Feeds:
ಲೇಖನಗಳು
ಟಿಪ್ಪಣಿಗಳು

Archive for ಫೆಬ್ರವರಿ, 2008

ನಮ್ಮಜ್ಜಿ ಪತ್ರ!

ಇತ್ತೀಚಿನದಲ್ಲ, ಸುಮಾರು ಇಪ್ಪತ್ತು ವರ್ಷದ ಹಿಂದಿನ ಮಾತು. ವಾರಕ್ಕೊಮ್ಮೆ ನಮ್ಮನೆಗೆ ತಪ್ಪದೆತರಂಗಬರುತ್ತಿತ್ತು. ಆಗಿನ್ನೂ ಅಂಗಳದಲ್ಲಿ ಮಣ್ಣಾಟ ಆಡಿಕೊಂಡಿದ್ದ ನಮಗೆ, ತರಂಗದಲ್ಲಿ ಬರುತ್ತಿದ್ದ ಬಾಲವನಅತ್ಯಂತ ಪ್ರಿಯವಾಗಿತ್ತು.

ದಿನ ಹೊಸ ತರಂಗ ಬರುತ್ತಿದ್ದಂತೆ ದೊಡ್ಡವರ ಕೈಗೆ ಸಿಗುವ ಮೊದಲೇ ನಾವಿಬ್ಬರು (ನಾನು, ನನ್ನತ್ತೆ ಮಗಳು) ಎಳೆದಾಡುತ್ತಿದ್ದೆವು. ನನಗಿಂತ ಅವಳು ಕೊಂಚ ದೊಡ್ಡವಳೂ ಬಲಶಾಲಿಯೂ ಆದ್ದರಿಂದ ಪುಸ್ತಕ ಅವಳ ಕೈಗೆ (ಹರಿಯದೆ ಇಡಿಯಾಗಿಯೇ) ಹೋಯಿತು. ಬಾಲವನ ತೆಗೆದ ಅವಳುನಿಮ್ಮಜ್ಜಿ ನಿಂಗೆ ಪತ್ರ ಬರೆದಿದ್ದಾರೆ ನೋಡೆಎಂದು ಕೂಗಿದಳು.

ನೋಡಿದರೆನಿಜಕ್ಕೂ ಅಜ್ಜಿ ನಂಗೆ ಬರೆದ ಪತ್ರ! ‘ಅಲಕಾಗೆ ಅಜ್ಜಿಯ ಪತ್ರಎಂಬ ಒಕ್ಕಣೆ ಹೊಂದಿದ ಚೌಕುಳಿ ಜಾಗದಲ್ಲಿ ಒಂದು ಪತ್ರವಿತ್ತು. ‘ಪ್ರೀತಿಯ ಅಲಕಾ,’ ಎಂದು ಶುರುವಾದ ಪತ್ರವನ್ನುನಿನ್ನ ಅಜ್ಜಿಎಂದು ಮುಗಿಯುವವರೆಗೂ ಒಂದಕ್ಷರ ಬಿಡದೆ ಓದಿದೆ. ಅಜ್ಜಿ ನಿಜಕ್ಕೂ ಪತ್ರ ಬರೆದುಬಿಟ್ಟಿದ್ದಾರೆ ಎಂದು ಸಂಭ್ರಮಿಸಿ, ಮನೆಯಲ್ಲಿ ಎಲ್ಲರಿಗೂ ಹೇಳಿಕೊಂಡು ಓಡಾಡಿದೆ.

ಅದು ನಿಂಗೆ ಮಾತ್ರ ಅಲ್ಲ ಮರಿ, ನಿನ್ನಂತ ಎಲ್ಲಾ ಮಕ್ಕಳಿಗೂ ಬರೆದ ಪತ್ರ ಎಂದು ಅಮ್ಮ ಎಷ್ಟು ಹೇಳಿದರೂ ಒಪ್ಪಿಗೆಯಾಗಲಿಲ್ಲ. ‘ಮತ್ತೆ ಅಲ್ಲಿ ನನ್ಹೆಸರೇ ಇದೆಯಲ್ಲ! ನಂಗೇ ತಾನೆ ಬರ್ದಿದ್ದು ಎಂಬ ನನ್ನ ವಾದಕ್ಕೆ ಅಮ್ಮನಿಗೆ ಏನು ಹೇಳಲೂ ತಿಳಿಯಲಿಲ್ಲ.

