Feeds:
ಲೇಖನಗಳು
ಟಿಪ್ಪಣಿಗಳು

ಅದೊಂದು ಮೂರು ವರ್ಷದ ಮಗು. ಎಚ್ಚರ ಇದ್ದಷ್ಟೂ ಹೊತ್ತು ಒಂದು ಕ್ಷಣ ದಂಡ ಮಾಡದೆ ಮಾತನಾಡಿ ತಲೆ ತಿನ್ನುವ ಅದರ ಸಾಮರ್ಥ್ಯ ಎಂಥವರನ್ನೂ ಕಂಗೆಡಿಸುತ್ತದೆ. ಒಂದು ಮನುಷ್ಯ ತನ್ನ ಜೀವಿತಾವಧಿಯಲ್ಲಿ ಇಂತಿಷ್ಟೇ ಮಾತನಾಡುತ್ತಾನೆ ಎಂದೇನಾದರೂ ಆ ಭಗವಂತ ಬರೆದುಬಿಟ್ಟಿದ್ದರೆ ಆ ಮಗುವಿನ ಕೋಟಾ ಈಗಾಗಲೇ ಖರ್ಚಾಗಿ ಹೋಗುತ್ತಿತ್ತೇನೊ! `ದವಡೆ ಕರಗಿಹೋದೀತು ಸುಮ್ನಿರೇಎಂದು ನಾನೂ ಹಲವಾರು ಬಾರಿ ಅಲವತ್ತುಕೊಂಡಿದ್ದೇನೆ.

ಬಿಡಿ ವಿಷಯ ಅದಲ್ಲ. ಅವಳ ಮಾತಿನಲ್ಲಿ, ಆಟದಲ್ಲಿ ಅರ್ಧಕ್ಕರ್ಧ ಬರುವ ವಿಷಯ ಅಪ್ಪಅಮ್ಮಮಗು. ಇವಳ ವಯಸ್ಸಿನ ಹಲವಾರು ಮಕ್ಕಳನ್ನು, ಅದರಲ್ಲೂ ಹೆಣ್ಣು ಮಕ್ಕಳನ್ನು ಕಂಡಾಗ ಅವರಾಡುತ್ತಿದ್ದಿದ್ದೂ ಅಪ್ಪಅಮ್ಮಮಗುವಿನಾಟವೇ. ಅವುಗಳಿಗೆ ಉಣಿಸಿತಿನಿಸಿ, ಸ್ನಾನ ಮಾಡಿಸಿ, ಶಾಲೆಗೆ ಕಳಿಸಿಒಟ್ಟಾರೆ ಇಡೀ ದಿನ ತಮ್ಮ ಅಮ್ಮಅಪ್ಪ ತಮಗೆ ಏನೆಲ್ಲಾ ಮಾಡುತ್ತಾರೊ ಅದೆಲ್ಲವನ್ನೂ ತಮ್ಮ ಗೊಂಬೆಗೆ ಪ್ರೀತಿಯಿಂದ ಮಾಡುತ್ತಾರೆ. ಮಕ್ಕಳ ಅಗ್ದಿ ಸಹಜ ಗುಣವದು.

ಇವಳೂ ಹಾಗೆ. ಕೈಯಲ್ಲಿರುವ ಬೊಂಬೆಗಳು, ಬೀದಿಯಲ್ಲಿ ಕಾಣುವ ನಾಯಿಗಳು, ಕೊಳದಲ್ಲಿರುವ ಬಾತುಕೋಳಿ, ಹಾರುವ ಹಕ್ಕಿ ಹಿಂಡು, ಕೊನೆಗೆ ಗೋಡೆ ಮೂಲೆಯ ಇರುವೆ ಸಾಲು ಕಂಡಾಗಲೂ ಅವುಗಳಲ್ಲಿ ಅಪ್ಪ/ಅಮ್ಮ/ಮಗು ಯಾರು ಎಂಬುದನ್ನು ನಿರ್ಧರಿಸಲು ತಾಸುಗಟ್ಟಲೆ ಚರ್ಚಿಸುತ್ತಾಳೆ. ಒಂದೊಮ್ಮೆ ಯಾವುದೇ ಜೀವಿಗಳು ಕಾಣದಿದ್ದರೆ ಚಿಂತೆಯಿಲ್ಲ, ಡೈನಿಂಗ್ ಚೇರ್ ಗಳ ಪೈಕಿ ಯಾವುದು ಅಮ್ಮ ಯಾವುದು ಮಗು ಎಂದು ಶುರು ಹಚ್ಚುತ್ತಾಳೆ. ಕತೆಯಲ್ಲೊಂದು ಮಂಗವೊ, ಕರಡಿಯೊ ಬಂದರೆ ಅದು ಅಪ್ಪನೊ, ಅಮ್ಮನೊ ಎಂಬುದು ಅವಳಿಗೆ ಜೀವನ್ಮರಣದ ಪ್ರಶ್ನೆಯಾಗುತ್ತದೆ. `ಯಾವುದು ಏನಾದರೇನು? ಮೊದಲು ಬಾಯಿ ಮುಚ್ಚು ಎಂದು ಎದುರು ಕುಂತವ ಕೂದಲು ಕಿತ್ತುಕೊಳ್ಳುವ ಸ್ಥಿತಿ ನಿರ್ಮಿಸುತ್ತಾಳೆ.

ಹಾಗಾದರೆ ಆ ವಯಸ್ಸಿನ ಮಕ್ಕಳ ಪ್ರಪಂಚ ಅಮ್ಮಅಪ್ಪಮಗು ಅಷ್ಟೆಯೇ ಎಂದು ಬಹಳಷ್ಟು ಬಾರಿ ನಾನು ಯೋಚಿಸಿದ್ದುಂಟು (ಹಿಂದೆ ನಾನೇನು ಮಾಡುತ್ತಿದ್ದೆ ಎಂಬುದು ನೆನಪಿಲ್ಲ ನೋಡಿ…). ಸಾಮಾನ್ಯವಾಗಿ ಅಷ್ಟು ಸಣ್ಣ ಮಕ್ಕಳ ಗಮನವನ್ನು ಹೆಚ್ಚು ಕಾಲ ಒಂದೇ ವಿಷಯದ ಬಗ್ಗೆ ಹಿಡಿದಿಡುವುದು ಕಷ್ಟ. ಆದರೆ ಇಡೀ ದಿನ ಅದೇ ಆಟ ಆಡುವಾಗ, ಅದರ ಕುರಿತೇ ಮಾತನಾಡುವಾಗ ಕುಟುಂಬ ಎನ್ನುವ ಬಗ್ಗೆ ಆ ಪುಟ್ಟ ಮರಿಗಳಿಗೆ ಅದಿನ್ನೆಂಥ ಕಲ್ಪನೆಗಳಿರಬಹುದು ಎಂದು ಸೋಜಿಗವಾಗುತ್ತದೆ. ಕುಟುಂಬ ಎನ್ನುವ ಬೆಚ್ಚನೆಯ ವ್ಯವಸ್ಥೆ ಅವುಗಳ ಮೇಲೆ ಅದೆಷ್ಟು ಪರಿಣಾಮ ಬೀರಿದೆಯಲ್ಲ ಎಂದು ಯೋಚಿಸುವಂತಾಗುತ್ತದೆ.

ಆದರೆ ಈ ಪಶ್ಚಿಮ ದೇಶಗಳಲ್ಲಿ ಹೆಚ್ಚಿನ ಮಕ್ಕಳು ಕಣ್ತೆರೆಯುವ ಹೊತ್ತಿಗೇ ಕುಟುಂಬ ಚೂರಾದಾಗ, ಕುಟುಂಬದ ಚೌಕಟ್ಟಿನಿಂದ ಹೊರಗೇ ಮಕ್ಕಳು ಹುಟ್ಟಿದಾಗ ಅಥವಾ ಹುಟ್ಟಿದ ಕೆಲವೇ ದಿನಗಳಲ್ಲಿ ಆ ಬೆಚ್ಚನೆಯ ಗೂಡು ಕರಗಿ ಹೋದಾಗಆ ಮಕ್ಕಳು ಎಂಥ ಆಟ ಆಟಬಹುದು? ತಮ್ಮ ಬೊಂಬೆಗಳಲ್ಲಿ ಯಾರನ್ನು ಅರಸಬಹುದು?

ಇಲ್ಲಿನ ಬದುಕು ನೋಡಿದಾಗ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರುವುದಿಲ್ಲ ಎಂಬುದು ಅರಿವಾಗಿದೆ.

ದಿನ ಮೈಸೂರಿನ ಕಲಾಮಂದಿರದಲ್ಲಿ ಎನ್ಐಐಟಿಯಅಫಿನಿಟಿ ಡೇ‘. ನೂರಾರು ಯುವಕ ಯುವತಿಯರು ಹುರುಪಿನಿಂದ ಸೇರಿದ್ದರು. ಸಂಜೆ ಇಳಿಯುತ್ತಿದ್ದಂತೆ ನೆರೆದವರ ಉತ್ಸಾಹ ಏರುತ್ತಿತ್ತು. ಯುವ ಜನತೆಯ ಅಭಿರುಚಿಗೆ ಹೊಂದುವಂತಹ ಕಾರ್ಯಕ್ರಮಗಳೇ ಹೆಚ್ಚಾಗಿದ್ದರಿಂದ ಸಂಜೆ ಕಳೆಕಟ್ಟಿತ್ತು. ಕೊನೆಯ ಕಾರ್ಯಕ್ರಮದಲ್ಲಿ ‘Jewel Thief’ ಚಿತ್ರದಲ್ಲಿ ವೈಜಯಂತಿ ಮಾಲಾಳ ಧಿರಿಸಿನಲ್ಲಿದ್ದ ಆಕೆಹೋಟೋಂಪೆ ಐಸಿ ಬಾತ್ ಮೆ ದಬಾಕೆ ಚಲಿ ಆಯಿ…’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಳು.

ಕಾರ್ಯಕ್ರಮಕ್ಕಾಗಿ ನಮ್ಮ ತಂಡದಲ್ಲಿ ಒಂದಾಗಿ ಅಭ್ಯಾಸ ನಡೆಸಿದ, ಗ್ರೀನ್ ರೂಮಿನಲ್ಲಿ ಚುರುಕಾಗಿ ಓಡಾಡಿ ಉಳಿದವರಿಗೆ ನೆರವಾಗಿ ಕೊನೆಗೆ ಅವರಿಗಿಂತ ಮೊದಲೇ ತಯಾರಾಗಿ, ಉತ್ಸಾಹದ ಚಿಲುಮೆಯಂತಿದ್ದ ಹುಡುಗಿಯ ಮುಖ ಕಣ್ಣಿಗೆ ಕಟ್ಟಿದಂತಿದೆ. ತನ್ನೊಂದಿಗೆ ದೇವಾನಂದ್ ಪಾತ್ರ ಮಾಡುತ್ತಿದ್ದ ಹುಡುಗ ತೀರಾ ಉದ್ದ ಎಂದು ದೂರಿ, ಅವನ ಬದಲಿಗೆ ಬಂದವನಿಗೆ ಹೆಜ್ಜೆಯೇ ಹಾಕಲು ಬಾರದು ಎಂದು ಕೊರಗಿ, ಕೊನೆಗಂತೂಷೋಮುಗಿಸಿಕೊಟ್ಟಿದ್ದಳು. ಕಳೆದೊಂದು ವಾರದಿಂದ ಅವಳ ಫೋಟೊ ಬಹಳಷ್ಟು ಪತ್ರಿಕೆಗಳಲ್ಲಿ ಬಂದಿದ್ದರಿಂದ ಎಲ್ಲಾ ಘಟನೆಗಳು ನೆನಪಾದವು.

ಅವಳ ಫೋಟೊ ಪತ್ರಿಕೆಗಳಲ್ಲಿ ಬರುವುದೇನೂ ಹೊಸದಲ್ಲ. ಹಿಂದೆಯೂ ಸಾಕಷ್ಟು ಬಾರಿ ನೋಡಿದ್ದೇನೆ. ಆದರೆ ಆಗ ರೀತಿ ವಿಷಾದ ಆವರಿಸಿರಲಿಲ್ಲ. ಎನ್ಐಐಟಿಯಲ್ಲಿ ಸಿಕ್ಕಿದ್ದ ಕಾಲಕ್ಕವಳು ಇನ್ನೂ ಪಿಯುಸಿ ಓದುತ್ತಿದ್ದಳು. ಆಗಲೇ ಮಾಡೆಲಿಂಗ್ ಹುಚ್ಚು ಹತ್ತಿಸಿಕೊಂಡು ಓಡಾಡುತ್ತಿದ್ದಳು. ನೃತ್ಯದಲ್ಲಿ ಗತಿಯೂ ಇತ್ತು, ಜೊತೆಗೆ ತಾನು ವಸುಂಧರಾ ಅವರ ಶಿಷ್ಯೆ ಎಂದು ಹೆಮ್ಮೆಪಡುತ್ತಿದ್ದಳು. ಯಾವತ್ತಿಗೂ ಚೆಂದಕ್ಕೆ ಡ್ರೆಸ್ ಮಾಡಿಕೊಂಡು ಮೇಕಪ್ಪಿನಲ್ಲೇ ಇರುತ್ತಿದ್ದ ಅವಳನ್ನುಇಷ್ಟೊಂದು ಮೇಕಪ್ ಹೊತ್ತುಕೊಂಡೇ ಮಲಗ್ತೀಯಾ?’ ಎಂದು ಕಾಡುತ್ತಿದ್ದೆವು. ಯಾವುದಕ್ಕೂ ಬೇಸರಿಸದೆ ಕಮಾನ್ಎಂದು ಚೆಂದದ ನಗೆ ಬೀರುತ್ತಿದ್ದಳು. ಮಣಿ ಅಂಗಡಿಗೆ ದಾಳಿಯಿಟ್ಟು ಬರಗಾಲ ದೇಶದಿಂದ ಬಂದವರಂತೆ ನಾವೆಲ್ಲಾ ಕಟ್ಲೆಟ್, ಪಾನಿಪುರಿ, ಮಸಾಲೆಪುರಿ ತಿನ್ನುವಾಗಟೂ ಮಚ್ ಆಫ್ ಕ್ಯಾಲರೀಸ್ಎಂದು ಭೇಲ್ ಪುರಿಯಲ್ಲಿ ತೃಪ್ತಿ ಹೊಂದುತ್ತಿದ್ದಳು. ತನ್ನ ಟ್ರೆಂಡಿ ಜಾಕೆಟ್ ಮತ್ತು ಹ್ಯಾಂಡ್ ಬ್ಯಾಗ್ ಗಳು ಎಲ್ಲೆಲ್ಲಿಂದ ಬಂದಿದ್ದು ಎಂಬ ಜಂಬಭರಿತ ಲಿಸ್ಟನ್ನು ಕೇಳುವ ಮುನ್ನವೇ ಕೊಡುತ್ತಿದ್ದಳು. ಕೈನೆಟಿಕ್ ನಲ್ಲಿ ಸುತ್ತಾಡುತ್ತಿದ್ದ ಅವಳಿಗೆ ಕಾಲೇಜು, ಕ್ಲಾಸು ಇವೆಲ್ಲಾ ತನಗಲ್ಲ ಎಂಬ ದೃಢ ನಂಬಿಕೆಯೂ ಇತ್ತು!

