Feeds:
ಲೇಖನಗಳು
ಟಿಪ್ಪಣಿಗಳು

Archive for ಫೆಬ್ರವರಿ, 2008

ಬರೆಯಲೇಬೇಕೆಂಬ ತುಡಿತದಲ್ಲಿ ಕುಳಿತಿದ್ದೆ. ಆದರೆ ಕೂತಿದ್ದಷ್ಟೇ ಬಂತು, ಬರೆಯಲಾಗಲಿಲ್ಲ. ವಿಪರೀತ ಹಸಿವಾದಾಗ ಊಟ ಸೇರುವುದಿಲ್ಲವಲ್ಲ, ಹಾಗೆ! ಅವಳು ಫೋನ್ ಮಾಡಿದಾಗಿನಿಂದ ಎಷ್ಟೆಲ್ಲಾ ಭಾವನೆಗಳು ಪರೇಡ್ ಮಾಡಿಬಿಟ್ಟಿದ್ದವು ಮನಸ್ಸಿನಲ್ಲಿ.

ನನ್ನ ಮದ್ವೆ ಕಣೆ, ಮುಂದಿನ ತಿಂಗಳುಎಂದವಳು ಹೇಳಿದಾಗ ಸಂತಸದ ನಡುವೆಯೂ ಒಂದೆಳೆ ಬೇಸರ ಹಾದು ಹೋಗಿತ್ತು. ರೀತಿ ಮದುವೆಯಾಗುವ ಸನ್ನಿವೇಶ ಯಾರಿಗೂ ಎದುರಾಗದಿರಲಿ ಎಂಬ ಆಶಯದ ಜತೆಗೆ, ಅವಳಂತೆ ಬಾಳುತ್ತಿರುವ ಹುಡುಗಿಯರಿಗೆ ಅವಳಂತೆಯೇ ಹೊಸ ಬದುಕು ಎದುರಾಗಲಿ ಎಂಬ ಹಾರೈಕೆ.

ಆಗ ನಾನು ಬೆಂಗಳೂರಿನ ಸುದ್ದಿಮನೆಯಲ್ಲಿ ಬದುಕಿಕೊಂಡಿದ್ದ ಕಾಲ ವಿಜಯನಗರದ ಕಲ್ಯಾಣ ಮಂಟಪವೊಂದರಲ್ಲಿ ನಡೆದ ಅದ್ಧೂರಿ ಮದುವೆಗೆ ಎಷ್ಟೊಂದು ಸಂಭ್ರಮದಿಂದ ಸಾಕ್ಷಿಯಾಗಿದ್ದೆ; ಕಚ್ಚೆ ಸೀರೆ ಉಟ್ಟು ಮಣೆ ಮೇಲೆ ಕುಳಿತು ಅವನೆಡೆಗೆ ಕಳ್ಳ ನೋಟ ಬೀರುತ್ತಿದ್ದ ಕೆಂಪು ಕೆನ್ನೆಯ ಅವಳನ್ನು ಎಷ್ಟೊಂದು ರೇಗಿಸಿದ್ದೆ; ಅವಳ ಕುತ್ತಿಗೆಯಲ್ಲಿದ್ದ ಮಣಭಾರದ ಮಂಗಲಸೂತ್ರವನ್ನುಎಲ್ಲಿ ತೋರ್ಸೆ ನಿನ್ನ್ ಲೈಸೆನ್ಸುಎಂದು ಪೀಡಿಸಿದ್ದೆ; ಮದುವೆ ಛತ್ರದ ತುಂಬೆಲ್ಲಾ ಸಿಂಗರಿಸಿಕೊಂಡು ಓಡಾಡುತ್ತಿದ್ದ ಅವಳ ನಾಲ್ಕಾರು ಕಸಿನ್ ಗಳನ್ನು ಕಂಡುನನ್ನದೂ ಯಾವುದಾದ್ರೂ ಹಾಳು ಕಸಿನ್ ಮದುವೆಯಾಗಬಾರದೆಎಂದು ಮನದಲ್ಲೇ ಕರುಬಿದ್ದೆ; ಮದುವೆಯಾದ ನಾಲ್ಕನೇ ದಿನದಿಂದಲೇ ಅವಳ ಹನಿಮೂನ್ ಟ್ರಿಪ್ ಆರಂಭ ಎಂಬುದು ತಿಳಿದು ಏನೇನೆಲ್ಲಾ ಹೇಳಿ ಗೋಳುಹೊಯ್ದುಕೊಂಡಿದ್ದೆ.

