Feeds:
ಲೇಖನಗಳು
ಟಿಪ್ಪಣಿಗಳು

Archive for ಅಕ್ಟೋಬರ್, 2007

ಭಾನುವಾರ ಸ್ಟ್ಯಾನ್ ಫೋರ್ಡ್ ಯುನಿವರ್ಸಿಟಿಗೆ ಭೇಟಿ ನೀಡಬೇಕೆಂದು ನಿರ್ಧರಿಸಿದ್ದೇ ಮಧ್ಯಾಹ್ನದ ನಂತರ. ಕ್ಯುಪರ್ಟಿನೊದಲ್ಲಿರುವ ನಮ್ಮನೆಯಿಂದ ಕೇವಲ ೧೨ ಮೈಲು ದೂರದಲ್ಲಿರುವ ವಿದ್ಯಾಮಂದಿರಕ್ಕೆ ಶತಮಾನದ ಇತಿಹಾಸವಿದೆ. ಆದರೆ ಭಾನುವಾರವೇ ನಾವಲ್ಲಿಗೆ ಭೇಟಿ ನೀಡಲು ವಿಶೇಷವಾದ ಕಾರಣವಿತ್ತು. ಅಂದುಗ್ರ್ಯಾಜುಯೇಶನ್ ಡೇ’!

ಪಾಲೊ ಆಲ್ಟೊದಲ್ಲಿ ಸುಮಾರು ಎಂಟು ಸಾವಿರ ಎಕರೆ ಜಾಗದಲ್ಲಿ ೧೮೯೧ರಲ್ಲಿ ನಿರ್ಮಿಸಲಾದ ಮಹಾವಿದ್ಯಾಲಯದಲ್ಲಿ ಅಂದು ಸಿಕ್ಕಾಪಟ್ಟೆ ಸಡಗರ. ಭಾನುವಾರ ಸಂಜೆ ಎಂದರೆ ಬಿಕೊ ಎನ್ನಬೇಕಿದ್ದ ಕ್ಯಾಂಪಸ್ನಲ್ಲಿ ಅಂದು ಎಲ್ಲೆಡೆ ಕರಿ ಕೋಟುಗಳೇ! ಗುಚ್ಛವಿರುವ ಕಪ್ಪು ಟೋಪಿ, ಗೌನಿನಂತಹ ಕರಿ ಕೋಟು, ಕೊರಳಲ್ಲೊಂದು ನೇರಳೆ ಬಣ್ಣದ ಮಾಲೆ ತೊಟ್ಟ ನೂರಾರು ವಿಧ್ಯಾರ್ಥಿಗಳು ಸಂಭ್ರಮಿಸುತ್ತಿದ್ದರು. ಸಮಾರಂಭ ಮುಗಿದು ಬಹಳ ಹೊತ್ತಾಗಿದ್ದರೂ ಅವರ ಲವಲವಿಕೆ ಮಾಸಿರಲಿಲ್ಲ. ಗ್ರ್ಯಾಜುಯೇಶನ್ ಪೇಟ, ಕೋಟಿನಲ್ಲಿ ಕರಿ ಬಣ್ಣ ಮಾತ್ರವಲ್ಲ, ಅವರ ಸಂಭ್ರದ ಹಲವಾರು ರಂಗುಗಳು ಚಿತ್ತಾರ ಬಿಡಿಸಿದ್ದವು.

