Feeds:
ಲೇಖನಗಳು
ಟಿಪ್ಪಣಿಗಳು

Archive for the ‘travell’ Category

ಬಸ್ ಬಂತ್ ಬಸ್!

ಚಿಕ್ಕಂದಿನಲ್ಲಿಬಸ್ ಬಂತ್ ಬಸ್…’ ಎಂದು ಹಾಡುತ್ತಿದ್ದಾಗ ಬಸ್ಸಿನ ಪ್ರಯಾಣದ ಬಗ್ಗೆ ಸಿಕ್ಕಾಪಟ್ಟೆ ಕಲ್ಪನೆಗಳೇನೂ ಇರಲಿಲ್ಲ. ಜನರನ್ನು ಕರೆದೊಯ್ಯುವ ಕೆಂಪುಬಿಳಿ ಮೋಟಾರು, ನಾವು ಕಾದರೆ ಬಾರದಿರುವ ಮತ್ತು ನಾವು ಕಿಂಚಿತ್ ತಡವಾಗಿ ಬಂದರೂ ನಮ್ಮನ್ನು ಬಿಟ್ಟು ಹೋಗುವ ಮೋಟಾರು ಎಂಬುದಷ್ಟೇ ಅರಿವಿಗೆ ಬರುತ್ತಿತ್ತು. ಜನರನ್ನು ಕರೆದೊಯ್ಯುವ ವಾಹನ ಎಂಬ ಮೂಲ ಕಲ್ಪನೆ ಕ್ರಮೇಣ ವಿಸ್ತಾರಗೊಂಡು, ನಾವು ಹತ್ತುವ ನಿಲ್ದಾಣಕ್ಕೆ ಬರುವಾಗ ಯಾವಾಗಲೂ ತುಂಬಿರುವ ಬಸ್ಸು, ನಾವು ನಿಲ್ದಾಣದಲ್ಲಿ ನಿಂತಿದ್ದರೆ ನಮ್ಮಿಂದ ಮಾರು ದೂರ ಹೋಗಿ ನಿಲ್ಲುವ ಬಸ್ಸುನಾವು ಅವಸರದಲ್ಲಿದ್ದಾಗಲೇ ತಡವಾಗಿ ಬರುವ ಬಸ್ಸು, ಮದುವೆಗೊ, ನೆಂಟರ ಮನೆಗೊ ಸಿಂಗರಿಸಿಕೊಂಡು ಹೊರಟಾಗ ಬಾರದೆ ಕೈಕೊಡುವ ಬಸ್ಸು, ನೆಂಟರು ನಮ್ಮನೆಗೆ ಬರುವಾಗ ತಪ್ಪದೆ ಕರೆತರುವ ಬಸ್ಸುಹೀಗೆ ನಾನಾ ರೀತಿಯಲ್ಲಿ ನನ್ನಅನುಭವ ಹಿಗ್ಗತೊಡಗಿತು. ಪೈಕಿ ಕೆಲವು ವಾಕ್ಯಗಳ ಬಗ್ಗೆ ನನಗೀಗಲೂ ಸಹಮತವಿದೆ ಎಂಬುದನ್ನು ಬಿಟ್ಟರೆ, ಬಸ್ ಪ್ರಯಾಣ ಮೊದಲಿಂದಲೂ ಖುಷಿ ಕೊಡುತ್ತಿತ್ತು. ಅದರಲ್ಲೂ ವರ್ಷಕ್ಕೆ ನಾಲ್ಕಾರು ಬಾರಿ ಮೈಸೂರುಶಿರಸಿ ಪ್ರಯಾಣ ತಪ್ಪದೆ ಇರುತ್ತಿದ್ದರಿಂದ ಖುಷಿ ಪಡುವುದು ನನ್ನ ಮಟ್ಟಿಗೆ ಅನಿವಾರ್ಯವೂ ಆಗಿತ್ತು!