ಮದುವೆಯಾದ ಒಂದೇ ತಿಂಗಳಿಗೆ ನನ್ನೊಡಗೆ ಮುನ್ನಾಭಾಯ್ MBBS’ ನೋಡಲು ಬಂದಿದ್ದಳು. ಈಗಿನ್ನೂ ಮದುವೆಯಾದವಳು, ಗಂಡನ ಬಿಟ್ಟು ಹೀಗೆಲ್ಲಾ ಗೆಳತಿ ಜತೆ ಸುತ್ತಾಡಿದರೆ ಏನು ಚೆನ್ನ ಎಂಬುದು ನನ್ನ ದುಗುಡ. ಆದರೆ ಆತ ಹೈದರಾಬಾದ್ಗೆ ಮರಳಿರುವನೆಂದೂ, ಅಲ್ಲಿ ಮನೆ ಮಾಡಿದ ಮೇಲೆ ತನ್ನ ಕರೆಸಿಕೊಳ್ಳುವನೆಂದೂ ತಿಳಿಸಿದಳು. ಗಂಡನೊಡನೆ ಗೂಡು ಸೇರಿದ ನಾಲ್ಕೇ ತಿಂಗಳಲ್ಲಿ 1+1=3 ಎಂಬ ತುಂಟ SMS ಕಳಿಸಿದ್ದಳಲ್ಲ!

ದಿನ ಅವಳಮ್ಮನ ಮನೆಗೆ ಹೋಗಿದ್ದೆಕೆಲವೇ ಮಿಲಿ ಮೀಟರ್ ಉದ್ದದ ಕೆಂಪು ತುಟಿ, ತೀರಾ ನಾಜೂಕಾದ ಪುಟ್ಟ ಮುಷ್ಟಿ, ಬೋಳು ತಲೆಯ, ನಿದ್ದೆಯಲ್ಲೇ ನಗುತ್ತಿದ್ದ ಮುದ್ದು ಮಗುವನ್ನು ನೋಡಲು. ಮಗು ಅವಳಂತಿತ್ತೋ, ಅವಳ ಗಂಡನಂತಿತ್ತೋ ತಿಳಿಯಲಿಲ್ಲ. ಆದರೆ ಅವಳಲ್ಲಿದ್ದ ಸಂಭ್ರಮ ನನ್ನನ್ನೂ ಆವರಿಸಿತ್ತು. ತನ್ನ ಗಂಡನೂ ಬೆಂಗಳೂರಿಗೇ ಬರುವ ಪ್ರಯತ್ನದಲ್ಲಿದ್ದಾನೆ. ತಾನು ಇಲ್ಲೇ ಬೇರೆ ಕೆಲಸ ಹುಡುಕಿಕೊಳ್ಳುತ್ತೇನೆ. ತನ್ನತ್ತೆ ಮಾವನಿಗೆ ಅವನೊಬ್ಬನೇ ಮಗನಾದ್ದರಿಂದ ಎಲ್ಲರೂ ಮಲ್ಲೇಶ್ವರದ ಮನೆಯಲ್ಲೇ ಇರುತ್ತೇವೆ ಎಂದೆಲ್ಲಾ ದವಡೆ ಕರಗುವಷ್ಟು ಮಾತಾಡಿದ್ದಳು.