ಪ್ರತಿ ಬಾರಿಯ ಪತ್ರದಲ್ಲೂ ಅಜ್ಜಿಯದು ಒಂದಿಷ್ಟು ಹಿತವಚನಗಳು ಇರುತ್ತಿದ್ದವು. ಬೆಳಗ್ಗೆ ಎದ್ದಾಗಿನಿಂದ ಹಿಡಿದು, ಹಲ್ಲುಜ್ಜಿ, ಸ್ನಾನ ಮಾಡಿ, ತಿಂಡಿ ತಿಂದು, ಶಾಲೆಗೆ ಹೋಗಿ…. ರಾತ್ರಿ ಮಲಗುವವರೆಗಿನ ಹಲವಾರು ವಿಷಯಗಳನ್ನು ನಮ್ಮಜ್ಜಿಪತ್ರದಲ್ಲಿ ಬರೆಯುತ್ತಿದ್ದರು. ಅದನ್ನು ಶಾಲೆಯಲ್ಲೂ ಒಂದಿಬ್ಬರಿಗೆ ತೋರಿಸಿ ಡೌಲು ಮಾಡಿದೆ. ಅವರುವಾ…’ ಎಂದು ಬಾಯಿಬಿಟ್ಟಾಗ ನನ್ನ ತಲೆ ಮುಟ್ಟಿ ನೋಡಿದ್ದರೆ ಅಲ್ಲೊಂದು ಕೋಡೂ ಮೊಳೆದಿರುತ್ತಿತ್ತೇನೊ!

ಆದರೆ ಹೊಸ ತರಂಗವನ್ನು ಕಸಿದುಕೊಂಡು ನನ್ನತ್ತೆ ಮಗಳು ನನಗಿಂತ ಮೊದಲೇ ನಮ್ಮಜ್ಜಿಪತ್ರ ಓದುವುದು ಕಂಡು ಸಿಕ್ಕಾಪಟ್ಟೆ ಸಿಟ್ಟು ಬರುತ್ತಿತ್ತು. ‘ನಮ್ಮಜ್ಜಿ ಪತ್ರ ನೀಯಾಕೆ ಓದದು?’ ಇಂದ ಶುರುವಾಗುತ್ತಿದ್ದ ಜಗಳ, ‘ಮಾನಿಲ್ಲ, ಮರ್ಯಾದಿಲ್ಲ, ಕುನ್ನಿಬಾಲ ನೆಟ್ಟಗಿಲ್ಲ ಎನ್ನುವವರೆಗೆ ಹೋಗಿ, ಮಲ್ಲ ಯುದ್ಧವೂ ಆರಂಭವಾಗಿ ಸಂಧಾನಕ್ಕೆ ಹಿರಿಯರು ಬರಬೇಕಾಗುತ್ತಿತ್ತು. ಆದರೆ ನನ್ನಜ್ಜಿ ನನಗೇ ನೇರ ಪತ್ರ ಬರೆಯದೆ ತರಂಗದಲ್ಲಿ ಯಾಕೆ ಬರೆಯುತ್ತಿದ್ದಾರೆ ಎಂಬ ಸಂಶಯ ಒಂದು ದಿನವೂ ಬರಲಿಲ್ಲವಲ್ಲ!

ಅತಿಯಾದರೆ ಅಮೃತವೂ ವಿಷವಂತೆಬುದ್ಧಿಮಾತು ಸಹ! ಬೆಳಗ್ಗೆ ಆರಕ್ಕೆ ಏಳು, ರಾತ್ರಿ ಬೇಗ ಮಲಗು, ಶಾಲೆಯಿಂದ ಬಂದ ತಕ್ಷಣ ಹೋಮ್ ವರ್ಕ್ ಮಾಡಿಕೊ, ತರಕಾರಿ ತಿನ್ನು, ಅತಿಯಾಗಿ ಚಾಕಲೇಟ್ ತಿನ್ನುವುದರಿಂದ ಹಲ್ಲು ಹಾಳಾಗುತ್ತದೆಇಂಥ ಮಾತುಗಳು ಎಷ್ಟು ಮಕ್ಕಳಿಗೆ ಇಷ್ಟವಾಗಬಹುದು? ‘ನಮ್ಮಜ್ಜಿಇಂಥ ಮಾತುಗಳನ್ನು ಬರೆಯುವುದು, ಅಮ್ಮ ನನ್ನನ್ನು ಹಿಡಿದು ಕೂರಿಸಿ ಅದನ್ನು ಓದಿಸುವುದು ಎಲ್ಲವೂ ನನಗೆ ಅಪಥ್ಯವಾಗತೊಡಗಿತು. ಕೊನೆಗೊಂದು ದಿನ ಅಜ್ಜಿಯ ಪತ್ರವೂ ನಿಂತು ಹೋಯಿತು.