ಅಸಲಿನಲ್ಲಿ ಖುಷಿ ಕೊಡುವುದು ಹಗಲಿನ ಪ್ರಯಾಣವೇ ಆಗಿದ್ದರೂ, ಸುಮಾರು 400 ಕಿ.ಮೀ. ದೂರ ಕ್ರಮಿಸುವಷ್ಟರಲ್ಲಿ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತಿದ್ದವು. ಬಸ್ ಹೊರಟು ಹತ್ತು ನಿಮಿಷಕ್ಕೆ ಹೊಟ್ಟೆ ತೊಳೆಸಲು ಶುರುವಾಗುತ್ತಿತ್ತು. ಅಡಿಕೆಯೊ, ಶುಂಠಿಯೊ, ಪೆಪ್ಪರಮಿಂಟೊ ಬಾಯಿಗೆ ಬಿದ್ದು, ಹೊಟ್ಟೆ ಕೊಂಚ ಸ್ಥಿಮಿತಕ್ಕೆ ಬರುವಷ್ಟರಲ್ಲೇ ಬಾತ್ ರೂಂ ನೆನಪಾಗಿಮುಂದಿನ ಸ್ಟಾಪ್ ಯಾವಾಗ ಎಂದು ಚಟಪಡಿಸಲು ಆರಂಭಿಸುತ್ತಿದ್ದೆ. ಮುಂದಿನ ಊರಲ್ಲಿಎರಡೇ ನಿಮ್ಷ ನಿಲ್ಸೋದುಎಂದೇನಾದರೂ ಕಂಡಕ್ಟರ್ ಮೂತಿ ತಿರುವಿದರೆ ಅದಕ್ಕೂ ಸಂಚಕಾರ! ತೊಂದರೆಗಳೆಲ್ಲಾ ಮುಗಿದರೆ ಹಸಿವೊ, ನೀರಡಿಕೆಯೊ ಶುರುವಾಗುತ್ತಿತ್ತು. ಹಾಗೆಂದೇ ಹಗಲಿನ ಬಸ್ಸಿಗೂ ನನಗೂ ಎಂದಿಗೂ ಆಗಿಬರದ ನಂಟು.

ಸಾಮಾನ್ಯವಾಗಿ ರಾತ್ರಿಯಿಡೀ ಒಂದೇ ನಿದ್ದೆ ಮಾಡುವ ನನಗೆ, ಸಾಮರ್ಥ್ಯವನ್ನು ರಾತ್ರಿಯ ಬಸ್ ಪ್ರಯಾಣದಲ್ಲಿ ತೋರುವ ಕೌಶಲ್ಯವಿಲ್ಲ. ಹಾಗಾಗಿ ರಾತ್ರಿ ಬಸ್ಸು ನಿಂತಲ್ಲೆಲ್ಲಾ ಆಯಾ ಊರು/ಬಸ್ ಸ್ಟ್ಯಾಂಡು ನೋಡುವ ಭಾಗ್ಯ(?). ಮೈಸೂರಿನಿಂದ ಹೊರಟ ಕೆಂಪು ಬಸ್ಸು ಜೋಲಾಡುತ್ತಾ ಅರಸೀಕೆರೆ ತಲುಪುವಷ್ಟರಲ್ಲಿ ಒಂದು ನಿದ್ದೆ ಆಗಿರುತ್ತಿತ್ತು. ಒಂದೊಮ್ಮೆ ಎಚ್ಚರವಾಗದಿದ್ದರೆಎಳ್ನೀರ್ ಎಳ್ನೀರ್ಎಂಬ ಕೂಗು ಎಬ್ಬಿಸುತ್ತಿತ್ತು. ನೆಪ ಮಾತ್ರಕ್ಕೆ ಸೀಟಿನಲ್ಲಿ ಕುಳಿತು ಭಾರವನ್ನೆಲ್ಲಾ ಬಹುತೇಕ ನಮ್ಮ ಮೇಲೆ ಹೇರಿರುವ ಪಕ್ಕದ ಪ್ರಯಾಣಿಕರನ್ನು ತಿವಿದೆಬ್ಬಿಸಿ ಕೂರಿಸುವಷ್ಟರಲ್ಲಿ ಹಿಂದಿನ ಸೀಟಿನ ಯಾವುದೊ ಮಗು ಕಿಟಾರನೆ ಕಿರುಚಿ ಎಂಥಾ ನಿದ್ದೆಬಡುಕರನ್ನೂ ಎಬ್ಬಿಸುತ್ತಿತ್ತು. ಮಾತ್ರವಲ್ಲ, ಬಸ್ಸಿನಲ್ಲಿರುವ ಉಳಿದ ಕಂದಮ್ಮಗಳಿಗೆ ಅಳಲು ಸ್ಫೂರ್ತಿ ನೀಡುತ್ತಿತ್ತು.

