ಅದೊಂದು ಮೂರು ವರ್ಷದ ಮಗು. ಎಚ್ಚರ ಇದ್ದಷ್ಟೂ ಹೊತ್ತು ಒಂದು ಕ್ಷಣ ದಂಡ ಮಾಡದೆ ಮಾತನಾಡಿ ತಲೆ ತಿನ್ನುವ ಅದರ ಸಾಮರ್ಥ್ಯ ಎಂಥವರನ್ನೂ ಕಂಗೆಡಿಸುತ್ತದೆ. ಒಂದು ಮನುಷ್ಯ ತನ್ನ ಜೀವಿತಾವಧಿಯಲ್ಲಿ ಇಂತಿಷ್ಟೇ ಮಾತನಾಡುತ್ತಾನೆ ಎಂದೇನಾದರೂ ಆ ಭಗವಂತ ಬರೆದುಬಿಟ್ಟಿದ್ದರೆ ಆ ಮಗುವಿನ ಕೋಟಾ ಈಗಾಗಲೇ ಖರ್ಚಾಗಿ ಹೋಗುತ್ತಿತ್ತೇನೊ! `ದವಡೆ ಕರಗಿಹೋದೀತು ಸುಮ್ನಿರೇ‘ ಎಂದು ನಾನೂ ಹಲವಾರು ಬಾರಿ ಅಲವತ್ತುಕೊಂಡಿದ್ದೇನೆ.
ಬಿಡಿ ವಿಷಯ ಅದಲ್ಲ. ಅವಳ ಮಾತಿನಲ್ಲಿ, ಆಟದಲ್ಲಿ ಅರ್ಧಕ್ಕರ್ಧ ಬರುವ ವಿಷಯ ಅಪ್ಪ–ಅಮ್ಮ–ಮಗು. ಇವಳ ವಯಸ್ಸಿನ ಹಲವಾರು ಮಕ್ಕಳನ್ನು, ಅದರಲ್ಲೂ ಹೆಣ್ಣು ಮಕ್ಕಳನ್ನು ಕಂಡಾಗ ಅವರಾಡುತ್ತಿದ್ದಿದ್ದೂ ಅಪ್ಪ–ಅಮ್ಮ–ಮಗುವಿನಾಟವೇ. ಅವುಗಳಿಗೆ ಉಣಿಸಿ–ತಿನಿಸಿ, ಸ್ನಾನ ಮಾಡಿಸಿ, ಶಾಲೆಗೆ ಕಳಿಸಿ… ಒಟ್ಟಾರೆ ಇಡೀ ದಿನ ತಮ್ಮ ಅಮ್ಮ–ಅಪ್ಪ ತಮಗೆ ಏನೆಲ್ಲಾ ಮಾಡುತ್ತಾರೊ ಅದೆಲ್ಲವನ್ನೂ ತಮ್ಮ ಗೊಂಬೆಗೆ ಪ್ರೀತಿಯಿಂದ ಮಾಡುತ್ತಾರೆ. ಮಕ್ಕಳ ಅಗ್ದಿ ಸಹಜ ಗುಣವದು.
ಇವಳೂ ಹಾಗೆ. ಕೈಯಲ್ಲಿರುವ ಬೊಂಬೆಗಳು, ಬೀದಿಯಲ್ಲಿ ಕಾಣುವ ನಾಯಿಗಳು, ಕೊಳದಲ್ಲಿರುವ ಬಾತುಕೋಳಿ, ಹಾರುವ ಹಕ್ಕಿ ಹಿಂಡು, ಕೊನೆಗೆ ಗೋಡೆ ಮೂಲೆಯ ಇರುವೆ ಸಾಲು ಕಂಡಾಗಲೂ ಅವುಗಳಲ್ಲಿ ಅಪ್ಪ/ಅಮ್ಮ/ಮಗು ಯಾರು ಎಂಬುದನ್ನು ನಿರ್ಧರಿಸಲು ತಾಸುಗಟ್ಟಲೆ ಚರ್ಚಿಸುತ್ತಾಳೆ. ಒಂದೊಮ್ಮೆ ಯಾವುದೇ ಜೀವಿಗಳು ಕಾಣದಿದ್ದರೆ ಚಿಂತೆಯಿಲ್ಲ, ಡೈನಿಂಗ್ ಚೇರ್ ಗಳ ಪೈಕಿ ಯಾವುದು ಅಮ್ಮ ಯಾವುದು ಮಗು ಎಂದು ಶುರು ಹಚ್ಚುತ್ತಾಳೆ. ಕತೆಯಲ್ಲೊಂದು ಮಂಗವೊ, ಕರಡಿಯೊ ಬಂದರೆ ಅದು ಅಪ್ಪನೊ, ಅಮ್ಮನೊ ಎಂಬುದು ಅವಳಿಗೆ ಜೀವನ್ಮರಣದ ಪ್ರಶ್ನೆಯಾಗುತ್ತದೆ. `ಯಾವುದು ಏನಾದರೇನು? ಮೊದಲು ಬಾಯಿ ಮುಚ್ಚು‘ ಎಂದು ಎದುರು ಕುಂತವ ಕೂದಲು ಕಿತ್ತುಕೊಳ್ಳುವ ಸ್ಥಿತಿ ನಿರ್ಮಿಸುತ್ತಾಳೆ.