ಎನ್ಐಐಟಿಯಲ್ಲಿ ನಾನು ಕಡಿದು ಕಟ್ಟೆ ಹಾಕಿದ್ದು ಮುಗಿದಿತ್ತು. ಅವಳ ಕೋರ್ಸ್ ಮುಗಿಯಿತಾಗೊತ್ತಿಲ್ಲ. ನಂತರ ಮಾತಿಗೆಲ್ಲೂ ಸಿಗದಿದ್ದರೂ ಚಲನಚಿತ್ರಗಳಲ್ಲಿ ಅವಕಾಶ ಸಿಕ್ಕಿದ್ದು ತಿಳಿಯಿತು. ಹಾಗೊಂದಿಷ್ಟು ಬಾರಿ ಸಿನೆಮಾ ಪುಟಗಳಲ್ಲಿ ಅವಳ ಫೋಟೊಗಳೂ ಬಂದವು. ಅಂತೂ ಹುಡುಗಿ ರಯಿಸುತ್ತಿದ್ದಾಳೆ ಎಂದುಕೊಂಡು ಮರೆತುಬಿಟ್ಟಿದ್ದೆ. ಆದರೆ ಬಾರಿ ಅವಳ ಫೋಟೊ ಬಂದಾಗ ಅದಕ್ಕೆ ಯಾವುದೇ ಸಿನೆಮಾದ ಶೀರ್ಷಿಕೆ ಇರಲಿಲ್ಲ, ಬದಲಿಗೆಕಿಲ್ಲರ್, ಹಂತಕಿಎಂಬೆಲ್ಲಾ ಹಣೆಪಟ್ಟಿಯಿತ್ತು. ಜೊತೆಗೆ, ಮರಿಯಾ ಮೋನಿಕಾ ಎಂಬ ನಟಿಯ ಪ್ರವರಗಳೂ ಇದ್ದವು.

ಚೆಂದದ ನಗುವಿನ, ತುಂಟ ಕಣ್ಣಿನ, ಮಹತ್ವಾಕಾಂಕ್ಷೆಯ ಹುಡುಗಿ ಈಗ ಏನೆಲ್ಲಾ ಆಗಿಹೋದಳು, ಯಾವ ಮಟ್ಟಕ್ಕೆ ಇಳಿದುಹೋದಳು ಎಂದು ಒಮ್ಮೆ ತೀರಾ ಬೇಸರವಾಯಿತು. ಬಣ್ಣದ ಲೋಕದ ಹಣೆಬರವೇ ಅಷ್ಟು ಎಂಬ ಅರ್ಧ ಸತ್ಯದ, ಔಪಚಾರಿಕ ಸಮಾಧಾನವನ್ನೂ ಮಾಡಿಕೊಂಡೆ. ಬೇಡ ಬೇಡ ಎಂದುಕೊಂಡೇ ಪ್ರಕರಣದ ಹಿಂದುಮುಂದೆಲ್ಲಾ ಪತ್ರಿಕೆಗಳಲ್ಲಿ ಓದಿದೆ. ಅವಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದ ಪೊಲೀಸರು ಇಡೀ ಘಟನೆಯ ಮರುಸೃಷ್ಟಿ ಮಾಡುತ್ತಿದ್ದಾರೆ ಎಂದೆಲ್ಲಾ ಪತ್ರಿಕೆಗಳಲ್ಲಿ ಬರೆದಿತ್ತು.

ಹಾಗೆಯೇ ಕಳೆದು ಹೋದ ಸಮಯವನ್ನೂ ತಿದ್ದಿ, ಸರಿಪಡಿಸಿ ಮರುಸೃಷ್ಟಿ ಮಾಡಲಾಗುವಂತಿದ್ದರೆ… ನನ್ನ ಯೋಚನೆಗೆ ನನಗೇ ನಗು ಬರುತ್ತಿದೆ.

 

ಬ್ಲಾಗ್ ಕಡೆ ತಲೆ ಹಾಕಿ ಮಲಗದೆ ವಾರಗಟ್ಟಲೆ ಆಗಿಬಿಟ್ಟಿತ್ತು. ಅಸಲಿಗೆ ಸರಿಯಾಗಿ ನಿದ್ದೆಯನ್ನೇ ಮಾಡದೆ ವಾರಗಟ್ಟಲೆ ಆಗಿದೇಂದ್ರೂ ತಪ್ಪಲ್ಲ. ಕಣ್ಣು ಮುಚ್ಚಿದರೆ ಹತ್ತಿಪ್ಪತ್ತು ವಾರೆ ಗೆರೆಗಳ ಗೂಗಲ್ ಮ್ಯಾಪು, ಒಂದಿಷ್ಟು ಅಪಾರ್ಟ್ಮೆಂಟು/ಮನೆಗಳ ಪಟ್ಟಿ, ಹಿಂದುಮುಂದಿಲ್ಲದ ಒಂದಿಷ್ಟು ಫೋನ್ ನಂಬರುಗಳು ಬಿಡದೆ ಕಾಡುತ್ತಿವೆ. ಸಾಮಾನ್ಯವಾಗಿ ರಾತ್ರಿಯಿಡೀಒಂದೇನಿದ್ದೆ ಮಾಡುವ ನನಗೆ ಹೀಗೆ ನಿದ್ದೆಯಿಲ್ಲದೆ ಹೊರಳಾಡುವುದು, ಎದ್ದು ಕತ್ತಲಲ್ಲೇ ಓಡಾಡುವುದು ಜನ್ಮಕ್ಕೇ ಬಂದಿದ್ದಲ್ಲ. ಎಂಥಾ ಘೋರ ಪರೀಕ್ಷೆಯ ದಿನಗಳಲ್ಲೂ ನಿದ್ದೆ ನನ್ನ ಕಣ್ಣು ಬಿಟ್ಟಿರಲಿಲ್ಲ. ಈಗ

ನನ್ನ ನಿದ್ರಾ ಸಮೀಕರಣ ವ್ಯತ್ಯಾಸ ಆಗಲು ಇರುವ ಏಕೈಕ ಕಾರಣಾಂದ್ರೆ ಮನೆ ಹುಡುಕೋದು! ಈಗ ನಾವಿರುವ ಅಪಾರ್ಟ್ಮೆಂಟಿನಲ್ಲಿ ಎದ್ವಾತದ್ವಾ ಬಾಡಿಗೆ ಏರಿಸಿದ್ದರಿಂದ ಬೇರೆ ಸೂರು ಹುಡುಕೋಣ ಎಂದು ಹೊರಟಿದ್ದಾಯ್ತು. ಹೇಗೂ ಬೆಂಗಳೂರಿನಲ್ಲಿ ಮನೆ ಹುಡುಕಿದ್ದ ಅನುಭವ ನನ್ನ ರೆಸ್ಯೂಮಲ್ಲಿ ಇರುವ ಧೈರ್ಯದ ಮೇಲೆ, ತೀರಾ ದೂರವಲ್ಲದ, ತೀರಾ ದುಬಾರಿಯಲ್ಲದ, ತೀರಾ ಕೊಂಪೆಯಲ್ಲದ ಜಾಗದಲ್ಲಿ ಹಾಳಲ್ಲದ ಮನೆ/ಅಪಾರ್ಟ್ಮೆಂಟಿನ ಹುಡುಕಾಟ ಶುರು ಹಚ್ಚಿದ್ದಾಯ್ತು. ಅನುಭವದ ಕೆಲವು ತುಣುಕುಗಳು ಇಲ್ಲವೆ:

ಈಗಿನ ಮನೆಯಿಂದ ಒಂದು ಮೈಲು ದೂರದಲ್ಲಿರುವ ಅಪಾರ್ಟ್ಮೆಂಟು ನೋಡಲು ನಾನು, ಶ್ರೀ ಹೋಗಿದ್ದೆವು. ಸುಂದರ ನಗೆಯೊಂದನ್ನು ಬೀರಿ, ಚಂದಕ್ಕೆ ಕರೆದು ಕೂರಿಸಿದ ಲೀಸಿಂಗ್ ಆಫೀಸಿನ ಅಜ್ಜಿ ತಮ್ಮಲ್ಲಿರುವ ಮನೆಗಳೆಲ್ಲಾ ಬಹು ದೋಡ್ಡ ಮನೆಗಳೆಂದೂ, ಒಳಾಂಗಣವೆಲ್ಲಾ ಅದ್ಭುತವಾಗಿದೆಯೆಂದೂ ಬಣ್ಣಿಸಿ ಅಂಗೈಯಲ್ಲೇ ಆಕಾಶ ತೋರಿದಳು. ಅಂತೂ ಆಕೆಯ ಮಾತು ಮುಗಿದು ಮನೆ ನೋಡಲು ಹೊರಟಿದ್ದಾಯ್ತು. ಚಕ್ರವ್ಯೂಹದಂತೆ ಅಲ್ಲಿ ಹೊಕ್ಕು, ಮತ್ತೆಲ್ಲೊ ಹೊರಬಿದ್ದು, ಬಾಗಿಲು ತೆಗೆದು, ಮೆಟ್ಟಿಲು ಹತ್ತಿಸಿ ಮನೆಯೊಂದಕ್ಕೆ ಕರೆದೊಯ್ದಳು. ಮನೆ ಸಾಧಾರಣವಾಗಿತ್ತು. ಈಗ ತಾನು ತೋರಿದ ಮನೆ ಬೇರೆ ಯಾರಿಗೋ ಕೊಟ್ಟಾಗಿದೆಯೆಂದೂ, ನಮಗೆ ನೀಡಲಿರುವ ಮನೆ ಸದ್ಯಕ್ಕಿನ್ನೂ ಖಾಲಿಯಾಗಿಲ್ಲವೆಂದೂ, ಇವೆರಡೂ ಮನೆಗಳ ಒಳಾಂಗಣದಲ್ಲಿ ಎರಡು ಕಿಟಕಿಗಳು, ಒಂದು ಬಾಗಿಲು, ಒಂದು ಕಪಾಟು, ಮತ್ತೊಂದು ಪೇಟಿಯೊ ಹಾಗೂ ಗಾಳಿಬೆಳಕು ಬರುವ ದಿಕ್ಕುಗಳನ್ನು ಬಿಟ್ಟರೆ ಬೇರೇನೂ ವ್ಯತ್ಯಾಸವಿಲ್ಲ. ಈಗ ನಾವು ನೋಡುತ್ತಿರುವ ಮನೆ ಎರಡನೇ ಮಹಡಿಯಲ್ಲಿದೆ, ನಮಗೆ ದೊರೆಯಲಿರುವ ಮನೆ ಮೊದಲ ಮಹಡಿಯಲ್ಲಿದೆ, ಹಾಗಾಗಿ ಬಾಡಿಗೆಯೂ ಕೊಂಚ ಭಿನ್ನ. ಬಿಟ್ಟರೆ ಬೇರೇನೇನೇನೂ ವ್ಯತ್ಯಾಸವಿಲ್ಲ ಎಂದು ಉಲಿದಳು. ಕಡೆಗೆ ಆ ಮನೆ ಬೇಕೊಬೇಡವೊ ಎಂಬುದೇ ನಿರ್ಧರಿಸಲಾಗದೆ ಅಲ್ಲಿಂದ ಹೊರಬಿದ್ದಿದ್ದಾಯ್ತು.