ಇಷ್ಟೆಲ್ಲಾ ನೆನಪಾಗಿದ್ದು ಯಾಕೇಂದ್ರೆ, ಮೊನ್ನೆ ಕಬೋರ್ಡ್ ಸ್ವಚ್ಛ ಮಾಡುತ್ತಿದ್ದಾಗ ಪ್ರಶಾಂತಣ್ಣ ಕೊಟ್ಟಿದ್ದಅಲಕಾಗೆ ಅಜ್ಜಿಯ ಪತ್ರಪುಸ್ತಕ ಸಿಕ್ಕಿತು. ಪುಸ್ತಕದ ಮೊದಲ ಪುಟದಲ್ಲಿಇದನ್ನು ಓದಿದ ಮೇಲಾದ್ರೂ ಹಲ್ಲುಜ್ಜಿ, ಸ್ನಾನ ಮಾಡುಎಂದು ಬರೆದಿತ್ತು!

Read Full Post »

ಕನ್ನಡಿ ಹೇಳಿದ ಸತ್ಯ

ಹಿಮಶ್ವೇತೆಯ (ಸ್ನೋ ವೈಟ್) ಕಥೆಯ ಅಂತ್ಯದಲ್ಲಿ, ಆಕೆಯ ಮಲತಾಯಿ ಕನ್ನಡಿಯನ್ನು ಅಷ್ಟೇಕೆ ದ್ವೇಷಿಸಿದಳು ಎಂಬುದು ನನಗೀಗ ಅರ್ಥವಾಗುತ್ತಿದೆ.

ನನ್ನ ಕನ್ನಡಿ ನನ್ನನ್ನು ಯಾವತ್ತೂ ಪ್ರಪಂಚದಲ್ಲಿ ನೀನೇ ಸುಂದರಿ ಎಂದು ಹೇಳಿರಲಿಲ್ಲ; ನಿನಗಿಂತ ಹಿಮಶ್ವೇತೆ ಸುಂದರಿ ಎಂದೂ ಹೇಳಿರಲಿಲ್ಲ. ಆದರೆ ನೀ ಕುರೂಪಿಯಲ್ಲ ಎಂದು ಸಮಾಧಾನ ಹೇಳುತ್ತಿತ್ತು; ಪ್ರಕೃತಿ ನಿನಗೇನೂ ತಾರತಮ್ಯ ಮಾಡಿಲ್ಲ ಎಂಬ ವಿಶ್ವಾಸ ತುಂಬುತ್ತಿತ್ತು. ನೂರಾರು ಜಾಹೀರಾತುಗಳಲ್ಲಿ ಬರುವಂಥ ನುಣುಪಾದ ಕೆನ್ನೆ, ಕಪ್ಪುದಟ್ಟ ಮುಂಗುರುಳು, ಜೋಡಿಸಿಟ್ಟಂತಹ ದಂತಪಂಕ್ತಿ, ಕೆತ್ತಿಟ್ಟಂತಹ ಹುಬ್ಬು, ತಿದ್ದಿತೀಡಿದ ಕಣ್ಣುಗಳು ಇವ್ಯಾವುದೂ ನಿನಗಿಲ್ಲ; ಇವೆಲ್ಲ ಇಲ್ಲದಿದ್ದ ಮಾತ್ರಕ್ಕೆ ಜೀವನದಲ್ಲಿ ಕಳೆದುಕೊಳ್ಳುವುದು ಏನೂ ಇಲ್ಲ ಎಂಬ ಸತ್ಯವನ್ನು ಮನದಟ್ಟು ಮಾಡಿಸುತ್ತಿತ್ತು. ಆದರೆ ಈಗೀಗ

