚಪ್ಪಾಳೆ ತಟ್ಟಿದೆ. 15 ನಿಮಿಷಗಳ ಎರಡು ಸೆಷನ್ ಗಳು ಮುಗಿಯಲು ಒಂದೂವರೆ ಗಂಟೆಯೇಕೆ ಎಂಬುದು ನನ್ನ ಸಮಸ್ಯೆಗಳ ಪಟ್ಟಿಗೆ ಹೊಸದಾಗಿ ಸೇರಿಕೊಂಡಿತು.
ಆಟದ ನಡುವಿನ ದೊಡ್ಡ ಬ್ರೇಕ್ ನಲ್ಲಿ ಯಾರದ್ದೋ ಹಾಡು ಕೇಳಿ ಸರಿಯಾಗಿ ಎಚ್ಚರವಾಯಿತು. ಅಷ್ಟರಲ್ಲಿ ಎಲ್ಲರಿಗೂ ಚಹಾ-ತಿಂಡಿ ಬಂತು. ಅಮೆರಿಕದಲ್ಲಿ ಥ್ಯಾಂಕ್ಸ್ ಗಿವಿಂಗ್ ದಿನ ಬಿಟ್ಟರೆ ಅತಿ ಹೆಚ್ಚು ತಿಂಡಿ-ತೀರ್ಥ ಖರ್ಚಾಗುವುದು ಸೂಪರ್ ಬೌಲ್ ಸಂಡೆಯಂತೆ! ಅಷ್ಟೇ ಅಲ್ಲ, ನಾಲ್ಕು ವರ್ಷಗಳ ಹಿಂದೆ, ಜೆನೆಟ್ ಜ್ಯಾಕ್ಸನ್ ಮತ್ತು ಜಸ್ಟಿನ್ ಟಿಂಬರ್ಲೇಕ್ ನೀಡಿದ್ದ ಸೂಪರ್ ಬೌಲ್ ಕಾರ್ಯಕ್ರಮ ಫೈನ್ಸಲ್ ಪಂದ್ಯಕ್ಕಿಂತಲೂ ಹೆಚ್ಚು ಚರ್ಚಿತವಾಗಿದ್ದನ್ನೂ ಪ್ರಸ್ತಾಪಿಸಿದ ಮಿತ್ರರು, ನನ್ನ ಸಾಮಾನ್ಯ ಜ್ಞಾನ ಹೆಚ್ಚಿಸಿದರು.
ಆಟದ ಕೊನೆಯ ಹೊತ್ತಿಗೆ ಎಲ್ಲರೂ ಕುರ್ಚಿಯ ತುದಿಗೆ ಇದ್ದಿದ್ದು ಕಂಡು ನಾನೂ ಕುರ್ಚಿಯಿಂದ ಕೊಂಚ ಮುಂದೆ ಜರುಗಿದೆ, ಆಟ ಮುಗಿಯುತ್ತಲ್ಲಾ ಎಂಬ ಸಂತಸ! ಬೆಟ್ ಗೆದ್ದವರು ಎಲ್ಲರಿಗೂ ಪೀಟ್ಜಾ ಪಾರ್ಟಿ ಕೊಡಬೇಕೆಂಬ ಮಾತು ಕೇಳಿದ ಮೇಲಂತೂ ನನ್ನ ದೇಹ ಅಯಾಚಿತವಾಗಿ ಕುರ್ಚಿಯ ತುದಿ ತಲುಪಿತು. ಪಂದ್ಯದ ನಂತರ ಟ್ರೋಫಿ ಪಡೆಯಲು ಬಂದ ವಿಜೇತ ತಂಡದ ನಾಯಕ, ‘My guys are the best’, ‘My team is the best in the world’… ಎಂದೆಲ್ಲಾ ಹೇಳುತ್ತಿದ್ದ. ಮೊದಲೇ ತಲೆ ಹನ್ನೆರಡಾಣೆ ಆಗಿದ್ದ ನನಗೆ, ಇದನ್ನೆಲ್ಲಾ ಕೇಳಿ ‘ವಿಶ್ವವೇನು ಅಷ್ಟು ಚಿಕ್ಕದಾ?’ ಎಂಬ ಸಂಶಯ ಮೂಡಿತು.
ಅಂದ್ಹಾಗೆ, ಬೆಟ್ ಸೋತೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ!
This page has the following sub pages.