ಸದ್ಯದ

ಮನೆಯಿಂದ ಮೂರು ಮೈಲು ದೂರದ ಅಪಾರ್ಟ್ಮೆಂಟಿಗೆ ಭೇಟಿ ನೀಡಿದ್ದೆವು. ಇಡೀ ಅಪಾರ್ಟ್ಮೆಂಟಿನ ಆವರಣದಲ್ಲಿ ಸಣ್ಣ ತೊರೆಯಂಥ ನೀರು ಹರಿಯುತ್ತಿತ್ತು. (ಇಲ್ಲಿನ ಹಲವಾರು ಅಪಾರ್ಟ್ಮೆಂಟುಗಳಲ್ಲಿ ಇಂಥ ತೊರೆ/ಕೊಳ(ಳೆ)ಗಳಿವೆ). ಎಂಥಾ ಅದ್ಭುತ ಚಿತ್ರಕಾರನಿಗೂ ಕಲೆಸಲು ಸಾಧ್ಯವಾಗದಂತಹ ವಿನೂತನ ಬಣ್ಣ ಆ ತೊರೆಯ ನೀರಿಗಿತ್ತು. ಕೆಲವೆಡೆ ನೀಲಿ, ಹಲವೆಡೆ ಹಸಿರು, ಉಳಿದೆಡೆ ಕಪ್ಪು! ಲೀಸಿಂಗ್ ಆಫೀಸಿನ ಭೂಪ ಅಪಾರ್ಟ್ಮೆಂಟ್ ತೋರಿಸಲು ನಮ್ಮೊಂದಿಗೆ ಬಂದ. ಮನೆಯೇನೊ ಚೆನ್ನಾಗಿತ್ತು. ಆದರೆ ಮನೆ ಮುಂದಿನ ನೀರು… ”ಛೇ ಛೇ! ಅದರ ಬಗ್ಗೆ ಚಿಂತೆ ಬಿಡಿ. ನೀರನ್ನು ವರ್ಷಕ್ಕೊಮ್ಮೆ ಬದಲಿಸಿಬಿಡುತ್ತೇವೆ. ಉಳಿದ ಹೊತ್ತಿನಲ್ಲಿ ನೀರಿನ ರಕ್ಷಣೆಗೆ ರಾಸಾಯನಿಕಗಳನ್ನು ಸಿಂಪಡಿಸುತ್ತೇವೆ. ಅದೂ ಸಾಲದೆ ಮೀನು ಬಿಡುತ್ತೇವೆ. ನೀರಿನಲ್ಲಿ ಬೆಳೆಯುವ ಸೊಳ್ಳೆಯನ್ನೆಲ್ಲಾ ಅದು ತಿಂದುಬಿಡುತ್ತದೆ. ಹಾಗಾಗಿ ನಿಮಗೇನೂ ತೊಂದರೆಯಿಲ್ಲ ಎಂದು ತಮ್ಮ ಅಪಾರ್ಟ್ಮೆಂಟಿನ ಆಹಾರ ಸರಪಳಿಯ ಪರಿಚಯ ಮಾಡಿಕೊಟ್ಟ. ”ನಿಮ್ಮನೆಯಲ್ಲಿ ಪೆಟ್ ಸಾಕಬಹುದು. ಇಲ್ಲಿನ ಜನ ಬೆಕ್ಕು, ನಾಯಿ, ಮೊಸಳೆ ಎಲ್ಲವನ್ನೂ ಸಾಕುತ್ತಾರೆಎಂದ.

ಮೊಸಳೆ!

ಈಗಷ್ಟೇ ಸೊಳ್ಳೆ, ಮೀನು ಎನ್ನುತ್ತಿದ್ದವ ಈಗ ಮೊಸಳೆಯವರೆಗೆ ಬಂದನಲ್ಲ. ಎಲ್ಲರ ಮನೆ ಮುಂದೆ ನೀರಿರುವುದು ಮೊಸಳೆ ತೇಲಿ ಬಿಡಲೆಂದೇ? ಸಿಕ್ಕಾಪಟ್ಟೆ ತಲೆಬಿಸಿಯಾಗಿ ಮತ್ತೆ ಮತ್ತೆ ಮೊಸಳೆಯ ವಿವರ ಕೇಳಿದೆವು. ”ಹೊಹ್ಹೊಹ್ಹೊ! ಅದಾ? ತಮಾಷೆಗೆ ಹೇಳಿದ್ದುಎಂದು ಮುನ್ನಡೆದ. ಆದರೆ ನಾವು ಹಿಂದಿರುಗಿದ್ದಾಯ್ತು.

ನಮ್ಮನೆಯಿಂದ ಸುಮಾರು ಐದು ಮೈಲು ದೂರದಲ್ಲಿದ್ದ ಅಪಾರ್ಟ್ಮೆಂಟಿನ ದರ್ಶನಕ್ಕೆ ಹೋಗಿದ್ದೆವು. ಮನೆ ದೊಡ್ಡದಿತ್ತು. ವ್ಯವಸ್ಥೆಯೂ ತಕ್ಕ ಮಟ್ಟಿಗಿತ್ತು. ಆದರೆ ಇಡೀ ವಾತಾವರಣದಲ್ಲಿ ಅದೆಂಥದೊ ವಿಚಿತ್ರ ನಾತ. ನೋಡನೋಡುತ್ತಿದ್ದಂತೆ ನಾನಾ ರೀತಿಯ ಸಣ್ಣದೊಡ್ಡ, ಕೈಯಲಷ್ಟೇ ಕೂರುವ, ನೆಲದ ಮೇಲೆ ನಡೆಯುವ, ಬೊಗಳಲೂ ಬರುವ ನಾಯಿಗಳ ಸಂಚಾರ ಆರಂಭವಾಯ್ತು. ಅಂಗಿ ಹಾಕಿದ, ಜುಟ್ಟು ಕಟ್ಟಿದ ನಾನಾ ನಮೂನೆಯ ನಾಯಿಗಳು ತಮ್ಮ ಮಾಲೀಕರೊಂದಿಗೆ ಕಾರಿನಲ್ಲಿ ಓಡಾಡುತ್ತಿದ್ದವು. ಕೆಲವು ಮನೆಯಲ್ಲಿ ಮನುಷ್ಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೆಟ್ಗಳು ಜೀವಿಸುತ್ತಿವೆ ಎಂಬುದೂ ತಿಳಿಯಿತು. ಒಟ್ಟಾರೆ ಇಡೀ ಅಪಾರ್ಟ್ಮೆಂಟು ಬೆಕ್ಕುನಾಯಿಗಳಿಂದ ತುಂಬಿ ಹೋಗಿತ್ತು. ಆ ಪೆಟ್ ಸಂಗ್ರಹಾಲಯದಲ್ಲಿ ಇರಲು ಮನಸ್ಸಾಗದೆ ಮರಳಿ ಬಂದಿದ್ದಾಯ್ತು.

ಅಪಾರ್ಟ್ಮೆಂಟಿನ ಜೊತೆಗೆ ಮನೆಗಳ ಮೇಲೂ ಕಣ್ಣಿಟ್ಟಿದ್ದೆವು. ಕೊಂಚ ಹತ್ತಿರದ, ನಿರ್ಮಲ ಜಾಗಗಳು ಎಂದು ನಮಗನ್ನಿಸಿದ ಒಂದಿಷ್ಟು ವಿಳಾಸಗಳನ್ನು ಗುರ್ತು ಹಾಕಿಕೊಂಡು ಮನೆ ನೋಡಲು ಶುರು ಹಚ್ಚಿದೆವು. ಮೇಲೆಕೆಳಗೆಅಡ್ಡಉದ್ದಅಕ್ಕಪಕ್ಕಹಿಂದೆಮುಂದೆ ಎಲ್ಲೆಂದರಲ್ಲಿ ಕೆಲವು ಮನೆಗಳನ್ನು ಕಟ್ಟಲಾಗಿತ್ತು. ಒಂದೇ ಕಾಂಪೌಂಡಿನಲ್ಲಿ ನಾಲ್ಕು, ಐದು, ಆರು ಹೀಗೆ ಶಕ್ತ್ಯಾನುಸಾರ ಮನೆಗಳನ್ನು ಕಟ್ಟಿದ್ದರು. ಗಾಳಿಬೆಳಕು ಸಹ ಇಲ್ಲದ ಕಿಷ್ಕಿಂಧೆಯಂಥ ಮನೆಗಳು. ತಮ್ಮದು ಅದ್ಭುತವಾದ ಮನೆ ಎಂದು ಬಣ್ಣಿಸುತ್ತಿದ್ದ ಮಾಲಿಕರು, ಕಾರು ನಿಲ್ಲಿಸಲು ಮನೆ ಮುಂದೆ ಬೇಕಷ್ಟು ಉದ್ದಗಲದ ಸಾರ್ವಜನಿಕ ರಸ್ತೆಯಿದೆಯಲ್ಲಾ ಎಂದು ಸಮಝಾಯಿಶಿ ನೀಡುತ್ತಿದ್ದರು. ಇಂಥಾ ಮನೆ ಬಿಟ್ರೆ ಸಿಕ್ಕಲ್ಲ, ಇವತ್ತೇ ಅಗ್ರೀಮೆಂಟಿಗೆ ರುಜು ಹಾಕಿಬಿಡಿ ಎಂದು ನಂಬಿಸುತ್ತಿದ್ದರು. ತಲೆ ಕೆಟ್ಟು ಓಡಿ ಬಂದಿದ್ದಾಯ್ತು.

ಅಂದ್ಹಾಗೆ ನಮಗಿನ್ನೂ ಮನೆ ಸಿಕ್ಕಿಲ್ಲ. ಅಲ್ಲಿಯವರೆಗೆ ನನ್ನ ಅನುಭವ ಅಯಾಚಿತವಾಗಿ ಮತ್ತಷ್ಟು ವೃದ್ಧಿಸಲಿದೆ ಎಂಬ ವಿಶ್ವಾಸ ನನ್ನದು. ನಿಮಗೂ ಇಂಥ ಅನುಭವಗಳು ಇರಬಹುದಲ್ವಾ?

ಮೊನ್ನೆ ಹಳೆ ದೋಸ್ತಿ ಸಿಕ್ಕಿದ್ದಳು. ವರ್ಷಗಟ್ಟಲೆ ಆಗಿತ್ತೇನೊ ನಾವಿಬ್ಬರೂ ಹರಟದೆಹಿಂದಿನ ಬಾಕಿ ಚುಕ್ತಾ ಮಾಡುವಂತೆ ತಾಸುಗಟ್ಟಲೆ, ಕನಿಷ್ಠ ಒಂದು ದವಡೆ ಕರಗುವಷ್ಟಾದರೂ ಮಾತನಾಡಬೇಕೆಂದು ನಿಶ್ಚಯಿಸಿಕೊಂಡು ಶುರುಹಚ್ಚಿದೆ. ಹೈಸ್ಕೂಲಿನಿಂದಲೂ ಬಹಳ ವರ್ಷಗಳ ಕಾಲ ಒಟ್ಟಿಗೆ ಓದಿದ್ದ ನಾವು ಈಗ ನಾನೊಂದು ತೀರ ನೀನೊಂದು ತೀರ ಎಂಬಂತೆ ಆಗಿಬಿಟ್ಟಿದ್ದೇವೆ.

ಒಂಬತ್ತನೇ ಕ್ಲಾಸಿನಲ್ಲಿ ಇದ್ದಾಗ ಸೈಕಲ್ ಕಲಿಯಲು ಹೋಗಿ ಕಸದ ಬುಟ್ಟಿ ಕೆದರುತ್ತಿದ್ದ ದನಕ್ಕೆ ಗುದ್ದಿದ ಕತೆಯಿಂದ ಆರಂಭವಾದ ಸುದ್ದಿ ಎಲ್ಲೆಲ್ಲೋ ಹೋಯಿತು. ಪಿಯುಸಿಯಲ್ಲಿ ಹಿಂದಿನ ಬೆಂಚಿನಲ್ಲಿ ಕುಳಿತು ಕಿಚ್ಚಖಾರ ಹಚ್ಚಿದ ಸೀಬೆ ಕಾಯಿ ತಿಂದು, ಕೆಮ್ಮಿ ಮಂಗಳಾರತಿ ಮಾಡಿಸಿಕೊಂಡಿದ್ದು, ಕ್ಲಾಸು ಮುಗಿಸಿ ಮನೆಗೆ ಮರಳುವಾಗ ಬೆನ್ನಟ್ಟಿದ ಹುಡುಗರಿಂದ ತಪ್ಪಿಸಿಕೊಳ್ಳಲು ಜೋರಾಗಿ ಗಾಡಿ ಓಡಿಸಿ ಬಿದ್ದು ಕಾಲು ಮುರಿದುಕೊಂಡಿದ್ದು, ಎನ್ಐಐಟಿಯ ಅಫಿನಿಟಿ ಡೇದಲ್ಲಿ ಮಾಡಿದ್ದ ವಿಚಿತ್ರ ನಾಟಕ, ಮೀಡಿಯಾ ಸರ್ವೆಗೆಂದು ಹಳ್ಳಿಹಳ್ಳಿ ಸುತ್ತಿದ್ದು, ಇನ್ನೂ ಮೀಸೆಯೇ ಚಿಗುರದ ಅವಳ ತಮ್ಮನನ್ನು ವೀರಪ್ಪನ್ ಎಂದು ಕರೆದು ಕಾಡಿಸುತ್ತಿದ್ದುದು, ಮದುವೆಯ ಹಿಂದಿನ ದಿನ ಮದರಂಗಿ ಬಣ್ಣ ಬರಲಿಲ್ಲ ಎಂದು ಅತ್ತು ಗೋಳಾಡಿದ್ದು, ಕೆಫೆ ಮಲ್ಲಿಗೆಯ ಮಲ್ಲಿಗೆ ಇಡ್ಲಿ, ಬೇಕ್ ಪಾಯಿಂಟಿನ ಸಮೋಸಾ, ಮಣಿ ಗಾಡಿಯ ಮಸಾಲೆಪುರಿಮಾತಾಡ್ಮಾತಾಡಿ ಬಾಯಿ ಒಣಗುತ್ತಿದ್ದರೂ ನಾಲಿಗೆಯ ಅದ್ಯಾವುದೋ ಮೂಲೆಯಿಂದ ನೀರೂರುತ್ತಿತ್ತು.

