Feeds:
ಲೇಖನಗಳು
ಟಿಪ್ಪಣಿಗಳು

Archive for the ‘festival’ Category

 

ಸಂಕ್ರಾಂತಿಯ ಶುಭಾಶಯ ಪತ್ರಗಳನ್ನು ಕಳುಹಿಸುವಾಗ ಒಳಗೊಂದಿಷ್ಟು ಅಚ್ಚಳಿಯದ ಬೆಚ್ಚನೆಯ ಸಾಲುಗಳಿರುತ್ತವೆ. ಆದರೆ ಈಗೀಗ ಶುಭಾಶಯ ಪತ್ರಗಳನ್ನು ಕಳುಹಿಸುವ ಪರಿಪಾಠವೇ ದೂರವಾಗಿರುವುದರಿಂದ ಈ ಮನಮುಟ್ಟುವ ಮಾತುಗಳೂ ಮಾಯವಾಗಿವೆ. ಆದರೂ, ನೆನಪಿದ ಭಂಡಾರ ತೆರೆದಾಗ ಸಿಕ್ಕಿದ್ದಿಷ್ಟು. ನಿಮ್ಮಲ್ಲೂ ಇಂತಹ ಸಾಲುಗಳಿದ್ದರೆ ಖಂಡಿತ ಸೇರಿಸಿ

