Feeds:
ಲೇಖನಗಳು
ಟಿಪ್ಪಣಿಗಳು

Archive for ನವೆಂಬರ್, 2007

ದಿನವೇ ನನ್ನ ಸ್ಕೂಟಿ ಕೈಕೊಟ್ಟಿತ್ತು. ಹಾಳಾದ್ದು! ತೀರಾ ಅಗತ್ಯವಾದ ಕೆಲಸ ಇರುವಾಗಲೇ ಇದಕ್ಕೆ ರೋಗ ಬರಬೇಕೆ ಎಂದು ಬೈಯುತ್ತಾ ಗಾಡಿಯನ್ನು ಗಾರೇಜಿನೆದುರು ನಿಲ್ಲಿಸಿ, ಜತೆಯಲ್ಲಿರುವ ಅಮ್ಮನೊಟ್ಟಿಗೆ ಆಟೋಗೆ ಕೈ ಮಾಡುತ್ತಿದ್ದೆ. ಮಲ್ಲೇಶ್ವರದಿಂದ ಚಾಮರಾಜಪೇಟೆಗೆ ಬರಲು ನೂರೆಂಟು ತಕರಾರು ಮಾಡುತ್ತಿದ್ದ ಆಟೋದವರಿಗೂ ಒಂದಿಷ್ಟು ಶಾಪ ಹಾಕುತ್ತಿದ್ದೆ. ಅಂತೂ ಒಬ್ಬ ಪುಣ್ಯಾತ್ಮ ಚಾಮರಾಜಪೇಟೆಗೆ ಬರಲು ಒಪ್ಪಿದ. ಅಷ್ಟರಲ್ಲೇ ಓಡೋಡಿ ಬಂದ ಆಕೆ `ಜಯನಗರಕ್ಕೆ ಬರುತ್ತೀರಾ?’ ಎಂದು ಕೇಳಿದರು.

ಚಾಮರಾಜಪೇಟೆಗೆ ಬರುತ್ತೇನೆಂದು ಒಪ್ಪಿಕೊಂಡ ಮೇಲೆ ಈಗ ಇಲ್ಲ ಎನ್ನಲಾಗದೆ, ಹಾಗೆಂದು ಜಯನಗರಕ್ಕೆ ಹೋಗುವುದನ್ನೂ ತಪ್ಪಿಸಿಕೊಳ್ಳಲಾಗದೆ ಪೆಚ್ಚು ಮೋರೆ ಮಾಡಿದ ಆಟೋದವ. ಇತ್ತ, ಅವಸರದಲ್ಲಿದ್ದಂತೆ ಕಂಡ ಆಕೆ ಸೋತು ಸೊರಗಿದಂತಿದ್ದರು. `ಬನ್ನಿ ಮೇಡಂ, ನಿಮ್ಮನ್ನ ಡ್ರಾಪ್ ಮಾಡಿ ಹೋಗ್ತೀವಿಎಂದು ಧಾರಾಳತನ ತೋರಿಸಿದೆ. ಆಕೆ `ಉಸ್ಸಪ್ಪಾಎನ್ನುತ್ತಾ ಆಟೋ ಹತ್ತಿದರು.

ನನ್ನ ಪಕ್ಕದಲ್ಲೇ ಮುದುರಿಕೊಂಡು ಕುಳಿತಿದ್ದ ಇವರನ್ನೆಲ್ಲೋ ನೋಡಿದ್ದೇನೆ ಎಂದು ತುಂಬಾ ಅನ್ನಿಸುತ್ತಿತ್ತು. ವಯಸ್ಸು ಸುಮಾರು 50 ಇರಬಹುದು, ತೀರಾ ಸೌಮ್ಯವಾದ ಮುಖ, ಬಳಲಿದಂತೆ ಕಂಡರೂ ಸ್ನೇಹ ಸೂಸುವ ಕಣ್ಣುಗಳು, ಸಾಧಾರಣವಾದ ಸೀರೆಎಲ್ಲಿ ನೋಡಿದ್ದೇನೆ ಎಂಬುದು ನೆನಪಾಗಲಿಲ್ಲ.