ಹಳೆಯ ವಿಷಯಗಳಾದ ಮೇಲೆ ಈಗಿನದಕ್ಕೆ ಬರಲೇಬೇಕಲ್ಲಾಪಶ್ಚಿಮ ದೇಶಗಳ ಪಾಡು, ಅಲ್ಲಿನ ನನ್ನ ಇಷ್ಟಾನಿಷ್ಟಗಳು, ಸ್ವಚ್ಛತೆ, ಶಿಸ್ತು, ಮೇಲ್ನೋಟಕ್ಕೆ ಸಿಕ್ಕಾಪಟ್ಟೆ ಆಪ್ತರಂತೆ ಕಂಡು, ಕ್ಷಣಕ್ಕೊಮ್ಮೆ honey, dear ಎಂದೆಲ್ಲಾ ಕರೆದು ಕೊನೆಗೆ ಸಂಬಂಧವೇ ಇಲ್ಲದಂತೆ ಇರುವ ಜನ, ಇರುವ ಸಂಬಂಧಗಳ ಬಗ್ಗೆಯೂ ದರಕಾರ ಇಲ್ಲದಂತೆ ಬದುಕುವ, ಸಂಬಂಧ ಚಿಂದಿಯಾದಾಗ ತಲೆಕೆಡಿಸಿಕೊಳ್ಳದೆ ಕ.ಬು.ಗೆ ಹಾಕುವ, ಪ್ರತಿಯೊಂದರಿಂದ ತನಗೇನು ಲಾಭ ಎಂದು ಲೆಕ್ಕಹಾಕುವ ಜನಬಹಳಷ್ಟು ಹೇಳಿದೆ. ನಾನೇನು ಹೇಳಿದರೂ ಅವಳು ಹೂಂಹಾಂಎನ್ನಲಿಲ್ಲ. ಒಂದೋ ನಾ ಹೇಳಿದ್ದು ಅರ್ಥವಾಗಿಲ್ಲ ಅಥವಾ ಒಪ್ಪಿಗೆಯಾಗಿಲ್ಲ ಎನಿಸಿತು. ಅವಳಿಂದ ಪ್ರತಿಕ್ರಿಯೆ ಪಡೆಯಲೇಬೇಕೆಂಬ ಹಠದಲ್ಲಿ ಉದಾಹರಣೆಗಳೊಂದಿಗೆ ಮುಂದುವರಿಸಿದೆ.

* ಗಂಡನಿಂದಲೇ ಕಾರು ಡ್ರೈವಿಂಗ್ ಕಲಿಯುತ್ತಿದ್ದ ನನಗೆ ನೆರೆಮನೆಯಾಕೆ ಎಚ್ಚರಿಕೆ ಹೇಳಿದ್ದಳು. ಕಾರಣ, ಕಲಿಯುವಾಗ ನಡೆಯುತ್ತಿದ್ದ ಸರಿತಪ್ಪುಗಳ ಕಿತ್ತಾಟ ಸಹಿಸಲಾರದ ಅವಳ ಒಂದಿಬ್ಬರು ಗೆಳತಿಯರು ಲೈಸೆನ್ಸ್ ಸಿಕ್ಕ ಕೂಡಲೆ ತಮ್ಮ ಗಂಡನಿಗೆ ಸೋಡಾಚೀಟಿ ಕೊಟ್ಟಿದ್ದರಂತೆ.

* ಪಾರ್ಕಿನಲ್ಲಿ, ಲೈಬ್ರರಿಯಲ್ಲಿ ಆಗೀಗ ಭೇಟಿಯಾಗುತ್ತಿದ್ದ ಡೆನಿನ್ ತನ್ನ ಮಗಳ ಬಗ್ಗೆ ದೂರುತ್ತಿದ್ದಳು. ತನ್ನ ಮಗಳು ಅವಳ ಮದುವೆಗಾಗಿ ತನ್ನಿಂದ ಸಾಲ ಪಡೆದಿದ್ದಳು. ಇದಾಗಿ ವರ್ಷಗಳೇ ಕಳೆದರೂ ಸಾಲ ಹಿಂದಿರುಗಿಸಿಲ್ಲ. ಹಾಗಾಗಿ ಮಗಳೊಂದಿಗೆ ಮಾತೇ ಬಿಡಬೇಕೆಂದಿದ್ದೇನೆ ಎಂಬುದು ಅವಳ ಕತೆ.

* ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದ ಫ್ರೆಡ್ ದಿನ ತನ್ನಣ್ಣನ ಬಗ್ಗೆ ಹೇಳುತ್ತಿದ್ದ. ಭೂತಪ್ರೇತಗಳ ಕಾದಂಬರಿ ಬರೆಯುವ ವೃತ್ತಿಯಲ್ಲಿದ್ದ ಫ್ರೆಡ್ (ಹಾರರ್ ರೈಟರ್). ‘ಚಿಕ್ಕಂದಿನಲ್ಲಿ ನನ್ನಣ್ಣ ನನಗೆ ಭಲೇ ಕಾಟ ಕೊಡುತ್ತಿದ್ದ. ಬೀರುವಿನಲ್ಲಿ ತುಂಬಿ ಬಾಗಿಲು ಹಾಕುವುದು, ಕಂಬಳಿಯಲ್ಲಿ ಸುತ್ತಿ ಮಂಚದಿಂದ ಉರುಳಿಸುವುದು ಹೀಗೆ ಚಿತ್ರವಿಚಿತ್ರ ರೀತಿಯಲ್ಲಿ ಹಿಂಸಿಸುತ್ತಿದ್ದ. ತಾನಷ್ಟು ಹಿಂಸೆ ಕೊಟ್ಟಿದ್ದರಿಂದಲೇ ನೀನಿವತ್ತು ಹಾರರ್ ರೈಟರ್ ಆಗಿದ್ದೀಯ ಎನ್ನುತ್ತಿದ್ದಾನೆ ಅಣ್ಣ. ಸಾಲದ್ದಕ್ಕೆ ನನ್ನ ಸಂಪಾದನೆಯಲ್ಲಿ ಒಂದು ಪಾಲೂ ಅವನಿಗೆ ಸಲ್ಲಬೇಕಂತೆಎಂದು ಫ್ರೆಡ್ ಸಿಡುಕುತ್ತಿದ್ದ.

ನಾನೆಷ್ಟು ಹೇಳಿದರೂ ಅವಳಿಂದ ನಿರೀಕ್ಷಿತ ಪ್ರತಿಕ್ರಿಯೆ ಬರಲಿಲ್ಲ. ನನ್ನ ನಿರೀಕ್ಷೆ ಅತಿಯಾಯಿತೇ ಅಥವಾ ಅವಳ ಆಸಕ್ತಿ ಕಡಿಮೆಯಾಯಿತೇ ತಿಳಿಯದೆ ಚಟಪಡಿಸಿದೆ. ನನ್ನ ಬಾಯಿಗೂ ಕೊಂಚ ರೆಸ್ಟ್ ಕೊಟ್ಟರಾಯಿತು ಎಂದುನಿನ್ಕತೆ ಹೇಳೆಎಂದು ಕೂತೆ.

ಅವನಿಂದ ವಿಚ್ಛೇದನ ತೆಗೆದುಕೊಂಡೆಎನ್ನುತ್ತಾ ಕಾಲು ಚಾಚಿದಳು. ಈಗಿನ ದಿನಮಾನದಲ್ಲಿ ಇದೇನು ಸಿಡಿಲು ಬಡಿಯುವಂಥ ಸುದ್ದಿ ಅಲ್ಲವೇನೊ, ಆದರೂ ಸಣ್ಣಗೆ ನಡುಗಿದೆ. ‘ಅಮ್ಮನ ಮಗ! ಕೆಮ್ಮಿ, ಸೀನಿ ಮಾಡಕ್ಕೂ ಅಮ್ಮನ ಅನುಮತಿ ಬೇಕು ಅವನಿಗೆ. ಮಾತೆತ್ತಿದ್ರೆ ಅಡ್ಜಸ್ಟ್ ಮಾಡ್ಕೊ ಅಂತಿದ್ದ. ಮನೆಗೆ ನಾನು ಹೋಗಿದ್ದು ಹೊಸ ಬದುಕು ಹುಡುಕಿಕೊಂಡು, ನನಗಷ್ಟೇ ಅನ್ವಯವಾಗುವ ಅಡ್ಜಸ್ಟ್ಮೆಂಟಿಗಲ್ಲ. ಸಂಬಂಧಗಳೂ ಬೇಡ, ಅದರ ಸಂಕಷ್ಟಗಳೂ ಬೇಡ ಅಂತ ಎಲ್ಲವನ್ನೂ ದೂರ ಮಾಡ್ಬಿಟ್ಟೆ…’ ಇನ್ನೂ ಬಹಳಷ್ಟು ಹೇಳಿಕೊಂಡಳು.

ಅವಳನ್ನು ಭೇಟಿ ಮಾಡಿ ಮೂರು ದಿನದ ಮೇಲಾಯ್ತು. ಆದರೂ ಕಾಡುತ್ತಿರುವ ಪ್ರಶ್ನೆಸಂಬಂಧಗಳೇ ಸಂಕಷ್ಟಗಳಾಗುತ್ತಿವೆಯೇ ಅಥವಾ ನಮಗೆ ಸಹನೆ ಕಡಿಮೆಯಾಗುತ್ತಿದೆಯೇ? ನಿಮ್ಗೇನಾದ್ರೂ ಗೊತ್ತಾ?

ಎಲ್ಲರೂ ಅವನನ್ನು ಹಿಗ್ಗಾಮುಗ್ಗಾ ಹೊಗಳುತ್ತಿದ್ದರು. ಅವನ ಪಾಂಡಿತ್ಯವನ್ನು ಕಂಠಬಿರಿ ಪ್ರಶಂಶಿಸುತ್ತಿದ್ದರು. ಅವನಿಂದ ನಾವೆಲ್ಲಾ ಕಲಿತುಕೊಳ್ಳುವುದು ಏನೇನಿದೆ ಎಂದು ಹನುಮಂತನ ಬಾಲವೂ ನಾಚುವಂತಹ ಪಟ್ಟಿ ಮಾಡುತ್ತಿದ್ದರು.

ಗೊತ್ತಿದೆ! ಅಂವ ಯಾರು, ಏನು, ಎತ್ತ, ಅವನ ಪಾಂಡಿತ್ಯ ಎಂಥದ್ದು, ಎಷ್ಟೆಷ್ಟು ಭಾಷೆಗಳನ್ನು ಬಲ್ಲ, ಎಷ್ಟು ಧರ್ಮಗಳ ಮರ್ಮವನ್ನು ಅರೆದು ಕೊಡಿದವನು, ಯಾವ್ಯಾವ ಕ್ಷೇತ್ರಕ್ಕೆ ಎಂಥೆಂಥ ಕಾಣಿಕೆ ಕೊಟ್ಟವನುಇವೆಲ್ಲವುಗಳ ಬಗ್ಗೆ ವಿಪರೀತ ಅಲ್ಲದಿದ್ದರೂ ತಕ್ಕಮಟ್ಟಿನ ಜ್ಞಾನ ನನಗಿದೆ. ಆದರೆ ಮಾನವೀಯತೆಗೆ ಎಂಥ ಭಾಷ್ಯ ಬರೆದವ ಎಂಬುದನ್ನು ನಿಮ್ಮೊಂದಿಗೆ ಇಂದು ಹೇಳಿಕೊಳ್ಳಲೇಬೇಕಿದೆ.

ಅವಳೇನೂ ಅತಿಲೋಕ ಸುಂದರಿಯಲ್ಲ, ಆದರೂ ಲಕ್ಷಣವಾಗಿದ್ದಳು. ಮೂಲತಃ ಅವಳ ಅಂದಚಂದ ನೋಡಿದವನೇ ಅಲ್ಲ ಭೂಪ. ಅವಳ ಚುರುಕು ಬುದ್ಧಿ, ಪ್ರಖರ ತರ್ಕ, ವಿಸ್ತಾರವಾದ ಜ್ಞಾನ, ಕಲಿಯುವ ತವಕ, ಜೊತೆಗೆ ಅಗತ್ಯಕ್ಕಷ್ಟೇ ಸೀಮಿತವಾದ ವಿನಯಕ್ಕೆ ಈತ ಮಾರುಹೋಗಿದ್ದ. ತಂಗಿಯರು ಮತ್ತು ತಮ್ಮಂದಿರನ್ನು ದಡ ಹತ್ತಿಸಲು ಹೆಣಗುತ್ತಿದ್ದ ಆಕೆಯ ಬಗ್ಗೆ ಅವನಲ್ಲಿ ಗೌರವವೂ ಮೂಡಿತ್ತು. ಹಲವಾರು ಕ್ಷೇತ್ರಗಳಲ್ಲಿ ಸಹವರ್ತಿಗಳಾಗಿದ್ದ ಇವರ ನಡುವೆ ಚಿಗುರಿದ ಸ್ನೇಹ, ಪ್ರೀತಿಯ ಹೂಬಿಡಲು ಹೆಚ್ಚು ಕಾಲ ಬೇಕಾಗಲಿಲ್ಲ.

ಇವತ್ತಿನ ದಿನಮಾನದಲ್ಲೂ ಒಪ್ಪದ ಪ್ರೀತಿಯನ್ನು 25 ವರ್ಷಗಳ ಹಿಂದೆಯೇಒಪ್ಪಿಕೊಳ್ಳಿಎಂದು ಆಕೆ ಮನೆಯವರನ್ನು ಕೇಳಿದರು. ಜಾತಿ, ಧರ್ಮದ ಮಾತು ಬಿಡಿ, ಒಂದೇ ದೇಶದವರಾದರೂ ಆಗಬಾರದೆ ಎಂಬ ಮನೆಯವರ ರೋಧನ ಹಸೆಮಣೆ ಏರುತ್ತಿದ್ದ ಜೋಡಿಯ ಕಿವಿಗೆ ಬೀಳಲಿಲ್ಲ. ಮುಂದಿನದೆಲ್ಲಾಮೆಲ್ಲುಸಿರೇ ಸವಿಗಾನ…!