ಹಾಳು ಕನ್ನಡಿ! ನನ್ನ ಮೇಲೇನು ದ್ವೇಷವೊ ಅದಕ್ಕೆ! ಕನ್ನಡಿ ಬಿಡುವ ಬುರುಡೆಯನ್ನು ನಂಬಲು ನನಗೇನು ಅರುಳುಮರುಳಲ್ಲ, ಇನ್ನೂ ನಲವತ್ತೇ ವರ್ಷ. ಇದು ತೋರಿಸುವಂತೆ ನನ್ನ ಮುಖದಲ್ಲಿ ಸುಕ್ಕುಗಳಿಲ್ಲ; ನನಗೇನು ಪ್ರಾಯ ಮಾಸಿದೆಯೇ? ಕಣ್ಣಿನ ಸುತ್ತ ಬೆಂದು ಹೋದ ಚರ್ಮವಿಲ್ಲ; ನನಗೇನು ಬಂತು ಅಂಥಾ ನಿದ್ದೆಗೇಡು! ಸೊಂಟದ ಸುತ್ತ ಟಯರು ಬಂದಿಲ್ಲ; ಆರೋಗ್ಯದ ಬಗ್ಗೆ ಅಷ್ಟೊಂದು ಕಾಳಜಿ ವಹಿಸುತ್ತೇನಲ್ಲಾ. ಕೆನ್ನೆ ಜೋತು ಬಿದ್ದಿಲ್ಲ; ನನ್ನಜ್ಜಿಯನ್ನು ಹೋಲುತ್ತೇನೆ ನಿಜ, ಆದರೆ ಈಗಲೇ ಅಜ್ಜಿಯಾಗಲು ಸಾಧ್ಯವೇ? ಬಿಳಿ ಕೂದಲು ಬರಲಂತೂ ಸಾಧ್ಯವೇ ಇಲ್ಲ; ಅಮ್ಮನಂತೆ ಕಡು ಕಪ್ಪು ಕೂದಲು ನನ್ನದು. ಹಾಗಾದರೆ ಕನ್ನಡಿಯಲ್ಲಿ ಇರುವವರು ಯಾರು?

ಅಮ್ಮ ಅನ್ನುತ್ತಿದ್ದಂತೆ ನೆನಪಾಯಿತುನಲವತ್ತರ ಪ್ರಾಯಕ್ಕೆ ಅವಳೆಷ್ಟೊಂದು ಚೆಲುವೆಯಾಗಿದ್ದಳು. ನಾಲ್ಕು ಮಕ್ಕಳ ತಾಯಿ ಎಂದು ಯಾರಾದರೂ ಊಹಿಸಿಬಿಟ್ಟರೆ ಮತ್ತೆ ಕೇಳಿ! ದಿನಾ ಒಂಬತ್ತು ಜನರ ಸಂಸಾರಕ್ಕೆ ಜೀತ ಮಾಡಿದರೂ ಒಂದು ದಿನಉಶ್ಶಪ್ಪಾ ಎಂದವಳಲ್ಲ. ಮನೆ ತುಂಬಿ ತುಳುಕುವಷ್ಟು ನೆಂಟರು ಬಂದರೂ ಅವರ ಚಾಕರಿ ಮಾಡಲು ಬೇಸರಿಸಿದವಳಲ್ಲ. ಅಪ್ಪನ ಆದಾಯ ಮನೆಗೆಲ್ಲಿ ಸಾಕು ಎಂದು ಕೊರಗಿದವಳಲ್ಲ; ಅವಳ ಮುಖದಲ್ಲಿದ್ದ ಸಂತೃಪ್ತಿ ಕಂಡೇ ನಮಗೆ ಖುಷಿಯಾಗಿ ಬಿಡುತ್ತಿತ್ತು. ನಲವತ್ತೇನು, ಐವತ್ತಾದರೂ ಅವಳ ನೆತ್ತಿ ಬೋಳಾಗಿ ಚರ್ಮ ಇಳಿಬಿದ್ದಿರಲಿಲ್ಲ. ಬಿಳಿ ಕೂದಲಂತೂ ಹುಡುಕಬೇಕಿತ್ತು. ಅಂಥ ಅಮ್ಮನ ಮಗಳು ನಾನುಅದೆಲ್ಲಾ ಕ್ಷುದ್ರ ಕನ್ನಡಿಗೆಲ್ಲಿ ತಿಳಿಯಬೇಕು!