ಅವಳ ಗಂಡ ಹೈದರಾಬಾದ್ ಬಿಟ್ಟಿದ್ದೇನೋ ನಿಜ; ಆದರೆ ಸೇರಿದ್ದು ಬೆಂಗಳೂರಲ್ಲ, ಚೆನ್ನೈ. ಇತ್ತ ಬೆಂಗಳೂರಲ್ಲಿ, ದಿನವಿಡೀ ದುಡಿದು ಮನೆಗೆ ಬಂದ ಆಕೆಯನ್ನು ಅತ್ತೆಮಾವ ವಿಶ್ವಾಸದಿಂದಲೇ ಕಾಣುತ್ತಿದ್ದರು, ಮೊಮ್ಮಗುವನ್ನು ಎದೆಗವಚಿಕೊಂಡು ಸಾಕುತ್ತಿದ್ದರು. ತನ್ನ ಪಿಸು ಮಾತು ಕೇಳುವಷ್ಟು, ಬಿಸಿಯುಸಿರು ತಾಗುವಷ್ಟು ಸನಿಹದಲ್ಲಿ ಆತ ಇರಬಾರದೇ ಎಂಬ ಅವಳ ಕೊರಗು ಮುದ್ದು ಮಗುವಿನ ಮುಖ ಕಂಡು ಕರಗುತ್ತಿತ್ತು. ನನ್ನ ಬದುಕಿನ ಬಂಡಿಯೂ ವೇಗ ಪಡೆದುಕೊಂಡಿದ್ದರಿಂದ ನಾವಿಬ್ಬರು ಫೋನಿನಲ್ಲಿ ಗುಸುಗುಟ್ಟುವುದೂ ಅಪರೂಪವಾಗಿತ್ತು.

ಅಂದು ಬೆಳಗ್ಗೆಯೇ ನನ್ನ ಮೇಲ್ ಬಾಕ್ಸ್ ನಲ್ಲಿ ಅವಳ ಚುಟುಕು ಸಂದೇಶ ಕುಳಿತಿತ್ತು. ಅದು ಹೇಳಿದ್ದಿಷ್ಟೇ– ”ಅವನಿಲ್ಲಯಾವತ್ತಿಗೂ!” ಕಂಗಾಲಾಗಿ ಫೋನ್ ಮಾಡಿದೆ. ಅವನು ಹೋಗಿ ತಿಂಗಳ ಮೇಲಾದ್ದರಿಂದಲೊ ಏನೊ, ಸಮಾಧಾನದಿಂದಲೇ ಮಾತನಾಡಿದಳು. ಹಾಲು ಒಂದಿಷ್ಟು ಉಕ್ಕಿದ ಮೇಲೆ ಕುದಿಯಲೇಬೇಕಲ್ಲ. ಕೆಲಸದ ಒತ್ತಡ, ತನ್ನವರ ಸಾಮೀಪ್ಯವಿಲ್ಲದ ಒಂಟಿ ಜೀವನ ಆತನ ಹೃದಯ ಚೇತರಿಸಿಕೊಳ್ಳಲಾಗದಂತಹ ಬರೆ ಹಾಕಿಬಿಟ್ಟಿತ್ತು. ಅಪರೂಪಕ್ಕೊಮ್ಮೆಯಾದರೂ ಸಿಗುವ, ಗಂಡಮಗಅಪ್ಪ ಕುಟುಂಬದ ಪಾಲಿಗೆ ಶಾಶ್ವತವಾಗಿ ಇಲ್ಲವಾಗಿಬಿಟ್ಟಿದ್ದ.