ವಿರೋಧಿಸಿದ್ದ ಮನೆಯವರ ವಿಶ್ವಾಸ ಗಳಿಸಲು ವರ್ಷಗಳೇ ಹಿಡಿದವು. ಇದಕ್ಕೆ ಇವರಿಬ್ಬರ ಪುಟ್ಟ ಮಗನ ನೆರವೂ ದೊರೆಯಿತೆನ್ನಿ. ಹ್ಯಾಗಾದರೂ ಸರಿ, ಇಬ್ಬರೂ ಸಂತೋಷದಲ್ಲಿದ್ದರೆ ಸಾಕು ಎಂದು ಮನೆಯವರು ತಲೆಕೊಡವಿಕೊಂಡರು.

ತನ್ನ ಕ್ಷೇತ್ರದಲ್ಲಿ ಆತ ಹೊಳೆಯಲಾರಂಭಿಸಿದ್ದ. ಭಾರತೀಯ ಭಾಷೆಗಳನ್ನು ಆಯಾ ಭಾಷಿಕರಿಗಿಂತಲೂ ಸ್ವಚ್ಛವಾಗಿ ಮಾತನಾಡುತ್ತಿದ್ದ ಆತನ ಬಗ್ಗೆ ಗೌರವ ಮೂಡದಿರಲು, ಹೆಮ್ಮೆ ಎನಿಸದಿರಲು ಮನುಷ್ಯ ಮಾತ್ರದವರಿಗೆ ಸಾಧ್ಯವಿರಲಿಲ್ಲ. ಈಕೆಯೂ ತನ್ನ ಕ್ಷೇತ್ರದಲ್ಲಿ ಪ್ರಫುಲ್ಲ ಕೃಷಿ ನಡೆಸಿದ್ದರು. ಇಬ್ಬರಿಗೂ ಹೆಸರು, ಹಣಯಾವುದಕ್ಕೂ ಕೊರತೆಯಿಲ್ಲದೆ ಅಪರೂಪದ ಜೋಡಿ ಎನಿಸಿದ್ದರು.

ಇಲ್ಲಿಗೆ ಕತೆ ಸುಖಾಂತ್ಯ. ಆದರೆ ಹಾಗಾಗಲಿಲ್ಲ!

ಅಪಘಾತಕ್ಕೆ ಸಿಲುಕಿದ ಈಕೆ ಬದುಕಿಗಾಗಿ ಅದೆಷ್ಟೆಷ್ಟೋ ತಿಂಗಳ ಹೋರಾಟ ನಡೆಸಬೇಕಾಯಿತು. ವಿಜ್ಞಾನವನ್ನು ಮೀರಿದ ಯಾವುದಾದರೂ ಚಮತ್ಕಾರ ನಡೆಯಬಾರದೇ ಎಂದು ಬಂಧುಮಿತ್ರರು, ಆಪ್ತೇಷ್ಟರು ಗೋಳಾಡಿದರು. ಮೇಲಿನವನಿಗೆ ಕೇಳಿಸಿತೇನೊ ತೀವ್ರ ಪೆಟ್ಟಿನಿಂದ ಆಕೆ ಥೇಟ್ ನಿದ್ದೆಯಿಂದೆದ್ದ ಹಸುಗೂಸಿನಂತೆ ಮೇಲೆದ್ದು ಬಂದರು.

ಜೀವ ಚೇತರಿಸಿಕೊಂಡಿತು, ಆದರೆ ಬುದ್ಧಿಯಲ್ಲ. ಮೊದಲಿನ ಬೌದ್ಧಿಕ ಸಾಮರ್ಥ್ಯ ಮಾಯವಾಗಿ, ಸಾಮಾನ್ಯರಂತಾಗಿದ್ದ ಆಕೆಯ ಪಾಲಿಗೆ ಮತ್ತೂ ಒಂದು ಅಪಘಾತ ಕಾದಿತ್ತು. ನೆಚ್ಚಿನ ಪತಿ, ಪ್ರೀತಿಯ ಮಗ ಇಬ್ಬರೂ ಆಕೆಯನ್ನು ತೊರೆದು ನಡೆದರು. ಮೊದಲಿನಷ್ಟು ಪ್ರತಿಭೆಯಿಲ್ಲದ ಪತ್ನಿ, ಹಿಂದಿನಂತಿಲ್ಲದ ಅಮ್ಮ ಅಪ್ಪಮಗನಿಗೆ ಬೇಡವಾಗಿದ್ದರು. ಆದರೆ ಜೀವನ ಯಾರಿಗಾಗಿಯೂ ನಿಲ್ಲುವುದಿಲ್ಲವಲ್ಲ!

ಮಾನವೀಯತೆ ಎಂಥಾ ಪಾಂಡಿತ್ಯವನ್ನೂ ಮೀರಿದ್ದು ಎಂಬುದಕ್ಕೆ ಸಾಕ್ಷಿಯಂತಿರುವ ಈತನನ್ನು ಪ್ರಪಂಚ ಇಂದಿಗೂ ಹಾಡುತ್ತದೆ, ಹೊಗಳುತ್ತದೆ, ಅಟ್ಟಕ್ಕೇರಿಸುತ್ತದೆ. ಆದರೂ ಇಲ್ಲೊಂದು ಸಂಶಯ

ಒಟ್ಟಿಗೆ ಬದುಕುವುದಾಗಿ ಪಣ ತೊಟ್ಟ, ನೋವುನಲಿವಿನಲ್ಲಿ ಪಿಸುಗುಟ್ಟಿದ ಜೀವದೊಂದಿಗೆ ಹೇಗಿರಬೇಕು ಎಂಬುದು ಆತ ತಿಳಿದ ಯಾವುದೇ ಭಾಷೆಗಳಲ್ಲಿ, ಅರಿತ ಯಾವುದೇ ಧರ್ಮಗಳಲ್ಲಿ ಹೇಳಿಲ್ಲವೇ?

ಹೊರಳುಹಾದಿ (ಭಾಗ-2)

ಹಾಗೆ ನೋಡಿದರೆ ದೊಡ್ಡಪ್ಪ ಕಂಜೂಸಿಯೇನಲ್ಲ. ಆದರೆ ಜಿಗುಟು ಸ್ವಭಾವದಿಂದಾಗಿ ಕೆಲವು ವಿಷಯಗಳಲ್ಲಿ ತಮ್ಮ ಪಟ್ಟು ಸಡಿಲಿಸುತ್ತಿರಲಿಲ್ಲ. ಈಗ ಶ್ರೀಕಾಂತನ ಮಾತಿಗೆ ಮೆದುವಾಗುತ್ತಿದ್ದುದನ್ನು ಕಂಡು ಅವರ ಮೊದಲ ಮಗ ಶ್ರೀನಿವಾಸ ಸೆಟೆದುಕೊಂಡಿದ್ದ. ಮನೆಯಲ್ಲಿ ಕೃಷಿ ಮಾಡಿಕೊಂಡಿರುವ ಹುಡುಗರಿಗೆ ವಧು ಸಿಗುವುದೇ ಕಷ್ಟವಾಗಿ, ಇದರ ಬಿಸಿ ಶ್ರೀನಿವಾಸನನ್ನೂ ತಟ್ಟಿತ್ತು. ಮೂವತ್ತಾದ ತಾನು ಮನೆಯಲ್ಲಿದ್ದರೂ, ಇಪ್ಪತ್ತೈದರ ಸಾಫ್ಟ್ ವೇರ್ ತಮ್ಮನಿಗೆ ಜನ ಜಾತಕ ಕೊಡಲು ಮುಂದಾದಾಗ ಕೊಂಚ ಅಧೀರನಾಗಿದ್ದ. ಮನೆಯಲ್ಲಿದ್ದರೂ ಅಡ್ಡಿಯಿಲ್ಲ ಎಂದು ಅಪರೂಪಕ್ಕೆ ಮುಂದಾಗುವ ಕನ್ಯಾಪಿತರು ನಮ್ಮನೆಯಲ್ಲಿ ಮೂಲಸೌಕರ್ಯವೇ ಇಲ್ಲದ್ದನ್ನು ಗಮನಿಸಿ ಹಿಂದೆ ಸರಿಯುತ್ತಿದ್ದರು. ಹಾಗೂ ಹೀಗೂ ಹುಡುಗಿ ಸಿಕ್ಕು ಮದುವೆಯಾದರೂ, ಆಕೆ ಶ್ರೀನಿವಾಸನ ಮನಸ್ಸಿಗೆ ಬರಲಿಲ್ಲ. ಬೆಳ್ಳಗೆ ಚಂದದ ಆಳ್ತನ ಇರುವ ತನಗೆ ಕೊಂಚ ಕಪ್ಪು ಮತ್ತು ಸ್ವಲ್ಪ ಹೆಚ್ಚೇ ದಪ್ಪವಿರುವ ಹೆಂಡತಿ ಸಿಕ್ಕಿದ ಬಗ್ಗೆ ಆತನಿಗೆ ಬೇಸರವಿತ್ತು. ಈಗ ಮಾಡಿಸಿದಂತಹ ವ್ಯವಸ್ಥೆಯನ್ನು ಎರಡು ವರ್ಷಗಳ ಮೊದಲೇ ಮಾಡಿಸಿದ್ದರೆ ತನಗೆ ಚಂದದ ಹೆಂಡತಿ ಸಿಕ್ಕುತ್ತಿದ್ದಳಲ್ಲಾ, ಮನೆ ಮೂಲ ಸೌಕರ್ಯಕ್ಕೂ ವಿದೇಶದಿಂದಲೇ ಆಜ್ಞೆ ಬರಬೇಕೆ ಎಂಬುದು ಆತನ ಸಿಟ್ಟಿನ ಮೂಲವಾಗಿತ್ತು.

ಮೊನ್ನೆ ನಡೆದ ಗಣಹೋಮಕ್ಕೆ ಶರಾವತಿ ಅತ್ತೆ ಬಂದಿದ್ದಳು. ಶಿವಮೊಗ್ಗದಲ್ಲಿ ನೆಲೆಸಿರುವ ಆಕೆ ತನ್ನ ಮಕ್ಕಳಿಗೆ ಶಾಲೆ ರಜೆಯಿದ್ದಾಗ ಮಾತ್ರವೇ ತವರಿಗೆ ಬರುತ್ತಿದ್ದಳು. ಆಕೆಯ ಯಜಮಾನರಂತೂ ಅಪರೂಪಕ್ಕಷ್ಟೇ ಬರುತ್ತಿದ್ದರು. ಆದರೆ ಮಕ್ಕಳ ಪರೀಕ್ಷೆ ಸಮೀಪಿಸುತ್ತಿರುವ ದಿನದಲ್ಲಿ ಆಕೆ ಗಣಹೋಮಕ್ಕೆ ಬಂದಿದ್ದು ಕಂಡು ಎಲ್ಲರಿಗೂ ಅಚ್ಚರಿಯಾಗಿತ್ತು. ಸದಾ ಸಾಸಿವೆಯಂತೆ ಸಿಡಿಯುತ್ತಿರುತ್ತಿದ್ದ ಆಕೆ ಬಂದಾಗಿನಿಂದಲೂ ಹೆಚ್ಚು ಮಾತುಕತೆಯಿಲ್ಲದೆ ಕುಳಿತ ಎಲ್ಲರಿಗೂ ಒಗಟಿನಂತಾಗಿದ್ದಳು. ಪದೇ ಒದೇ ಹಜಾರದ ಮೂಲೆಯತ್ತ ಇಣುಕು ನೋಟ ಹರಿಸಿ, ಏನೋ ತನಿಖೆ ನಡೆಸುತ್ತಿರುವಂತೆ ಕಂಡುಬಂದಳು. ಆಗೀಗೊಮ್ಮೆಲೊಚ್ಗುಡುತ್ತಾ ನಿಟ್ಟುಸಿರೊಂದನ್ನು ಹೊರಹಾಕುತ್ತಿದ್ದಳು. ಕೆಲಸಕಾರ್ಯಗಳೆಲ್ಲಾ ಮುಗಿಸಿದ ದೊಡ್ಡಮ್ಮ ಸಂಜೆ ಹೊತ್ತಿಗೆ ಅತ್ತೆಯೊಂದಿಗೆ ಮಾತಿಗೆ ಶುರುವಿಟ್ಟರು.

ಗಣಹೋಮಕ್ಕೆ ನೀ ಬತ್ತಿಲ್ಯೇನ ಮಾಡಿದಿದ್ದಿ. ಆದ್ರೆ ಬಂದಿದ್ದಕ್ಕೆ ಖುಷಿ ಆತೆ ಶರಾವತಿ. ಯಜಮಾನ್ರೂ ಬಂದಿದ್ರೆ ಚೊಲೊ ಆಗಿತ್ತು…”

ಎಂತಕ್ಕೆ ಬರವ್ವು ಹೇಳು ಅತ್ಗೆ? ಅವ್ರಿಗೆ ಇಲ್ಲೆಂತ ಕಿಮ್ಮತ್ತಿದ್ದು ಹೇಳಿ ಬರವ್ವುಎಂದು ಅತ್ತೆ ಸಿಡಿದಳು. ಎಲ್ಲರ ಚುಚ್ಚು ನುಡಿಗಳಿಂದ ಬೇಸತ್ತು ನಾದಿನಿಯಾದರೂ ಸರಿಯಾಗಿ ಮಾತನಾಡಬಹುದೆಂಬ ಸಹಜ ನಿರೀಕ್ಷೆಯಲ್ಲಿದ್ದ ಸಾಧು ಸ್ವಭಾವದ ದೊಡ್ಡಮ್ಮ ಮಾತಿನಿಂದ ಮತ್ತಷ್ಟು ನೊಂದುಕೊಂಡರು.