ಶಾಲೆಯಲ್ಲಿ ಒಗಟುಗಳ ಬಗ್ಗೆ ಅದ್ಯಾವುದೊ ಪಾಠ ಮಾಡುವಾಗ, ಒಂದಿಷ್ಟು ಒಗಟುಗಳನ್ನು ಬರೆದು ತರುವಂತೆ ನಮ್ಮ ಟೀಚರ್ ಹೇಳಿದ್ದರು. ‘ದುಡ್ಡು ಕೊಟ್ಟು ದುಃಖ ಕೊಂಡ್ಕೊ ಈರುಳ್ಳಿ ಬಗ್ಗೆ ಅಮ್ಮ ಹೇಳಿಕೊಟ್ಟ ಒಗಟು ಮಾತ್ರ ಚನ್ನಾಗಿ ನೆನಪಿದೆ. ಆದರೆ ಅದೀಗ ಒಗಟಾಗಿ ಉಳಿದಿಲ್ಲ, ಅರ್ಥವಾಗಿದೆ! ಸೈಟು ಖರೀದಿಸುವಾಗ ಅಮ್ಮ ಹೇಳಿದ್ದಳು, ‘ಸೈಟಿಗೇ 25 ಲಕ್ಷ ಕೊಟ್ಟರೆ ಮನೆ ಹ್ಯಾಗೆ ಕಟ್ತೀರಮ್ಮಾ?’ ಅಪ್ಪನ ಪಿತ್ರಾರ್ಜಿತ ಮನೆಯ ಹೊರತಾಗಿ ಯೋಚಿಸದ ಅಮ್ಮನಿಂದ ಮನೆ ಕಟ್ಟುವ ಬಗ್ಗೆ ಸಲಹೆ ತೆಗೆದುಕೊಳ್ಳಬಹುದೇ? ಅದೂ ನಾನುಅಷ್ಟು ದೊಡ್ಡ ಕಂಪನಿಯಲ್ಲಿ ಕಾರ್ಪೊರೇಟ್ ಕಮ್ಯುನಿಕೇಶನ್ ಆಫೀಸರ್ ಆಗಿರುವ ನಾನು! ಕಳೆದ ನಾಲ್ಕು ವರ್ಷಗಳಿಂದ ಸೈಟಿಗೆ ಮಾಡಿದ ಸಾಲದ EMI ತುಂಬುತ್ತಿದ್ದೇವೆ ನಾವಿಬ್ಬರು. ಇನ್ನೆರಡು ವಷರ್ಗಳಲ್ಲೇ ಸಾಲ ತೀರಬಹುದು, ಮನೆ ಕಟ್ಟಲು ಹೊಸ ಸಾಲ ಮಾಡಬಹುದು. ಅದೇನು ಅಂಥಾ ಚಿಂತೆಯಲ್ಲ ಬಿಡಿ.

ನನ್ಮಗಳು ವರ್ಷ ಎಸ್ಸೆಸ್ಸೆಲ್ಸಿ. ಹಾಗಂತ ಅವಳಿಗೂ ಪದೇ ಪದೇ ನೆನಪು ಮಾಡಬೇಕು. ಹಾಳಾದೋಳು! ಓದುವುದೆ ಇಲ್ಲ. ಅವಳಿಗೇಂತ ನಾನು ಮಾಡದ ಕೆಲಸವೇ ಇಲ್ಲ, ಈಡೇರಿಸದ ಬೇಡಿಕೆಯೂ ಇಲ್ಲವೇನೊ. ಒಳ್ಳೆಯ ಕಾಲೇಜಿನಲ್ಲಿ ಸೀಟು ಬೇಕೆಂದರೆ 95% ಆದರೂ ಬರಬೇಡವೇ? ‘ ಮಗುನ್ಯಾಕೆ ಗೋಳು ಹುಯ್ಕೊತೀಯೆ? ನೀವೆಲ್ಲಾ ಓದಿದ್ದೆಷ್ಟು ನಾನು ಕಂಡಿಲ್ವಾಅಂತಾಳೆ ಅಮ್ಮ. ಅದಕ್ಕೇ 40 ಸಾವಿರ ಸಂಬಳ ಎಣಿಸಲು ನಾನು 15 ವರ್ಷ ದುಡಿಯಬೇಕಾಯ್ತು. ನನ್ಮಗಳು ಹಾಗಾಗಬಾರದಲ್ಲಾ!