ಕೆಲವರು ಅಪ್ಪ, ಅಮ್ಮನೊಡನೆ ಬೀಗುತ್ತಾ ನಡೆಯುತ್ತಿದ್ದರೆ, ಹಲವರು ಗೆಳೆಯ/ಗೆಳತಿ ಜತೆಗೆ ಠಾಕುಠೀಕಾಗಿ ಓಡಾಡುತ್ತಿದ್ದರು. ಕೆಲವು ಅಜ್ಜ, ಅಜ್ಜಿಯರು ಪದವಿ ಪಡೆದ ತಮ್ಮ ಮೊಮ್ಮಕ್ಕಳೊಂದಿಗೆ ಕ್ಯಾಂಪಸ್ಸೆಲ್ಲಾ ಸುತ್ತಾಡಿ, ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ಅಲ್ಲೊಮ್ಮೆಇಲ್ಲೊಮ್ಮೆ ನಿಂತು ಫೋಟೊ ತೆಗೆಯುತ್ತಿದ್ದರು. ವಿದೇಶದಿಂದ ವ್ಯಾಸಂಗಕ್ಕಾಗಿ ಬಂದಿದ್ದ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಮರಳಿ ಹೋಗುವ ತವಕ, ಉಳಿದವರಿಗೆ ಇಲ್ಲೇ ಇರುವ ಬಯಕೆ. ಮಕ್ಕಳು ಪದವಿ ಪಡೆಯುವುದನ್ನು ನೋಡಲೆಂದೇ ದೂರದೂರುಗಳಿಂದ, ಬೇರೆ ಬೇರೆ ದೇಶಗಳಿಂದ ಹೆತ್ತವರು ಆಗಮಿಸಿದ್ದರು. ಆಪ್ತರುಇಷ್ಟರುಮಿತ್ರರು ಯಾರೂ ಬಾರದಿದ್ದ ಕೆಲವು ಲಲನೆಯರು ನಾನಾ ಆಕಾರದ ಹಾವಭಾವದ ನಾಯಿಗಳೊಂದಿಗೆ ಹೆಜ್ಜೆ ಹಾಕುತ್ತಿದ್ದರು! (ಅವರೆದುರುನಾಯಿಎಂದೀರಾ ಜೋಕೆ! ‘ಪೆಟ್ಎಂದೇ ಹೇಳಬೇಕು!!)

ಪ್ರಾಧ್ಯಾಪಕರ ಜತೆ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಗಂಭೀರ ವಿದ್ಯಾರ್ಥಿಗಳು ಒಂದೆಡೆಯಾದರೆ, ಮೆಟ್ಟಿಲುಗಳ ಮೇಲೆ ಕುಳಿತು ತಮ್ಮ ನಾಳೆಗಳನ್ನು ಹಂಚಿಕೊಳ್ಳುವ ಗುಂಪು ಇನ್ನೊಂದೆಡೆ. ‘ಸಧ್ಯ! ಮುಗೀತಲ್ಲಾ ಓದು!!’ ಎಂದು ಹಾರಾಡುತ್ತಾ ಗೆಳೆಯರ ಗುಂಪಿನ ಜತೆ ನಿಂತು ಫೋಟೊ ತೆಗೆಯುವವರೇನು, ‘ಹೂವರ್ ಟವರ್‘ ಎದುರಿನ ಕಾರಂಜಿಗೆ ಧುಮುಕಿ ಮಜಾ ಮಾಡುವವರೇನುಒಟ್ಟಾರೆ ಇಡೀ ಪರಿಸರಕ್ಕೆ ನವವಸಂತದ ಕಳೆ.

ಎಲ್ಲರಿಗಿಂತ ಗಮನ ಸೆಳೆದವರು ಆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಕೊರಿಯಾ ದೇಶದ ಜೋಡಿ. ಪದವಿ ಪಡೆದ ದಿನವೇ ಮದುವೆ ಆಗಬೇಕೆಂದು ಕನಸು ಕಟ್ಟಿದ್ದ ಪ್ರೇಮಿಗಳು ಘಟಿಕೋತ್ಸವದ ನಂತರ ಸೀದಾ ಚರ್ಚಿಗೆ ತೆರಳಿ ವಿವಾಹವಾದರಂತೆ! ಮದುಮಕ್ಕಳ ಧಿರಿಸಿನಲ್ಲೇ ಇದ್ದ ಇವರು ಕ್ಯಾಂಪಸ್ನಲ್ಲೆಲ್ಲಾ ಗೆಳೆಯರ ದಂಡಿನೊಂದಿಗೆ ಸುತ್ತಾಡಿ ಹಲವು ಭಾವಭಂಗಿಗಳಲ್ಲಿ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