ಇನ್ನೆಂತದು? ಯನ್ನ ಮದುವೆಯಾಗಿ ಹದಿನೈದು ವರ್ಷಾತು. ಆಗ್ಲಿಂದ ಅವ್ರು ಹೇಳ್ತಿದ್ದ ಮನೆಗೊಂದು ಟಾಯ್ಲೆಟ್ ಮಾಡ್ಸಿ ಹೇಳಿ. ಕಡಿಗಂತೂ ಅವ್ರ ಉಪಕಾರಕ್ಕೆ ಹೇಳಿ ಅದ್ನ ಮಾಡ್ಸಿದ್ರೂ ಬೇಕಾಬಿಟ್ಟಿ ವ್ಯವಸ್ಥೆ ಮಾಡ್ಸಿದ್ದ ಅಣ್ಣಯ್ಯ. ಈಗ ಮಗ ಹೇಳಿದ್ದೆಲ್ಲಾ ವೇದವಾಕ್ಯ. ಅಳಿಯನ ಮಾತೂಂದ್ರೆ ಎಷ್ಟು ಕಿಮ್ಮತ್ತು ಹೇಳಿ ಗೊತ್ತಾತಲ್ಲ ಎಂದು ಅತ್ತೆ ವಿಷ ಉಗುಳಿದಳು.’

ಹಾಂಗಲ್ಲ ಶರಾವತಿ. ಮನೆ ಬದಿಗೆ ವ್ಯವಸ್ಥೆ ಮಾಡ್ಸಿದ್ದು ಮಾವನೋರಿಗೆ. ಅವ್ರಿಗೆ ವಾತ ಹೆಚ್ಚಾಗಿ ನಡೆಯಲೇ ಆಗ್ತಿತ್ತಿಲ್ಲೆ. ಹಾಂಗಾಗಿ ಶ್ರೀಕಾಂತನೇ ಮಾಡ್ಸಿದ್ದ ಎಂಬ ದೊಡ್ಡಮ್ಮನ ಅಸಹಾಯಕ ವಿವರಣೆಗೆ, ‘ಹೌದಲ್ದ! ಹೆಸರು ಅಪ್ಪಯ್ಯಂದು. ಅನುಕೂಲ ಮಗಂದು. ಯಂಗೇನು ಗೊತ್ತಾಗ್ತಿಲ್ಯ? ಅಪ್ಪಯ್ಯನಿಗೆ ವಾತವೆಂತಾ ಹೊಸದಾ? ಇಷ್ಟು ವರ್ಷ ಇಲ್ಲದ್ದು ಈಗೆಂತಕ್ಕಾಗಿತ್ತು? ಎಲ್ಲಾ ಅಮೆರಿಕದ ಮಹಾತ್ಮೆ!’ ಎಂದು ಇನ್ನಷ್ಟು ವ್ಯಂಗ್ಯವಾಡಿ ಎದ್ದು ಹೋದಳು.

************

ಮಕ್ಕಳ ಪರೀಕ್ಷೆ ಮುಗಿದು ಬೇಸಿಗೆ ರಜೆ ಆರಂಭವಾಗಿತ್ತು. ಕೋಪಾಕ್ರಾಂತಳಾಗೇ ಇದ್ದ ಶರಾವತಿ ಅತ್ತೆ ರಜೆಯಲ್ಲಿ ತವರಿಗೆ ಬರಲೇಇಲ್ಲ. ಮಕ್ಕಳನ್ನೂ ಕಳುಹಿಸಲಿಲ್ಲ. ಆದರೆ ಬೆಂಗಳೂರಿನಿಂದ ಕಿರಿಯ ಅತ್ತೆ ಮಾಲಿನಿ ಮೂರು ವರ್ಷದ ಮಗಳೊಂದಿಗೆ ಹಾಜರಾದಳು. ಪುಟ್ಟ ಶ್ರೀನಿಧಿಯ ತಪ್ಪುತೊದಲುಗಳಿಂದ ಮನೆಯ ವಾತಾವರಣ ಕೊಂಚ ತಿಳಿಯಾಗಿತ್ತು. ಬೇಸಿಗೆ ಆರಂಭವಾದಂತೆ ಅಜ್ಜನ ಆರೋಗ್ಯ ಸಂಪೂರ್ಣ ಸುಧಾರಿಸಿ, ಮೊದಲಿನಂತೆ ಓಡಾಡಿಕೊಂಡಿದ್ದರು. ಸಂಜೆ ಹೊತ್ತಿಗೆ ಶ್ರೀನಿಧಿಯೊಂದಿಗೆ ಕೇರಿಯ ಆಚೀಚೆಯ ಮನೆಗಳಿಗೆ ಹೋಗುತ್ತಿದ್ದರು. ದಿನ ಸಣ್ಣ ಜ್ವರ ಬಂದು ಅಜ್ಜ ಮಲಗಿದ್ದರಿಂದ ಗಲಾಟೆ ಮಾಡುತ್ತಿದ್ದ ನಿಧಿಯನ್ನು ಮಾಲಿನಿ ಅತ್ತೆ ಮತ್ತು ದೊಡ್ಡಮ್ಮ ಪಕ್ಕದ ಮನೆಗೆ ಕರೆದೊಯ್ದರು. ಅಂಗಳದಲ್ಲಿ ಒಣಗಿಸಿದ್ದ ಹಲಸಿನ ಹಪ್ಪಳ ತುಂಬುತ್ತಿದ್ದ ಆಚೆಮನೆ ಯಮುನಜ್ಜಿ, ಮಾಲಿನಿ ಅತ್ತೆಯೊಂದಿಗೆ ಮಾತಿಗೆ ಶುರುವಿಟ್ಟರು.

ಇದೆಂತೆ ಮಾಲಿನಿ, ಸುಮಾರು ದೊಡ್ಡ ಹೊಟ್ಟೆ ಕಾಣ್ತು. ಇನ್ನೇನಾದ್ರೂ ವಿಶೇಷ ಇದ್ದಾ?”

ಇನ್ನೆಂತ ಇರ್ತು ವಿಶೇಷ ಯಮುನಜ್ಜಿ?’

ಮತ್ತೆ…? ಕೂಸಿನ ಬಾಣಂತಿಯಾದಾಗ ಹೊಟ್ಟೆ ಸರಿ ಕರಗಿಸಿದ್ದಿಲ್ಯ? ನಿನ್ನಮ್ಮನೇ ಅಲ್ದ ಬಾಣಂತನ ಮಾಡಿದ್ದು?”

ಹೂಂ. ಅಮ್ಮ ಬೆಂಗಳೂರಿಗೆ ಬರೋಷ್ಟರಲ್ಲಿ ಕೂಸು ಹುಟ್ಟಿ ಹದಿನೈದು ದಿನ ಆಗಿತ್ತು. ಅದ್ಕೆ ಹೊಟ್ಟೆ ಸರಿ ಕರಗಿದ್ದಿಲ್ಲೆಪಾಪ! ಇಲ್ಲಿನ ತಾಪತ್ರಯ ಮುಗಿಸಿ ಬರಾಡ್ದಾ ನಿನ್ನಮ್ಮ? ಡಾಕ್ಟ್ರು ನಿಂಗೆ ರೆಶ್ಟು ಹೇಳಿದಿದ್ವಲ್ಲಾನೀನೇ ಇಲ್ಲಿಗೆ ಬಪ್ಪದಲ್ದ?’

ಇಲ್ಲೆಂತ ಇತ್ತು ಆಗ? ಒಂದು ಸರಿ ಬಚ್ಚಲಿನ ವ್ಯವಸ್ಥೆಯಾದ್ರೂ ಇತ್ತಾ? ಎಷ್ಟ್ ಹೇಳಿದ್ರೂ ಅಣ್ಣಯ್ಯ ಕೇಳಿದ್ನಿಲ್ಲೆ. ಯಾವ ಬಾಣಂತೀರಿಗೂ ಆಗಗಿದ್ದ ತ್ರಾಸು ನಿಂಗ್ ಮಾತ್ರ ಆಗ್ತಾ ಹೇಳೆಲ್ಲಾ ಕೇಳಿದ್ದಅತ್ತೆ ಅಸಮಾಧಾನ ಹೊರ ಹಾಕಿದಳು.

ತಕ್ಷಣ ವಿಷಯ ಬದಲಿಸಿದ ದೊಡ್ಡಮ್ಮ, ‘ ವರ್ಷ ಯಮ್ಮನೆ ಶ್ರೀಕಾಂತಂಗೆ ಜಾತಕ ತಗತ್ತಾ ಇದ್ಯ ಯಮುನಕ್ಕ. ಎಲ್ಲಾದ್ರೂ ಚೊಲೊ ಕೂಸಿದ್ರೆ ಹೇಳೆಎಂದಳು.ಓಹೊ ಅಡ್ಡಿಲ್ಲೆಎಂದ ಯಮುನಜ್ಜಿ ಏನನ್ನೊ ನೆನಪಿಸಿಕೊಂಡವಳಂತೆ ಸಣ್ಣ ಧ್ವನಿಯಲ್ಲಿ ಹೇಳತೊಡಗಿದಳು; ‘ಅಲ್ಲ ಮಾರಾಯ್ತಿ, ನಿನ್ನ ಮಾವನೋರಿಗೆ ಹೊಸ ಸಂಡಾಸಿನ ವ್ಯವಸ್ಥೆ ಮಾಡ್ಸಿದ್ರಲ್ಲಾ ಅಂಥದ್ದೇ ತನಗೂ ಬೇಕು. ತನ್ನ ಕೈಕಾಲೂ ನೋವು. ಓಡಾಡಲೇ ಆಗ್ತಿಲ್ಲೆ ಹೇಳಿ ನಮ್ಮನೆಯವ್ರು ಶುರು ಮಾಡಿದ್ದ. ಪೇಟೆಲ್ಲಿ ಅಂಗಡಿ ಹಾಕಲ್ಲೆ ದುಡ್ಡು ಕೊಡಲ್ಲಾಗ್ತಿಲ್ಲೆ ಹೇಳಿದ್ದಕ್ಕೆ ಶಟಗಂಡಿದ್ದ ನಾಣಿ ಈಗಂತೂ ಹಿಸ್ಸೆನೆ ಕೇಳ್ತಿದ್ದ. ಮನೆಲ್ಲಿ ಯಾವ್ದಕ್ಕೆ ಬೇಕಾದ್ರೂ ದುಡ್ಡಿರ್ತು, ಆನು ಕೇಳಿದ್ರೆ ಮಾತ್ರ ಇರ್ತಿಲ್ಲೆ ಹೇಳಿ ನಿನ್ನೆಯೆಲ್ಲಾ ಕೂಗಾಟ ಅವಂದು…’

****************

ಮರುದಿನ ಬೆಳಗ್ಗೆಯೇ ಹಾಜರಾದ ಆಚಾರಿಯನ್ನು ಕಂಡು ಹುಬ್ಬೇರಿಸಿದ ದೊಡ್ಡಪ್ಪ, ‘ಏನೋ! ಅರಾಮ?’ ಎಂದು ವಿಚಾರಿಸಿದರು. ಹೆಹ್ಹೆ ಎಂದು ಪೆದ್ದ ನಗೆ ಬೀರಿದ ಆಚಾರಿ, ‘ಅಮ್ಮೋರು ಹೇಳಿ ಕಳ್ಸಿದ್ರಪ್ಪಾಎಂದ.

ದೊಡ್ಡಪ್ಪ ಕರೆಯುವ ಮೊದಲೇ ಒಳಗಿನಿಂದ ಪ್ರತ್ಯಕ್ಷರಾದ ದೊಡ್ಡಮ್ಮ, ‘ಮಾವನೋರ ಸಂಡಾಸು ಒಡೆಯದಾ ಅಥ್ವಾ ಕೊಟ್ಟಿಗೆ ಪಕ್ಕದ ಬಚ್ಚಲು ಒಡೆಯದಾಯಾವುದು ಸೋವಿಯಾಗ್ತು?’ ಎಂದು ವಿಚಾರಿಸಿದರು.

ದೊಡ್ಡಮ್ಮನ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ದೊಡ್ಡಪ್ಪ, ‘ಕೊಟ್ಟಿಗೆ ಪಕ್ಕದ್ದು ಒಡೆಸಿ…!’

‘…ಒಡೆಸಿ ಹಿತ್ತಲಕಡೆಗೆ ಎರಡು ಬಚ್ಚಲು, ಎರಡು ಸಂಡಾಸಿನ ವ್ಯವಸ್ಥೆ ಮಾಡಕ್ಕಾಗ್ತು. ಇದೆಲ್ಲಾ ಬೇಕಾಪ್ಪದು ಮಾವನೋರಿಗೆ ಮಾತ್ರ ಅಲ್ಲ…’

ತಮ್ಮಿಷ್ಟಕ್ಕೆಂದೂ ಎದುರಾಡಿರದ ಹೆಂಡತಿಯ ಮಾತಿಗೆ ದೊಡ್ಡಪ್ಪನಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.

ಮನೆ ಒಡಿಯದು ಬ್ಯಾಡ ಅಂದ್ರೆ ಅವೆರಡರಲ್ಲಿ ಒಂದನ್ನ ಒಡೆಯದೇ ಆಗ್ತುಎಂದ ದೊಡ್ಡಮ್ಮ, ಆಚಾರಿಯೊಂದಿಗೆ ಕೊಟ್ಟಿಗೆ ಕಡೆ ದಾಪುಗಾಲಿಕ್ಕಿದರು.

 

(2007ರ ಡಿಸೆಂಬರ್ ನಲ್ಲಿ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಕಥೆ.)