ಅರಸೀಕೆರೆ ನಂತರ ಕಡೂರಿನಲ್ಲಿ ಐದು ನಿಮಿಷಗಳ ಸ್ಟಾಪು. ರಸ್ತೆಯಂಚಿನ ನಿಲ್ದಾಣ, ಪಕ್ಕದಲ್ಲಿನ ಸಣ್ಣ ಹೊಟೆಲ್ಲು, ಅಲ್ಲಿಂದ ತೇಲಿ ಬರುವ ಕಾಫಿ ಪರಿಮಳ, ಬೆನ್ನಿಗೇ ಅದೆಷ್ಟೋ ದಿನಗಳಿಂದ ಬೋಂಡಾ ಕರಿಯುತ್ತಲೇ ಇರುವ ಎಣ್ಣೆಯ ಕಮಟು ವಾಸನೆ, ಜೊತೆಗೆ ಕೇಳಿ ಬರುವ ಮಾಧುರಿ ದೀಕ್ಷಿತಳಕೋಯಲ್ ಸಿ ತೇರಿ ಬೋಲಿಕುಕುಕುಕುಎಂದೇನೊ ಹಾಡು. ಮಂಪರಿನಲ್ಲೇ ಗಡಿಯಾರವನ್ನೊಮ್ಮೆ ನೋಡಿ, ‘ಇವತ್ತೇನು ಇಷ್ಟು ಲೇಟುಎಂದು ಗೊಣಗಿ ಕಣ್ಣುಮುಚ್ಚಿದರೆ ಮತ್ತೆ ಎಚ್ಚರವಾಗುವುದು ಶಿವಮೊಗ್ಗ ಬಂದಾಗಲೇ. ಮಹಿಳೆಯರಿಗೆ ಶೌಚಾಲಯ ಸೌಲಭ್ಯ ಇರುವುದು ಇದೇ ಊರಲ್ಲಾದ್ದರಿಂದ ಶಿವಮೊಗ್ಗದಲ್ಲಿ ಏಳಲೇಬೇಕಿತ್ತು. ತೂಕಡಿಸಿಕೊಂಡು ಬಸ್ಸಿಳಿಯುತ್ತಿದ್ದವರಿಗೆಹತ್ನಿಮ್ಷ ಮಾತ್ರ ನಿಲ್ಸೋದುಎಂದು ಕಂಡಕ್ಟರ್ ತಾಕೀತು ಮಾಡುತ್ತಿದ್ದನಿಲ್ದಾಣದ ಯಾವ ಮೂಲೆಯಲ್ಲಿ ಶೌಚಾಲಯವಿದೆ ಎಂಬುದನ್ನು ಹುಡುಕಲು ವಿಶೇಷ ತ್ರಾಸಾಗುತ್ತಿರಲಿಲ್ಲ. ದೀಪವಿಲ್ಲದ ಮೂಲೆ ಯಾವುದೆಂದು ನೋಡಿ, ಪೈಕಿ ಯಾವ ಮೂಲೆ ಹೆಚ್ಚು ದುರ್ನಾತ ಬೀರುತ್ತಿದೆ ಎಂಬುದನ್ನು ಪತ್ತೆ ಮಾಡಿದರೆ ಶೌಚಾಲಯವೂ ಪತ್ತೆಯಾಗುತ್ತಿತ್ತುಮರಳಿ ಬರುವಷ್ಟರಲ್ಲಿ ಬಸ್ಸಿನಲ್ಲಿ ಒಂದಿಷ್ಟು ಹೊಸ ಮುಖಗಳಿರುತ್ತಿದ್ದವು