ಕೇವಲ ಪದವಿ ಪಡೆಯಲು ಇಷ್ಟೊಂದು ಸಡಗರವಾದರೆ, ಸ್ನಾತಕೋತ್ತರ ಅಥವಾ ಪಿಎಚ್ ಡಿ ಪದವಿ ಪಡೆಯಲು ಇನ್ನೆಷ್ಟು ಹಾರಾಡಬಹುದು ಎಂದು ಹುಬ್ಬೇರಿಸಬೇಡಿ. ‘ಗ್ರ್ಯಾಜುಯೇಶನ್ ಡೇಇಲ್ಲಿನ ವಿದ್ಯಾರ್ಥಿಗಳ ಪಾಲಿಗೆ ಜೀವನದ ಮಹತ್ವದ ದಿನಗಳಲ್ಲಿ ಒಂದು. ಮಕ್ಕಳಿಗೆ 18 ವರ್ಷ ಆಗುತ್ತಿದ್ದಂತೆ, ಅವರೇ ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳುವುದು ಅಮೆರಿಕನ್ ಸಮಾಜದ ಪದ್ಧತಿಯಾದ್ದರಿಂದ ವಿದ್ಯಾರ್ಥಿಗಳು ಪದವಿ ಪಡೆಯಬೇಕಾದರೆ ಓದಿನ ಜತೆ ಕೆಲಸವನ್ನೂಮಾಡಬೇಕಾದ್ದು ಅನಿವಾರ್ಯ. ಹಾಗಾಗಿ ಪದವಿ ಪಡೆದ ಮೇಲೆ ಓದಿಗೆ ಶರಣು ಹೊಡೆದು ನೌಕರಿ ಮಾಡುವವರೇ ಹೆಚ್ಚು. ಸ್ನಾತಕೋತ್ತರ ಪದವಿಗೆ ಕಾಲಿಡುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಬೇಕೆ ಬೇಕು. ಅದಿಲ್ಲದಿದ್ದರೆ ಬಿಡುವಿಲ್ಲದ ವ್ಯಾಸಂಗದ ನಡುವೆ ಉದ್ಯೋಗ ಮಾಡುವುದು ಕಠಿಣವಾದ್ದರಿಂದ ಉನ್ನತ ಶಿಕ್ಷಣಕ್ಕೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ಕೊಂಚ ಕಡಿಮೆ. ಅಂದರೆ ಹೆಚ್ಚಿನವರಿಗೆ ಪದವಿ ದೊರೆತರೆ ವಿದ್ಯಾಭ್ಯಾಸವೇ ಮುಗಿದಂತೆ. ಹಾಗೆಂದೇ ಘಟಿಕೋತ್ಸವ ಎಂದರೆ ಎಲ್ಲಿಲ್ಲದ ಸಂಭ್ರಮ.