ಹೊರಳುಹಾದಿ

ಅದು ಹೆಸರಿಗಷ್ಟೇ ಅಮೆರಿಕಾ. ಅಲ್ಲೆಲ್ಲಾ ಅಮೆರಿಕದ್ದು ಎಂತದೂ ಸಿಕ್ತಿಲ್ಲೆ. ಎಲ್ಲವೂ ಚೀನಾ, ಕೊರಿಯಾ, ಮಲೇಷ್ಯಾ, ಭಾರತ, ಶ್ರೀಲಂಕದ್ದೇಯ…’ ಜಗುಲಿಯ ಮೇಲೆ ಕೂತು ಕವಳ ಹಾಕುತ್ತಿದ್ದ ದೊಡ್ಡಪ್ಪ ಆಚೀಚೆ ಮನೆಯ ವಾರಿಗೆಯ ದೋಸ್ತರೊಂದಿಗೆ ದೊಡ್ಡ ದನಿಯಲ್ಲಿ ಪಟ್ಟಾಂಗ ಹೊಡೆಯುತ್ತಿದ್ದರು. ‘ಉಡಲ್ಲೆತೊಡಲ್ಲೆ ಚೀನಾದ ವಸ್ತ್ರ, ಹಾಸಲ್ಲೆಹೊದಿಯಲ್ಲೆ ಕೊರಿಯಾದ ಬಟ್ಟೆ, ಉಂಬಲ್ಲೆತಿಂಬಲ್ಲೆ ಹೋದ್ರೂ ಬೇರೆ ದೇಶದಲ್ಲಿ ಬೆಳೆದಿದ್ದೇ ಸಿಕ್ತಡ. ಶೀತಕೆಮ್ಮಿಗೆ ಔಷಧ ಬೇಕಂದ್ರೂ ಚೀನಾದಿಂದ್ಲೇ ಬರೋ ಅಂದ್ರೆ ಎಲ್ಲಿಗೆ ಬಂತು ಜಾಗತೀಕರಣ…’ ಸುದ್ದಿ ಬಿಗಿಯುವುದರಲ್ಲಿ ಸದಾ ಮುಂದೆಯೇ ಇದ್ದ ದೊಡ್ಡಪ್ಪ ಈಗಂತೂ ಸಿಕ್ಕಾಪಟ್ಟೆ ತೇಜಿ ಮೇಲಿದ್ದರು. ಕಾರಣಅಮೆರಿಕದಲ್ಲಿರುವ ಅವರ ಕಿರಿಯ ಮಗ ಶ್ರೀಕಾಂತ ಮೊನ್ನೆಯಷ್ಟೇ ಬಂದು ಹೋಗಿದ್ದ. ಎಲ್ಲಿಗೆ ಹೋದರೂ ಒಂದಿಷ್ಟು ಸುದ್ದಿ ಹೆಕ್ಕಿಕೊಂಡು ಬಂದು ರಂಗುರಂಗಾಗಿ ಬಣ್ಣಿಸುತ್ತಿದ್ದ ದೊಡ್ಡಪ್ಪ, ಅಮೆರಿಕದಲ್ಲಿರುವ ಮಗ ಬಂದು ಹೋದಾಗಿನಿಂದ ಭಾಗಶಃ ರಾವಣನಂತಾಗಿದ್ದರುತಲೆ ಹತ್ತಲ್ಲದಿದ್ದರೂ ಬಾಯಿ ಹತ್ತಾಗಿತ್ತು! ಮನೆಗೆ ನೆಂಟರು ಬಂದರೂ ಅದೇ ಸುದ್ದಿ, ದಾರಿಯಲ್ಲಿ ದೋಸ್ತರು ಸಿಕ್ಕರೂ ಅದೇ ಮಾತು, ಬಸ್ಸಿನಲ್ಲಿ ಪರಿಚಿತರು ಸಿಕ್ಕರೂ ಅದೇ ವಿಷಯಒಟ್ಟಾರೆ ಅವರು ಅಮೆರಿಕದ ಸನ್ನಿ ಹಿಡಿದಂತೆ ಆಡತೊಡಗಿದ್ದರು. ಎರಡು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದ ಶ್ರೀಕಾಂತ, ಮೊದಲ ಬಾರಿಗೆ ಮನೆಗೆ ಬಂದು ಹೋಗಿದ್ದ. ಆತ ಬಂದಿದ್ದು ಮೂರು ವಾರಗಳಿಗೆ ಆದರೂ ಮೂರು ವರ್ಷಕ್ಕಾಗುವಷ್ಟು ಸುದ್ದಿಯನ್ನು ದೊಡ್ಡಪ್ಪ ಸಂಗ್ರಹಿಸಿಕೊಂಡಿದ್ದರು.

ಹಾಗೆ ನೋಡಿದರೆ ಹೊರ ದೇಶಗಳ ವಿದ್ಯಮಾನ ನಮ್ಮನೆ ತಲುಪಿದ್ದು ಇದೇ ಮೊದಲೇನಲ್ಲ. ಮನೆಗೆ ಟೀವಿ, ಅದಕ್ಕೊಂದು ಆಳೆತ್ತರದ ಆ್ಯಂಟೆನಾ ಐದಾರು ವರ್ಷಗಳ ಹಿಂದೆಯೇ ಬಂದಿವೆ. ಮೊದಲಿಗೆ, ಆ್ಯಂಟೆನಾಗೆ ಸಿಗ್ನಲ್ ಸಿಗಲೆಂದು ಭಾರಿ ಎತ್ತರದ ಮರದ ಮೇಲೆ ಅದನ್ನು ಕಟ್ಟಲಾಗಿತ್ತು. ಆದರೆ ಧೀರ್ಘ ಮಳೆಗಾಲವಿರುವ ನಮ್ಮ ಮಲೆನಾಡಿನಲ್ಲಿ, ಜೋರು ಮಳೆಯೊ ಗಾಳಿಯೊ ಬಂದಾಕ್ಷಣ ಹಾಳು ಆ್ಯಂಟೆನಾ ನಿರ್ದಾಕ್ಷಿಣ್ಯವಾಗಿ ತನ್ನ ದಿಕ್ಕು ಬದಲಿಸಿಬಿಡುತ್ತಿತ್ತು. ಮಳೆ ನಿಲ್ಲುತ್ತಿದ್ದಂತೆ ಮರ ಹತ್ತಿ ಆ್ಯಂಟೆನಾ ತಿರುಗಿಸುವಾತಸಾಕಾಚಿತ್ರ ಬಂತಾಎಂದು ಕೂಗುವುದೇನು; ‘ಹೋಬಂತು ಬಂತುಹೋತುಪೂರ್ತಿ ಹೋತುಇನ್ನೊಂಚೂರು ವಾರೆ ಮಾಡು…’ ಎಂದು ಅಂಗಳದಲ್ಲಿ ನಿಂತವ ಬೊಬ್ಬಿರಿಯುವುದೇನು; ಟಿವಿ ನೋಡುವುದೆಂದರೆ ಯಜ್ಞದಂತಾಗಿತ್ತು. ಆದರೆ ಈಗ ನಾಲ್ಕು ವರ್ಷಗಳಿಂದ ನಮ್ಮನೆ ಅಂಗಳದ ಒಂದು ಭಾಗವನ್ನು ಬೃಹತ್ ಗಾತ್ರದ ಡಿಷ್ ಆ್ಯಂಟೆನಾ ನುಂಗಿ ಹಾಕಿದ್ದು, ಟಿವಿ ಎಷ್ಟೊತ್ತಿಗೂ ಒದರುತ್ತಿರುತ್ತದೆ. ದೇಶವಿದೇಶಗಳ ಸುದ್ದಿಯನ್ನು ಟಿವಿ ಕೆಲ ಮಟ್ಟಿಗೆ ತಿಳಿಸಿದರೂ, ಮನೆ ಮಗ ಬಂದು ಹೇಳಿದಂತಾಗುತ್ತದೆಯೇ?

***********

ಶ್ರೀಕಾಂತ ಬಂದ ಸಮಯದಲ್ಲೇ ನಮ್ಮಜ್ಜ ಹಾಸಿಗೆ ಹಿಡಿದಿದ್ದರು. ಬರಾಬ್ಬರಿ ಎಂಟೂವರೆ ದಶಕಗಳನ್ನು ಕಂಡಿದ್ದ ಅಜ್ಜನನ್ನು ಮಳೆಗಾಲ, ಚಳಿಗಾಲ ಬಂತೆಂದರೆ ವಾತದ ಭೂತ ಬಾಧಿಸುತ್ತಿತ್ತು, ಕೆಲವೊಮ್ಮ ವಾತ ಹೆಚ್ಚಾಗಿ ಮೊಣಕಾಲುಗಳು ಊದಿ ಕುಂಟೆಯಂತಾಗಿ ಹೆಜ್ಜೆ ಎತ್ತಿಡಲೇ ಆಗದೆ, ಎಲ್ಲವೂ ಮಲಗಿದಲ್ಲೇ ಎಂಬ ಸ್ಥಿತಿಗೆ ಬರುತ್ತಿದ್ದರು. ಶ್ರೀಕಾಂತ ಬಂದಾಗಲೂ ಹಾಗೇ ಆಗಿತ್ತು. ಊಟತಿಂಡಿ, ಸ್ನಾನಸಂಧ್ಯಾವಂದನೆಗಳೆಲ್ಲಾ ಹೇಗೊ ನಡೆಯುತ್ತಿದ್ದವು. ಆದರೆ ಶೌಚಕಾರ್ಯ ಮಾತ್ರ ತೀರಾ ತೊಡಕಾಗಿಬಿಟ್ಟಿತ್ತು. ಬಹುಪಾಲು ಮಲೆನಾಡಿನ ಮನೆಗಳಂತೆ, ನಮ್ಮನೆ ಬಚ್ಚಲು ಮತ್ತು ಶೌಚಾಲಯ ಮನೆಗೆ ಅಂಟಿಕೊಂಡಿರದೆ ಅನತಿ ದೂರದಲ್ಲಿತ್ತು. ಅಲ್ಲಿಗೆ ಅಜ್ಜನನ್ನು ಕರೆದೊಯ್ಯುವುದು ಹೇಗೆ? ಒಮ್ಮೆ ಕರೆದುಕೊಂಡು ಹೋದರೂ, ನಡೆಯಲೇ ಆಗದ ಅವರು ಎದ್ದುಕೂತು ಮಾಡುವುದು ಹೇಗೆ? ಸಮಸ್ಯೆಗೆ ಪರಿಹಾರ ಎಂಬಂತೆ ಅಜ್ಜ ಮಲಗುತ್ತಿದ್ದ ಹಜಾರಕ್ಕೆ ತಾಗಿಸಿ ಸಣ್ಣದೊಂದು ಕಮೋಡ್ ಹೊಂದಿದ ಶೌಚಾಲಯ ನಿರ್ಮಿಸಬೇಕೆಂಬ ಸಲಹೆ ಶ್ರೀಕಾಂತನಿಂದ ಬಂತು.

ಶಿ ಶ್ಶೀ! ನಿಂಗೆ ಪೂರಾ ಮಳ್ಳು ಶ್ರೀಕಾಂತ! ಜಗುಲಿ ಪಕ್ಕದಲ್ಲಿ ಅದನ್ನೆಲ್ಲಾ ಮಾಡಲ್ಲಾಗ್ತ? ಅದೆಲ್ಲಾ ನಿನ್ಮನೆ ಅಮೆರಿಕದಲ್ಲಿ ಆಗ್ತು, ನಮ್ಮನೆಲ್ಲಲ್ಲ…’ ಎಂದ ಅಜ್ಜಿ, ಸಲಹೆಯನ್ನು ಖಡಾಖಂಡಿತವಾಗಿ ವಿರೋಧಿಸಿದರು. ಅಜ್ಜಿ ಮಾತ್ರವಲ್ಲ, ಅಜ್ಜನೂ ಇದಕ್ಕೆ ಒಪ್ಪಲಿಲ್ಲ. ದೂರದಲ್ಲಿರುವ ಶೌಚಾಲಯಕ್ಕೆ ತೆರಳಲು ತನಗೇನೂ ಸಮಸ್ಯೆಯಿಲ್ಲ ಎಂದು ವಾದಿಸಿ, ‘ನಿನ್ನ ಅಮೆರಿಕ ಬಿಡು, ಊರಿದೊಂದು ದಾರಿಯಾದ್ರೆ, ಪೋರಂಗೊಂದು ದಾರಿಎಂದು ಪರದೇಶವನ್ನು ಸಣ್ಣದಾಗಿ ಲೇವಡಿ ಮಾಡಿದರು. ‘ಅಷ್ಟು ದೂರದಲ್ಲಿ ಬಚ್ಚಲು ಮಾಡ್ಸದು ಬ್ಯಾಡ ಹೇಳಿದ್ರೂ ಕೇಳದ ಭಾವನೋರು ಈಗೆಂತ ಮಾಡ್ತ್ರಡ?’ ಎಂದು ಕಿರಿಯ ಸೊಸೆ ಕುಟುಕಿದರು. ಆದರೆ ಅಜ್ಜನ ಬವಣೆ ನೋಡಲಾಗದ ಶ್ರೀಕಾಂತ, ಯಾರ ಮಾತಿಗೂ ಸೊಪ್ಪು ಹಾಕದೆ ಮರುದಿನವೇ ಆಚಾರಿಗೆ ಬರಲು ಹೇಳಿದ. ಸಣ್ಣ ಕೆಲಸವಾದ್ದರಿಂದ ಮತ್ತು ಬಜೆಟ್ಟೂ ಶ್ರೀಕಾಂತನದೇ ಆದ್ದರಿಂದ ಎಂಟ್ಹತ್ತು ದಿನಗಳಲ್ಲೇ ಕಮೋಡ್ ನಿರ್ಮಾಣಗೊಂಡು ಬಳಕೆಗೆ ಸಿದ್ಧವಾಯಿತು, ಆದರೆ ಸಮಸ್ಯೆ ಆರಂಭವಾಗಿದ್ದೇ ಇಲ್ಲಿಂದ ಮುಂದೆ. ಮೈಕೈಕಾಲಿಗೆಲ್ಲಾ ತಾಗಿಸಿಕೊಂಡು ಕಮೋಡ್ ಮೇಲೆ ಕುಳಿತುಕೊಳ್ಳಲು ಅಜ್ಜ ಸುತಾರಾಂ ಒಪ್ಪಲಿಲ್ಲ. ‘ಇದೆಂಥ ಕೊಳಕು! ಯಂಗೆ ಬ್ಯಾಡ ಎಂದು ಮಕ್ಕಳಂತೆ ರಚ್ಚೆ ಹಿಡಿದರು. ಅಂತು ಅವರನ್ನು ಒಪ್ಪಿಸಲು ತಾನು ಕಲಿತ ಬುದ್ಧಿಯನ್ನೆಲ್ಲಾ ಶ್ರೀಕಾಂತ ಖರ್ಚು ಮಾಡಬೇಕಾಯಿತು, ಕಾಗದಕ್ಕೆ ದೈವೀ ಸ್ವರೂಪ ನೀಡಿದ್ದ ಅವರ ಮನಸ್ಸಿಗೆ ಅದನ್ನು ಟಾಯ್ಲೆಟ್ ಪೇಪರಿನಂತೆ ಬಳಸುವುದನ್ನು ಊಹಿಸುವುದೂ ಸಾಧ್ಯವಿರಲಿಲ್ಲ. ‘ರಾಮರಾಮಾ! ನಮ್ಮನೆಲ್ಲಿ ನೀರಿಗೆಂತ ಬರಗಾಲವಾ?’ ಎಂದು ಕುಪಿತರಾಗಿ ಟಿಷ್ಯೂ ಬಿಸಾಡಿದರು. ಆದರೆ ಕಮೋಡ್ ಬಳಸಲು ಆರಂಭಿಸಿದ ಕೆಲವು ದಿನಗಳ ನಂತರ ತಮ್ಮ ಆರೋಗ್ಯಕ್ಕಿದು ಅನುಕೂಲವೇ ಎಂಬುದು ಅಜ್ಜನಿಗೆ ಮನವರಿಕೆಯಾಯಿತು, ಅಜ್ಜಿಗೂ ನಿರಂತರ ಪತಿ ಸೇವೆಯಿಂದ ಕೊಂಚ ಬಿಡುವು ದೊರೆಯಿತು.