ಅದಾದ ಮೇಲೆ ಎಷ್ಟೋ ಬಾರಿ ಅವಳೊಂದಿಗೆ ಮಾತನಾಡಿದ್ದೆ. ಅವಳ ನಲಿವಿಗೆ ನಕ್ಕಿದ್ದೆ, ನೋವಿಗೆ ಬಿಕ್ಕಿದ್ದೆ. ಅವಳ ಮುಖದ ಮೇಲೆ ಸರ್ರನೆ ಹಾದು ಹೋಗುವ ಸಣ್ಣ ನಗುವಿನ ಎಳೆ ನೋಡಲು ಕಾತರಿಸಿದ್ದೆ. ಆದರೆ ಈಗ ಬಂದ ಅವಳ ಫೋನು, ಈವರೆಗಿನ ಎಲ್ಲಾ ಸಂಚಾರಿ ಭಾವಗಳನ್ನು ಮೀರಿಸಿದ ವಿಚಿತ್ರ ಸ್ಥಿತಿಗೆ ನನ್ನ ನೂಕಿತ್ತು. ಅವಳು ಮತ್ತೆ ಮದುವೆಯಾಗುತ್ತಿದ್ದಾಳೆನಿಜಕ್ಕೂ ಸಂತೋಷ. ಅದಕ್ಕಿಂತಲೂ ಖುಷಿಯಾಗಿದ್ದು

ಅವಳನ್ನು ಧಾರೆ ಎರೆಯುತ್ತಿರುವುದು ಅವಳ ಅತ್ತೆ, ಮಾವ!

Read Full Post »

ಸೋನೆ ಮಳೆ

ಮಲೆನಾಡಿನ ಒಂದೂರು. ಹೆಸರುಏಂತದೋ ಒಂದು. ಊರಲ್ಲಿರುವುದು ಎರಡೇ ಮನೆ, ಊರಿಗಿರುವುದು ಒಂದೇ ದಾರಿ. ಡಾಂಬರು ರಸ್ತೆಯಿಂದ, ಅಂದರೆ ಊರಿನ ಸಮೀಪಕ್ಕೆ ಬಸ್ಸು ಬಂದು ನಿಲ್ಲುವ ರಸ್ತೆಯಿಂದ ನಾಲ್ಕೇ ಮೈಲು ಒಳಗೆ ನಡೆದರೆ ಊರು ಸಿಕ್ಕೇಬಿಡುತ್ತದೆ.

ದಾರಿಯಲ್ಲಿ ಕಾರೇನು, ಎತ್ತಿನ ಗಾಡಿ ಹೋಗುವುದೂ ಅನುಮಾನ. ಕಾಲ್ನಡಿಗೆಯ ದಾರಿ. ಕೊಂಚ ಅನುಭವಸ್ಥರು ಜಾರದೆ, ಮುಗ್ಗರಿಸದೆ ಬೈಕು ಓಡಿಸಲೂ ಸಾಕು. ರಸ್ತೆಯಲ್ಲೊಮ್ಮೆ ಬೈಕು ಓಡಿಸಿಬಿಟ್ಟರೆ ಸುಮಾರು ಎಂಥಾ ರಸ್ತೆಯಲ್ಲಾದರೂ ಓಡಿಸಿಬಿಡಬಹುದು ಎಂಬ ಖ್ಯಾತಿಯೂ ಇದಕ್ಕಿತ್ತು. ದಿನಕ್ಕೊಂದು ಗಾಡಿಯೂ ಓಡಾಡದ ದಾರಿಯಲ್ಲಿ ಬೆಳಗಿನಿಂದ ಹತ್ತಿಪ್ಪತ್ತು ಬೈಕುಗಳು ಟೈರು ಸವೆಸಿದ್ದವು. ಎಲ್ಲರದ್ದೂ ಒಂದೇ ಗುರಿ, ತಲುಪಿದ್ದು ಒಂದೇ ಮನೆ. ಮದುವೆ ಮನೆ!

ಕಾಡಿನ ಮೂಲೆಯ ಮನೆಯ ಅಂಗಳವೇನೊ ದೊಡ್ಡದೇ ಆದರೂ ಮದುವೆ ಮನೆಗೆ ಕೊಂಚ ಸಣ್ಣದೇ ಎನಿಸುತ್ತಿತ್ತು. ತುಳಸೀಕಟ್ಟೆ ಮುಂದೆ ಸೇರಿದ್ದ ಗುಂಪು ಮಂಟಪ ಕಟ್ಟುತ್ತಿತ್ತು.