ಅಕ್ಕರೆಗೆ ಸಕ್ಕರೆಯು ಸ್ನೇಹಕ್ಕೆ ಎಳ್ಳು

ಪ್ರೀತಿಯ ವೃದ್ಧಿಗೆ ಶುಭಾಶಯಗಳ ಕೊಡಕೊಳ್ಳು

–***–

ಇಕೋ ಎಳ್ಳು, ಇಕೋ ಬೆಲ್ಲ

ಸಂಕ್ರಮಣದ ಶುಭದಿನ

ಎಳ್ಳುಬೆಲ್ಲದಂತೆ ಬಾಳುವೆವು

ಇದೇ ನಮ್ಮ ಪಣ

–***–

ಎಳ್ಳು ಬೆಲ್ಲದ ಸವಿಯನೆಲ್ಲ

ಒಲವಿನಲ್ಲಿ ಬೆರೆಸಲಿ

ನೂರು ಕಾಲ ನಮ್ಮನೆಲ್ಲ

ನೈಜ ಸುಖದಿ ಇರಿಸಲಿ

–***–

ಮಾತಿನಂತೆ ಮನವಿರಲಿ

ನುಡಿಯಂತೆ ನಡೆಯಿರಲಿ

ಎಳ್ಳುಬೆಲ್ಲ ಮೆಲ್ಲುವಲ್ಲಿ

ನೆನಪೊಂದು ಮೂಡಿಬರಲಿ

–***–

ನೇಸರನು ತನ್ನ ಪಥವ ಬದಲಿಸುತಿರಲು

ಮಾಗಿಯ ಚಳಿ ಮಾಯವಾಗುತಿರಲು

ತನು ಮನದಲ್ಲಿ ಹೊಸ ಚೈತನ್ಯ ಮೂಡುತಿದೆ

ಹೊಸ ಬೆಳೆ ಹೊಸ ಕ್ರಾಂತಿ ಜಗದಿ ಹರಡುತಿದೆ

–***–

ಮತ್ತೆ ಮರಳಿದೆ ಸಂಕ್ರಾಂತಿ

ನೆಲೆಸಲಿ ಮನೆಮನದಲ್ಲಿ ಸುಖ ಶಾಂತಿ

–***–

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ

ಕಹಿಕಷ್ಟವ ಮರೆತು ಎಲ್ಲರೊಳು ಒಡನಾಡಿ

–***–

ಸಂಕ್ರಾಂತಿಯ ಶುಭದಿನದಿ ಸ್ನೇಹ ಸಮ್ಮಿಲನ

ತಂದಿಹುದು ಒಲುಮೆಯ ಭಾವ ಬಂಧನ

–***–

ಯಾವ ಗುಡಿಯೇ ಇರಲಿ, ಭಕ್ತಿ ಇರಲಿ

ಯಾವ ಧರ್ಮವೇ ಇರಲಿ, ಬೆಳಕು ತರಲಿ ಯಾವ ಭಾವನೆ ಬರಲಿ, ಶಾಂತಿ ತರಲಿ

ಹೊಸ ಸಂಕ್ರಾಂತಿ ಬರಲಿ, ಸೌಖ್ಯ ತರಲಿ

–***–

ಸಕಲ ಸಂಪತ್ತುಗಳು ತುಂಬಿ ತುಳುಕುತಿರಲಿ

ಸಕಲ ದೇವರ ಹರಕೆ ಎಂದೂ ನಿಮಗಿರಲಿ

ಹೊಸ ಸಂಕ್ರಾಂತಿಯು ಶುಭವ ತರಲಿ

–***–

ಎಳ್ಳುಬೆಲ್ಲದ ಕುಸುರಿ ಕಲೆಯಲಿ

ಒಲುಮೆಯೊಲುಮೆಗಳ ಭಾವ ಬೆರೆತಿರಲು

ಸ್ವಾಗತಿಸಿ ಸಂಕ್ರಾಂತಿಯ ತುಂಬು ಹೃದಯದಲಿ

ಪ್ರೀತಿ ಪ್ರೇಮಗಳ ಸಂಕೋಲೆ ಬೆಸೆದಿರಲು

–***–

ಒಂದೊಂದು ಕಾಲದಲಿ ಒಂದೊಂದು ರೀತಿಯಲಿ

ಒಂದೊಂದು ಸುಖವಹುದುದುಃಖವಹುದು

ಅದರದರ ಕಾಲದಲಿ ಸುಖದುಃಖಗಳ ಸವಿದು

ಬಾಳ ಹಸನಾಗಿಸುವುದೇ ಸೃಷ್ಟಿ ಒಸಗೆ

ಎಳ್ಳುಬೆಲ್ಲವ ಸವಿದ ಸಂಕ್ರಮಣವು

ಸಮರಸವ ತರಲೆಂಬ ಹಾರೈಕೆಯು

–***–

ಪ್ರೇಮ ಗಗನದಲಿ ಅಲೆವ ನೀರ ಕ್ಷೀರ

ಬೇರೆಗೈವ ರಾಜಹಂಸದಂತೆ

ನಾವು ಕಾಮಪ್ರೇಮ ಬೇರೆ ಮಾಡಿ

ಜಗದ ಜನಕೆ ಸಾರುವ, ಎಳ್ಳುಬೆಲ್ಲ ಬೀರುವ

–***–

ಹೂವಿನಿಂದ ಹೂವಿಗಲೆದು

ನಲುಮೆ ರಸವ ಪೂರ್ಣ ಸವಿದು

ಮಧುರ ಫಲವ ದಣಿದು ತಿಂದು

ಬಂತಿದೋ ಸಂಕ್ರಾಂತಿ, ತಂತಿದೋ some-ಕ್ರಾಂತಿ!