`ನಿಮ್ಮನೆ ಜಯನಗರದಲ್ಲಿದೆಯಾ?’ `

ಇಲ್ಲ

`ಓಹೊ! ಶಾಪಿಂಗಾ? ಮಲ್ಲೇಶ್ವರದಲ್ಲೇ ಮಾಡಬಹುದಿತ್ತಲ್ಲ! ಈಗೆಲ್ಲಿ ಫೋರ್ತ್ ಬ್ಲಾಕ್ ಗೆ ಡ್ರಾಪ್ ಮಾಡ್ಲಾ?’`

ಅಯ್ಯೊ ಅಲ್ಲ! ಒತ್ತಡ ನಿರ್ವಹಣೆ ತರಗತಿಗೆ ಹೋಗುತ್ತಿದ್ದೇನೆ

`!!!’

`ಅಂದ್ರೆ ಸ್ಟ್ರೆಸ್ ಮ್ಯಾನೇಜ್ಮೆಂಟ್! ಕನ್ನಡದಲ್ಲಿ ಮಾತಾಡ್ತಿದ್ದಾರೆ ಆಕೆಪಕ್ಕದಲ್ಲಿ ಕುಳಿತಿದ್ದ ಅಮ್ಮ ತಿವಿದು ಹೇಳಿದರು.

ವಯಸ್ಸಿನಲ್ಲಿ ಸ್ಟ್ರೆಸ್ ಮ್ಯಾನೇಜ್ಮೆಂಟ್ ಕ್ಲಾಸಿಗೆ ಹೋಗಲು ಈಕೆಗೇನಾಗಿದೆ? ಯಾವುದಾದರೂ ಕಂಪನಿಯ ಸಿಇಒ, ಮ್ಯಾನೇಜರ್ ಅಥವಾ ಇನ್ನಾವುದಾದ್ರೂ ದೊಡ್ಡ ಹುದ್ದೆಯಲ್ಲೋ ಇದ್ದರೆ ಇದೆಲ್ಲಾ ಬೇಕಾಗುತ್ತದೆ. ಇವರಿಗ್ಯಾಕೆ…? ನೋಡಲು ಹೀಗಿದ್ದಾರೆ

`ಎಲ್ಲಿ ವರ್ಕ್ ಮಾಡೋದು ನೀವು?’ಅನುಮಾನದಿಂದಲೇ ಪ್ರಶ್ನಿಸಿದೆ.`

ಮೊದಲು ಕೈತುಂಬಾ ಕೆಲಸ ಇತ್ತು. ಆದರೆ ಈಗೇನೂ ಇಲ್ಲ ಆಕೆ ಬೇಸರದಿಂದ ನುಡಿದರು.

`ಅಂದ್ರೆ…’`

ಹಿಂದೆಲ್ಲಾ ನನ್ನ ಮಕ್ಕಳಿಗೆ ನನ್ನ ಅಗತ್ಯ ತುಂಬಾ ಇರ್ತಿತ್ತು. ಈಗ ಅವರ ದಾರಿ ಬೇರೆಯಾಗಿದೆ. ಹಾಗಾಗಿ…’

`ಓಹ್! ಅಂದ್ರೆ ನೀವು ಹೋಮ್ ಮೇಕರ್…’ ಎಂಬ ನನ್ನ ಮಾತಿಗೆ ಆಕೆಯ ನಗುವೇ ಉತ್ತರವಾಗಿತ್ತು.`

ನಿಮ್ಮ ಮಕ್ಕಳೆಲ್ಲಾ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ?’ ಅಮ್ಮ ಕೇಳಿದರು. `ಎಲ್ಲಿಲ್ಲಿ ಅಂತ ಹೇಳಲಿ? ಎಲ್ಲಾ ಕಡೆ ಇದ್ದಾರೆಎಂದು ಆಕೆ ಪೆಚ್ಚಾಗಿ ಹೇಳಿದರು.