ಹಾಗಾದರೆ ಆ ವಯಸ್ಸಿನ ಮಕ್ಕಳ ಪ್ರಪಂಚ ಅಮ್ಮ–ಅಪ್ಪ–ಮಗು ಅಷ್ಟೆಯೇ ಎಂದು ಬಹಳಷ್ಟು ಬಾರಿ ನಾನು ಯೋಚಿಸಿದ್ದುಂಟು (ಹಿಂದೆ ನಾನೇನು ಮಾಡುತ್ತಿದ್ದೆ ಎಂಬುದು ನೆನಪಿಲ್ಲ ನೋಡಿ…). ಸಾಮಾನ್ಯವಾಗಿ ಅಷ್ಟು ಸಣ್ಣ ಮಕ್ಕಳ ಗಮನವನ್ನು ಹೆಚ್ಚು ಕಾಲ ಒಂದೇ ವಿಷಯದ ಬಗ್ಗೆ ಹಿಡಿದಿಡುವುದು ಕಷ್ಟ. ಆದರೆ ಇಡೀ ದಿನ ಅದೇ ಆಟ ಆಡುವಾಗ, ಅದರ ಕುರಿತೇ ಮಾತನಾಡುವಾಗ ಕುಟುಂಬ ಎನ್ನುವ ಬಗ್ಗೆ ಆ ಪುಟ್ಟ ಮರಿಗಳಿಗೆ ಅದಿನ್ನೆಂಥ ಕಲ್ಪನೆಗಳಿರಬಹುದು ಎಂದು ಸೋಜಿಗವಾಗುತ್ತದೆ. ಕುಟುಂಬ ಎನ್ನುವ ಬೆಚ್ಚನೆಯ ವ್ಯವಸ್ಥೆ ಅವುಗಳ ಮೇಲೆ ಅದೆಷ್ಟು ಪರಿಣಾಮ ಬೀರಿದೆಯಲ್ಲ ಎಂದು ಯೋಚಿಸುವಂತಾಗುತ್ತದೆ.
ಆದರೆ ಈ ಪಶ್ಚಿಮ ದೇಶಗಳಲ್ಲಿ ಹೆಚ್ಚಿನ ಮಕ್ಕಳು ಕಣ್ತೆರೆಯುವ ಹೊತ್ತಿಗೇ ಕುಟುಂಬ ಚೂರಾದಾಗ, ಕುಟುಂಬದ ಚೌಕಟ್ಟಿನಿಂದ ಹೊರಗೇ ಮಕ್ಕಳು ಹುಟ್ಟಿದಾಗ ಅಥವಾ ಹುಟ್ಟಿದ ಕೆಲವೇ ದಿನಗಳಲ್ಲಿ ಆ ಬೆಚ್ಚನೆಯ ಗೂಡು ಕರಗಿ ಹೋದಾಗ… ಆ ಮಕ್ಕಳು ಎಂಥ ಆಟ ಆಟಬಹುದು? ತಮ್ಮ ಬೊಂಬೆಗಳಲ್ಲಿ ಯಾರನ್ನು ಅರಸಬಹುದು?