–***–

ಬಂದಿಹುದು ಸಂಕ್ರಮಣ

ತಂದಿಹುದು ಪ್ರೇಮ ಹೂರಣ

ಸಕಲ ಸುಖಕೆ ಕಾರಣ

ಭುವಿಗೆ ಸುಗ್ಗಿಯ ತೋರಣ

–***–

ಬರುತಲಿಹುದು ಸಂಕ್ರಾಂತಿಯು

ಮುದದಿ ವರುಷವರುಷ

ನಮ್ಮೆಲ್ಲರಲಿ ತುಂಬಿಹುದು

ಪರಮ ಹರುಷಹರುಷ

–***–

ದಿನದಿನವೂ ಬೆಳಗುವ ದಿನಮಣಿಗೆ

ಮಕರ ಸಂಕ್ರಮಣದ ಪರ್ವದಿನವಿಂದು

ಎಳ್ಳುಬೆಲ್ಲವ ಮೆದ್ದು ಸಹಜೀವನದ ಪಣತೊಟ್ಟು

ದಶಯೋಗದೊಂದ ಕ್ರಮಿಸುವ ದಾರಿ ಮುಂದು ಮುಂದು

–***–

ದಿನದಿನದಿ ಬೆಳಗುವ ದಿನಕರನಿಗಿಂದು ಪರ್ವಕಾಲ

ಈ ಶುಭದಿನದಿ ನೀಡುವೆವು ಸಡಗರದಿ ಎಳ್ಳುಬೆಲ್ಲ

–***–

ಸುವರ್ಣ ಕಿರಣಗಳ ಒಡೆಯ ಸೂರ್ಯ

ಪಯಣಿಸುವನಿಂದು ಉತ್ತರಾಯಣಕೆ

ಅದುವೆ ಈ ಸುದಿನ ಸಂಕ್ರಾಂತಿ

ಮಾಡುವರೆಲ್ಲ ಎಳ್ಳುಬೆಲ್ಲಗಳ ಕ್ರಾಂತಿ

–***–

ಬಾಯಿಗೆ ಸಿಹಿ ಎಳ್ಳು ಬೆಲ್ಲ

ಬಾಳಿಗೆ ಸವಿ ಸ್ನೇಹ ಸೊಲ್ಲ

ಕೇಳುತಿರಲಿ ಪ್ರೇಮ ಪಲ್ಲ

ಬೆಳಗುತಿರಲಿ ಜಗವು ಎಲ್ಲ

–***–

ಗತಿಸುವ ವರ್ಷ, ನಲಿನಲಿಯುತ ಸಾಗಿ,

ಉದಿಸುವ ವರ್ಷ ನಲಿನಲಿಯುತ ಬೀಗಿ,

ನೋವು ನೂರೆಂಟು ಬಹುದೂರವಾಗಿ

ಜೀವನ ಸಾಗಲಿ ಸುಖಮಯವಾಗಿ

ಹಾರೈಸುವೆ, ಶುಭವ ಹಾರೈಸುವೆ

Read Full Post »

ಬೆದರು-ಬೊಂಬೆಯಾಟವಯ್ಯಾ!

ಈಗಂತು ಅಮೆರಿಕದ ಯಾವ ಅಂಗಡಿಗೆ ಹೋದರೂ ಒಂದಿಷ್ಟು ತಲೆಬುರುಡೆ, ಅಸ್ಥಿಪಂಜರ (ನಿಜವಾದ್ದಲ್ಲ ಬಿಡಿ), ಪ್ರೇತಪಿಶಾಚಿಯ ವೇಷಗಳು, ಬೃಹದಾಕಾರದ ಕುಂಬಳಕಾಯಿಗಳು, ದಿಗುಲುಗೊಳಿಸುವ ಮುಖವಾಡಗಳು, `ಗುಮ್ಮನಂತೆ ಕೂಗಿ ಹೆದರಿಸುವ ಚಿತ್ರವಿಚಿತ್ರ ರೂಪಿ ಬೊಂಬೆಗಳು (ಗುಮ್ಮ ಕೂಗಿದ್ದನ್ನು ಕೇಳಿಲ್ಲ ಎನ್ನುವುದು ಬೇರೆ ಮಾತು!) ಕಾಣುತ್ತವೆ.