`ಬೆಂಗಳೂರಲ್ಲೂ ಇದ್ದಾರಾ?’ ಅಮ್ಮ ಮುಂದುವರಿಸಿದರು.

`ಹೂಂ

`ಅವರ್ಮನೆಗೆ ಹೋಗಲ್ವಾ?’`

ಅವರಿಗೇ ನಾನು ಬೇಡವಾದ ಮೇಲೆ ಹೇಗೆ ಹೋಗಲು ಸಾಧ್ಯ. ನನ್ನ ನೆನಪು ಮಾಡಿಕೊಳ್ಳುವುದು ದೂರ, ನನ್ನ ಮಕ್ಕಳು ಅಂತ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ನನ್ನೊಡನೆ ಮಾತೂ ಆಡುವುದಿಲ್ಲ. ನಾನೆಂದರೆ ಅಷ್ಟೊಂದು ತಾತ್ಸಾರ ಆಕೆ ಇನ್ನಷ್ಟು ಶೋಕಿಸಿದರು.

`ಇನ್ಯಾವ ಊರಲ್ಲಿ ಇದ್ದಾರೆ?’ ಅಮ್ಮನ ಸಂದರ್ಶನ ಮುಂದುವರಿದಿತ್ತು.`

ಎಲ್ಲಾ ಊರಲ್ಲೂ ಇದ್ದಾರೆ. ಆದರೆ ಕೆಲವು ಊರುಗಳಲ್ಲಿರುವ ಮಕ್ಕಳು ನನ್ನಲ್ಲಿ ಪಾಲು ಬೇಕೆಂದು ಪಟ್ಟು ಹಿಡಿದಿದ್ದಾರೆ. ನನ್ನನ್ನೇ ಖಂಡತುಂಡ ಮಾಡಲೂ ಅವರು ಹಿಂಜರಿಯರು ಮಹಾತಾಯಿ ತೀರಾ ನೋವಿನಿಂದ ನುಡಿದರು.

`ಆಸ್ತಿಗಾಗಿ ತಾಯಿನೇ ಕೊಲ್ಲೊ ಮಕ್ಕಳೇ! ಅವರಿಗೇನು ಬಂತು ಕೇಡ್ಗಾಲ!… ಎಲ್ಲಿದ್ದಾರೆ ಅವ್ರೆಲ್ಲಾ?’ `

ಬೀದರ್, ಗುಲ್ಬರ್ಗಾ, ಬಿಜಾಪುರ, ಬೆಳಗಾವಿ, ಕೋಲಾರ, ಕಾಸರಗೋಡು, ಕೊಡಗು…’ ಎಂದ ಆಕೆ ಕೊಂಚ ಸುಧಾರಿಸಿಕೊಳ್ಳುವಷ್ಟರಲ್ಲೇ, `ಇದೇನ್ರಿ ಇಷ್ಟೊಂದು ಮಕ್ಕಳು ನಿಮಗೆ!’ ಎಂದು ಅಮ್ಮ ಹುಬ್ಬೇರಿಸಿದರು.

` ಅಮ್ಮನಿಗೊಂದು! ಬೇರೆಯವರ ಉಸಾಬರಿ ನಮಗೇಕೆ? ಸುಮ್ಮನಿರಬಾರದೆ?’ ಎಂದು ನಾನು ಗೊಣಗಿಕೊಂಡೆ. ಆದರೂ, `ಹೋಗ್ಲಿ ಕೊಟ್ಬಿಡಿ ಪಾಲು. ಉಳಿದವರ ಜತೆಗಾದ್ರೂ ಇರಬಹುದಲ್ಲಎಂದು ನಂದೂ ಪುಕ್ಕಟ್ಟೆ ಸಲಹೆ ಮುಂದಿಟ್ಟೆ. ಅವರ ಕಣ್ಣಿಂದ ಇನ್ನೇನು ಹನಿ ಉದುರಿಯೇಬಿಟ್ಟಿತು ಅನ್ನುವಾಗ ಕೈಗೊಂದು ಟಿಷ್ಯೂ ಕೊಟ್ಟೆ. ಅದ್ಯಾಕೊಅವರ ಜತೆ ಮಾತನಾಡುತ್ತಾ ನನಗೇ ಗೊತ್ತಿಲ್ಲದಂತೆ ಸ್ವಲ್ಪ ಹೆಚ್ಚೇ ಕನ್ನಡ ಮಾತನಾಡಲಾರಂಭಿಸಿದ್ದೆ!`