ಹೋ ಮಾರಾಯ! ದತ್ತಣ್ಣ ಮಳೆಗಾಲದ ಬುಡಕ್ಕೆ ಮಗಳ ಮದುವೆ ಇಡ್ಗಂಡಿದ್ದು ಸಾಕು

ಹೌದು ಮಾರಾಯ! ಊರಿಗ್ ದಾರಿಯೇ ಇಲ್ಲೆತೋರ್ಣ ಇಷ್ಟುದ್ದ ಸಾಕನಾ?… ಅಂಥಾದ್ರಲ್ಲಿ ಮಳೆಗಾಲದ ಮದುವೆ ಅಂದ್ರೆಂತ ಸಣ್ಣಾಟವ?’

ಇದ್ರಗಿಂತ ಕಂಚಿಕೊಪ್ಪದ ದೇವಸ್ಥಾನದಲ್ಲಿ ಲಾಯ್ಕಾಗ್ತಿತ್ತು ಅಂಟಿನ ಬಾಟ್ಲಿ ಕೊಡಾ

ಮತ್ತಲ್ದ! ಎಲ್ಲಾದ್ರೂ ರಾತ್ರಿ ಮಳೆ ಹೊಡತ್ತಲಾಂದ್ರೆ ಮಂಟಪ ಪೂರ ನೀರಲ್ಲ್ ಹೋಮ

ಥೋ! ಅಡ್ಡಬಾಯಿ ಹಾಕಾಡ ಮಾಣಿಎನ್ನುತ್ತಾ ಅಂಗಳ ಇಳಿದ ಆಕೆ ಮಂಟಪ ಕಟ್ಟುವವರಿಗೆ ಅವಲಕ್ಕಿ, ಚಹಾ ಪೂರೈಸುವ ಹೊಣೆ ಹೊತ್ತಿದ್ದರು.

ಇಗ್ಗಣ್ಣನ ಮನೆಲ್ಲಿ ಹತ್ತು ಲೀಟರು ಹಾಲಿಗೆ ಹೇಳಿದ್ದ ದತ್ತಣ್ಣ. ಪಟ್ಟನೆ ತಂದ್ಬಿಡುಎಂಬ ಆಕೆಯ ಮಾತಿಗೆಅಯ್ಯೊಎನ್ನುತ್ತಾ ಬಣ್ಣದ ಟೇಪನ್ನು ಅಲ್ಲೇ ಬಿಟ್ಟ ಆತ ಬೈಕ್ ಚಾಲೂ ಮಾಡಿದ.

*****

ಮಹಿಳೆಯ ವಿಭಾಗದಲ್ಲಿ ಆಕೆಯದ್ದೇನೂ ಗುರುತರ ಹೊಣೆಯಲ್ಲ, ಅಡಿಗೆ ಮನೆ ಸೇರಿದ್ದ ಅನುಭವಸ್ಥರು ಆಕೆಗೆ ವಹಿಸಿದ್ದು ಪಡಿಚಾಕರಿಯಷ್ಟೇ. ಆಗಷ್ಟೇ ಮದುವೆ ಮನೆಗೆ ಬಂದ ನೆಂಟರಮ್ಮನ ಕಂಡು ಕಣ್ಣರಳಿಸಿ…’ಯಮುನತ್ಗೆಅರಾಮನೆ? ಈಗ್ಬಂದ್ಯಾ? ಎಲ್ಲಿ ಭಾವ್ನೋರುಕೇಳಿದಳು.

ಅವ್ರು ನಾಳೆ ಬತ್ತ. ನಾಲ್ಕೂವರೆ ಬಸ್ಸು ತಪ್ಹೋತು ಮಾಡಿದಿ ಮಾರಾಯ್ತಿ. ಪುಣ್ಯ! ಸಿಕ್ತು

ತಪ್ಪಿದ್ರೆ ನಾಳೆ ದಿಬ್ಬಣದ ಸಂತೀಗೆ ಬಪ್ಪದಾಗಿತ್ತು. ಹೆಹ್ಹೆಹ್ಹೆ. ಬಾ ಒಳಗೆ. ಆಸ್ರೀಗೆ ಎಂತದು?’