ಮತ್ತೆ ಎಚ್ಚರವಾಗುವಷ್ಟರಲ್ಲಿ ಸಾಗರ ಬಸ್ ನಿಲ್ದಾಣ ಬಂದು, ಚುಮುಚುಮು ಬೆಳಕು ಹರಿದಿರುತ್ತಿತ್ತು. ‘ಶಿಗನ ಹಂಗಾದ್ರೆಬನ್ನಿ ಯಮ್ಮನಿಗೆ‘ ಎನ್ನುತ್ತಾ ಸಂಚಿ ಎಳೆದುಕೊಂಡು ದಾಪುಗಾಲಿಕ್ಕುವ ನಾಲ್ಕಾರು ಹವ್ಯಕ ಮುಖಗಳನ್ನು ಕಾಣುತ್ತಿದ್ದಂತೆ ನನ್ನೂರಿನ ಕಂಪು ಬರಲಾರಂಭಿಸುತ್ತಿತ್ತು. ಅಲ್ಲಿಂದ ಮುಂದೆಲ್ಲಾ ಕೋಳಿ ನಿದ್ದೆ! ಸಿದ್ದಾಪುರದಿಂದ ಶಿರಸಿವರೆಗೆ ಯಾವುದೇ ಅಧಿಕೃತ ಸ್ಟಾಪ್ ಇಲ್ಲದಿದ್ದರೂ, ಹತ್ತಾರುರಿಕ್ವೆಸ್ಟ್ ಸ್ಟಾಪ್ಇರುತ್ತಿದ್ದವುದೇಹದ ಪ್ರತಿಯೊಂದು ಅಂಗುಲವು ನೋಯುತ್ತಿದ್ದರೂ, ಕ್ಷಣಕ್ಕೊಮ್ಮೆ ಗಡಿಯಾರ ನೋಡಿಕೊಂಡು ಚಾಲಕನ ಆಮೆಗತಿಯಿಂದಾಗಿ ತಪ್ಪಲಿರುವ ಎಂಟೂವರೆ ಬಸ್ಸನ್ನೆ ನೆನೆಯುತ್ತಾ ಮನಸ್ಸು ವ್ಯಾಕುಲಗೊಳ್ಳುತ್ತಿತ್ತು. ಮುಂದಿನ ಬಸ್ಸು/ಟೆಂಪೊ ಎಷ್ಟೊತ್ತಿಗೆ ಎಂಬುದನ್ನು ಲೆಕ್ಕ ಹಾಕುತ್ತಿತ್ತು. ಒಂದೊಮ್ಮೆ ನಮ್ಮ ಬಸ್ಸು ನಿಗದಿತ ವೇಳೆಗೆ ಶಿರಸಿ ತಲುಪಿದರೆ, ಮುಂದಿನ ಬಸ್ಸು ತಡವಾಗಿ ಹೊರಡುತ್ತಿತ್ತು. ಅಪ್ಪಿತಪ್ಪಿ ಐದು ನಿಮಿಷ ತಡವಾಗಿ ಶಿರಸಿ ತಲುಪಿದರೆಯಥಾಪ್ರಕಾರ, ಮುಂದಿನ ಬಸ್ಸು ಹೋಗಿಯಾಗಿರುತ್ತಿತ್ತು!

Read Full Post »