ನನ್ನ ಮಕ್ಕಳಿಗೆ ಹೆತ್ತಮ್ಮನೆಂದರೆ ಅಸಡ್ಡೆ, ಅನ್ಯರೆಂದರೆ ಅಕ್ಕರೆ. ನನ್ನ ಮಕ್ಕಳು ಅವರಿವರ ಬಳಿ ಜೀತ ಮಾಡುವುದನ್ನು ನನ್ನಿಂದ ನೋಡಲಾಗದು. ನನ್ನ ಬಳಿಯೇ ಸಮೃದ್ಧವಾದ ಆಸ್ತಿಯಿದೆ. ನನ್ನದೆಂಬುದು ನನ್ನ ಮಕ್ಕಳದ್ದೂ ಅಲ್ಲವೆ?’ ಆಕೆ ಕಣ್ಣೊರೆಸಿಕೊಂಡರು. `ಹೌದೌದು! ಈಗಿನ ಮಕ್ಕಳಿಗೆ ಒಂಥರಾ ಹಾಗೆಎಂದು ಅಮ್ಮ ಓರೆಗಣ್ಣಿನಲ್ಲೇ ನನ್ನ ನೋಡಿದರು.

`ಪಾಲು ಕೇಳುವವರು, ಅಸಡ್ಡೆ ಮಾಡುವವರು, ನಾನಿದ್ದೂ ಇಲ್ಲದಂತಾಡುವವರು, ನನ್ನೊಡನೆ ಮಾತೇ ಆಡದವರುಒಂದೆರಡು ನಮೂನೆಗಳೇ! ನಮ್ಮನೆಯಲ್ಲೇ ನಾನು ಬೇಡದವಳು. ಆದರೂ ನನ್ನ ಬದುಕು ಮುಂದುವರಿಯಬೇಕಲ್ಲಾ. ಹಾಗಾಗಿ ವಯಸ್ಸಿನಲ್ಲಿ ಒತ್ತಡ ನಿರ್ವಹಣೆ ತರಗತಿಗೆ ಹೋಗಬೇಕಿದೆಎಂದು ಆಕೆ ಅಲವತ್ತುಕೊಂಡರು. ನಮಗೆ ಒಂಥರಾ ಕೆಡುಕೆನಿಸಿತು.

ಅಷ್ಟರಲ್ಲಿ `ಕೊಂಚ ನಿಲ್ಲಿಸಪ್ಪಾ, ನಾನಿಲ್ಲೇ ಇಳಿದುಕೊಳ್ಳುತ್ತೇನೆಎಂಬ ಆಕೆಯ ಮನವಿ ಆಟೋದವನ ಕಿವಿಗೆ ಬೀಳಲಿಲ್ಲ. `ಸ್ವಲ್ಪ ಸ್ಟಾಪ್ ಮಾಡಿಎಂದು ನಾನೇ ಜೋರಾಗಿ ಹೇಳಿ, `ಟ್ರಾಫಿಕ್ ಗದ್ದಲದಲ್ಲಿ ಕೇಳ್ಸಿಲ್ಲ ಅನ್ಸತ್ತೆಎಂದು ಸಮಝಾಯಿಶಿ ನೀಡಿದೆ. `ತಡವಾಗಿಯೇ ಹೋಯಿತುಎಂದು ಅವಸರಿದ ಆಕೆ, `ಇಲ್ಲಿವರೆಗೆ ಕರೆತಂದು ತುಂಬಾ ಸಹಾಯ ಮಾಡಿದಿರಿ ಎಂದು ಕೃತಜ್ಞತೆ ಸಲ್ಲಿಸಿದರು.