ಎಂತ ಬೇಡಹೋಗ್ಲಿ, ಚಹಾನೇ ಕೊಡು. ಎಲ್ಲಿ ಬೀಗಿತ್ತಿ?’ ಎನ್ನುತ್ತಾ ಒಳ ನುಗ್ಗಿದ ಆಕೆಗೆ ಕಂಡಿದ್ದು ಮಗಳಿಗೆ ತಂದಿದ್ದ ಸೀರೆ, ಒಡವೆ ತೋರಿಸುತ್ತಿದ್ದ ಬೀಗಿತ್ತಿ.

ಬೋಳು ಚಿನ್ನದ ನೆಕ್ಲೇಸಾ ಅಕ್ಕಯ್ಯ? ಮುತ್ತೊ ಹವಳವೊ ಹಾಕ್ಸಿದ್ರೆ ಲಾಯ್ಕಿತ್ತು

ಅದೆಲ್ಲಾ ಬರೇ ದಂಡನೆ. ಸರಕ್ಕೆ ಹಾಕ್ಸಕ್ಕಾದ್ರೆ ತುಟ್ಟಿ. ಕಡಿಗೆಂತ ಕಿಮ್ಮತ್ತೇ ಇರ್ತಿಲ್ಲೆ

ಅಳಿಯಂಗೆಂತು? ಬರೇ ಚೈನಾ? ಉಂಗುರಿಲ್ಯ?’

ತುಟ್ಟಿ ಕಾಲ್ದಲ್ಲಿ ಇಷ್ಟಾದ್ರೂ ಮಾಡ್ಸಿದ್ದ ಹೇಳು. ನಿನ್ನ ಸೊಸಿಗೆ ಮಾಂಗಲ್ಯ ಬಿಟ್ಟು ಎಂತ ಚಿನ್ನನೂ ಹಾಕಿದ್ದಿಲ್ಯಡ

ಅಯ್ಯ ಸುದ್ದಿ ಬಿಡು ಎನ್ನುತ್ತಾ ಉಳಿದ ಅತ್ತಿಗಮ್ಮಂದಿರ ಸುದ್ದಿಗೆ ಪೂರ್ಣವಿರಾಮ ಹಾಕಿ ಎದ್ದ ಬೀಗಿತ್ತಿ ಬೀಗ್ರುಪ್ಚಾರದ ಬಟ್ಟಲು ತೆಗಿಯಲ್ಲೆ ಬಂದವ್ಳು ಇಲ್ಲೇ ಕುಂತಿಎಂದು ಒಡವೆಗಳನ್ನು ಕಪಾಟಿನಲ್ಲಿಟ್ಟು ಬೀಗ ಜಡಿದು ಚಾವಿ ಸೊಂಟಕ್ಕೆ ಸಿಕ್ಕಿಸಿ ನಡೆದಳು.

ಅವಳ ಬೆನ್ನಿಗೆಅಕ್ಕಯ್ಯಮೆಣಸಿನ ಪುಡಿ ಎಲ್ಲಿದ್ದು? ನಾಗಂದಿಗೆ ಮೇಲಾ?’ ಎನ್ನುತ್ತಾ ಒಬ್ಬಳು, ‘ಹಾಲು ಬಂತಾ ನೋಡ್ತಿಎನ್ನುತ್ತಾ ಮತ್ತೊಬ್ಬಳು, ‘ಮದ್ವೆ ಕೂಸೆಲ್ಲಿ? ಮೆತ್ತಿಗಿದ್ದಾ?’ ಎನ್ನುತ್ತಾ ಮಗದೊಬ್ಬಳುಎಲ್ಲರೂ ಎದ್ದರು.