`ಭೂತಚೇಷ್ಟೆಯೆಲ್ಲಾ ಹಾಲೊವೀನ್ ಹಬ್ಬಕ್ಕಾಗಿ. ಅಕ್ಟೋಬರ್ 31ರ ಹಾಲೊವೀನ್ ಪಾರ್ಟಿಗಾಗಿ ಏನೆಲ್ಲಾ ಕುಚೇಷ್ಟೆಗಳನ್ನು ಮಾಡಬಹುದು? ಯಾರನ್ನು ಹೇಗೆ ಹೆದರಿಸಬಹುದು? ಯಾರಿಗೆ ಯಾವ ಭೂತದ ವೇಷ ಒಪ್ಪುತ್ತದೆ? ತಮ್ಮ ಮನೆಯನ್ನು `ಭೂತ್ ಬಂಗ್ಲಾಮಾಡಲು ಇನ್ನೂ ಏನೇನು ಬೇಕು? ಎಲ್ಲೆಲ್ಲಿ ಯಾವ ಬೆದರುಬೊಂಬೆಗಳನ್ನು ನಿಲ್ಲಿಸಬಹುದು? ಆ ದಿನ ಯಾವ ಭೂತದ ಸಿನೆಮಾ ನೋಡಬಹುದು? ಎಂಬುದೀಗ ಇಲ್ಲಿ ಪ್ರಚಲಿತವಿರುವ ಚರ್ಚೆ!

ಪಶ್ಚಿಮ ದೇಶಗಳ ಜನಪ್ರಿಯ ಹಬ್ಬಗಳಲ್ಲಿ ಕ್ರಿಸ್ಮಸ್ ನಂತರದ ಸ್ಥಾನ ಹಾಲೊವೀನ್ಗೆ. ಬ್ರಿಟನ್ ಮತ್ತು ಐರ್ಲೆಂಡ್ ನಲ್ಲಿ ಕ್ರಿಸ್ತ ಪೂರ್ವದಲ್ಲೇ ಆರಂಭವಾದ ಹಬ್ಬ, ವಲಸಿಗರಿಂದಾಗಿ 19ನೇ ಶತಮಾನದಲ್ಲಿ ಅಮೆರಿಕಕ್ಕೆ ಹಬ್ಬಿತು. 20ನೇ ಶತಮಾನದಲ್ಲಿ ಐರೋಪ್ಯ ದೇಶಗಳಿಗೂ ಹರಡಿ, ಈಗ ಬಹಳಷ್ಟು ರಾಷ್ಟ್ರಗಳಲ್ಲಿ `ಹಾಲೊವೀನ್ ಚೇಷ್ಟೆನಡೆಯುತ್ತದೆ. ಬೇಸಿಗೆಯ ದೀರ್ಘ ದಿನಗಳು ಮುಗಿದು, ಚಳಿಗಾಲದ ದೀರ್ಘ ರಾತ್ರಿಗಳು ಶುರುವಾಗುವ ಕುರುಹಾಗಿ ಈ ಹಬ್ಬ ಮೊದಲಿಗೆ ಆರಂಭಗೊಂಡಿತು. ಪ್ರಭುತ್ವ, ನಾಗರಿಕತೆ ಮತ್ತು ಕಾಲ ಬದಲಾಗುತ್ತಿದ್ದಂತೆ ಈ ಹಬ್ಬದ ಆಚರಣೆಗಳೂ ಬದಲಾಗಿ, ಹಲವಾರು ಕಥೆಉಪಕಥೆಗಳು ಬೆಸೆದುಕೊಂಡವು.

ಹ್ಯಾರಿ ಪಾಟರ್ ನಿಂದ ಹಿಡಿದು ಹಲವಾರು ಕಥೆಕಾದಂಬರಿಸಿನೆಮಾಗಳಲ್ಲಿ ಹಾಲೊವೀನ್ ಪ್ರಸ್ತಾಪವಿದೆ. ಬೇಸಿಗೆ ಅಂತ್ಯಗೊಳ್ಳುವ ಈ ಸಮಯದಲ್ಲಿ ಸಾವುಬದುಕಿನ ನಡುವಿನ ಅಂತರ ಮಾಸಿ, ಸತ್ತವರೆಲ್ಲಾ ಎದ್ದು ಬಂದು ಕಿರಿಕಿರಿ ಮಾಡುತ್ತಾರೆ. ತಮ್ಮ ಚಳಿಗಾಲದ ಆಹಾರ ದಾಸ್ತಾನು ನಾಶ ಮಾಡಿ, ರೋಗ ಹಬ್ಬಿಸುತ್ತಾರೆ ಎಂದೆಲ್ಲಾ ಜನ ನಂಬಿದ್ದರು. ಅವರನ್ನು ಶಾಂತಗೊಳಿಸಿ, ಪೂರ್ವೀಕರ ಪಿರಿಪಿರಿಯಿಂದ ತಪ್ಪಿಸಿಕೊಳ್ಳಲು ಮತ್ತು ದೇವತೆಗಳನ್ನು ಮೆಚ್ಚಿಸಲು ಈ ಹಬ್ಬ ಆರಂಭವಾಯಿತು.