`ಇವರೇ.. ನಿಮ್ಮ ಹೆಸರೇ ಕೇಳಲಿಲ್ಲ ಎಂದು ಅಮ್ಮ ಪೇಚಾಡಿಕೊಳ್ಳುತ್ತಿದ್ದಂತೆ, `ನನ್ನ ಹೆಸರು ಭುವನೇಶ್ವರಿಎನ್ನುತ್ತಾ ಆಕೆ ಜಯನಗರದ ಜನಜಂಗುಳಿಯಲ್ಲಿ ಮಾಯವಾದರು.

ಚಾಮರಾಜಪೇಟೆಗೆ ಆಟೋ ತಿರುಗಿಸಿದ ಚಾಲಕ ಎಫ್ ಎಂ ಅದುಮಿದ. `…ಪ್ರೇಮ ಅವರ ಕನ್ನಡ ಪ್ರೇಮಕ್ಕೆ ಹ್ಯಾಟ್ಸ್ ಆಫ್! ಅವರಿಗಾಗಿ ಪ್ರಸಾರ ಮಾಡ್ತಾ ಇದ್ದೀವಿ ವೆರಿ ಸ್ಪೆಶಲ್ ಸಾಂಗ್ಎಂಜಾಯ್ಎಂದು ಆರ್ ಜೆ ಅರಚುತ್ತಿದ್ದ. ಬೆನ್ನಿಗೆ `ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ…’ ಎಂಬ ಹಾಡು ತೇಲಿ ಬಂತು.

Read Full Post »

ಧರೆ ಹೊತ್ತಿ ಉರಿದಾಗ…

ಈ ಬಗ್ಗೆ ಓದಿದ್ದೆ, ಕೇಳಿದ್ದೆ. ಆದರೆ ಅನುಭವಿಸಿರಲಿಲ್ಲ! ಆ ನಡುಕ, ಝುಂ ಎನ್ನುವ ಕಂಪನ… ಇಡೀ ಮೈ ಅದುರಿದಂತಾಗುತ್ತದೆ. ಭೂಮಿಯೇ ತೂಗಾಡಿದಂತಾಗುತ್ತದೆ. ಮೂಲತಃ ಇದೇನು ಎಂಬುದು ಅರ್ಥವಾಗಲು ಕ್ಷಣಕಾಲ ಬೇಕು.  ಅದೊಂಥರಾ ವಿಚಿತ್ರ ಅನುಭವ ಬಿಡಿ, ಹೇಳಿ ಸುಖವಿಲ್ಲ. ಅನುಭವಿಸಿದವರಿಗೇ ಗೊತ್ತು…

ಇದೆಂಥಾ ವಿಚಿತ್ರ ಸುಖ ಇರಬಹುದು ಎಂದೆಲ್ಲಾ ಇಲ್ಲಸಲ್ಲದ ಯೋಚನೆ ಮಾಡುತ್ತಿದ್ದರೆ ಕೊಂಚ ಬ್ರೇಕ್ ಹಾಕಿ… ಸುಖವೂ ಇಲ್ಲ, ಮಣ್ಣಂಗಟ್ಟಿಯೂ ಇಲ್ಲ. ಮಾರಾಯ್ರೆ, ನಾ ಹೇಳ್ತಿರೋದು ಭೂಕಂಪದ ಬಗ್ಗೆ!  ಮೊದಲ ಬಾರಿಗೆ ಅಂಥಾ ಜೀವಭಯ ನನ್ನಲ್ಲಿ ಉಂಟಾಗಿತ್ತು ಅಂದರೆ ನಂಬ್ತೀರಾ? ಕಾರಣ, ಕಾಲ ಕೆಳಗಿನ ನೆಲವೇ ಅದುರಿದಂತಾಯ್ತು ಎಂದು ಓದಿ, ಕೇಳಿ ಗೊತ್ತೇ ಹೊರತು ನಿಜಕ್ಕೂ ಅದುರಿಯೇ ಬಿಟ್ಟರೆ ಹೇಗಾಗಬಹುದು ಎಂದು ತಿಳಿದಿದ್ದು ಆಗಲೇ.