*****

ರಾಟ್ರಿ ಊಟಡೊಳಗೆ ಚಪ್ರಕ್ಕೆಲ್ಲಾ ಟಾರ್ಪಾಳಿನ್ ಹಾಕ್ಮುಗಡ್ರೆ ಗೆಡ್ಹಾಂಗೆಪಿಚಕ್ಕನೆ ಕವಳದ ರಸ ಉಗುಳುತ್ತಾ ಪಂಚೆ ಅರ್ಧಕ್ಕೆ ಕಟ್ಟಿಕೊಂಡು ಲೆಕ್ಕ ಹಾಕುತ್ತಿದ್ದರು ಯಜಮಾನರು. ಹೋ ಆತನ್ರೋಮಳೆ ಬಂತುಎಂದು ಹೆಗಲ ಮೇಲಿನ ಟವೆಲ್ಲು ಕುಡುಗಿ ಅವಸರ ಮಾಡುತ್ತಿದ್ದವರಿಗೆ ಗಡಿಬಿಡಿ ಮಾಡುವುದೊ ಬೇಡವೋ ಎಂಬುದೂ ತಿಳಿಯದಂತಾಗಿತ್ತು; ಬಂದೇಬಿಟ್ಟೆ ಎಂದು ಮಧ್ಯಾಹ್ನದಿಂದ ಹೆದರಿಸುತ್ತಿದ್ದ ಮಳೆ ಈಗ ಇಳಿ ಬಿಸಿಲಿನೊಂದಿಗೆ ಕಣ್ಣಾಮುಚ್ಚಾಲೆ ಆಡತೊಡಗಿತ್ತು.

ನಾನಾ ಬಣ್ಣಗಳ ಸೆಲ್ವಾರ್ ತೊಟ್ಟು ಅದರ ದುಪಟ್ಟಾವನ್ನು ಅಂಗಳದಲ್ಲಿ ಹೊರಳಾಡಿಸುತ್ತಿದ್ದ ಪುಟ್ಟಿಯರು

ಬಿಸಿಲು ಮಳೆ ಮಂಗನ ಮದುವೆ

ಚಾರಟೆ ಚಕ್ಲಿ

ನಂಜುಳ್ಳೆ ಪಾಯ್ಸ ಕಟ್ಟೆರದ್ ದಿಬ್ಬಣ

ನಾನೂ ನೀನು ಹೋಗನಎಂದು ಕುಣಿದಾಡುತ್ತಿದ್ದರು.

ಎಲ್ಲವನ್ನೂ ನೋಡುತ್ತಾ ಉಪ್ಪರಿಗೆ ಮೇಲೆ ಕುಳಿತಿದ್ದ ಜರಿ ಸೀರೆಯುಟ್ಟ ಯುವತಿಯ ಕನಸುಗಳು ಕಣ್ಣಲ್ಲೇ ಮಂಜಾಗುತ್ತಿದ್ದವು; ವೇದನೆಗಳು ಸಹ ನುಂಗಿದ ಎಂಜಲಿನೊಂದಿಗೆ ಮತ್ತೆ ಹೊಟ್ಟೆಗೇ ಹಿಂದಿರುಗುತ್ತಿದ್ದವು; ಅದ್ಯಾವ ಕನಸು ಮರಿಗಳಿಗೆ ಅವಳ ಕಣ್ಣಿನ ಗೂಡುಗಳು ಕಾವು ಕೊಡುತ್ತಿದ್ದವೊ! ಬಲ್ಲವರಾರು? ಆಕೆ ನಿಧಾನಕ್ಕೆ ಕೆಳಗಿಳಿದು ಬಂದಿದ್ದನ್ನು ಯಾರೂ ಗಮನಿಸಲಿಲ್ಲ. ಸುತ್ತಲಿನ ಮಲೆಗಳಲ್ಲಿ ಮದುಮಗಳು ಮಾಯವಾದಳು.