ಎಂಥಾ ಪಿಶಾಚಿಗಳೂ ನಾಚುವಂತೆ ಚಿತ್ರವಿಚಿತ್ರ ಮುಖವಾಡವಿಟ್ಟು, ಭೂತಪ್ರೇತಗಳ ಅಂಗಿ ತೊಟ್ಟು, ಬೆದರು ಬೊಂಬೆಗಳನ್ನು ನೆಟ್ಟು, ಮನೆಯಲ್ಲಿ ಕರಿ ಬೆಕ್ಕುಗಳನ್ನು ಬಿಟ್ಟು, ಎಲ್ಲೆಂದರೆಲ್ಲಿ ಬೇತಾಳಗಳನ್ನು ನೇತಾಡಿಸಿ ಸಂಭ್ರಮಿಸುತ್ತಾರೆ! ದೊಡ್ಡ ಕುಂಬಳಕಾಯಿಯ ತಿರುಳು ತೆಗೆದು, ಅದರ ಮೇಲೆ ಕಣ್ಣುಮೂಗುಬಾಯಿ ಕೊರೆದು, ಒಳಗೊಂದು ದೀಪವನ್ನಿಡುವ ಇದನ್ನು Jack-o’-lantern ಎನ್ನುತ್ತಾರೆ. ಮಾಟಮಂತ್ರವಾದಿಗಳ ಬಟ್ಟೆ ತೊಟ್ಟ ಮಕ್ಕಳು ಮನೆಮನೆಯ ಬಾಗಿಲು ಬಡಿಯುತ್ತಾರೆ. ಪುಟಾಣಿ ದೆವ್ವಗಳಿಗೆ ಕ್ಯಾಂಡಿಯೊ ಮತ್ತೊಂದೊ ಕೊಟ್ಟು ಸಮಾಧಾನ ಮಾಡದಿದ್ದರೆ ಏನಾದರೊಂದು ಕಿತಾಪತಿ ಮಾಡಿ ಹೆದರಿಸುತ್ತಾರೆ. ಇದಕ್ಕೆ trick or treating ಎಂದೇ ಹೆಸರು.

jack-o-lantern.jpg

ದುಷ್ಟರ ವಿರುದ್ಧ ಶಿಷ್ಟರ ಜಯದ ಪ್ರತೀಕವಾದ, ದೇವರ ಪ್ರೀತ್ಯರ್ಥವಾಗಿ ಕುಂಬಳಕಾಯಿಯ ಸಾಂಕೇತಿಕ ಬಲಿ ಕೊಡುವ, ಬೊಂಬೆ ಕೂರಿಸುವ, ಮಕ್ಕಳಿಗೆಲ್ಲಾ ಬೊಂಬೆ ತಿಂಡಿ ಕೊಡುವಅಯ್ಯೋ! ಹಾಲೊವೀನ್ ಬಗ್ಗೆ ಹೇಳ್ತಾ ಹೇಳ್ತಾ ಯಾಕೊ ನಮ್ಮೂರ ದಸರಾ ಹಬ್ಬ ನೆನಪಾಗಿಬಿಡ್ತಲ್ಲ!

Read Full Post »