ಆ ದಿನ ಸಂಜೆ ಕಾರಿಗೆ ಇಂಧನ ತುಂಬಿಸಲು ಕ್ಯೂದಲ್ಲಿ ನಿಂತಿದ್ದಾಗ, ಇದ್ದಕ್ಕಿದ್ದಂತೆ ಕಾರು ತೂಗಾಡಲಾರಂಭಿಸಿತು. ಹಿಂದಿನ ಕಾರಿನವ ಬಂದು ತಟ್ಟಿದನೆಂಬ ಸಿಟ್ಟಿನಲ್ಲಿ ಹಿಂದಿರುಗಿದರೆ ಆತ ಮಾರು ದೂರದಲ್ಲಿದ್ದ! ಇದ್ದಕ್ಕಿದ್ದಂತೆ ಬೃಹತ್ ಆನೆಯೊಂದು ಬಂದು ನನ್ನ ಪುಟ್ಟ ಕಾರನ್ನು ನೂಕಾಡಿದಂತಾಗಿ ಪಾರ್ಕಿಂಗ್ ಗೇರ್ ಮತ್ತು ತುರ್ತು ಬ್ರೇಕ್ ಅದುಮಿದ್ದಾಯಿತು.

ಆದರೆ ಆಚೀಚೆ ನಿಂತ ಕಾರುಗಳೂ ಗಡಗುಡುತ್ತಿದ್ದುದು ಕಂಡು ಭೂಕಂಪ ಆಗುತ್ತಿದೆಯೇ ಎಂಬ ಸಂಶಯ ಬಂತು. ಅಷ್ಟರಲ್ಲೇ ಆಚೀಚೆ ಕಾರುಗಳ ಜನ ಗಾಬರಿಗೊಂಡು ಹೊರಬಂದಿದ್ದು ಕಂಡು ನನ್ನ ಸಂಶಯ ಖಾತ್ರಿಯಾಯಿತು. ನಾನಿದ್ದ ಸ್ಥಳದ ಕೆಲವೇ ಮೈಲಿಗಳ ದೂರದಲ್ಲಿ ಕಂಪನದ ಕೇಂದ್ರವಿತ್ತು. ಕಂಪನ 5.6ರ ತೀವ್ರತೆಯಲ್ಲಿತ್ತು ಎಂಬುದು ನಂತರ ತಿಳಿಯಿತು. `ಒಲೆ ಹೊತ್ತಿ ಉರಿದಾಗ ನಿಲಲುಬಹುದಲ್ಲದೆ ಧರೆ ಹೊತ್ತಿ ಉರಿದಾಗ ನಿಲಲುಬಹುದೇ’ ಎಂಬ ವಚನವೂ ನೆನಪಾಯ್ತು.

ನಿಜಕ್ಕೂ ಅದೊಂಥರಾ ವಿಚಿತ್ರ ಅನುಭವ! ಹೆಚ್ಚೆಂದರೆ ಈ ಅನುಭವ 10-12 ಸೆಕೆಂಡುಗಳ ಕಾಲ ಇದ್ದಿರಬಹುದು. ಮೊದಲಿಗೆ ಬರುವ ಅಯೋಮಯ ಭಾವನೆ, ನಮ್ಮಡಿಯ ಭೂಮಿ ಕಂಪಿಸಿಯೇಬಿಟ್ಟಿತೆ ಎಂಬ ಅಪನಂಬಿಕೆ, ಇನ್ನೇನಾಗಬಹುದು ಎಂಬ ಭಯಮಿಶ್ರಿತ ಕುತೂಹಲ, ಏನು ಮಾಡಬೇಕೆಂದು ತೋಚದೆ ಆಚೀಚೆ ನೋಡುವ ಅಬ್ಬೆಪಾರಿತನ… ಕೆಲವೇ ಕ್ಷಣಗಳಲ್ಲಿ ಅದೆಷ್ಟೊಂದು ಭಾವನೆಗಳು ಪರೇಡ್ ಮಾಡಿಬಿಟ್ಟವು!