ಹಿಂದೊಮ್ಮೆ ನಾನು ಸಹ ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಹೋಗಿದ್ದುಂಟು. ಆದರೆ ನನ್ನ ಪದವಿ ಪಡೆಯಲು ಅಲ್ಲ, ನನ್ನಮ್ಮ ಪಿಎಚ್ ಡಿ ಪಡೆಯುವುದನ್ನು ನೋಡಲು. ಅಲ್ಲಿ ಕರಿಕೋಟು, ಟೋಪಿ ತೊಟ್ಟಿದ್ದವರು ಬೆರಳೆಣಿಕೆಯಷ್ಟೇ ಜನ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗಿಂತ ವಿಶ್ವವಿದ್ಯಾಲಯದ ಅಧಿಕಾರಿಗಳು, ಅವರ ಆಪ್ತೇಷ್ಟರು, ಕುಲಪತಿ ಮತ್ತು ಕುಲಾಧಿಪತಿಗಳು, ಇವರ ಭದ್ರತಾ ದಂಡಿನ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಒಟ್ಟಾರೆ, ಪದವೀಧರರಿಗಿಂತ ವೇದಿಕೆ ಮೇಲಿದ್ದ ಗಣ್ಯರೇ ಹೆಚ್ಚಿನ ಪ್ರಾಮುಖ್ಯತೆ ಪಡೆದಂತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಘಟಿಕೋತ್ಸವದಲ್ಲೇ ಪದವಿಪತ್ರ ಪಡೆಯುವ ಅವಕಾಶ ಮತ್ತು ಸಮಾರಂಭದಲ್ಲಿ ಭಾಗವಹಿಸಲೇಬೇಕೆಂಬ ತುಡಿತ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಇರಲಿಲ್ಲ ( ಮಾತು ನನಗೂ ಅನ್ವಯಿಸುತ್ತದೆ!). ಆದರೆ ಸ್ಟ್ಯಾನ್ ಫೋರ್ಡ್ ವಿದ್ಯಾರ್ಥಿಗಳ ಉತ್ಸಾಹ ಎಷ್ಟು ಸಾಂಕ್ರಾಮಿಕವಾಗಿತ್ತೆಂದರೆ, ಕ್ಯಾಂಪಸ್ನಿಂದ ಹಿಂದಿರುಗುವಾಗ ನಾನೂ ಪದವಿಪತ್ರ ಹಿಡಿದಂತೆ ಮುಷ್ಟಿ ಹಿಡಿದು ನಡೆಯತೊಡಗಿದ್ದೆ!

ಪದವೀಧರರ ಟೋಪಿಗೆ ಗರಿ ಮೂಡಿಸಲು ಇಲ್ಲಿನ ಮಾರುಕಟ್ಟೆಯೂ ಪೂರಕವಾಗಿ ಸ್ಪಂದಿಸುತ್ತದೆ. ಅವರಿಗೆ ಸೂಕ್ತ ಉಡುಗೊರೆ ನೀಡಲು ಲೆಕ್ಕವಿಲ್ಲದಷ್ಟು ಆಯ್ಕೆಗಳು ಮಾಲ್ಗಳಲ್ಲಿವೆ. ಇವುಗಳ ಮೇಲೆ ರಿಯಾಯ್ತಿಯ ಹಣೆಪಟ್ಟಿಯನ್ನೂ ಅಂಟಿಸಲಾಗುತ್ತದೆ. ಕೋಟು, ಟೋಪಿ ತೊಟ್ಟ ನಾನಾ ಆಕಾರದ ವಿಚಿತ್ರ ಟೆಡ್ಡಿಬೇರ್ಗಳು, ‘ಗ್ರಾಜುಯೇಶನ್ ಪಪ್ಪಿ‘ (‘ನಾಯಿಎನ್ನುವಂತಿಲ್ಲವಲ್ಲ!), ‘congratz gradz’ ಎಂಬ ಬರಹ ಹೊತ್ತ ಕೇಕ್ಗಳು, ಚಾಕಲೇಟ್ಸ್, ಎಲೆಕ್ಟ್ರಾನಿಕ್ ಉತ್ಪನ್ನಗಳು, ತರಹೇವಾರಿ ವಸ್ತ್ರಗಳು, ಹತ್ತಾರು ವಸ್ತುಗಳನ್ನು ಹೊತ್ತು ಅಂದವಾಗಿ ಪ್ಯಾಕ್ ಮಾಡಿದ ಗಿಫ್ಟ್ ಬಾಕ್ಸ್ಕೊನೆಗೆ ವಾಚು, ಆಭರಣಗಳ ಮೇಲೂ ರಿಯಾಯ್ತಿ. ಪರಿಣಾಮತಿಂಗಳಿಗೊಮ್ಮೆ ಗ್ರಾಜುಯೇಶನ್ ಡೇ ಬರಬಾರದೇ ಎನ್ನುತ್ತಾ ನನ್ನಂಥವರು ಶಾಪಿಂಗ್ ಹೊರಡುತ್ತೇವೆ!

Read Full Post »

« Newer Posts