ಇಲ್ಲಿನ ಬದುಕು ನೋಡಿದಾಗ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರುವುದಿಲ್ಲ ಎಂಬುದು ಅರಿವಾಗಿದೆ.
ಶ್ರೀಪ್ರಿಯೆ,
ಅಂತು ಬಹಳ ದಿನದ ನಂತರ ಬರ್ದಿದೀರಿ ಅಲ್ಲ?
ನನ್ನ ಮಗಳೂ ನೀವು ಹೇಳುವ ಥರವೇ ಆಡಿ ನಾನು ತಲೆಪರಚಿಕೊಳ್ಳುವ ಸ್ಥಿತಿಗೆ ಯಾವಾಗಲು ತಂದಿಡುತ್ತಾಳೆ.
ಕೊನೆಯಲ್ಲಿ ನೀವು ಹೇಳಿರುವ ಮಾತುಗಳು ವಿಷಾದ ಮೂಡಿಸಿದವು.
ನಾನು ಯಾವಾಗಲು ಬೇಡಿಕೊಳ್ಳುತ್ತಿರುತ್ತೇನೆ,
ಎಲ್ಲಾ ಮಕ್ಕಳಿಗೆ ಅವುಗಳ ಪಾಲಿನ ಖುಶಿ ಸಿಗಲಿ,
ನೋವಿನ ಒರತೆ ಕಂಡರು ಅದರಲ್ಲಿ ಕಾಲಿಟ್ಟು ದಾಟುವ ಶಕ್ತಿ ದೊರಕಲಿ – ಅಂತ.
ನಿಮ್ಮ ಮಗಳ ಮೇಲಿನ ಗಮನ ಚೆನ್ನಾಗೆ ಇದೆ ಅವಳು ಮಾತಾಡುವಾಗ, ನೀವೊಮ್ಮೆ ನಿಮ್ಮ ಮಗಳು ಮೌನವಾಗಿದ್ದಾಗ ಗಮನಿಸಿ, ಆಗ ನಿಮ್ಮ ಕೈ ಬರೆಯಲೆತ್ನಿಸುವುದಿಲ್ಲ. ಏಕೆಂದರೆ ನಿಮ್ಮ ಮನದೊಳಗಿನ ಪೆನ್ನು ಚಿತ್ರ ಬರೆಯುತ್ತಿರುತ್ತದೆ!
ಶಿವು.ಕೆ
http:/chaayakannadi.blogspot.com
http://www.flickr.com/photos/shivuimages
ಹಾಯ್,
ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.
ಧನ್ಯವಾದಗಳು,
ಶಮ, ನಂದಿಬೆಟ್ಟ
http://minchulli.wordpress.com
ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.
ಶುಭವಾಗಲಿ,
– ಶಮ, ನಂದಿಬೆಟ್ಟ
ಅಲಕಾ,
ನಿಮ್ಮ ಈ ಮೈಲ್ ವಿಳಾಸ ಸಿಗಬಹುದೇ? r26n at yahoo dot co dot in ಇಲ್ಲಿಗೆ ಕಳಿಸುವಿರಾ?
ಮೇಡಮ್ ,
ಲೇಖನ ಬಹಳ ಚೆನ್ನಾಗಿದೆ. ನಾವು ಎಲ್ಲರೂ ಅದೇ ರೀತಿ ಆಡಿಕೊಂಡು, ಪ್ರಶ್ನೆ ಕೇಳುತ್ತಾ ಅರಳು ಕಣ್ಣುಗಳಿಂದ ಬೆರಗನ್ನು ಚೆಲ್ಲುತ್ತಾ ಬೆಳೆದವರೆ. ಆದರೆ ಈ ತಲೆಮಾರಿನ ಮಕ್ಕಳು ಬಹಳ ಚೂಟಿ ಅಂತ ಕಾಣಿಸುತ್ತದೆ. ನಮ್ಮದೂ ಒಂದು ಒಂದೂವರೆ ವರ್ಷದೊಳಗಿನ ಚಿನ್ನಿ ಹೀಗೆಯೇ ಇದೆ. ಅದರೊಂದಿಗೆ ಆಡುತ್ತಿದ್ದರೆ ಜಗತ್ತೇ ಮರೆತು ಹೋಗುತ್ತದೆ.
super 🙂