ಕ್ಯಾಲಿಫೋರ್ನಿಯ ನಿಂತಿರುವುದು ನೂರಾರು ಫಾಲ್ಟ್ ಲೈನುಗಳ ಮೇಲೆ ಎಂಬುದು ತಿಳಿಯದ್ದೇನಲ್ಲ. ಆದರೆ ಭೂಮಿ ನಿಜಕ್ಕೂ ನಡುಗಿಯೇಬಿಡಬಹುದು ಎಂಬ ಕಲ್ಪನೆ ನನಗಂತೂ ಬಂದಿರಲಿಲ್ಲ. ಇಷ್ಟರ ಮೇಲೆ ಒಂದಿಷ್ಟು ಪಶ್ಚಾತ್-ಕಂಪನಗಳು (aftershocks). ಮರುದಿನ ಮಧ್ಯಾಹ್ನ ಹಲ್ಲು ಡಾಕ್ಟರಿಗೆ ಬಾಯಿ ಕೊಟ್ಟು ಕೂತಿದ್ದೆ. ಕೆದಕಿ, ಬೆದಕಿ, ಮುಚ್ಚಿ, ಚುಚ್ಚಿ ಎಲ್ಲಾ ಮುಗಿದು ಏಳುತ್ತಿದ್ದಂತೆಯೇ ಮತ್ತೆ ಗೋಡೆ, ಬಾಗಿಲು, ಮೇಜು, ಕುರ್ಚಿ ಎಲ್ಲದಕ್ಕೂ ಜೀವ ಬಂದಂತಾಗಿತ್ತು. ಪಕ್ಕದಲ್ಲಿದ್ದ ನನ್ನ ಬ್ಯಾಗ್ ಎಳೆದುಕೊಂಡು ಹೊರಗೆ ಓಡುತ್ತಲೇ ಹೆಜ್ಜೆ ಹಾಕುವಷ್ಟರಲ್ಲಿ ಕಂಪನ ನಿಂತಿತ್ತು.

ಕಂಪನ ಆದ ನಂತರ ಅದರ ವಿವರ ತಿಳಿಯುವುದು, ವರದಿ ಓದುವುದು, ಹಿಂದ್ಯಾವಾಗ ಆಗಿತ್ತು-ಆಗ ಏನಾಗಿತ್ತು-ಮತ್ತೆ ಯಾವಾಗ ಆಗಬಹುದು ಎಂಬ ಮಾಹಿತಿಗಳ ಬೆನ್ನು ಹತ್ತುವುದು ಇದ್ದಿದ್ದೇ. ಮತ್ತೆ ಭೂಕಂಪ ಆದರೆ ಏನು ಮಾಡಬೇಕು, ಎಲ್ಲಿ ಹೋಗಬೇಕು ಎಲ್ಲ ಮಾಹಿತಿಯೂ ಖಂಡಿತ ಬೇಕು. ಆದರೆ ಆ ಕೆಲವು ಕ್ಷಣಗಳು, ಮುಂದೇನಾಗುವುದೋ ಎಂಬ ಆತಂಕ, ನಾವು ಸರಿಯಾಗಿದ್ದೀವಲ್ಲ ಎಂಬ ನಂಬಲಾರದ ಸಂತಸ, ಇದಿಷ್ಟರ ಮೇಲೆ ನಮ್ಮಲ್ಲೂ ಏಳುವ ಪಶ್ಚಾತ್-ಕಂಪನ… ಊಹ್!

ಇಂಥದ್ದನ್ನೂ ಒಮ್ಮೆ ಅನುಭವಿಸಬಹುದು ಎಂದರೆ ನೀವು ಬುರುಡೆಗೆ ಹೊಡೆಯುವಿರೇನೊ…!!

Read Full Post »