*****

ಮದ್ವೆ ಕೂಸೆಲ್ಲೋತು? ಕಾಣ್ತಿಲ್ಲೆ!’ ಎಂದು ಆರಂಭವಾದ ಗುಸುಗುಸು, ಗದ್ದಲಕ್ಕೆ ತಿರುಗಿತು. ‘ಮೆತ್ತು, ಮಾಳಿಗೆ, ಮುಂದೆ, ಹಿಂದೆ ಎಲ್ಲಾ ಹುಡುಕಾತು. ಎಲ್ಲೆಲ್ಲೂ ಇಲ್ಲೆ! ಎಲ್ಹೋತು?’ ಎಂಬ ಅಳುಕು ಅಳುವಿಗೇ ಬಂದು ನಿಂತಿತು.

ಸಂಜೆ ಇಷ್ಟೊತ್ತಿಗೆ, ಮಳೆಲ್ಲಿ ಹೇಳದೆಕೇಳದೆ ಎಲ್ಲೋತು ಕೂಸುಇಂದ ಶುರುವಾದ ಗದ್ದಲ, ‘ ಹೆಂಗಸ್ರು ಎಂತ ಮಾಡ್ತ ಒಳಗೆ? ಚೂರಾದ್ರೂ ಜವಾಬ್ದಾರಿ ಬ್ಯಾಡದಾ?’ ಎಂಬ ಗಲಾಟೆಯಾಗಿ, ‘ಇಷ್ಟೆಲ್ಲಾ ತ್ರಾಸು ಪಟ್ಟು ಮದುವೆ ತಯಾರಿ ಮಾಡಿದ್ದೆಂತಕ್ಕೆ? ಎಲ್ಲಾ ಹೊಳೆಲ್ಲಿ ಹೋಮ. ಈ ಕತ್ಲೆಲ್ಲಿ ಎಲ್ಲಿ ಹೇಳಿ ಹುಡ್ಕದು?’ ಎನ್ನುವ ಗೋಳಾಟವಾಯಿತು. ಹತ್ತಿರದ ಬೆಟ್ಟ, ಬಾವಿ, ಹೊಂಡ, ಹಿತ್ತಲುಗಳನ್ನು ಸೋಸಲು ಜನರನ್ನೂ ಅಟ್ಟಿದ್ದಾಯ್ತು.

ಬೆಳಗಾದ್ರೆ ಮದುವೆ. ಮನೆ ಮುಂದೆ ದಿಬ್ಬಣ ಬತ್ತು

ನೆಂಟರಿಷ್ಟರು, ಊರ ಜನ ಎಲ್ಲ ಬತ್ತ

ಯಾರಿಗೆ ಎಂತ ಹೇಳದು

ಎಷ್ಟು ಸುಮಾರು ದತ್ತಣ್ಣಂಗೆ

ಮಾಣಿ ಮನೆಯವ್ಕೆ ಎಂತ ಮುಖ ತೋರ್ಸದು

ಮರ್ಯಾದಿಂದಿಪ್ಪ ಜನಕ್ಕೇ ಹಿಂಗೆಲ್ಲಾ ಆಗ್ತಲ್ಲಾ

ಊರ ಜನ ನೂರು ಮಾತಾಡ್ತ. ಪಾಪ! ದತ್ತಣ್ಣ

ಹುಡುಗನ ಮನೆಯವರಿಗೆ ಏನು ಹೇಳಬಹುದು, ಏನು ಹೇಳಬಾರದು, ಬಂಧು ಬಳಗಕ್ಕೆ ಯಾವ ಸುದ್ದಿ ತಲುಪಲಿ/ತಲುಪದಿರಲಿ ಎಲ್ಲವೂ ನಿರ್ಧಾರವಾಯಿತು. ಮದುವೆ, ದಿಬ್ಬಣ, ಮಾನ, ಅವಮಾನ, ಭೂತ-ಭವಿಷ್ಯ ಎಲ್ಲಾ ವಿಷಯಗಳೂ ಚರ್ಚೆಗೆ ಬಂದವು.

ಚರ್ಚೆಗೆ ಬಾರದ್ದು ಒಂದೇ… ಕಾಣೆಯಾದ ಕಂಗಳಲ್ಲಿ ಹನಿಯುತ್ತಿದ್ದ ಸೋನೆ ಮಳೆ.

Read Full Post »

« Newer Posts - Older Posts »