ಪ್ರತಿ ಬಾರಿ ಊರಿಗೆ ಹೋದಾಗಲೂ ಅಮ್ಮ ಹೇಳುವುದು ಅದೇ ಮಾತುಸಿನೆಮಾಗಳಲ್ಲಿ ಹೇಳಿದಂತೆ; ‘ಇದ್ಯಾಕೆ ಇಷ್ಟೊಂದು ಸೊರಗಿದೀಯ? ಊಟತಿಂಡಿ ಮಾಡಲ್ವೇ?’ ನಿಜ ಹೇಳುತ್ತೇನೆ, ಆರೋಗ್ಯದ ವಿಷಯದಲ್ಲಿ ನಾನ್ಯಾವತ್ತೂ ರಾಜಿ ಆಗುವುಲ್ಲ. ಬೆಳಗ್ಗೆ ತಿಂಡಿಗೆ ಬ್ರೆಡ್ಡೊ, ಸೀರಿಯಲ್ಲೊ, ಮ್ಯಾಗಿನೊ ತಪ್ಪದೆ ತಿನ್ನುತ್ತೀನಿ. ಮಧ್ಯಾಹ್ನ ತಿನ್ನುವುದೂ ಒಳ್ಳೆಯ ಕಂಪನಿಗಳ ರೆಡಿ ಫುಡ್ಡೆ ಅಥವಾ ನಮ್ಮದೇ ಕಂಪನಿಯ ಕೆಫೆಟೇರಿಯದಲ್ಲಿ. ಇಲ್ಲೇ ಮನೆಯ ಹತ್ತಿರ ಒಂದು ಅಂಗಡಿಯಲ್ಲಿ ಬಗೆ ಬಗೆಯ ರೊಟ್ಟಿ, ಪಲ್ಯ, ಚಿತ್ರಾನ್ನಗಳು ದೊರೆಯುತ್ತವೆ. ಎಲ್ಲಾ ಹೋಮ್ ಮೇಡ್. ರಾತ್ರಿಗೆ ತಿನ್ನುವುದು ಅದನ್ನೇ. ವಾರಾಂತ್ಯದಲ್ಲಿ ಒಂದು ದಿನ ಹೊಟೆಲ್ ನಲ್ಲಿ ತಿಂದರೂ ಇನ್ನೊಂದು ದಿನ ನಾನೇ ಅಡುಗೆ ಮಾಡುತ್ತೀನಿ. ಅದೆಲ್ಲಾ ಅಮ್ಮನಿಗೆ ಅರ್ಥವಾಗಲ್ವಲ್ಲ.

ನಿಂಗೇನಮ್ಮ, ಇರೋದೊಂದು ಮಗಳು. ಇಬ್ಬರೂ ದುಡಿಯೊ ಅಚ್ಚುಕಟ್ಟಾದ ಸಂಸಾರ. ಇನ್ಯಾವ ಚಿಂತೆ?’ ಅನ್ನುತ್ತಾಳೆ ಅಮ್ಮ. ನಿಜ, ನನ್ನವನ ಹಾಗೆ ಬಾಸ್ ಕರಕರೆ, ಸಹೋದ್ಯೋಗಿಗಳ ತಲೆ ಹರಟೆಯನ್ನು ನಾನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಶೇರು ಪೇಟೆ ಬಿತ್ತು, ರಿಲಯನ್ಸ್ ಶೇರು ಕಡಿಮೆಗೆ ಲಿಸ್ಟಾಯಿತು ಎಂದು ಚಿಂತಿಸುವುದಿಲ್ಲ. ಅಮೆರಿಕದಲ್ಲಿ ರಿಸೆಶನ್ ಎಂಬ ರಗಳೆಯೂ ನನ್ನನ್ನು ತಟ್ಟಿಲ್ಲ. ಅಥವಾ ಅಮ್ಮನಿಗಿದ್ದ ಹಾಗೆ ಮೂರು ಹೆಣ್ಣುಮಕ್ಕಳು ಮದುವೆಗೆ ನಿಂತಿಲ್ಲ. ಸದಾ ಗಿಜಿಗುಡುವ ನೆಂಟರ ತಂಟೆಯಿಲ್ಲ. ಗಂಡ ರಿಟೈರ್ ಆದರೆ ಮುಂದೇನಪ್ಪಾ ಎಂಬ ಚಿಂತೆಯೂ ಇಲ್ಲ. ಆದರೂ ಅಮ್ಮನ ರೂಪು, ಸ್ವಾಸ್ಥ್ಯ, ನೆಮ್ಮದಿ

ಇದೆಲ್ಲಾ ಕ್ಷುದ್ರ ಕನ್ನಡಿಗೆ ಗೊತ್ತಾಗಲ್ಲ, ಬಿಡಿ.

Read Full Post »

Older Posts »