**************

ಶ್ರೀಕಾಂತ ಬಂದು ಹೋದಾಗಿನಿಂದ ಚಿಕ್ಕಮ್ಮ ಕೊಂಚ ಅಸಮಾಧಾನದಲ್ಲಿದ್ದರು. ಸಾಧ್ಯವಿದ್ದಲ್ಲೆಲ್ಲಾ ದೊಡ್ಡಮ್ಮನಿಗೆ ಕುಟುಕುತ್ತಿದ್ದರು. ‘ಮನಿಂದ ಮಾರು ದೂರದಲ್ಲಿ ಬಚ್ಚಲು ಮಾಡ್ಸಿದ್ರೆ ಬರಿ ಅಲವರಿಕೆ. ರಾತ್ರಿಯೆಲ್ಲಾ ಎದ್ದು ಹೋಗೋಂದ್ರೆ ತ್ರಾಸು. ಹೊರಗಿಪ್ಪ ಹೆಂಗಸ್ರಿಗಂತೂ ಕರ್ಕರೆ ಹೇಳಿ ಎಷ್ಟ್ ಹೇಳಿದ್ರೂ ಭಾವನೋರು ಕೇಳಿದ್ರಿಲ್ಲೆ. ಈಗ ಮಗ ಮಾಡಿದ್ದೆಲ್ಲಾ ಲಾಯ್ಕಾಗ್ತುಎಂದು ದೊಡ್ಡದೊಂದು ಒಗ್ಗರಣೆ ಹಾಕೇಬಿಟ್ಟರು.

ಅಲ್ಲಿಂದ ಮೇಲಿನ ರಸ್ತೆಯಲ್ಲಿ ಓಡಾಡೊ ಜನರೆಲ್ಲಾ ಕಾಣ್ತ. ಅಷ್ಟು ದೂರದಿಂದ ಮಿಂದ್ಕಂಡು ಒದ್ದೆ ಬಟ್ಟೆಲ್ಲಿ ಬಪ್ಪಲೆ ಸರಿಯಾಗ್ತಿಲ್ಲೇಂತ ಎಷ್ಟು ಹೇಳಿದ್ರೂ ಭಾವನ ಕಿವಿಗೆ ಬಿಜ್ಜಿಲ್ಲೆ. ಈಗ ಮನೆ ಪಕ್ಕದಲ್ಲಲ್ಲ, ಒಳಗೇ ಬಂತು ನೋಡು ಸಂಡಾಸು. ಅಮೆರಿಕದಲ್ಲಿದ್ದ ಮಗ ಎಂತ ಮಾಡಿದ್ರೂ ಚಂದ ಬಿಡುಎಂದು ಅಮ್ಮನೂ ಘಾಟು ಹೆಚ್ಚಿಸಿದಳು.

ಇದೇ ವಿಷಯವಾಗಿ ಮುನಿದು ಹಿಸ್ಸೆ ತೆಗೆದುಕೊಂಡು ಪಕ್ಕದಲ್ಲೇ ಬೇರೆ ಮನೆ ಮಾಡಿಕೊಂಡಿದ್ದ ಕಿರಿಯ ಸೊಸೆಯಂತೂ ಇದೀಗ ಕೈ ತಟ್ಟಿ ಆಡಿಕೊಳ್ಳುತ್ತಿದ್ದಳು. ಬಹು ಕಾಲದಿಂದ ಸಾಗರ ಪೇಟೆಯಲ್ಲೇ ನೆಲೆಸಿದ್ದ ಆಕೆಯ ತವರು ಮನೆಯವರು ಮೂಲ ಸೌಕರ್ಯವಿಲ್ಲ ಎಂಬ ಕಾರಣಕ್ಕೆ ನಮ್ಮನೆಗೆ ಬರುವುದೇ ಅಪರೂಪವಾಗಿತ್ತು. ಬಂದರೂ, ಹೀಗೆ ಬಂದು ಹಾಗೆ ಹೋಗುತ್ತಿದ್ದರು. ‘ನಮ್ಮನೆಯವ್ರು ಮೋಟರ್ ಸೈಕಲ್ಲಿಂದ ಬಿದ್ದು ಕಾಲು ಮುರ್ಕಂಡಾಗ ಸಾಮಾನ್ಯ ತ್ರಾಸ್ ಪಡಲ್ಲೆ. ಈಗಿದ್ದ ಸಂಡಾಸಿಗೇ ಕಮೋಡ್ ಕುರ್ಚಿ ಸಿಗ್ತಡ ಪೇಟೆಲ್ಲಿ ಅಂದ್ರೆ ಭಾವ್ ಗಳು ತಗಂಬರಕ್ಕೆ ಬಿಡ್ಲೇಇಲ್ಲೆ. ಸಂಗಾತಿ ಗುಣ ಸೋತು ನೋಡು, ಹೆಂಡ್ತಿ ಗುಣ ಹೇತು ನೋಡು ಅಂತೆಲ್ಲಾ ಕೆಟ್ಟ ವೇದಾಂತ ಹೇಳ್ತಿದ್ದ. ಈಗಅಮೆರಿಕದ್ ಹೆಸ್ರ್ ಹೇಳಿರೆ ಎಂತ್ ಬೇಕಾದ್ರೂ ಆಗ್ತು ತಗ ಎಂದು ದೊಡ್ಡಮ್ಮನಿಗೆ ಕೇಳುವಂತೆ ಸಾಧ್ಯವಾದಷ್ಟೂ ಗಟ್ಟಿಯಾಗಿ ಹೇಳುತ್ತಿದ್ದಳು.

ಮೂಲತಃ ಅಜ್ಜನಿಗೆ ಇಂಥದ್ದೊಂದು ವ್ಯವಸ್ಥೆ ಮಾಡಿಸಿದ್ದಕ್ಕೆ ಯಾರಿಗೂ ಬೇಸರವಿರಲಿಲ್ಲ. ಆದರೆ ಈಗ ಕೆಲವು ವರ್ಷಗಳ ಹಿಂದೆ ಮನೆಗೊಂದು ವ್ಯವಸ್ಥಿತ ಬಚ್ಚಲು ಮತ್ತು ಶೌಚಾಲಯ ನಿರ್ಮಿಸುವಾಗ ದೊಡ್ಡಪ್ಪ ಯಾರ ಮಾತನ್ನೂ ಕೇಳದೆ ತಮ್ಮಿಷ್ಟಕ್ಕೆ ಬಂದಂತೆ ನಿರ್ಮಿಸಿದ್ದು ಮನೆಯಲ್ಲಿ ಎಲ್ಲರ ಅಸಮಾಧಾನಕ್ಕೆ ಕಾರಣವಾಗಿತ್ತು. ‘ಥೋ ಥೋಅದನ್ನೆಲ್ಲಾ ಹಿತ್ತಲಕಡೆಗೆ ಕಟ್ಸಲ್ಲಾಗ್ತ? ಯಾವುದು ಎಲ್ಲಿರವ್ವೊ ಅಲ್ಲೇ ಇರ. ಅದನ್ನ ಕೊಟ್ಟಿಗೆ ಬದಿಗೇ ಕಟ್ಸದು. ಮೊದಲ್ಲೆಲ್ಲಾ ಗುಡ್ಡ ಹತ್ತಿ ಹೋಗ್ತಿದ್ರಿಲ್ಯಾ? ಈಗ ಇಷ್ಟೆಲ್ಲಾ ಅನ್ಕೂಲ ಆಗ್ತಿದ್ದು ಹೇಳಿ ಖುಷಿ ಪಡಿಎಂದು ಎಲ್ಲರ ಬಾಯಿ ಮುಚ್ಚಿಸಿದ್ದರು. ಆದರೀಗ ಮನೆಯವರ ಮಾತಿಗಿಂತ ವಿದೇಶದಲ್ಲಿರುವ ಮಗನ ಮಾತಿಗೆ ಹೆಚ್ಚಿನ ಬೆಲೆ ಬಂದಿದ್ದು ಕಂಡು ಮನೆ ವಾತಾವರಣ ಬಿಗಿಯಾಗಿತ್ತು.

ಇದಿಷ್ಟೇ ಅಲ್ಲ, ಶ್ರೀಕಾಂತ ವಿದೇಶಕ್ಕೆ ಹೋದ ಮೇಲೆ ಮನೆಗೊಂದು ದೂರವಾಣಿಯೂ ಬಂದಿತ್ತು. ಕೇರಿಯಲ್ಲಿ ಎಲ್ಲರ ಮನೆಗೆ ನಾಲ್ಕೈದು ವರ್ಷಗಳ ಹಿಂದೆಯೇ ದೂರವಾಣಿ ಬಂದರೂ, ಅದು ನಮ್ಮನೆ ಪ್ರವೇಶಿಸಲು ಶ್ರೀಕಾಂತ ಅಮೆರಿಕ ಸೇರಬೇಕಾಯ್ತು. ‘ಪತ್ರ ಬರೆದು ಹಾಕಿದ್ರೆ ವಾರದಲ್ಲಿ ಉತ್ತರ ಬತ್ತು. ಫೋನುಗೀನೆಲ್ಲಾ ಸುಮ್ನೆ ಹರಗಣ, ಖರ್ಚಿಗಷ್ಟೇಎಂದು ತಳ್ಳಿಹಾಕಿದ್ದ ದೊಡ್ಡಪ್ಪನಿಗೆ ವಿದೇಶಕ್ಕೆ ಪತ್ರ ಬರೆದು ಸ್ಟ್ಯಾಂಪ್ ಅಂಟಿಸುವ ಖರ್ಚಿನಲ್ಲಿ ನೇರ ಮಾತೇ ಆಡಬಹುದಲ್ಲ ಎನಿಸಿರಬೇಕು. ಆದರೆ ಬಿಎಸ್ಸೆನ್ನೆಲ್ ಕೊಟ್ಟ ಫೋನು ಪದೇ ಪದೇ ಕೈಕೊಡುತ್ತಲೊ, ಆಗಾಗಗೊರ್ರ್ಕೊಂಯ್ಶ್ ಶ್ಎಂದು ಸದ್ದು ಮಾಡುತ್ತಲೋ ಇದ್ದುದರಿಂದ ಶ್ರಿಕಾಂತ ಬರುವಾಗ ಹೊಸದೊಂದು ದೂರವಾಣಿ ತಂದಿದ್ದ. ಕರೆಂಟಿದ್ದಾಗ ಮಾತ್ರ ಕೆಲಸ ಮಾಡುವ, ನೂರೆಂಟು ಬಟನ್ ಹೊಂದಿದ ದೊಡ್ಡ ಫೋನಿಗೆ ಜೀವ ತುಂಬಲು ಅಡಾಪ್ಟರೊ ಮತ್ತೊಂದೊ ಎಲ್ಲವನ್ನೂ ಜೋಡಿಸಲಾಗಿತ್ತು. ಕರೆಂಟಿಲ್ಲದಾಗ ಗೊರ್ರ್ಗುಡಲು ನಮ್ಮ ಹಳೆಯ ಫೋನೂ ಬೇಕಾದ್ದರಿಂದ, ಮೇಜಿನ ತುಂಬಾ ಹರಗಣದಂತೆಯೇ ಕಾಣಿಸುತ್ತಿತ್ತು. ಫೋನಿನ ವಿಷಯದಲ್ಲೇ ಮನೆಯಲ್ಲಿ ಹೊತ್ತಿದ್ದ ಅಸಮಾಧಾನದ ಕಿಡಿ, ಈಗ ಹೊಗೆಯಾಡಲು ಆರಂಭಿಸಿತ್ತು….

(2007ರ ಡಿಸೆಂಬರ್ ನಲ್ಲಿ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಕಥೆಯ ಮೊದಲರ್ಧ ಭಾಗವಿದು. ದೊಡ್ಡ ಕಥೆಯಾದ್ದರಿಂದ ಹೀಗೆ ಮಾಡಬೇಕಾಯ್ತು)